ನಾ-ಕಂಡ-ನಮ್ಮೂರ-ಬಣಕಲ್-ಕಲ್ಲನಾಥೆಶ್ವರ-ಜಾತ್ರಾ-ಸಂಭ್ರಮ

ಬಣಕಲ್ :ಜಾತ್ರೆ ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಅದರಲ್ಲೂ ನಮ್ಮ ಊರ ಜಾತ್ರೆ ಎಂದರೆ ಅದರ ಸಂಭ್ರಮವೇ ಬೇರೆ. ಏನೋ ಒಂದು ರೀತಿಯ ಬಾವುಕತೆ. ಬಾಲ್ಯದಿಂದಲೂ ಇರುವ ಈ ನೆಂಟನ್ನು ಅಷ್ಟು ಸುಲಭವಾಗಿ ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಆದರೂ ನಮ್ಮ ಊರ ಜಾತ್ರೆ ಎಂದಾಗ ಅದೆಷ್ಟೋ ನೆನಪುಗಳು ಒಮ್ಮೆ ಮನದಲ್ಲಿ ಹಾದು ಹೋಗುತ್ತದೆ.

ಜಾತ್ರೆಯಲ್ಲಿ ಜಾತಿ ವರ್ಗ ಇತ್ಯಾದಿ ಭೇದವಿಲ್ಲದೆ ಜನರು ಒಂದೆಡೆ ಸೇರಿ ಸಂಭ್ರಮಿಸುವ ಪರಿಯೇ ಅನನ್ಯ. ಜಾತ್ರೆಯನ್ನು ಆನಂದಿಸುವುದರಲ್ಲಿ ಬಡವ ಶ್ರೀಮಂತ ವ್ಯತ್ಯಾಸವಿಲ್ಲ. ಜಾತ್ರೆ ತೇರನ್ನು ಎಲ್ಲರೂ ಸೇರಿ ಎಳೆಯುತ್ತಾರೆ. ಜಾತ್ರೆ ನಡೆಯುವ ಊರಿನಲ್ಲಿ ನೆಂಟರಿಷ್ಟರ ಸಮಾಗಮವಾಗುತ್ತದೆ ಮನೆಯಲ್ಲಿ ಹಬ್ಬದ ಸಂಭ್ರಮ ಕಾಣಸಿಗುತ್ತದೆ. ಹೀಗೆ ಜಾತ್ರಾ ಎಂಬುದು ವಿಶಿಷ್ಟ ಭಾವಗಳ ಅನಾವರಣ.

ಮಗ /ಮಗಳ ಕೈ ಹಿಡಿದುಕೊಂಡ ತಂದೆ ಜಾತ್ರೆಯಲ್ಲಿ ಹೆಜ್ಜೆ ಹಾಕುತ್ತಿದ್ದಾನೆ. ಮಗುವಿನ ಮನಸು ಕಣ್ಣು ಎಲ್ಲಾ ಸಾಲು ಸಾಲು ಅಂಗಡಿಗಳ ಮೇಲೆ ಒಂದಾ ಎರಡಾ ಅದೊಂದು ಅದ್ಭುತ ಲೋಕ. ಗೊಂಬೆಗಳು ಬಗೆ-ಬಗೆ ಆಟಿಕೆ ಸಾಮಾಗ್ರಿಗಳು ವೈವಿಧ್ಯಮಯ ತಿಂಡಿ ತಿನಿಸುಗಳು, ಜಾತ್ರೆಯಲ್ಲಿ ಮಗು ಕಳೆದು ಹೋಗಲು ಇನ್ನೇನು ಬೇಕು.

ಕಡೂರು ಮಂಗಳೂರು ಹೋಗುವ ಮಾರ್ಗದಲ್ಲಿ ಮಲೆನಾಡಿನ ಪ್ರವೇಶ ದ್ವಾರದಂತಿರುವ ನಮ್ಮೂರು “ಬಣಕಲ್”ನ ಕಲ್ಲನಾಥೆಶ್ವರ ಜಾತ್ರೆಯೆಂದರೆ ನಮ್ಮ ಮಟ್ಟಿಗೆ ಅದು ಬಹುದೊಡ್ಡ ಹಬ್ಬ.

ದೂರದೂರುಗಳಲ್ಲಿ ನೆಲೆಸಿರುವ ನೆಂಟರಿಗೆಲ್ಲ ಜಾತ್ರೆಗೆ ಬನ್ನಿ ಅಂತ ಕರೆ ಕಳಿಸುವ ಕೆಲಸ. ಊರಹಬ್ಬ, ಜಾತ್ರೆ, ಉತ್ಸವಗಳೆಂದರೆ ಅದು ಕಾರಣಾಂತರಗಳಿಂದ ಊರುಬಿಟ್ಟು ಬೇರೆ ಬೇರೆ ಕಡೆಗಳಲ್ಲಿ ನೆಲೆಸಿರುವ ಬಂಧು-ಬಾಂಧವರು, ಸ್ನೇಹಿತರೆಲ್ಲ ವರ್ಷಕ್ಕೊಮ್ಮೆಯಾದರೂ ತಮ್ಮೂರಿಗೆ ಬಂದು ತಮ್ಮ ಜನರೊಂದಿಗೆ ಕೂಡಲು, ಬೆರೆಯಲು ಇರುವ ಖುಷಿಯ ಅವಕಾಶವೇ ಸರಿ! ಇಂಥ ಆಚರಣೆಗಳ ಹಿಂದೆ ನಮ್ಮ ಪೂರ್ವಿಕರ ಆಶಯವೂ ಬಹುಷಃ ಇದೇ ಇದ್ದಿರಬೇಕು.


ಬಣಕಲ್ ಗ್ರಾಮದ ಶ್ರೀ ಕಲ್ಲ ನಾಥೆಶ್ವರ ಜಾತ್ರೆ ನಿಮಿತ್ತ ಶುಕ್ರವಾರ ಸಂಜೆ ರಾಥೋತ್ಸವ ಜರುಗಿತು. ರಥೋತ್ಸವಕ್ಕೆ ಭಕ್ತರು ಹೂ ಹಣ್ಣು ಉತ್ತತ್ತಿ ಸಮರ್ಪಸಿದರು. ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಭಕ್ತರು ಸ್ವಾಮಿಯ ದರ್ಶನ ಪಡೆದರು.

  • ಸೂರಿ ಬಣಕಲ್

Leave a Reply

Your email address will not be published. Required fields are marked *

× How can I help you?