ಬೇಲೂರು, ಮೇ 5: ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625ಕ್ಕೆ 624 ಅಂಕಗಳನ್ನು ಗಳಿಸಿ ರಾಜ್ಯದ ಎರಡನೇ ಸ್ಥಾನವನ್ನು ಪಡೆದುಕೊಂಡಿರುವ ಬೇಲೂರಿನ ಕುಮಾರಿ ಹಂಸ ತಮ್ಮ ಅದ್ಭುತ ಸಾಧನೆಯ ಮೂಲಕ ಪಟ್ಟಣಕ್ಕೆ ಕೀರ್ತಿ ತಂದಿದ್ದಾರೆ.
ಈ ಸಾಧನೆಯ ಗೌರವವಾಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಬೇಲೂರು ವತಿಯಿಂದ ಅವರನ್ನು ಅಭಿನಂದಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಅವರ ನಿವಾಸಕ್ಕೆ ಭೇಟಿ ನೀಡಿದ ಪರಿಷತ್ತು ಸದಸ್ಯರು ಹಂಸ ಅವರಿಗೆ ಪುಷ್ಪಗುಚ್ಛ ನೀಡಿ ಸನ್ಮಾನಿಸಿದರು. ವಿದ್ಯಾರ್ಥಿನಿಯ ಈ ಸಾಧನೆಗೆ ಶಾಸಕರು ಹಾಗೂ ಪರಿಷತ್ತು ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿ, ಇವಳು ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಗತಿಯ ಹಾದಿಯಲ್ಲಿ ಸಾಗಲಿ ಎಂಬ ಶುಭಾಶಯಗಳನ್ನು ಕೋರಿದರು.

ಈ ಸಂದರ್ಭ ಶಾಸಕ ಎಚ್.ಕೆ. ಸುರೇಶ್ ಅವರೊಂದಿಗೆ ಪರಿಷತ್ತಿನ ಅಧ್ಯಕ್ಷ ಮಂಜೇಗೌಡ, ಗೌರವ ಕಾರ್ಯದರ್ಶಿ ಆರ್.ಎಸ್. ಮಹೇಶ್, ಖಜಾಂಚಿ ಗುರುರಾಜ್, ಸಂಘಟನಾ ಕಾರ್ಯದರ್ಶಿ ಬೊಮ್ಮಡಿಹಳ್ಳಿ ಕುಮಾರಸ್ವಾಮಿ, ಉಪಾಧ್ಯಕ್ಷ ಎಚ್.ಆರ್. ಚಂದ್ರು, ಶಿಕ್ಷಕ ಮಾರುತಿ ಹಾಗೂ ಹಂಸ ಅವರ ಪೋಷಕರು ಉಪಸ್ಥಿತರಿದ್ದರು.
– ನೂರು