ಬೇಲೂರು:ಬಾಬಾ ಸಾಹೇಬ್ ಅಂಬೇಡ್ಕರ್ ರವರು ಬದುಕಿದ್ದ ಕಾಲದಲ್ಲಿ ಏನೇ ಕೆಲಸಗಳಿದ್ದರೂ ಸಹ ಅವುಗಳೆಲ್ಲವನ್ನೂ ಬದಿಗಿರಿಸಿ ಜನವರಿ ಒಂದರಂದು ಕೋರೆಗಾಂವ್ ಗೆ ಬಂದು ಅಲ್ಲಿರುವ ಹುತಾತ್ಮ ಅಸ್ಪೃಶ್ಯ ಮಹಾರ್ ಯೋಧರ ಸ್ಮಾರಕ ಕೋರೆಗಾಂವ್ ವಿಜಯ ಸ್ಥಂಬಕ್ಕೆ ಗೌರವಪೂರ್ವಕ ನಮನ ಸಲ್ಲಿಸುತ್ತಿದ್ದರು ಎಂದರೆ ಈ ಘಟನೆ ಅಂಬೇಡ್ಕರ್ ರವರ ಹೋರಾಟದ ಬದುಕಿನಲ್ಲಿ ಅದೆಷ್ಟು ಪ್ರೇರಣೆ ನೀಡಿತ್ತು ಎಂಬುದು ನಮಗಿಂದು ಊಹಿಸಲು ಸಾಧ್ಯವಿಲ್ಲ ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಉಸ್ತುವಾರಿ ಗಂಗಾಧರ್ ಬಹುಜನ್ ತಿಳಿಸಿದರು
ಬೇಲೂರು ತಾಲೂಕಿನ ನಾರ್ವೆಪೇಟೆಯಲ್ಲಿ ಆಯೋಜಿಸಲಾಗಿದ್ದ 207 ನೇ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಅವರು ಪ್ರತಿ ವರ್ಷ ಜನವರಿ 1, ಇಡೀ ಜಗತ್ತಿಗೆ ಹೊಸವರ್ಷದ ಸಂಭ್ರಮದ ದಿನವಾದರೆ ಭಾರತದ ಅಸ್ಪೃಶ್ಯರ ಪಾಲಿಗೆ ಇದು ಅಸ್ಪೃಶ್ಯತೆಯ ವಿರುದ್ಧ ಬಂಡೆದ್ದ ಅಸ್ಪೃಶ್ಯ ಮಹಾರ್ ಗುಂಪೊಂದು ಮಹಾರಾಷ್ಟ್ರದ ಪೇಶ್ವಗಳ ವಿರುದ್ಧ ಕೆಚ್ಚೆದೆಯ ಹೋರಾಟ ನಡೆಸಿ ದಿಗ್ವಿಜಯ ಸಾಧಿಸಿ ಆತ್ಮಗೌರವದಿಂದ ತಲೆಯೆತ್ತಿ ನೆಡೆಯಲು ಅಸ್ಪೃಶ್ಯರಿಗೆ ಸ್ವಾಭಿಮಾನ ತಂದುಕೊಟ್ಟ ದಿನ.
ಮಹಾರಾಷ್ಟ್ರದಲ್ಲಿ ಪೇಶ್ವಗಳು ಆಡಳಿತ ನಡೆಸುತ್ತಿದ್ದ ಕ್ರಿ.ಶ.1800 ರ ಕಾಲಘಟ್ಟದಲ್ಲಿ ಅಸ್ಪೃಶ್ಯರ ಪಾಲಿನ ಕರಾಳ ದಿನಗಳಾಗಿದ್ದವು ಅಸ್ಪಶ್ಯತೆ ಆಚರಣೆಯ ಕಠೋರತೆಯು ತುಂಬಾ ಅಮಾನುಷ ವಾಗಿತ್ತು ಮತ್ತು ಘೋರವಾಗಿತ್ತು.
