ಅರಸೀಕೆರೆ-ಕುರುಬ ಸಮುದಾಯಕ್ಕೆ ಕೆ.ಎಂ ಶಿವಲಿಂಗೇಗೌಡರಿಂದ ದ್ರೋಹ-ಕೆಂಕೆರೆ ಗ್ರಾಮದ ಕೆರೆ ತುಂಬಿಸುವ ಯೋಜನೆಗೆ ಅಡ್ಡಗಾಲು ಹಾಕಿದ್ದು ಏಕೆ-ಕೆ.ಬಿ.ಕೇಶವಮೂರ್ತಿ ಪ್ರಶ್ನೆ

ಅರಸೀಕೆರೆ-ಕುರುಬ ಸಮುದಾಯದ ಜನರಿಗೆ ಶಾಸಕ ಕೆ.ಎಂ.ಶಿವಲಿoಗೇಗೌಡ ದ್ರೋಹವೆಸಗಿದ್ದಾರೆ ಎಂದು ಕರ್ನಾಟಕ ರಾಜ್ಯ ಪ್ರದೇಶ ಕುರುಬರ ಸಂಘದ ಉಪಾಧ್ಯಕ್ಷ ಹಾಗೂ ಜೆ.ಡಿ.ಎಸ್ ಮುಖಂಡ ಕೆ.ಬಿ.ಕೇಶವಮೂರ್ತಿ ಆಕ್ರೋಶ ಹೊರಹಾಕಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಿರುವ ಅವರು,ಕೆಂಕೆರೆ ಗ್ರಾಮದ ವಿಚಾರದಲ್ಲಿ ಶಾಸಕರು ಘೋರ ಅನ್ಯಾಯ ಮಾಡಿದ್ದಾರೆ.ಗ್ರಾಮದಲ್ಲಿ ಕುರುಬ ಸಮುದಾಯದ ಜನರೇ ಹೆಚ್ಚಿದ್ದಾರೆ.ಈ ಗ್ರಾಮದ ಕೆರೆ ತುಂಬಿಸುವ 22 ಕೋಟಿ ಯೋಜನೆಗೆ ಅನುಮತಿ ನೀಡುವಂತೆ ನಮ್ಮ ಸಮುದಾಯದವರು ಅನೇಕ ಬಾರಿ ಸಿ.ಎಂ ಸಿದ್ದರಾಮಯ್ಯ ರನ್ನು ಭೇಟಿ ಮಾಡಿ ಮಾಡಿದ ಮನವಿಗೆ ಸ್ಪಂದಿಸಿ ಸಿದ್ದರಾಮಯ್ಯ ಅವರು ಯೋಜನೆಗೆ ಮಂಜೂರಾತಿ ನೀಡಿದ್ದರು.

ಆದರೆ ಇದನ್ನು ಸಹಿಸಿಕೊಳ್ಳಲಾಗದ ಶಿವಲಿಂಗೇಗೌಡ ಅವರು ಯೋಜನೆಯನ್ನೇ ರದ್ದು ಮಾಡಿಸಿದರು.ಇದೇ ಕಾರಣಕ್ಕೆ ಇತ್ತೀಚೆಗೆ ಗಣಪತಿ ವಿಸರ್ಜನೆ ಕಾರ್ಯಕ್ರಮಕ್ಕೆಂದು ಕೆಂಕರೆ ಗ್ರಾಮಕ್ಕೆ ಆಗಮಿಸಿದ್ದ ಶಿವಲಿಂಗೇಗೌಡ ಅವರಿಗೆ ಗ್ರಾಮಸ್ಥರು ಸಿಟ್ಟಿನಿಂದ ಘೇರಾವ್ ಹಾಕಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.ಇದು ಕೆಂಕೆರೆ ಗ್ರಾಮಸ್ಥರಿಗೆ ಶಿವಲಿಂಗೇಗೌಡ ಮಾಡಿದ ಅನ್ಯಾಯದ ನೋವೇ ಹೊರತು,ಅವರು ಹೇಳಿದಂತೆ ರಾಜಕೀಯದ ಉದ್ದೇಶದ್ದಲ್ಲ ಎಂದು ಕೇಶವಮೂರ್ತಿ ಸ್ಪಷ್ಟಪಡಿಸಿದ್ದಾರೆ.

ಅರಸೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಸರ್ವಜನರ,ಎಲ್ಲಾ ಸಮುದಾಯದ ಹಿತಕಾಯುವೆ, ಎಲ್ಲಾ ಸಮುದಾಯದವರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ರಾಜಕೀಯ ಮಾಡುವೆ ಎಂದು ಪದೇ ಪದೆ ಹೇಳುವ ಕೆ.ಎಂ.ಶಿವಲಿoಗೇಗೌಡ ವಾಸ್ತವವಾಗಿ ನಡೆದುಕೊಳ್ಳುತ್ತಿರುವುದೇ ಬೇರೆ. ಪ್ರತಿ ಹಂತದಲ್ಲೂ ಮುಖವಾಡದ ರಾಜಕೀಯ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.

ಇಷ್ಟಾದರೂ ತಾವು ಮಾಡಿರುವ ಅನ್ಯಾಯ, ತಾರತಮ್ಯ, ಒಪ್ಪಿಕೊಳ್ಳದೆ ಗ್ರಾಮಸ್ಥರ ಬಗ್ಗೆ ಅಸಡ್ಡೆಯಿಂದ ಮಾತನಾಡಿರುವುದು ಖಂಡನೀಯ. ಹಗಲು ವೇಳೆ ಮೀಟಿಂಗ್ ಕರೆಯುವೆ ಎಂದಿರುವುದು ಅವರ ಸಮಯಸಾಧಕ ತನದ ರಾಜಕೀಯ ಎಂದು ಕೇಶವಮೂರ್ತಿ ಟೀಕಿಸಿದ್ದಾರೆ.

ಅವರು ಕೇವಲ ರಾಜಕೀಯ ಭಾಷಣ ಮಾಡುವುದರ ಬದಲು ಪ್ರಾಮಾಣಿಕವಾಗಿ ಜನರ ಹಿತಕಾಯುವ ಕೆಲಸ ಮಾಡಲಿ ಎಂದು ಸಲಹೆ ನೀಡಿದ್ದಾರೆ.ಒಟ್ಟಾರೆ ಮಾತನಾಡುವುದ ಬಿಟ್ಟು ಕೆಂಕೆರೆ ಗ್ರಾಮದ ಕೆರೆಗೆ ನೀರು ತುಂಬಿಸುವ ಯೋಜನೆ ರದ್ದು ಮಾಡಿದ್ದು ಏಕೆ ಎಂಬ ಗ್ರಾಮಸ್ಥರ ಪ್ರಶ್ನೆಗೆ ಅವರು ಉತ್ತರ ನೀಡಲಿ ಎಂದು ಒತ್ತಾಯಿಸಿದ್ದಾರೆ.

ಸಾರ್ವಜನಿಕವಾಗಿ, ರಾಜ್ಯ ನಾಯಕರ ಮುಂದೆ ಬೇರೆಯದೇ ರೀತಿಯಲ್ಲಿ ಬಿಂಬಿಸಿಕೊಳ್ಳುವ ಶಿವಲಿಂಗೇಗೌಡರ ಮುಖವಾಡದ ರಾಜಕೀಯ, ಕೆಂಕೆರೆ ಗ್ರಾಮದ ಕೆರೆ ನೀರು ತುಂಬಿಸುವ ಯೋಜನೆ ವಿಚಾರದಲ್ಲಿ ಕಳಚಿ ಬಿದ್ದಿದೆ. ಇನ್ನಾದರೂ ಒಣ ಪ್ರತಿಷ್ಠೆ, ಕುರುಬ ಸಮುದಾಯ ವಿರೋಧಿ ರಾಜಕೀಯ ಬಿಟ್ಟು ಪ್ರಾಮಾಣಿಕ ರಾಜಕೀಯ ಮಾಡಲಿ.

ಕುರುಬ ಸಮಯದಾಯದಂತೆಯೇ ತಾಲೂಕಿನಲ್ಲಿ ಇತರೆ ಅನೇಕ ಹಿಂದುಳಿದ ವರ್ಗದ ಜನರಿಗೂ ಅನ್ಯಾಯ ಮಾಡಿರುವುದು, ಮಾಡುತ್ತಿರುವುದು ಈಗಾಗಲೇ ಕ್ಷೇತ್ರದ ಮತದಾರರಿಗೆ ಶಿವಲಿಂಗೇಗೌಡ ಅವರ ನಿಜ ರಾಜಕೀಯದ ಬಣ್ಣ ಗೊತ್ತಾಗಿದೆ. ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕೇಶವಮೂರ್ತಿ ಎಚ್ಚರಿಸಿದ್ದಾರೆ.

——————-ಜೀವನ್ ಅರಸೀಕೆರೆ

Leave a Reply

Your email address will not be published. Required fields are marked *

× How can I help you?