ತುಮಕೂರು-ದಲಿತರ-ಹಣ-ಗ್ಯಾರಂಟಿಗೆ-ಬಳಕೆ-ರಾಜ್ಯ-ಸರ್ಕಾರದ- ವಿರುದ್ಧ-ಹರಿಹಾಯ್ದ-ಅರವಿಂದ್-ಬೆಲ್ಲದ್

ತುಮಕೂರು- ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಯ ಅನುದಾನವನ್ನು ಕೇವಲ ಪರಿಶಿಷ್ಟ ಜಾತಿ, ಪಂಗಡ ಸಮುದಾಯಗಳ ಕಲ್ಯಾಣಕ್ಕಾಗಿ ಮಾತ್ರ ಬಳಸಬೇಕು. ಆದರೆ, ಕಾಂಗ್ರೆಸ್ ಸರ್ಕಾರ ಎಸ್‌ಸಿಪಿ, ಟಿಎಸ್‌ಪಿ ಯೋಜನೆಯ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡು ಈ ವರ್ಗಗಳಿಗೆ ಅನ್ಯಾಯ ಮಾಡಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ್ ಬೆಲ್ಲದ್ ಹರಿಹಾಯ್ದರು.


ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ 16 ಬಜೆಟ್ ಮಂಡಿಸಿದ್ದು, ಇದೀಗ 17ನೇ ಬಜೆಟ್ ಮಂಡಿಸಲು ಸಿದ್ದರಾಗಿದ್ದಾರೆ. ಆರ್ಥಿಕ ತಜ್ಞ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿಗಳು ಈ ಹಿಂದೆ ಎಸ್ಸಿ, ಎಸ್ಟಿ ಸಮುದಾಯಗಳ ಯೋಜನೆಗೆ ಮೀಸಲಿಟ್ಟ ಅನುದಾನವನ್ನು ಸಂಪೂರ್ಣವಾಗಿ ಬಿಡುಗಡೆ ಮಾಡದೆ ಸಮುದಾಯಕ್ಕೆ ಮೋಸ ಮಾಡಿದ್ದಾರೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿಂದು ಆರೋಪಿಸಿದರು.


ಕಾಂಗ್ರೆಸ್ ಸರ್ಕಾರಕ್ಕೆ ಬಡವರು, ದಲಿತರ ಬಗ್ಗೆ ಕಾಳಜಿ ಇಲ್ಲ, ಬದಲಾಗಿ ನಿಷ್ಕಾಳಜಿ ಹೊಂದಿದೆ. ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದಾಗಿನಿಂದ ಸಮುದಾಯದ ಅಭಿವೃದ್ಧಿಗೆ ಒತ್ತು ಕೊಟ್ಟಿಲ್ಲ. ಗ್ಯಾರಂಟಿಗಾಗಿ ದಲಿತ ಸಮುದಾಯದ ಹಣವನ್ನು ಬಳಕೆ ಮಾಡಿಕೊಳ್ಳುವ ಮೂಲಕ ಈ ವರ್ಗಗಳಿಗೆ ಅನ್ಯಾಯ ಮಾಡಿದ್ದಾರೆ ಎಂದು ಕಿಡಿಕಾರಿದರು.

2024-25 ನೇ ಸಾಲಿನಲ್ಲಿ ಮಂಡಿಸಿದ್ದ ಬಜೆಟ್‌ನ ಅನುದಾನ ಸಮರ್ಪಕವಾಗಿ ಬಿಡುಗಡೆಯಾಗಿಲ್ಲ. ಎಸ್ಸಿ-ಎಸ್ಟಿ ಸಮುದಾಯದ ಕಲ್ಯಾಣಕ್ಕಾಗಿ 39914 ಕೋಟಿ ಕೊಡುತ್ತೇವೆ ಎಂದಿದ್ದರು. ಆದರೆ, 24404 ಕೋಟಿ ಖರ್ಚು ಮಾಡಿದ್ದಾರೆ. ಉಳಿದ ಹಣವನ್ನು ಇನ್ನೊಂದು ತಿಂಗಳಲ್ಲಿ ಖರ್ಚು ಮಾಡಲಿಕ್ಕೆ ಸಾಧ್ಯವಾಗುತ್ತಾ ಈ ಸರ್ಕಾರಕ್ಕೆ ಎಂದು ಅವರು ಪ್ರಶ್ನಿಸಿದರು.


ದಲಿತರ ಹಣ ತೆಗೆದು ಗ್ಯಾರಂಟಿಗೆ ಬಳಸುತ್ತೀರಾ? ಅಲ್ಪಸಂಖ್ಯಾತರ ದುಡ್ಡನ್ನು ಗ್ಯಾರಂಟಿಗೆ ಬಳಸಿಕೊಳ್ಳುವುದಿಲ್ಲ. ಎಸ್‌ಇಪಿ, ಟಿಎಸ್‌ಪಿ ಯೋಜನೆಯ ಹಣವನ್ನೇ ಏಕೆ ಬಳಸಿಕೊಳ್ಳುತ್ತೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.


