ಬೇಲೂರು-ಕಾಡಾನೆ ಹಾವಳಿಗೆ ಮಲೆನಾಡು ಬಾಗದ ರೈತರು ತತ್ತರಿಸುತ್ತಿದ್ದರೂ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರುತ್ತಿವೆ ಎಂದು ಜಯಕರ್ನಾಟಕ ಸಂಘಟನೆ ರಾಜ್ಯಾಧ್ಯಕ್ಷ ಬಿ.ಎನ್ ಜಗದೀಶ್, ಆರೋಪಿಸಿದರು .
ಕಾಡಾನೆಗಳ ಹಾವಳಿಯಿಂದ ಶಾಶ್ವತ ಪರಿಹಾರಕ್ಕಾಗಿ ಸರ್ಕಾರಕ್ಕೆ ಒತ್ತಾಯ ಮಾಡುವ ಸಲುವಾಗಿ ಸಂಘಟನೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬೇಲೂರಿನಿಂದ,ಬಿಕ್ಕೋಡಿನವರೆಗೆ ಹಾಗೂ ಆಲೂರು ಮಾರ್ಗವಾಗಿ ಹಾಸನಕ್ಕೆ ಹಕ್ಕೊತ್ತಾಯ ಜಾಥಾಕ್ಕೆ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಮಲೆನಾಡು ಭಾಗವಾದ ಬೇಲೂರು ತಾಲ್ಲೂಕು ಬೀಕ್ಕೊಡು, ಅರೇಹಳ್ಳಿ, ಸಕಲೇಶಪುರ, ಆಲೂರು ಸುತ್ತಮುತ್ತ ,ಬೆಳಗೊಡು, ಸುಂಡೆಕೆರೆ,ಇನ್ನೂ ಮುಂತಾದ ಭಾಗಗಳಲ್ಲಿ ಆನೆಗಳ ಹಾವಳಿಯಿಂದ ಬೆಳೆಗಳು ಹಾನಿಯಾಗುವುದರ ಜೊತೆ ಕೂಲಿ ಕಾರ್ಮಿಕರ ಜೀವಗಳು ಬಲಿಯಾಗುತ್ತಿವೆ.ಕಾಫೀ,ಬತ್ತ, ಮೆಣಸು,ಇನ್ನೂ ಮುಂತಾದ ಬೆಳೆಗಳು ಕೈಗೆ ಬಂದಿರುವ ಸಮಯದಲ್ಲಿ ಆನೆಗಳು ದಾಳಿ ಮಾಡಿ ನಾಶ ಮಾಡುವುದರ ಜೊತೆಗೆ ಕೂಲಿ ಮಾಡುವ ಕಾರ್ಮಿಕರು, ರೈತರ ಮೇಲೆ ದಾಳಿ ಮಾಡಿ ಅವರ ಬಲಿ ಪಡೆಯುತ್ತಿವೆ.
ಮನುಷ್ಯರ ಜೀವಕ್ಕೆ ಬೆಲೆ ಇಲ್ಲದಂತಾಗಿದೆ,ಸರ್ಕಾರದ ಗಮನಕ್ಕೆ ತಂದಿದ್ದರೂ ಯಾವುದೇ ಪರಿಹಾರ ಕೊಡುತ್ತಿಲ್ಲ. ಸತ್ತರೆ ಅವರಿಗೆ ಹಣದ ಸಹಾಯ ಮಾಡಿ ಕೈ ತೊಳೆದುಕೊಳ್ಳುತ್ತಿದೆ.ಸಂಬಂಧಪಟ್ಟ ಸಚಿವರು ಸರ್ಕಾರಕ್ಕೆ ಒತ್ತಡ ತಂದು ಆನೆ ಹಾವಳಿಗೆ ಶಾಶ್ವತ ಪರಿಹಾರ ಮಾಡಿಕೊಡಬೇಕು. ಆನೆ ಹಾವಳಿಯ ಭಯದ ವಾತಾವರಣವನ್ನು ನಾಶಪಡಿಸಬೇಕು ರೈತರು, ಕೂಲಿ ಕಾರ್ಮಿಕರು ನಿರ್ಬಿತಿಯಿಂದ ಕೆಲಸ ಮಾಡುವಂತೆ ಸಹಕರಿಸಬೇಕು ಎಂದು ಮನವಿ ಮಾಡಿಕೊಂಡರು.
ಹಾಸನ ಜಿಲ್ಲೆಯಲ್ಲಿ ಘಟಾನುಗಟಿ ನಾಯಕರಿದ್ದರೂ ಮಾನವನ ಹಾಗೂ ಪ್ರಾಣಿಗಳ ಸಂಘರ್ಷಕ್ಕೆ ಕೊನೆಹಾಡುವುದು ಬಿಟ್ಟು, ಇವರ ರಾಜಕೀಯ ತೆವಲಿಗೆ ಜನಸಾಮಾನ್ಯರ ಬಲಿ ಪಡೆಯುತ್ತಿದ್ದಾರೆ.ಕೂಡಲೆ ಇದರ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಈ ಪ್ರತಿಭಟನೆ ಇನ್ನು ಉಗ್ರರೀತಿಯಲ್ಲಿ ಮುಂದುವರಿಸಲಾಗುವುದು ಎಂದು ಬಿ.ಎನ್ ಜಗದೀಶ್ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಜಯಕರ್ನಾಟಕ ರಾಜ್ಯ ಕಾರ್ಯಾಧ್ಯಕ್ಷ ರಾಮಚಂದ್ರಪ್ಪ, ಉಪಾಧ್ಯಕ್ಷ ಮುನಿಸ್ವಾಮಣ್ಣ, ರಾಜ್ಯ ಸಂಘಟನಾ ಕಾರ್ಯದರ್ಶಿ ದಿವ್ಯಾ ಸೋಮಶೇಖರ್, ಜಿಲ್ಲಾಧ್ಯಕ್ಷ ಸೋಮೇಶ್ ಎಂ ಕೆ ಆರ್, ತಾಲ್ಲೂಕು ಅಧ್ಯಕ್ಷ ರಾಜು ಎಸ್. ಎಂ, ಕಾರ್ಯದರ್ಶಿ ಲಕ್ಷ್ಮಣ್ ಬಿ. ಎಲ್, ನಗರ ಕಾರ್ಯದರ್ಶಿ ಮಂಜುನಾಥ್,ಶ್ರೇಯಸ್,ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಸ್ವಾಮೀಗೌಡ ಇತರರು ಇದ್ದರು.