ಕೊಟ್ಟಿಗೆಹಾರ:ರಾಜಕಾರಣಿ,ಕೊಡುಗೈ ದಾನಿ ಎಂದೇ ಹೆಸರಾಗಿದ್ದ ಚೇಗು ನಿವಾಸಿ ಸಿ ಟಿ ಪೂವಯ್ಯ(92) ತಮ್ಮ ಸಾವಿನಲ್ಲಿಯೂ ಸಾರ್ಥಕತೆ ಮೆರೆದಿದ್ದಾರೆ.ತನ್ನ ಮರಣದ ನಂತರ ದೇಹವನ್ನು ವೈದ್ಯಕೀಯ ಕಾಲೇಜಿಗೆ ದಾನವಾಗಿ ನೀಡುವಂತೆ ತಿಳಿಸಿದ್ದ ಅವರ ಇಚ್ಛೆಯಂತೆ ಕುಟುಂಬಸ್ಥರು ಇಂದು ಹಾಸನದ ಆಯುರ್ವೇದ ವೈದ್ಯಕೀಯ ಕಾಲೇಜಿಗೆ ಅವರ ಮೃತದೇಹವನ್ನು ಹಸ್ತಾಂತರ ಮಾಡಿದರು.
ಇದಕ್ಕೂ ಮೊದಲು ಸಿ ಟಿ ಪೂವಯ್ಯನವರ ಅಂತಿಮಯಾತ್ರೆಯು ಬಣಕಲ್ ಪೇಟೆಯ ಪ್ರಮುಖ ಬೀದಿಯಲ್ಲಿ ನಡೆಯಿತು.ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ದೇಹವಿದ್ದ ಆಂಬುಲೆನ್ಸ್ ಗೆ ಹೂ ಎರಚುವ ಮೂಲಕ ವರ್ತಕರು ಹಾಗು ಸಾರ್ವಜನಿಕರು ತಮ್ಮ ಅಂತಿಮ ವಿದಾಯವನ್ನು ವ್ಯಕ್ತಪಡಿಸಿದರು.
ಸಿ.ಟಿ.ಪೂವಯ್ಯ (92)ಬುಧವಾರ ರಾತ್ರಿ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ.ಮೃತರಿಗೆ ಇಬ್ಬರು ಪುತ್ರರಿದ್ದಾರೆ.
ಪೂವಯ್ಯ ಅವರು ಬಣಕಲ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಎರಡನೇ ಅಧ್ಯಕ್ಷರಾಗಿ 1976 ರಲ್ಲಿ ಕಾರ್ಯ ನಿರ್ವಹಿಸಿದ್ದರು.ಮಹಾಮ್ಮಾಯಿ ದೇವಸ್ಥಾನದ ಸಮಿತಿ ಅಧ್ಯಕ್ಷರಾಗಿ,ವಿದ್ಯಾಭಾರತಿ ಶಾಲೆಯ ಸಮಿತಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.
ಮೂಡಿಗೆರೆ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ,ಜಿಲ್ಲಾ ಸತ್ಯಸಾಯಿ ಸಂಸ್ಥೆಯ ಪದಾಧಿಕಾರಿಯಾಗಿ ಹಾಗೂ ಕಾಂಗ್ರೆಸ್ ಪಕ್ಷದ ಪದಾಧಿಕಾರಿಯಾಗಿಯೂ ಗುರುತಿಸಿಕೊಂಡಿದ್ದರು.ಚೇಗು ಗ್ರಾಮಸ್ಥರಿಗೆ ಹಾಗೂ ಸಂಘ ಸಂಸ್ಥೆಗಳಿಗೆ ಕೊಡುಗೈ ದಾನಿಯಾಗಿದ್ದರು.ಸಮಾಜ ಸೇವಕರಾಗಿಯೂ ಗುರುತಿಸಿಕೊಂಡಿದ್ದರು.
———-ಸೂರಿ ಬಣಕಲ್