ಅರೇಹಳ್ಳಿ:ಉದೇವಾರ ಗ್ರಾಮಪಂಚಾಯತಿ ವ್ಯಾಪ್ತಿಯ ಉದೇವಾರ ಗ್ರಾಮದ ಬಳಿಯ ಗುಡಿಬೆಟ್ಟ ಮತ್ತು ಬಾಳೆಗದ್ದೆ ಎಸ್ಟೇಟ್ ಗಳಲ್ಲಿ 20ಕ್ಕೂ ಹೆಚ್ಚು ಆನೆಗಳು ಬೀಡುಬಿಟ್ಟಿದ್ದು ರಾತ್ರಿ ವೇಳೆಯಲ್ಲಿ ಅಲ್ಲಿಂದ ಹೊರಬಂದು ಅಕ್ಕಪಕ್ಕದ ಸಣ್ಣ ತೋಟಗಳಿಗೆ ಲಗ್ಗೆ ಇಟ್ಟು ಬೆಳೆ ನಾಶ ಮಾಡುತ್ತಿವೆ.
ಇಂದು ಪತ್ರಕರ್ತರೊಂದಿಗೆ ಮಾತನಾಡಿದ ಉದೇವಾರ ಗ್ರಾಮದ ವಿಜಯರಾಜು ನಾವೆಲ್ಲ ಅತೀ ಸಣ್ಣ ಬೆಳೆಗಾರರು ಇರುವ ಸ್ವಲ್ಪ ಜಮೀನುಗಳಲ್ಲೇ ಕಾಫಿ,ಮೆಣಸು,ಅಡಿಕೆ,ಬಾಳೆ ಹಾಗು ಗದ್ದೆಗಳನ್ನು ಬೆಳೆದುಕೊಂಡಿದ್ದೇವೆ.ಅತೀವೃಷ್ಟಿಯಿಂದ ನಮಗೆ ಈಗಾಗಲೇ ಬೆಳೆನಷ್ಟ ಸಂಭವಿಸಿದೆ.ಮಳೆ ಕಡಿಮೆಯಾಯಿತು ಉಳಿದಿರುವ ಬೆಳೆಯಾದರು ಕೈಗೆ ಸಿಗುತ್ತೆ ಅನ್ನುವಷ್ಟರ ಹೊತ್ತಿಗೆ ಕಾಡಾನೆಗಳು ಬಂದಿವೆ.ಒಂದು ರೌಂಡು ತಿರುಗಾಡಿದರೆ ಸಾಕು ನಮ್ಮ ತೋಟಗಳು ಹೇಳ ಹೆಸರಿಲ್ಲದಂತೆ ಆಗುತ್ತವೆ.ಇದಕ್ಕೆ ಪರಿಹಾರವೇನು ಎಂದು ಪ್ರಶ್ನಿಸಿ ಕಣ್ಣೀರಾದರು.
ಅರಣ್ಯ ಇಲಾಖೆಯವರು ಕೊಡುವ ಪರಿಹಾರದ ಹಣದಲ್ಲಿ ಹತ್ತು ಗಿಡಗಳನ್ನು ಮರು ನಾಟಿ ಮಾಡಲು ಸಾಧ್ಯವಾ ಗುವುದಿಲ್ಲ.ಒಂದೋ ನಮಗೆ ಸಮಗ್ರ ಪರಿಹಾರ ನಿಗದಿಪಡಿಸಿ ಅಥವಾ ಬೇರೆಡೆ ಜಮೀನು ಕೊಟ್ಟರೆ ಊರನ್ನೇ ಬಿಟ್ಟು ಹೊರಟು ಹೋಗುತ್ತೇವೆ ಎಂದರು.
ಮತ್ತೊಬ್ಬ ರೈತ ಗಿರೀಶ್ ಮಾತನಾಡಿ,ಅಡಿಕೆ ಗಿಡಗಳನ್ನು ನಾಟಿ ಮಾಡಿ ಐದಾರು ವರ್ಷಗಳು ಕಳೆದಿವೆ.ಹೊಂಬಾಳೆ ಮೂಡುವಂತಹ ಸಮಯದಲ್ಲಿ ಕಾಡಾನೆಗಳು ೧ ಎಕರೆಯಲ್ಲಿದ್ದ ಅಡಿಕೆ ಗಿಡಗಳನ್ನು ಸಂಪೂರ್ಣ ಮುರಿದು ಹಾಕಿವೆ. ಹೆಂಡತಿಯ ಒಡವೆಯನ್ನು ಖಾಸಗಿ ಬ್ಯಾಂಕಿನಲ್ಲಿಟ್ಟು ಪಡೆದ ಸಾಲದಿಂದ ಹತ್ತಾರು ಲಕ್ಷ ಖರ್ಚು ಮಾಡಿ ಬೆಳೆದ ಕಾಫಿ,ಅಡಿಕೆ ಗಿಡಗಳನ್ನು ಕಾಡಾನೆಗಳು ನಾಶ ಮಾಡಿವೆ. ಮನೆಯಿಂದ ತೋಟಕ್ಕೆ ಬಂದರೆ ಜೀವಂತವಾಗಿ ಮರಳಿ ಹೋಗುತ್ತೇವೆ ಎಂಬ ಭರವಸೆಯಿಲ್ಲದೆ ಬದುಕುದ್ದೇವೆ.