ಸಾರ್ವಜನಿಕ ಸ್ಥಳಗಳಲ್ಲಿ ಅಸ್ಪೃಶ್ಯರ ಪ್ರವೇಶ ಸಂಪೂರ್ಣ ನಿಷಿದ್ಧವಾಗಿತ್ತು.ಅವರ ನೆರಳು ಸಹ ಸವರ್ಣೀಯರ ಮೇಲೆ ಬೀಳುವಂತಿರಲಿಲ್ಲ.ವಿದ್ಯೆ ಕಲಿಯುವ,ಆಸ್ತಿ ಹೊಂದುವ, ಆಯುಧ ಹಿಡಿಯುವ ಹಕ್ಕುಗಳು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು. ಹಿಂದೂ ಸವರ್ಣಿಯರು ಮತ್ತು ಪೇಶ್ವೆ ಸೈನಿಕರು ಅಸ್ಪೃಶ್ಯ ಮಹಿಳೆಯರ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದರೂ ಸಹ ಯಾವುದೇ ಚಕಾರವೆತ್ತದೆ ನೋಡಿಕೊಂಡು ಮೌನವಾಗಿಬೇಕಾಗಿತ್ತು.
ಇದೇ ಸಮಯದಲ್ಲಿ ಭಾರತದ ಬಹುತೇಕ ಭಾಗವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದ ಬ್ರಿಟಿಷರಿಗೆ ಮಹಾರಾಷ್ಟ್ರದ ಪೇಶ್ವೆಗಳನ್ನು ಬಗ್ಗು ಬಡಿದು ತಮ್ಮ ಆಡಳಿತ ವಿಸ್ತರಿಸಿಕೊಳ್ಳಲು ತೀರ್ಮಾನಿಸಿ ಪೇಶ್ವೆಗಳ ಮೇಲೆ ಯುದ್ದ ಘೋಷಿಸಿ ಅದರ ಜವಾಬ್ದಾರಿಯನ್ನು ಕ್ಯಾಪ್ಟನ್ ಸ್ಟಂಡನ್ ಗರಡಿಯಲ್ಲಿ ಪಳಗಿದ್ದ ಸಿದನಾಕ ನೇತೃತ್ವದ ಮಹಾರ್ ರೆಜಿಮೆಂಟ್ ಗೆ ವಹಿಸಿದರು.
ಪೇಶ್ವಗಳ ದೌರ್ಜನ್ಯ, ದಬ್ಬಾಳಿಕೆಗಳಿಂದ ರೋಸಿಹೋಗಿದ್ದ ಮಹಾರಾಷ್ಟ್ರದ ಅಸ್ಪೃಶ್ಯ ಮಹಾರ್ ಯುವಕರು ಪೇಶ್ವಗಳ ಬಿಸಿ ರಕ್ತ ಕುಡಿಯಲು ಹಾತೊರೆಯುತ್ತಿದ್ದರು.ತಮ್ಮಗಳ ಕಷ್ಟ ಮತ್ತು ಅಪಮಾನಗಳ ಪರಿಹಾರಕ್ಕಾಗಿ ಒದಗಿ ಬಂದ ಈ ಸುವರ್ಣಾವಕಾಶವನ್ನು ಮನಃಪೂರ್ವಕವಾಗಿ ಸ್ವೀಕರಿಸಿದ ಮಹಾರ್ ರೆಜಿಮೆಂಟ್ ಸಿದನಾಕನ ನಾಯಕತ್ವದಲ್ಲಿ 500 ಜನ ಯುವ ಸೈನಿಕರು ಪೇಶ್ವೆಗಳ ವಿರುದ್ಧ ಯುದ್ಧ ಮಾಡಲು ಸಿದ್ಧರಾದರು.
