ಅರೇಹಳ್ಳಿ:ರಸ್ತೆಯ ಬದಿಗಳಲ್ಲಿ ಬಿಡಿ-ಬಿಡಿಯಾಗಿ ಚಾಕಲೇಟುಗಳು ಬಿದ್ದಿರುತ್ತಿದ್ದವು.ಒಮ್ಮೊಮ್ಮೆ ಪ್ಲಾಸ್ಟಿಕ್ ಕವರ್ ಗಳಲ್ಲೂ ಕಾಣಸಿಗುತ್ತಿದ್ದವು.ಗ್ರಾಮಸ್ಥರು ಯಾರೋ ಬೀಳಿಸಿಕೊಂಡು ಹೋಗಿರಬಹುದು ಎಂದು ಸಹಜ ನಿರ್ಲಕ್ಷ್ಯ ವಹಿಸಿದ್ದರು.
ಆದರೀಗ ಚಾಕ್ಲೆಟ್ ಡಬ್ಬಗಳೆ ರಸ್ತೆ ಬದಿ ಕಾಣಸಿಗುತ್ತಿರುವುದ ನೋಡಿ ಅನುಮಾನ ಪಡತೊಡಗಿದ್ದಾರೆ.
ಈ ಘಟನೆ ನಡೆಯುತ್ತಿರುವುದು ಅರೇಹಳ್ಳಿ ಪಟ್ಟಣಕ್ಕೆ ಹೊಂದಿಕೊಂಡಂತಿರುವ ಲಿಂಗಾಪುರ ಗ್ರಾಮದಲ್ಲಿ.ಗ್ರಾಮದ ಮುಂಭಾಗದಲ್ಲಿ ಪ್ರಾರಂಭವಾಗಿ ಉದೇವಾರ ರಸ್ತೆಯ ಶಾಂತಿ ಪ್ಲಾಂಟೇಷನ್ ನ ಸಮೀಪದವರೆಗೂ ಈ ಘಟನೆ ನಿತ್ಯವೂ ನಡೆಯುತ್ತಿದ್ದು ಈ ವೈಚಿತ್ರ್ಯದ ಬಗ್ಗೆ ಗ್ರಾಮಸ್ಥರು ಚಿಂತೆಗೀಡಾಗಿದ್ದಾರೆ.
ನಿನ್ನೆ ಎಂದಿನಂತೆ ಕೂಲಿ ಕೆಲಸಕ್ಕೆಂದು ತೆರಳುತ್ತಿದ್ದ ಅಂಬೇಡ್ಕರ್ ನಗರದ ಮಹಿಳಾ ಕಾರ್ಮಿಕರಿಗೆ ಚಾಕಲೇಟು ತುಂಬಿದ್ದ ಡಬ್ಬ ಕಾಣಿಸಿದೆ.ದಿನವೂ ಚಾಕಲೇಟುಗಳು ಬಿದ್ದಿರುತ್ತಿದ್ದುದನ್ನು ನೋಡುತ್ತಿದ್ದ ಅವರಿಗೆ ಭರ್ತಿ ಡಬ್ಬವೇ ಇರುವುದನ್ನು ನೋಡಿ ಆಶ್ಚರ್ಯವಾಗಿದೆ.ಈ ಮಾಹಿತಿಯನ್ನು ಗ್ರಾಮಸ್ಥರಿಗೆ ತಿಳಿಸಿದ್ದಾರೆ.ವಿಷಯ ಎಲ್ಲೆಡೆ ಹಬ್ಬುತ್ತಿದ್ದಂತೆಯೇ ಉದೇವಾರ ರಸ್ತೆಯಲ್ಲಿಯೇ ಬರುವ ಲಿಂಗಾಪುರ,ಮಲಸಾವರ ಗ್ರಾಮಗಳಲ್ಲೂ ಇಂತಹದ್ದೇ ಘಟನೆ ನಡೆದಿರುವ ಬಗ್ಗೆ ಮಾಹಿತಿಗಳು ಹರಿದಾಡಿವೆ.
ಬಿಡಿ-ಬಿಡಿ ಚಾಕಲೇಟುಗಳು ದೊರೆತು ಆತಂಕ ಸೃಷ್ಟಿಯಾಗಿದ್ದ ಸಮಯದಲ್ಲೇ ಬಾಕ್ಸ್ ದೊರೆತಿರುವುದು ವಿವಿಧ ರೀತಿಯಲ್ಲಿ ಸಂಶಯಗಳನ್ನು ಹುಟ್ಟು ಹಾಕಿದೆ.
ಒಂದು ವೇಳೆ ಒಂದೆರಡು ದಿನ ರಸ್ತೆಯ ಬದಿಯಲ್ಲಿ ಚಾಕಲೇಟುಗಳು ದೊರೆತಿದ್ದರೆ ಯಾರಾದರೂ ಬೀಳಿಸಿಕೊಂಡು ಹೋಗಿರಬಹುದು ಎನ್ನಬಹುದಿತ್ತು.ಆದರದು ಪುನರಾವರ್ತನೆಯಾಗಿ ಡಬ್ಬಗಳವರೆಗೂ ಬಂದು ನಿಂತಿದೆ.
ಜನ ಅಮಲು ಬರುವ ಪದಾರ್ಥಗಳನ್ನು ಈ ಚಾಕಲೇಟುಗಳಲ್ಲಿ ಮಿಶ್ರಣ ಮಾಡಿ ಯಾವುದೊ ಉದ್ದೇಶದಿಂದ ದುಷ್ಕರ್ಮಿಗಳು ಹೀಗೆ ಹಾಕಿ ಹೋಗುತ್ತಿರಬಹುದು ಎಂಬ ಅನುಮಾನಗಳನ್ನು ವ್ಯಕ್ತಪಡಿಸಿದ್ದು ಅರೇಹಳ್ಳಿ ಪೊಲೀಸರು ಗಮನ ಹರಿಸಿ ಕವಿದಿರುವ ಅನುಮಾನದ ಕಾರ್ಮೋಡವನ್ನು ದೂರಮಾಡುವರೇ? ಕಾದು ನೋಡಬೇಕಾಗಿದೆ.
—————-ರವಿಕುಮಾರ್