
ಅರಕಲಗೂಡು-ದೊಡ್ಡ ಬೆಮ್ಮತಿ ಗ್ರಾಮದ ಸುತ್ತಮುತ್ತಲ ಅಕ್ರಮ ಮದ್ಯಮಾರಾಟ ಹೆಚ್ಚಾಗಿದ್ದು ಅದಕ್ಕೆ ಕಡಿವಾಣ ಹಾಕುವಂತೆ ದಲಿತ ಮುಖಂಡರಾದ ಹುಲ್ಕೊಡಯ್ಯ ಆಗ್ರಹಿಸಿದರು.
ದೊಡ್ಡ ಬೆಮ್ಮತಿ ಗ್ರಾಮದಲ್ಲಿ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕುಂದು ಕೊರತೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು,ಕಿರಾಣಿ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದ್ದು ಇದರಿಂದ ಬಹುದೊಡ್ಡ ಸಮಸ್ಯೆ ಎದುರಾಗಿದೆ.ದುಡಿಯುವ ವರ್ಗ ತಾವು ದುಡಿದ ಹಣವನ್ನೆಲ್ಲ ಸುಲಭದಲ್ಲಿ ಕೈಗೆ ಸಿಗುವ ಮದ್ಯಕ್ಕೆ ವ್ಯಯಿಸುತ್ತಿದ್ದು ಆರ್ಥಿಕವಾಗಿ ದುರ್ಬಲರಾಗುತ್ತಾ ಆರೋಗ್ಯವನ್ನು ಕೆಡಿಸಿಕೊಳ್ಳುತ್ತಿದ್ದಾರೆ.ಆದಷ್ಟು ಶೀಘ್ರವಾಗಿ ಈ ಅಕ್ರಮ ವ್ಯವಹಾರಕ್ಕೆ ಬ್ರೇಕ್ ಹಾಕುವಂತೆ ಅವರು ಮನವಿ ಮಾಡಿಕೊಂಡರು.
ಮುಖಂಡ ಬೆಮ್ಮತಿ ರಾಜೇಶ್ ಮಾತನಾಡಿ, ಗ್ರಾಮದ ವ್ಯಾಪ್ತಿಯಲ್ಲಿರುವ ಕ್ರಷರ್ ಗಳ ಕಾರಣಕ್ಕೆ ಈ ಭಾಗದಲ್ಲಿ ದೂಳಿನ ಸಮಸ್ಯೆ ವಿಪರೀತವಾಗಿದ್ದು ಎಷ್ಟೇ ಮನವಿ ಮಾಡಿಕೊಂಡರು ಮಾಲೀಕರು ದೂಳು ನಿಯಂತ್ರಣಕ್ಕೆ ಕ್ರಮ ವಹಿಸುತ್ತಿಲ್ಲ.ಬೆಳೆದ ಬೆಳೆಗಳು ದೂಳಿನ ಕಾರಣಕ್ಕೆ ಹಾಳಾಗುತ್ತಿದ್ದು,ವಯಸ್ಕರು ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ.ದೂಳು ನಿಯಂತ್ರಣಕ್ಕೆ ಮುಂದಾಗುವಂತೆ ಕ್ರಷರ್ ಮಾಲೀಕರಿಗೆ ಸೂಚಿಸುವಂತೆ ಕೋರಿದರು.ಲಾರಿಗಳ ಓಡಾಟದಿಂದ ರಸ್ತೆಗಳು ಹದಗೆಟ್ಟಿದ್ದು ರಸ್ತೆಗಳ ದುರಸ್ತಿಯನ್ನು ನಡೆಸುವಂತೆ ತಿಳಿಸಿದರು.

ಅರಕಲಗೋಡು ಪೊಲೀಸ್ ಠಾಣಾ ಉಪನಿರೀಕ್ಷಕರಾದ ಕಾವ್ಯ ಸಿ.ಆರ್ ಮಾತನಾಡಿ, ನಿಮಗೆ ಯಾವುದೇ ಸಮಸ್ಯೆಗಳು ಎದುರಾದರು ತಕ್ಷಣಕ್ಕೆ 112 ಗೆ ಕರೆ ಮಾಡುವಂತೆ ನೆರೆದಿದ್ದವರಿಗೆ ಸೂಚಿಸಿ,ನಾವು ನಿಮ್ಮ ರಕ್ಷಣೆಗೆ ಸದಾ ಸಿದ್ಧರಿರುವುದಾಗಿ ಭರವಸೆ ನೀಡಿದರು.
ಸಭೆಯಲ್ಲಿ ಎ.ಎಸ್.ಪಿ ಶಾಲು,ಅರಕಲಗೂಡು ವೃತ್ತ ನಿರೀಕ್ಷಕರಾದ ವಸಂತ್ ಕೆ.ಎಂ, ಮುಖಂಡರಾದ ಉಮೇಶ್ ಮತ್ತು ಗ್ರಾಮೀಣ ಭಾಗದ ಪರಿಶಿಷ್ಟ ಜಾತಿ ಮುಖಂಡರಾದ ಮಧು ಭಾಗವಹಿಸಿದ್ದರು.
———ಶಶಿಕುಮಾರ್ ಕೆಲ್ಲೂರು