ಕಾಡಾನೆಗಳ ಸಮಸ್ಯೆಯಿಂದ ಮುಕ್ತಿಸಿಗಲು ಸರಕಾರದ ವತಿಯಿಂದ ಸೋಲಾರ್ ಬೇಲಿಯನ್ನು ಮಾಡಿಕೊಡಬೇಕು ಅಥವಾ ಕಾಡಾನೆಗಳನ್ನು ಸಂಪೂರ್ಣವಾಗಿ ಸ್ಥಳಾಂತರ ಮಾಡಬೇಕು,ಇಲ್ಲ ವಿಷವನ್ನಾದರೂ ಕೊಟ್ಟು ಕುಡಿಯಿರಿ ಎಂದು ಹೇಳಬೇಕು ಎಂದು ಎಂದು ಆಕ್ರೋಶ ಹೊರಹಾಕಿದರು.
ವಿಚಾರ ತಿಳಿದು ಸ್ಥಳಕ್ಕಾಗಮಿಸಿದ ತಾಲೂಕು ವಲಯಾರಣ್ಯಾಧಿಕಾರಿ ಹೇಮಂತ್ ಕುಮಾರ್ ಮಾತನಾಡಿ,ಕಡೇಗರ್ಜೆ ಸುತ್ತ ಮುತ್ತ ಹಲವು ಕಾಡಾನೆಗಳು ಸಂಚರಿಸುತ್ತಿರುವ ಮಾಹಿತಿ ಇದೆ. ಬೆಳೆ ನಷ್ಟಗೊಂಡ ರೈತರಿಗೆ ಇಲಾಖೆಯ ಮಾನದಂಡದ ಪ್ರಕಾರ ಪರಿಹಾರ ನೀಡುತ್ತಿದ್ದೇವೆ. ತಾತ್ಕಾಲಿಕವಾಗಿ ಒಂದೆಡೆ ಇರುವ ಕಾಡಾನೆಗಳನ್ನು ರಾತ್ರಿ ವೇಳೆ ಬೇರೆಡೆಗೆ ಆನೆ ಕಾರ್ಯ ಪಡೆ ತಂಡದವರು ಓಡಿಸುತ್ತಾರೆ. ಬೆಳೆ ನಷ್ಟದ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತಂದು ಕಾಡಾನೆ ನಿಯಂತ್ರಣದ ಬಗ್ಗೆ ಚರ್ಚಿಸುತ್ತೇನೆ.ನಾನು ಬಂದು ಕೆಲವು ತಿಂಗಳಾಗಿದ್ದು ೨೧ ಲಕ್ಷ ರೂ.ಗಳ ಪರಿಹಾರವನ್ನು ರೈತರಿಗೆ ಈಗಾಗಲೆ ನೀಡಲಾಗಿದೆ ಎಂದರು.
ಈ ವೇಳೆ ಕೆ.ಜೆ.ಸಿದ್ದಪ್ಪ, ರಾಜಪ್ಪ, ಮಂಜಪ್ಪ, ಮಲ್ಲೇಶ,ಕೆ.ಎಂ.ಸಿದ್ದಪ್ಪ,ಅರಣ್ಯ ಇಲಾಖೆ ಸಿಬ್ಬಂದಿಗಳು ಇದ್ದರು.
೦ಬಾಳೇಗದ್ದೆಯಲ್ಲಿ ಶನಿವಾರ ರಾತ್ರಿ ಕಾಡಾನೆಗಳ ಗುಂಪು ಗಿರೀಶ್‌ರವರು ಸೇರಿದಂತೆ ಹಲವು ರೈತರಿಗೆ ಸೇರಿದ ಫಸಲಿಗೆ ಬಂದಿರುವ ಅಡಿಕೆ ಗಿಡಗಳನ್ನು ತುಳಿದು ನಾಶಪಡಿಸಿದೆ.
——————————–ನೂರ್ ಅಹಮ್ಮದ್