ಆದರೂ ಸಹ ಒಮ್ಮೆ ಯೋಚಿಸಿ ನಾವು ನಮ್ಮದೇ ನೆಲದ ರಾಜನ ವಿರುದ್ಧ ಹೇಗೆ ಹೋರಾ ಡುವುದು. ಒಮ್ಮೆ ಪೇಶ್ವೆ ರಾಜ ಎರಡನೇ ಬಾಜೀರಾಯನನ್ನು ಭೇಟಿಯಾಗಿ ನಮ್ಮ ಜನಾಂಗದ ಮೇಲೆ ನಡೆಯುತ್ತಿರುವ ಈ ಎಲ್ಲಾ ಅನ್ಯಾಯ ಮತ್ತು ದೌರ್ಜನ್ಯಗಳನ್ನು ನಿಲ್ಲಿಸಿ, ನಮ್ಮನ್ನು ಮನುಷ್ಯರಂತೆ ಗೌರವದಿಂದ ಕಾಣುವುದಾದರೆ ನೀವು ನಾವು ಒಟ್ಟಾಗಿ ಬ್ರಿಟಿಷರ ಮೇಲೆ ಯುದ್ದ ಮಾಡೋಣ ಎಂದು ವಿನಂತಿಸಿಕೊಂಡಾಗ ಎರಡನೇ ಬಾಜೀರಾಯನು “ನೀವುಗಳು ಹುಟ್ಟಿರುವುದೇ ನಮ್ಮಗಳ ಸೇವೆ ಮಾಡಲಿಕ್ಕಾಗಿ ಮತ್ತು ನಿಮ್ಮ ಹೆಂಗಸರು ಇರುವುದೇ ನಮ್ಮನ್ನು ಸುಖಪಡಿಸಲಿಕ್ಕಾಗಿ ಇದೇ ನಮ್ಮ ಮನು ಸಂವಿಧಾನ”ಎಂದು ಅಸ್ಪೃಶ್ಯರಿಗೆ ಖಡಕ್ಕಾಗಿ ಎಚ್ಚರಿಕೆ ನೀಡಿದನು.
ಇದರಿಂದ ಕ್ರೋಧಗೊಂಡ ಮಹಾರ್ ಸೈನಿಕರು ವ್ಯಾಘ್ರಗಳಂತಾಗಿ 1817 ರ ಡಿಸೆಂಬರ್ 31 ರ ರಾತ್ರಿ ಸಿರೂರಿನಿಂದ ಯುದ್ಧ ಭೂಮಿ ಕೋರೆಗಾಂವ್ ಗೆ ಪ್ರಯಾಣ ಬೆಳೆಸಿ 27 ಕಿಲೋ ಮೀಟರ್ ಕಾಲ್ನಡಿಗೆಯಲ್ಲಿ ಸಾಗಿ ಬೀಮಾನದಿ ತೀರದಲ್ಲಿರುವ ಕೋರೆಗಾಂವ್ ಎಂಬ ಸ್ಥಳವನ್ನು ಸಿದ್ಧನಾಕನ ಪಡೆ ತಲುಪುತ್ತದೆ.ಮರುದಿನ ಜನವರಿ 1ನೇ ತಾರೀಖು 1918 ರಂದು ಮಹಾರ್ ಸೈನಿಕರು, ಪೇಶ್ವೆ ಸೈನ್ಯವನ್ನು ಬಗ್ಗುಬಡಿಯಲು ಸನ್ನದ್ಧರಾಗುತ್ತಾರೆ.ಇಡೀ ರಾತ್ರಿ ನಿದ್ದೆಯಿಲ್ಲದೆ 27 ಕಿ.