ಬಣಕಲ್-ಪ್ರತಿವರ್ಷ ಪೊಲೀಸ್ ಇಲಾಖೆ ಹಮ್ಮಿಕೊಳ್ಳುವ ರಸ್ತೆ ಸುರಕ್ಷಿತ ಸಪ್ತಾಹ ಮತ್ತು ಅಪರಾಧ ತಡೆ ಮಾಸಾಚರಣೆ ಚಾಲಕರನ್ನು ಜಾಗೃತಿಗೊಳಿಸುವುದಲ್ಲದೆ ಸಾರ್ವಜನಿಕರಿಗೂ ಕೂಡ ರಸ್ತೆ ನಿಯಮಗಳ ಬಗ್ಗೆ ಅರಿವು ಮೂಡಿಸಿದಂತಾ ಗುತ್ತದೆ. ಚಾಲಕರು ಮತ್ತು ಸಾರ್ವಜನಿಕರು ರಸ್ತೆ ಸುರಕ್ಷಿತೆ ಮಾರ್ಗಸೂಚಿಗಳನ್ನು ಅನುಸರಿಸಿದಲ್ಲಿ ಪ್ರಾಣಾ ಹಾನಿ ನಿಯಂತ್ರಿಸಬಹುದಾಗಿದೆ ಎಂದು ಬಣಕಲ್ ಠಾಣಾ ಪಿ.ಎಸ್.ಐ ರೇಣುಕಾ ತಿಳಿಸಿದರು.
ಅಪರಾಧ ಮಾಸಾಚರಣೆ ಅಂಗವಾಗಿ ನಡೆಸಲಾದ ಜಾಗೃತಿ ಜಾಥಾಕ್ಕೆ ಬಣಕಲ್ ಠಾಣೆಯಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.
ಅಪರಾಧಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವುದು, ಅಪರಾಧಗಳು ಆಗದಂತೆ ತಡೆಯಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅರಿವು ಮೂಡಿಸಲು ಅಪರಾಧ ತಡೆ ಮಾಸಾಚರಣೆ ಆಚರಿಸಲಾಗುತ್ತಿದೆ.
ಕೇವಲ ಪೊಲೀಸರಿಂದ ಅಪರಾಧಗಳ ತಡೆ ಸಾಧ್ಯವಿಲ್ಲ. ಇದಕ್ಕೆ ಸಾರ್ವಜನಿಕರ ಸಹಕಾರವೂ ಮುಖ್ಯ.ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಡಿಸೆಂಬರ್ ನಲ್ಲಿ ಅಪರಾಧ ಮಾಸಾಚರಣೆಯನ್ನಾಗಿ ಆಚರಿಸಲಾಗುತ್ತದೆ ಎಂದರು.
ಅಪರಾಧಗಳು ನಡೆದ ಮೇಲೆ ತನಿಖೆ ನಡೆಸುವುದಕ್ಕಿಂತ,ಆಪರಾಧ ಆಗದಂತೆ ನೋಡಿಕೊಳ್ಳುವುದು ಉತ್ತಮ.ಯಾವುದೇ ಅಪರಾಧವನ್ನು ಕಂಡಿದ್ದ ಸಂದರ್ಭದಲ್ಲಿ ಧೈರ್ಯವಾಗಿ ಮುಂದೆ ಬಂದು ಸಾಕ್ಷಿ ಹೇಳಬೇಕು.ಒಂದು ವೇಳೆ ಹೀಗಾಗದಿದ್ದರೆ, ಸಾಕ್ಷ್ಯಾಧಾರಗಳ ಕೊರತೆಯಿಂದ ತಪ್ಪಿತಸ್ಥರು ತಪ್ಪಿಸಿಕೊಂಡು ಮತ್ತೆ ಮತ್ತೆ ಅಪರಾಧ ಚಟುವಟಿಕೆಗಳಲ್ಲಿ ತೊಡಗಲಿದ್ದಾರೆ ಎಂದರು.
ಇತ್ತೀಚಿನ ದಿನಗಳಲ್ಲಿ ಸಂಜೆ ಮತ್ತು ತಡರಾತ್ರಿ ದ್ವಿಚಕ್ರ ವಾಹನಗಳು ಮತ್ತು ಹೆಚ್ಚು ಅಪಘಾತಕ್ಕೆ ಒಳಗಾಗುತ್ತಿವೆ. ಇವುಗಳಿಗೆ ಕುಡಿತವೇ ಕಾರಣವಾಗಿದ್ದು ಯಾರು ಸಹ ಪಾನಮತ್ತರಾಗಿ ವಾಹನ ಚಲಾಯಿಸಬಾರದು ಎಂದು ಮನವಿ ಮಾಡಿದರು.
ವಿದ್ಯಾರ್ಥಿಗಳು,ಆಟೋ ಚಾಲಕರು,ಪೊಲೀಸರೊಂದಿಗೆ ಬಣಕಲ್ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ , ಪೊಲೀಸ್ ಅಧಿಕಾರಿಗಳು ಮತ್ತು ಠಾಣಾ ಸಿಬ್ಬಂದಿಗಳು ಹಾಜರಿದ್ದರು .
————-–ಸೂರಿ ಬಣಕಲ್