ಬೆಂಗಳೂರು: ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) 2025-26 ಸಾಲಿನ ಸದಸ್ಯತ್ವಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ತಿಳಿಸಿದ್ದಾರೆ.
ಪತ್ರಕರ್ತರು ತಾವು ಪ್ರತಿನಿಧಿಸುವ ಮಾಧ್ಯಮ, ತಂದೆ-ತಾಯಿ ಹೆಸರು, ಜನ್ಮ ದಿನಾಂಕ, ಆಧಾರ್, ವಿದ್ಯಾಭ್ಯಾಸ ಮಾಹಿತಿ (ಕನಿಷ್ಟ ವಿದ್ಯಾರ್ಹತೆ ಎಸ್ಎಸ್ಎಲ್ಸಿ), ಹಿಂದಿನ ಸಾಲಿನ ಸದಸ್ಯತ್ವ ಮಾಹಿತಿ, ತಾವು ಮಾಧ್ಯಮದಲ್ಲಿ ಸಲ್ಲಿಸಿದ ಅನುಭವ, ಸಹಿತವಾಗಿ ಅರ್ಜಿಯಲ್ಲಿರುವ ಇನ್ನಿತರ ವಿವರಗಳ ಜೊತೆಗೆ ಸೂಕ್ತ ದಾಖಲಾತಿ ಲಗತ್ತಿಸಿ, ಆಯಾ ಜಿಲ್ಲಾ ಸಂಘದಲ್ಲಿ ಸದಸ್ಯತ್ವ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಬೇಕು.
ತಾಲೂಕು ಮಟ್ಟದ ಪತ್ರಕರ್ತರು ಸಂಬಂಧಿಸಿದ ತಾಲ್ಲೂಕು ಸಂಘಗಳ ಮೂಲಕ ಅರ್ಜಿ ಸಲ್ಲಿಸಬಹುದು.
ತಾಲೂಕು ಸಂಘದಿಂದ ಬಂದ ಅರ್ಜಿಗಳನ್ನು ಜಿಲ್ಲಾ ಸಂಘಗಳಲ್ಲಿ ಕಾರ್ಯಕಾರಿ ಸಮಿತಿ ಸಭೆ ನಡೆಸಿ ಪರಿಶೀಲನೆ ಮಾಡಿ ರಾಜ್ಯ ಸಂಘಕ್ಕೆ ಶಿಫಾರಸ್ಸು ಮಾಡುವ ಕ್ರಮ ಕಡ್ಡಾಯ. ಹಾಗೆಯೇ ಜಿಲ್ಲಾ ಸಂಘದಿಂದ ಶಿಫಾರಸ್ಸು ಆಗುವ ಪಟ್ಟಿಯಲ್ಲಿ ಜಿಲ್ಲಾ ಸಂಘದ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಸಮಿತಿ ಸದಸ್ಯರ ಸಹಿ ಕಡ್ಡಾಯ. ಬಳಿಕ ರಾಜ್ಯ ಸಂಘ ಸದಸ್ಯತ್ವ ಪಟ್ಟಿ ಪರಿಶೀಲಿಸಿ ಸದಸ್ಯತ್ವ ನೀಡಲಿದೆ.

ಸಂಘಗಳಿಗೆ ಸದಸ್ಯತ್ವ ಅರ್ಜಿ ಕಳಿಸಲು ಕೊನೆಯ ದಿನಾಂಕ 10.03.2025. ಆಗಿರುತ್ತದೆ ಎಂದು ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.