ಮೀ ದೂರವನ್ನು ನಡೆದುಕೊಂಡು ಬಂದಿದ್ದ ಈ ಅಸ್ಪಶ್ಯ ಯೋಧರ ಪಡೆ ನಿದ್ರೆ, ಆಯಾಸವನ್ನು ಲೆಕ್ಕಿಸದೇ ಬೆಳಿಗ್ಗೆ 9 ಗಂಟೆಗೆ ಸರಿಯಾಗಿ ಪೇಶ್ವೆ ಸೈನಿಕರ ಮೇಲೆ ಎರಗುತ್ತಾರೆ. ಬರೋಬ್ಬರಿ 28 ಸಾವಿರ ಪೇಶ್ವೆ ಸೈನಿಕರು ಮೂರೂ ದಿಕ್ಕಿನಿಂದ ಅಸ್ಪೃಶ್ಯ ಯೋಧರನ್ನು ಸುತ್ತವರೆಯುತ್ತಾರೆ ಬೆಳಿಗ್ಗೆ 9 ರಿಂದ ರಾತ್ರಿ 9ರ ವರೆಗೆ ಸತತ 12 ಗಂಟೆಗಳ ಕಾಲ ನಡೆದ ಈ ಘೋರ ಯುದ್ದದಲ್ಲಿ ಹಸಿದ ಹೆಬ್ಬುಲಿಗಳಂತಿದ್ದ ಅಸ್ಪೃಶ್ಯ ಯೋಧರು ಪೇಶ್ವ ಸೈನ್ಯವನ್ನು ಧೂಳಿಪಟ ಮಾಡುತ್ತಾರೆ. ಇಡೀ ಯುದ್ಧ ಭೂಮಿಯ ತುಂಬ ರಕ್ತದ ಕೋಡಿಯೇ ಹರಿಯುತ್ತದೆ. ಸಾವಿರಾರು ಸೈನಿಕರು ಯುದ್ಧಭೂಮಿಯಲ್ಲಿ ಸಾವನ್ನಪ್ಪುತ್ತಾರೆ .
ಪೇಶ್ವಗಳ ಸೈನ್ಯವು ಹಸಿದ ಹೆಬ್ಬುಲಿಗಳಂತಿದ್ದ ಅಸ್ಪೃಶ್ಯ ಸೈನಿಕರ ಮುಂದೆ ನಿಲ್ಲಲಾಗದೆ ಕೊನೆಗೆ ಜೀವ ಉಳಿಸಿಕೊಳ್ಳಲು ದಿಕ್ಕಾಪಾಲಾಗಿ ಓಡತೊಡಗಿದರು.ಅಂತಿಮವಾಗಿ ಈ ಯುದ್ದದಲ್ಲಿ ಅಸ್ಪೃಶ್ಯ ಮಹಾರ್ ಸೈನಿಕರು ಪ್ರಚಂಡ ಜಯಗಳಿಸುತ್ತಾರೆ.ಸತತ 12 ಗಂಟೆಗಳ ಕಾಲ ನಡೆದ ಈ ಘೋರ ಕಾಳಗದಲ್ಲಿ 5000ಕ್ಕೂ ಹೆಚ್ಚು ಪೇಶ್ವೆ ಸೈನಿಕರು ಯುದ್ಧ ಭೂಮಿಯಲ್ಲಿ ಸಾವನ್ನಪ್ಪಿದರೆ, ಕೇವಲ 22 ಜನ ಮಹಾರ್ ಯೋಧರು ವೀರ ಮರಣವನ್ನಪ್ಪಿದ್ದರು. ದುರಂತವೆಂದರೆ ಈ ಯುದ್ಧದಲ್ಲಿ ಮಹಾರ್ ರೆಜಿಮೆಂಟ್ ನ ನಾಯಕನಾಗಿದ್ದ ಸಿದ್ದನಾಕನು ಸಹ ವೀರ ಮರಣವನ್ನಪ್ಪುತ್ತಾನೆ.
