ಬೇಲೂರು- ದೊಡ್ಡ ಸಾಧನೆ ಮಾಡಬೇಕು ಎನ್ನುವ ಕನಸು ಹೊತ್ತ ಆಕಾಂಕ್ಷಿಗಳಿಗೆ ಆತ್ಮವಿಶ್ವಾಸವೇ ಪ್ರಮುಖ ಅಸ್ತ್ರವಾಗಿರಬೇಕು, ಕಠಿಣ ಪರಿಶ್ರಮವೊಂದೇ ಬದುಕಿನಲ್ಲಿ ಯಶಸ್ಸು ಗಳಿಸಲು ಕೀಲಿಕೈ ಎಂದು ತಹಶಿಲ್ದಾರ್ ಎಂ. ಮಮತಾ ರವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ರಾತ್ರಿ ಸುಮಾರು 7 ಗಂಟೆಯ ಸಮಯದಲ್ಲಿ ಪಟ್ಟಣದ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ದಿಢೀರ್ ಭೇಟಿ ನೀಡಿದ ಅವರು, ವಿದ್ಯಾರ್ಥಿ ನಿಲಯದ ಸುಚಿತ್ವ, ಕುಡಿಯುವ ನೀರು, ಅಡುಗೆ ಕೋಣೆ, ವಿದ್ಯಾರ್ಥಿಗಳು ಮಲಗುವ ಕೊಠಡಿ, ಸ್ನಾನದ ಗೃಹ, ಶೌಚಾಲಯವನ್ನು ಪರಿಶೀಲಿಸಿ ಅಲ್ಲಿನ ವಿಧ್ಯಾರ್ಥಿಗಳೊಂದಿಗೆ ಮಾತನಾಡಿದ ಅವರು, ವಿದ್ಯಾರ್ಥಿಗಳು ಜೀವನದಲ್ಲಿ ನಿರ್ದಿಷ್ಟ ಗುರಿಯೊಂದಿಗೆ ಅಧ್ಯಯನ ಮಾಡಬೇಕು.
ಗೆದ್ದೇ ಗೆಲ್ಲುವೆ ಎನ್ನುವ ಆತ್ಮ ವಿಶ್ವಾಸದೊಂದಿಗೆ ಮುನ್ನುಗ್ಗಬೇಕು. ನಾವು ಓದಲು ಬಂದಿದ್ದೇವೆ, ಓದಬೇಕು ಎನ್ನುವ ಪ್ರಜ್ಞೆಯೊಂದಿಗೆ ನಿರಂತರ ಅಧ್ಯಯನ ನಡೆಸಿದಲ್ಲಿ ಯಶಸ್ಸಿನ ದಾರಿ ಸುಗಮವಾಗಲಿದೆ, ವಿದ್ಯಾರ್ಥಿಗಳು ಓದುವ ವಯಸ್ಸಿನಲ್ಲಿ ಕಾಲಹರಣ ಮಾಡಬಾರದು. ಅಮೂಲ್ಯವಾದ ಸಮಯವನ್ನು ಜ್ಞಾನಾರ್ಜನೆಗಾಗಿ ಮೀಸಲಿಟ್ಟು ಶ್ರದ್ದೆಯಿಂದ ಕಲಿತುಕೊಳ್ಳಬೇಕು. ಆ ಮೂಲಕ ದೇಶದ ಆಸ್ತಿಯಾಗಬೇಕು. ಪೋಷಕರು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪಡುವ ಶ್ರಮವನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು.

ಕಠಿಣ ಪರಿಶ್ರಮಕ್ಕೆ ಯಾವುದೇ ಬದಲಿ ಮಾರ್ಗಗಳು ಇರುವುದಿಲ್ಲ. ವಿದ್ಯಾರ್ಥಿ ಜೀವನದಲ್ಲಿ ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ಗುರಿ ಇರುತ್ತದೆ. ಈ ಗುರಿಯನ್ನು ತಲುಪಲು, ಬದುಕಿನಲ್ಲಿ ಯಶಸ್ಸು ಗಳಿಸಲು ಕಠಿಣ ಪರಿಶ್ರಮವೊಂದೇ ಕೀಲಿಕೈ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ನಿಲಯ ಪಾಲಕರು, ಸಿಬ್ಬಂದಿ ಸಂತೋಷ್, ಹಾಸ್ಟೆಲ್ ಅಡುಗೆ ಸಿಬ್ಬಂದಿಗಳು ಹಾಜರಿದ್ದರು.