ದಲಿತರ ನಿಗಮಗಳಿಗೆ ಬಜೆಟ್‌ನಲ್ಲಿ ಅನುದಾನ ಕಡಿಮೆ ಕೊಟ್ಟಿದ್ದಾರೆ. ಆದರೆ, ಅಲ್ಪಸಂಖ್ಯಾತ ನಿಗಮಗಳಿಗೆ ಹೆಚ್ಚು ಅನುದಾನ ಕೊಡುತ್ತಾ ಬಂದಿದ್ದಾರೆ. ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ 1೦೦ ಕೋಟಿ ಕೊಡುತ್ತೇವೆ ಎಂದಿ ಹೇಳಿದ್ದರು. ಆದರೆ ಬಿಡುಗಡೆ ಮಾಡಿದ್ದು ಮಾತ್ರ 25 ಕೋಟಿ. ತಾಂಡ ನಿಗಮಕ್ಕೆ 30 ಕೋಟಿ ಅನುದಾನ ಕೊಡುತ್ತೇನೆ ಎಂದು ಭರವಸೆ ನೀಡಿದ್ದರು, ಆದರೆ 8.5 ಕೋಟಿ ಕೊಟ್ಟಿದ್ದಾರೆ ಅಷ್ಟೇ. ಹೀಗೆ ಅನುದಾನ ಕೊಡುತ್ತೇವೆ ಎಂದ ಹಣವನ್ನು ಸಹ ಸಮರ್ಪಕವಾಗಿ ಬಿಡುಗಡೆ ಮಾಡಿಲ್ಲ. ಈ ಎಲ್ಲ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳುತ್ತಿದ್ದಾರೆ ಎಂದು ಅವರು ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.


ಕೋಲಾರ ಮಾಜಿ ಸಂಸದ ಮುನಿಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷವಾಗುತ್ತಿದೆ. ಆದರೆ, ಈವರೆಗೆ ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ಒಂದು ಕಿ.ಮೀ. ರಸ್ತೆ ಡಾಂಬರೀಕರಣವೂ ಆಗಿಲ್ಲ. ಗ್ಯಾರಂಟಿ ಯೋಜನೆ ಮಾತ್ರ ಈ ಸರ್ಕಾರಕ್ಕೆ ನೆಪವಾಗಿದೆ ಎಂದು ಟೀಕಿಸಿದರು.


ದಲಿತ ಸಮುದಾಯಕ್ಕೆ ಅನ್ಯಾಯ ಮಾಡಿದರೆ ನಾವು ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದ ಅವರು, ಎಸ್ಸಿ-ಎಸ್ಟಿ ಸಮುದಾಯಕ್ಕೆ ಹಣ ಮೀಸಲಿಟ್ಟು, ಅದನ್ನು ಸಮರ್ಪಕವಾಗಿ ಬಿಡುಗಡೆ ಮಾಡಿಲ್ಲ. ಕೂಡಲೇ ಈ ಹಣವನ್ನು ಬಿಡುಗಡೆ ಮಾಡುವ ಮೂಲಕ ಎಸ್ಸಿ-ಎಸ್ಪಿ ಸಮುದಾಯದ ಕಲ್ಯಾಣಕ್ಕೆ ಹೆಚ್ಚು ಒತ್ತು ಕೊಡಬೇಕು ಎಂದು ಆಗ್ರಹಿಸಿದರು.


ದೇವಸ್ಥಾನದಲ್ಲಿ ಹೆಚ್ಚು ಹೆಚ್ಚು ಹುಂಡಿಗಳನ್ನಿಟ್ಟು, ಹಣ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ಏಕೆ ಮಸೀದಿಗಳಲ್ಲಿ ಹೆಚ್ಚು ಹೆಚ್ಚು ಹುಂಡಿಗಳನ್ನು ಇಡುತ್ತಿಲ್ಲ. ವಾಯು ವಿಹಾರಿಗಳು ಸಹ ಹಣ ಕೊಡಬೇಕು ಅಂದರೆ ಕಾಂಗ್ರೆಸ್ ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ ಅವರು ವಾಗ್ದಾಳಿ ನಡೆಸಿದರು.


ಪತ್ರಿಕಾಗೋಷ್ಠಿಯಲ್ಲಿ ಶಾಸಕ ಜಿ.ಬಿ.ಜ್ಯೋತಿಗಣೇಶ್, ರವಿಶಂಕರ್ ಹೆಬ್ಬಾಕ, ವೈ.ಹೆಚ್.ಹುಚ್ಚಯ್ಯ, ಜಿಲ್ಲಾ ಮಾಧ್ಯಮ ಸಂಯೋಜಕರಾದ ಜೆ.ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.

  • ಕೆ.ಬಿ.ಚಂದ್ರಚೂಡ

Leave a Reply

Your email address will not be published. Required fields are marked *

× How can I help you?