ಕೆ.ಆರ್.ಪೇಟೆ : ತಾಲ್ಲೂಕಿನ ಆನೆಗೋಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಬಿ.ಎಂ.ಕಿರಣ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಹಿರಿಯರಾದ ಕಡೆಹೆಮ್ಮಿಗೆ ತಿಮ್ಮೇಗೌಡ ಅವರು ಸಹ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನೂತನ ನಿರ್ದೇಶಕರಾಗಿ ಬೋಳಮಾರನಹಳ್ಳಿ ಲಿಂಗರಾಜು, ಅಂಚೆಬೀರನಹಳ್ಳಿ ನಂಜುಂಡೇಗೌಡ, ಲೋಕೇಶ್, ದೇವಮ್ಮಜವರಯ್ಯ, ದೊಡ್ಡತಾರಹಳ್ಳಿ ಮಂಜುನಾಥ್, ಐಕನಹಳ್ಳಿ ಐ.ಡಿ.ಉದಯಶಂಕರ್, ಐ.ಎಂ.ಮಂಜೇಗೌಡ, ಜೆ.ಜೆ.ಸವಿತನಾಗೇಶ್, ಆನೆಗೋಳ ಮಂಜುಳಮ್ಮರಾಮಕೃಷ್ಣೇಗೌಡ, ಡಿಸಿಸಿ ಬ್ಯಾಂಕ್ ಪ್ರತಿನಿಧಿ ನಿರ್ದೇಶಕರಾಗಿ ರಾಘವೇಂದ್ರ ಅವರು ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ತಾಲ್ಲೂಕು ಸಹಕಾರ ಅಭಿವೃದ್ದಿ ಅಧಿಕಾರಿ ಹೆಚ್.ಬಿ.ಭರತ್‌ಕುಮಾರ್, ಸಂಘದ ಸಿಇಓ ಎಂ.ಆರ್.ಪ್ರಶಾAತ್ ಕಾರ್ಯನಿರ್ವಹಣೆ ಮಾಡಿದರು.

ನೂತನ ಅಧ್ಯಕ್ಷ ಬಿ.ಎಂ.ಕಿರಣ್ ಮಾತನಾಡಿ, ನನ್ನನ್ನು ಆನೆಗೋಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ಮಾಡಿದ ಎಲ್ಲ ನಿರ್ದೇಶಕರುಗಳಿಗೆ, ಸೊಸೈಟಿ ವ್ಯಾಪ್ತಿಯ ಎಲ್ಲಾ ಗ್ರಾಮದ ಮುಖಂಡರುಗಳಿಗೆ, ಸಹಕಾರಿ ಧುರೀಣರಿಗೆ ಹಾಗೂ ರಾಜ್ಯ ಸಹಕಾರ ಮಹಾ ಮಂಡಲದ ನಿರ್ದೇಶಕರಾದ ಚೋಳೇನಹಳ್ಳಿ ಪುಟ್ಟಸ್ವಾಮೀಗೌಡ ಸೇರಿದಂತೆ ಎಲ್ಲಾ ಹಿತೈಷಿಗಳಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

ನನಗೆ ಸಿಕ್ಕಿರುವ ಅಧಿಕಾರದ ಅವಧಿಯಲ್ಲಿ ಸಂಘದ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಸಂಘದ ಮೂಲಕ ರೈತರಿಗೆ ಶೂನ್ಯ ಬಡ್ಡಿ ಸಾಲ ಸೌಲಭ್ಯ, ರಸಗೊಬ್ಬರ, ಭಿತ್ತನೆ ಬೀಜ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಸುಲಭವಾಗಿ ದೊರಕಿಸಿಕೊಡಲು ಶಕ್ತಿ ಮೀರಿ ದುಡಿಯುತ್ತೇನೆ. ರೈತರು ಸಕಾಲದಲ್ಲಿ ಪಡೆದ ಸಾಲದ ಕಂತನ್ನು ಮರು ಪಾವತಿ ಮಾಡುವ ಮೂಲಕ ನಿಮ್ಮದೇ ಗ್ರಾಮದ ಸಹಕಾರ ಸಂಘದ ಅಭಿವೃದ್ದಿಗೆ ಕೈಜೋಡಿಸಬೇಕು ಎಂದು ಅಧ್ಯಕ್ಷ ಬಿ.ಎಂ.ಕಿರಣ್ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಲದ ನಿರ್ದೇಶಕ ಚೋಳೇನಹಳ್ಳಿ ಪುಟ್ಟಸ್ವಾಮೀಗೌಡ, ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆಯ ಮಾಜಿ ಉಪಾಧ್ಯಕ್ಷ ಬೋಳಮಾರನಹಳ್ಳಿ ಮಂಜುನಾಥ್, ಡಾಬಾ ಶಂಕರ್, ನಂಜುಂಡೇಗೌಡ, ದೊಡ್ಡತಾರಹಳ್ಳಿ ಶಿಶುಪಾಲ್, ಕಡೆಹೆಮ್ಮಿಗೆ ಮಾಜಿ ಅಧ್ಯಕ್ಷರಾದ ಲತಾಕುಮಾರ್, ಚಿಕ್ಕತಾರಹಳ್ಳಿ ರಾಮಕೃಷ್ಣೇಗೌಡ, ಅಂಚೆಬೀರನಹಳ್ಳಿ ಯೋಗೇಶ್, ದೊಡ್ಡತಾರಳ್ಳಿ ಜಗನ್ನಾಥ್, ಕಿಕ್ಕೇರಿ ಹೋಬಳಿ ಯುವ ಜೆಡಿಎಸ್ ಅಧ್ಯಕ್ಷ ಕೆ.ಆರ್.ವೆಂಕಟೇಶ್, ಗ್ರಾ.ಪಂ.ಮಾಜಿ ಅಧ್ಯಕ್ಷರಾದ ರಮೇಶ್, ಮಹಾಲಕ್ಷ್ಮಿ ವಿಶ್ವನಾಥ್ ಸೇರಿದಂತೆ ಹಲವು ಗಣ್ಯರು, ಸೊಸೈಟಿ ವ್ಯಾಪ್ತಿಯ ವಿವಿಧ ಗ್ರಾಮಗಳ ಮುಖಂಡರು ಉಪಸ್ಥಿತರಿದ್ದು ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಅಭಿನಂದಿಸಿದರು.
- ಶ್ರೀನಿವಾಸ್ ಆರ್.