ಈ ರಣರಂಗದಲ್ಲಿ ಬೃಹತ್ ಸಂಖ್ಯೆಯಲ್ಲಿದ್ದ ಪೇಶ್ವ ಸೈನಿಕರ ಜೊತೆ ವೀರಾವೇಶದಿಂದ ಹೋರಾಡಿ ಜಯ ತಂದುಕೊಟ್ಟು ಹುತಾತ್ಮರಾದ 22 ಅಸ್ಪೃಶ್ಯ ಯೋಧರ ನೆನಪಿಗಾಗಿ ಬ್ರಿಟೀಷರು ಯುದ್ಧ ನಡೆದ ಸ್ಥಳದಲ್ಲಿ ಕೋರೆಗಾಂವ್‌ನಲ್ಲಿ 65 ಅಡಿ ಎತ್ತರದ ಭವ್ಯ“ವಿಜಯ ಸ್ತಂಭ ವನ್ನು ನಿರ್ಮಿಸಿ ಆ ಸ್ಥಂಬದ ಮೇಲೆ 22 ಹುತಾತ್ಮ ಯೋಧರ ಹೆಸರುಗಳನ್ನು ಕೆತ್ತಿಸಿದ್ದಾರೆ.
ಸ್ವಾಭಿಮಾನದ ಗೌರವಯುತ ಬದುಕಿಗಾಗಿ ಮಹಾರ್ ಸೈನಿಕರು ಅನಿವಾರ್ಯವಾಗಿ ಬ್ರಿಟೀಷರ ಪರವಾಗಿ ಯುದ್ದ ಮಾಡಬೇಕಾಯಿತು .ಅಸ್ಪೃಶ್ಯರಿಗೆ ಆಯುಧ ಹಿಡಿಯುವ ಹಕ್ಕು ನಿರಾಕರಿಸ ದಿದ್ದರೆ ಈ ದೇಶ ಎಂದೂ ತನ್ನ ಸ್ವಾತಂತ್ರ್ಯವನ್ನು ಕಳೆದು ಕೊಳ್ಳುತ್ತಿರಲಿಲ್ಲ ಎಂದರು.ಇಂತಹ ಅಸ್ಪೃಶ್ಯ ಮಹಾರ್ ಸೈನಿಕರ ಯಶೋಗಾಥೆ ಇಂದಿನ ಎಲ್ಲಾ ತಳಸಮುದಾಯಗಳ ಚಳುವಳಿಗಳಿಗೆ ಸ್ಫೂರ್ತಿಯಾಗಿ ತೆಗೆದುಕೊಳ್ಳಬೇಕು ಎಂದು ಕರೆ ನೀಡಿದರು
ಕಾರ್ಯಕ್ರಮದಲ್ಲಿ ನಾರ್ವೆಪೇಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾಲಾಶ್ರೀ, ಸಮಿತಿಯ ಅಧ್ಯಕ್ಷ ಚಂದ್ರು ಬಹುಜನ್, ವಕೀಲರಾದ ರಾಜು ಅರೇಹಳ್ಳಿ, ರಾಜೇಶ್ ಸಾಣೇನಹಳ್ಳಿ, ಗ್ರಾ. ಪಂ. ಉಪಾಧ್ಯಕ್ಷರಾದ ಮಲ್ಲಿಕಾರ್ಜುನ, ಸದಸ್ಯರಾದ ಪವಿತ್ರ, ಬೇಬಿ, ಮಲ್ಲಿಕಾರ್ಜುನ, ಶಿವರಾಜ್ ,ಸೋಮಶೇಖರ್ ಮಲಸಾವರ, ಮಾಜಿ ತಾ.ಪಂ. ಸದಸ್ಯ ಸೋಮಯ್ಯ.ರಾಜು ಬೆಳ್ಳೊಟ್ಟೆ, ನಿಂಗರಾಜು , ಉಮೇಶ್.ಪುಟ್ಟಸ್ವಾಮಿ, ಅಣ್ಣಪ್ಪ, ಮಲ್ಲೇಶ್, ಪುನೀತ್, ಮೂರ್ತಿ, ಲೋಕೇಶ್ , ಪರಮೇಶ, ನಿಂಗರಾಜು ನಾರ್ವೆ,ಬಾಬಾಣ್ಣ, ಶಿಕ್ಷಕರಾದ ಸೈಯ್ಯದ್ ಕಲಿಂ, ಲೋಕೇಶ್ , ಶೇಷಪ್ಪ , ಮಲ್ಲಿಗಮ್ಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನೂರಾರು ಜನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.