ರಾಮನಾಥಪುರ- ನಮ್ಮ ಶಾಲೆ ನಮ್ಮ ಜವಾಬ್ದಾರಿ ಶಿಕ್ಷಣ ಇಲಾಖೆಯ ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾಗಿದ್ದು, ಇದರ ಮೂಲಕ ಸರ್ಕಾರಿ ಶಾಲೆಯಲ್ಲಿನ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಉತ್ತಮ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡಬಹುದು ಎಂದು ಹಾಸನ ಲೆಕ್ಕ ಪರಿಶೋಧನೆ ಇಲಾಖೆಯ ಹಿರಿಯ ಉಪನಿರ್ದೇಶಕರಾದ ಹೆಚ್.ಈ. ಅಶೋಕ್ ನುಡಿದರು.
ರಾಮನಾಥಪುರ ಹೋಬಳಿ ಹನ್ಯಾಳು ಗ್ರಾಮದ ದಿ ಗೌರಮ್ಮ ಪುಟ್ಟಸೋಮಪ್ಪ ಸರ್ಕಾರಿ ಪ್ರೌಢಶಾಲೆ, ಹನ್ಯಾಳು ನ ಹಿರಿಯ ವಿದ್ಯಾರ್ಥಿಗಳ ಬಳಗದ ಕಾರ್ಯಕಾರಿ ಸಮಿತಿಯ ಮೊದಲ ಸಭೆಯಲ್ಲಿ ಮಾತನಾಡಿದ ಅವರು ಸಂಘದ ರೂಪರೇಷೆಗಳ ಬಗ್ಗೆ ಚರ್ಚಿಸಿ ಶಾಲೆಗೆ ಗ್ರೈಂಡರ್ ನೀಡಿದ ಕುಮಾರ್ ಎಸ್ ರವರಿಗೆ ಗೌರವ ಸಮರ್ಪಿಸಿ ಮಾತನಾಡಿದರು.
ಜಿಲ್ಲಾ ಅತ್ಯುತ್ತಮ ಪ್ರೌಢಶಾಲಾ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ರವಿಕುಮಾರ ಕೆ ಎನ್ ಮಾತನಾಡಿ,ರಾಜ್ಯದಲ್ಲಿನ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಲು ಸರ್ಕಾರದ ಜೊತೆ ಹಳೆಯ ವಿದ್ಯಾರ್ಥಿಗಳು, ಸಾರ್ವಜನಿಕರು, ಉದ್ಯಮಿಗಳು, ರಾಜಕೀಯ ವ್ಯಕ್ತಿಗಳು, ನೌಕರರು ಮುಂದಾಗಿ ತಾವು ಓದಿದ ಅಥವಾ ತಮ್ಮ ಊರಿನ ಸರ್ಕಾರಿ ಶಾಲೆಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಿಕೊಟ್ಟರೆ ಯಾವುದೇ ಖಾಸಗಿ ಶಾಲೆಗಳಿಗೆ ಕಮ್ಮಿ ಇಲ್ಲದಂತೆ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಬಹುದು, ಈ ನಿಟ್ಟಿನಲ್ಲಿ ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮವು ಪೂರಕವಾಗಿದೆ ಎಂದರು.
ಈ ಸಂದರ್ಭದಲ್ಲಿ ಶಾಲೆಗೆ ಪಾಟ್ ಗಳನ್ನು ನೀಡಿದ ಜಗದೀಶ್ ರವರಿಗೆ, ತಾಲ್ಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಜರ್ಸಿ ನೀಡಿದ ಶಂಕರ್ ರವರಿಗೆ, ಟೀ ಶರ್ಟ್ ನೀಡಿದ ಅಶೋಕ್ ಹೆಚ್ ಈ ರವರಿಗೆ, ರಾಮನಾಥಪುರ ಹೋಬಳಿ ಮಟ್ಟದ ಪ್ರೌಢಶಾಲೆಗಳ ಪ್ರತಿಭಾ ಕಾರಂಜಿಗೆ ಸಹಕರಿಸಿದ ಗುಂಡಣ್ಣ, ಅನು ವಿಜಯ್, ಶಾಂತರಾಜ್, ಸುಹಾಸ್, ರಾಘವೇಂದ್ರ, ಅಣ್ಣಯ್ಯ, ಮಹೇಂದ್ರ ಮಂಜುನಾಥ್ ರವರುಗಳಿಗೆ, ಹನ್ಯಾಳು ಗ್ರಾಮ ಪಂಚಾಯಿತಿ ಹಾಗೂ ಗ್ರಾಮಸ್ಥರಿಗೆ, ಮುಖ್ಯ ಶಿಕ್ಷಕರಿಗೆ, ಸಹಶಿಕ್ಷಕರಿಗೆ ಇಲಾಖೆಯ ಎಲ್ಲಾ ಅಧಿಕಾರಿಗಳಿಗೆ ಧನ್ಯವಾದಗಳನ್ನು ಶಾಲೆಯ ಪರವಾಗಿ ಅರ್ಪಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಹಿರಿಯ ವಿದ್ಯಾರ್ಥಿಗಳ ಬಳಗದ ಅಧ್ಯಕ್ಷರಾದ ವಿಜಯಕುಮಾರ್ ಹೆಚ್ ಎನ್ ರವರು ಇಪ್ಪತ್ತ ಐದು ಸಾವಿರ ರೂಗಳನ್ನು ಶಾಲೆಗೆ ನೀಡಲು ಒಪ್ಪಿದರು.
ಈ ಸಂದರ್ಭದಲ್ಲಿ ಹಿರಿಯ ವಿದ್ಯಾರ್ಥಿಗಳ ಬಳಗದ ಕಾರ್ಯದರ್ಶಿಗಳಾದ ಸುಹಾಸ್ ಹೆಚ್ ಕೆ, ಸಂಘಟನಾ ಕಾರ್ಯದರ್ಶಿ ಕುಮಾರ್, ಸಂಯೋಜಕರಾದ ಸೋಮೇಶ್, ಶ್ರೀನಿವಾಸ, ನಿರ್ದೇಶಕರಾದ ಪವನ್ ಹೆಚ್ ಎಂ, ಚನ್ನಮ್ಮ, ಮಂಜುನಾಥ, ಹನುಮಂತೇಶ್, ಮುಖ್ಯ ಶಿಕ್ಷಕರಾದ ಅನುಪಮ, ಶಿಕ್ಷಕರಾದ ಸುಬ್ಬಲಕ್ಷ್ಮಿ, ಅಡುಗೆ ಸಿಬ್ಬಂದಿ ವರ್ಗದವರು ಹಾಗೂ ಇತರ ಸದಸ್ಯರು ಉಪಸ್ಥಿತರಿದ್ದರು.
———-ಶಶಿಕುಮಾರ್ ಕೆಲ್ಲೂರು