ಬಣಕಲ್– ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಝರಿನ ಉಪಾಧ್ಯಕ್ಷರಾಗಿ ಲೀಲಾವತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬುಧವಾರ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಝರಿನ ಹಾಗು ಉಪಾಧ್ಯಕ್ಷೆ ಸ್ಥಾನಕ್ಕೆ ಲೀಲಾವತಿ ಮಾತ್ರ ನಾಮಪತ್ರ ಸಲ್ಲಿಕೆ ಮಾಡಿದ್ದರು.ಹೀಗಾಗಿ ಚುನಾವಣಾಧಿಕಾರಿ ನವೀನ್ ಅವಿರೋಧ ಆಯ್ಕೆ ಪ್ರಕಟಿಸಿದರು.
ನೂತನ ಅಧ್ಯಕ್ಷೆ ಝರೀನ ಮಾತನಾಡಿ ನನಗೆ ಸಿಕ್ಕ ಈ ಪದವಿಯನ್ನು ನನಗೆ ಮತ ನೀಡಿ ಸದಸ್ಯೆಯನ್ನಾಗಿ ಆಯ್ಕೆ ಮಾಡಿದ ನನ್ನ ಕ್ಷೇತ್ರದ ಮತದಾರರಿಗೆ ಅರ್ಪಿಸುತ್ತೇನೆ.ದೊರೆತಿರುವ ಈ ಸದವಕಾಶವನ್ನು ಬಳಸಿಕೊಂಡು ಹೆಚ್ಚಿನ ಅಭಿವೃದ್ಧಿ ಕೆಲಸಗಳ ಮಾಡುತ್ತೇನೆ.ಬಣಕಲ್ ಪಟ್ಟಣದಲ್ಲಿ ಇನ್ನು ಬಗೆಹರಿಯದ ಸಾಕಷ್ಟು ಜ್ವಲಂತ ಸಮಸ್ಯೆಗಳಿದ್ದು ಸರ್ವ ಸದಸ್ಯರ ಸಹಕಾರ ಪಡೆದು ಅವನ್ನು ಕೊನೆಗಾಣಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ನೂತನ ಉಪಾಧ್ಯಕ್ಷೆ ಲೀಲಾವತಿ ಮಾತನಾಡಿ ಮಹಿಳೆಯರಿಗೆ ಅಧಿಕಾರಗಳು ಸಿಗುವುದು ವಿರಳ.ಅಂತಹದ್ದರಲ್ಲಿ ನನಗೆ ಉಪಾಧ್ಯಕ್ಷೆಯಾಗುವ ಬಾಗ್ಯ ಒದಗಿ ಬಂದಿದೆ.ನನ್ನ ಈ ಪದವಿ ನನ್ನ ಕ್ಷೇತ್ರದ ಜನ ಕೊಟ್ಟ ಬಳುವಳಿ.ನನ್ನ ಕ್ಷೇತ್ರದ ಋಣ ತೀರಿಸುವ ಅವಕಾಶ ದೊರೆತಿದ್ದು ಅಧಿಕಾರಾವಧಿ ಮುಗಿಯುವುದರೊಳಗೆ ಸಾಕಷ್ಟು ಅಭಿವೃದ್ಧಿಗಳ ಮಾಡಲು ಪ್ರಯತ್ನಿಸುತ್ತೇನೆ.ಗ್ರಾಮಪಂಚಾಯತಿ ವ್ಯಾಪ್ತಿಯ ಎಲ್ಲ ಹಳ್ಳಿಗಳಿಗೂ ಅಲ್ಲಿನ ಸದಸ್ಯರುಗಳೊಡನೆ ಭೇಟಿ ನೀಡಿ ಜನರ ಅಹವಾಲು ಕೇಳಿ ಅವನ್ನು ಸ್ಥಳದಲ್ಲೇ ಬಗೆಹರಿಸಲು ಯೋಜನೆ ರೂಪಿಸುವುದಾಗಿ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮಪಂಚಾಯಿತಿ ಸದಸ್ಯರುಗಳು ಪಿ.ಡಿ.ಒ ಕೃಷ್ಣಪ್ಪ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಹಾಜರಿದ್ದರು.
———————ಸೂರಿ ಬಣಕಲ್