ಅರಕಲಗೂಡು;ವಾಹನಗಳ ಚಾಲನ ಪರವಾನಗಿ ಪಡೆಯದೇ ವಾಹನಗಳ ಚಲಾಯಿಸಿ ಏನಾದರು ಅನಾಹುತಗಳು ಘಟಿಸಿದರೆ ನೀವು ಹಾಗು ನಿಮಗೆ ವಾಹನ ಕೊಟ್ಟ ನಿಮ್ಮ ಪೋಷಕರು ಕಾನೂನಿನ ಅಡಿಯಲ್ಲಿ ಶಿಕ್ಷೆಗೆ ಗುರಿಯಾಗುತ್ತೀರಿ.ಆದ ಕಾರಣ ಲೈಸೆನ್ಸ್ ಪಡೆಯುವ ಮುನ್ನ ವಾಹನ ಚಾಲನೆಯಂತಹ ದುಃಸ್ಸಾಹಸಗಳಿಗೆ ಕೈ ಹಾಕಬೇಡಿ ಎಂದು ವಿದ್ಯಾರ್ಥಿಗಳಿಗೆ ಪಿ ಎಸ್ ಐ ಕಾವ್ಯ ಎಚ್ಚರಿಕೆ ನೀಡಿದರು.
ಬಿ ಜಿ ಎಸ್ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಕಾಲೇಜು ವಿದ್ಯಾರ್ಥಿಗಳಿಗೆ ಕಾನೂನು ಅರಿವು’ ಎಂಬ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದರು.
ಸ್ವಸ್ಥ ಸಮಾಜ ನಿರ್ಮಾಣ ನಮ್ಮೆಲ್ಲರ ಕರ್ತವ್ಯವಾಗಿದ್ದು.ಈ ನಿಟ್ಟಿನಲ್ಲಿ ನಮ್ಮ ದೇಶದ ಕಾನೂನನ್ನು ಗೌರವಿಸುವುದು ಮತ್ತು ಅದನ್ನು ಪಾಲಿಸುವುದು ಪ್ರಮುಖ ಅಂಶವಾಗುತ್ತದೆ.
ಬೈಕ್ಗಳನ್ನು ಓಡಿಸುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸುವುದು,ಕಾರುಗಳಲ್ಲಿ ಸೀಟ್ ಬೆಲ್ಟ್ ಗಳನ್ನು ಬಳಸಿ ಕಾನೂನು ಪಾಲನೆ ಮಾಡುವುದು ಎಲ್ಲರ ಕರ್ತವ್ಯ.ಇದರಿಂದ ವ್ಯಕ್ತಿ ತನ್ನ ಜೀವ ಮತ್ತು ಜೀವನ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ.ನೀವು ಮುಂದೆ ಈ ಸೂಚನೆಗಳನ್ನು ಪಾಲಿಸುವುದರ ಜೊತೆಗೆ ನಿಮ್ಮ ಪೋಷಕರು ಹಾಗು ನೆರೆಹೊರೆಯವರಿಗೆ ತಿಳಿಸುವ ಮೂಲಕ ಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದರು.
ವಿದ್ಯಾರ್ಥಿ ಜೀವನದಲ್ಲಿ ಪ್ರೀತಿ-ಪ್ರೇಮಗಳ ಆಕರ್ಷಣೆಗೆ ಒಳಗಾಗದೆ ಕೇವಲ ಓದಿನೆಡೆಗಷ್ಟೇ ಗಮನ ಹರಿಸಬೇಕು.ತಂದೆ ತಾಯಿಗಳು ನಮ್ಮ ಮೇಲೆ ಇಟ್ಟಿರುವ ಕನಸ್ಸುಗಳ ಈಡೇರಿಕೆಗೆ ನಾವು ಒತ್ತು ಕೊಡಬೇಕು.ಇಂದು ಮನಸ್ಸು ಇಟ್ಟು ಕಲಿತ ವಿದ್ಯೆ ನಮ್ಮ ಮುಂದಿನ ಭವಿಷ್ಯಕ್ಕೆ ದಾರಿದೀಪವಾಗುತ್ತದೆ ಎಂದು ಪಿ ಎಸ್ ಐ ಕಾವ್ಯರವರು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರು.
ಜೊತೆಗೆ ಆನ್ಲೈನ್ ವಂಚನಾ ಜಾಲದ ಬಗ್ಗೆ ಮಾಹಿತಿ ನೀಡಿದ ಅವರು ತಮ್ಮ ಪೋಷಕರು ಹಾಗು ನೆರೆಹೊರೆಯವರಿಗೆ ಈ ಮಾಹಿತಿಯನ್ನು ಹಂಚಿಕೊಂಡು ಅವರನ್ನು ವಂಚಕರಿಂದ ರಕ್ಷಿಸಿಕೊಳ್ಳಲು ನೆರವಾಗುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಮಹೇಶ್ ಹೊಡೆನೂರ್ ರವರು ಮಾತನಾಡಿ ಪೊಲೀಸ್ ಅಧಿಕಾರಿ ಕಾವ್ಯರವರು ಕೊಟ್ಟಂತಹ ಕಾನೂನುನ ತಿಳುವಳಿಕೆ ಇಂದಿಗೂ ಮುಂದಿಗೂ ನಿಮ್ಮನ್ನು ರಕ್ಷಿಸುತ್ತದೆ.ಕಾನೂನಿನ ಪಾಲನೆ ನಮ್ಮೆಲ್ಲರ ಕರ್ತವ್ಯವಾಗಿದ್ದು ಭವ್ಯ ಭಾರತದ ನಿರ್ಮಾಣಕ್ಕೆ ಎಲ್ಲರು ಕಾನೂನನ್ನು ಪಾಲಿಸುವ ಪ್ರತಿಜ್ಞೆ ಮಾಡುವ ಮೂಲಕ ಕೈಜೋಡಿಸೋಣ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಭೋದಕ ಹಾಗು ಬೋಧಕೇತರ ಸಿಬ್ಬಂದಿಗಳು ಮತ್ತು ಆರಕ್ಷಕ ಸಿಬ್ಬಂದಿಗಳು ಹಾಜರಿದ್ದರು.
————--ಶಶಿಕುಮಾರ್ ಕೆಲ್ಲೂರು