ಅರೇಹಳ್ಳಿ:ಬೇಲೂರು ದಂಡಾಧಿಕಾರಿಗಳಾದ ಮಮತಾರವರು ಮತ್ತೊಂದು ಉತ್ತಮ ಕೆಲಸವನ್ನು ಮಾಡಿದ್ದಾರೆ.
ಹೋಬಳಿಯ ಬ್ಯಾದನೆ ಗ್ರಾಮದಲ್ಲಿ ಕಾಫೀ ತೋಟದ ಮಾಲೀಕರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದ ಗ್ರಾಮ ಠಾಣಾ ಜಾಗವನ್ನು ಇಂದು ಖುಲ್ಲಾ ಗೊಳಿಸಿ ಸರಕಾರದ ಸುಪರ್ದಿಗೆ ತೆಗೆದುಕೊಂಡಿದ್ದಾರೆ.
ಈ ತೆರವು ಕಾರ್ಯಾಚರಣೆಯ ನಂತರ ಮಾತನಾಡಿದ ನಾರ್ವೆ ಗ್ರಾಪಂ ಉಪಾಧ್ಯಕ್ಷ ಮಲ್ಲಿಕಾರ್ಜುನ ಸುಲಗಳಲೆ, ಒಂದೂವರೆ ವರ್ಷದ ಹಿಂದೆ ಪಂಚಾಯಿತಿ ವ್ಯಾಪ್ತಿಗೆ ಸೇರಿರುವ 1.36 ಎಕರೆ ಗ್ರಾಮ ಠಾಣಾವನ್ನು ಖುಲ್ಲ ಮಾಡಿಸಿ ಎಂದು ಗ್ರಾ ಪಂಗೆ ದೂರು ನೀಡಿ ಎಂದು ಅತಿಕ್ರಮಣದಾರರಿಗೆ ತಿಳಿಹೇಳಲಾಗಿತ್ತಾದರೂ ಯಾವುದೇ ಕ್ರಮ ಕೈಗೊಳ್ಳಲಾಗಿರಲಿಲ್ಲ .
ನಾರ್ವೆ ಗ್ರಾಪಂ ವ್ಯಾಪ್ತಿಯ ಬ್ಯಾದನೆ,ಹೆಗ್ಗದ್ದೆ ಸೇರಿದಂತೆ ಹಲವು ಗ್ರಾಮಗಳ ವಸತಿ ರಹಿತರು ನಿವೇಶನವನ್ನು ಒದಗಿಸುವಂತೆ ಕೋರಿ ಒಟ್ಟು 180 ಅರ್ಜಿಗಳು ಬಂದಿವೆ.ಈ ನಿಟ್ಟಿನಲ್ಲಿ ಹಲವಾರು ವರ್ಷಗಳಿಂದ ವಸತಿ ರಹಿತವಾಗಿ ವಾಸ ಮಾಡುತ್ತಿರುವಂತಹವರಿಗೆ ವಸತಿ ಒದಗಿಸುವ ಉದ್ದೇಶದಿಂದ ಅಕ್ರಮವಾಗಿ ಒತ್ತುವರಿ ಮಾಡಿರುವ ಗ್ರಾಮಠಾಣಾ ಪ್ರದೇಶಗಳನ್ನು ಗ್ರಾ.ಪಂ ಯು ವಶಪಡಿಸಿಕೊಳ್ಳಲು ನಿರ್ಧರಿಸಿದೆ ಎಂದರು.
ನಾರ್ವೆ ಗ್ರಾಪಂ ಮಾಜಿ ಉಪಾಧ್ಯಕ್ಷ ಪೂರ್ಣೇಶ್ ಮಾತನಾಡಿ, ಬ್ಯಾದನೆ ಗ್ರಾಮದ ಸುಮಾರು 50 ನಿವಾಸಿಗಳು ಬಾಡಿಗೆ ಮನೆಯಲ್ಲಿ ವಾಸಮಾಡುತ್ತಿದ್ದಾರೆ. ಇಂತಹ ಕಷ್ಟದ ಪರಿಸ್ಥಿತಿಯಲ್ಲಿ ಬದುಕುತ್ತಿರುವ ಗ್ರಾಮದ ಬಡಜನರಿಗೆ ನಿವೇಶನ ನೀಡಬೇಕಾಗಿದೆ. ಶಾಸಕರ ಹಾಗೂ ಅಧಿಕಾರಿಗಳ ಸಹಕಾರದಿಂದ ಗ್ರಾಮಠಾಣಾ ಪ್ರದೇಶವನ್ನು ವಶಪಡಿಸಿಕೊಳ್ಳಲು ಸಾಧ್ಯವಾಗಿದೆ. ಹಾಗಾಗಿ ಬ್ಯಾದನೆ ಗ್ರಾಮದಲ್ಲಿರುವ ಗ್ರಾಮಠಾಣಾ ಪ್ರದೇಶವನ್ನು ಇದೇ ಗ್ರಾಮದ ಗ್ರಾಮಸ್ಥರಿಗೆ ಮೀಸಲಿಡಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ ಎಂದರು.
ಈ ತೆರವು ಕಾರ್ಯಾಚರಣೆ ವೇಳೆ ಪಿಡಿಒ ಚಂದ್ರಯ್ಯ,ಆರ್ಐ ಚಂದ್ರೆಗೌಡ,ತಾಪಂ ಇಒ ವಸಂತ್ ಕುಮಾರ್, ಗ್ರಾಪಂ ಅಧ್ಯಕ್ಷೆ ಮಾಲಾಶ್ರೀ, ಗ್ರಾಪಂ ಸದಸ್ಯರಾದ ಮಲ್ಲಿಕಾರ್ಜುನ್ ನಾರ್ವೆ, ಚಿದಾನಂದ್, ಮಂಜುನಾಥ್, ಪವಿತ್ರ, ಬೇಬಿ, ವೀಣಾ, ಮುಖಂಡರಾದ ಇಸ್ಮಾಯಿಲ್, ಸೋಮಯ್ಯ, ನಿಂಗರಾಜು, ಕಾರ್ಯದರ್ಶಿ ಚಾಮರಾಜ್,ಪೊಲೀಸ್ ಅಧಿಕಾರಿಗಳು ಹಾಗೂ ಬ್ಯಾದನೆ ಗ್ರಾಮಸ್ಥರು ಇದ್ದರು.
ಈ ಕಾರ್ಯ ಪ್ರತಿ ಊರಿನಲ್ಲಿಯೂ ನಡೆಯಲಿ,ಈ ಭೂಮಿಯಲ್ಲಿ ಹುಟ್ಟಿ ಬದುಕಲು ಅಂಗೈ ಅಗಲದ ಜಾಗವು ಇಲ್ಲದಂತಹ ನತದೃಷ್ಟರಿಗೆ ಒಂದು ಹಿಡಿ ಜಮೀನು ಸಿಗುವಂತಾಗಲಿ.ಮತ್ತೊಮ್ಮೆ ತಹಶೀಲ್ದಾರ್ ಮಮತಾರವರಿಗೆ ಧನ್ಯವಾದಗಳನ್ನು ಪತ್ರಿಕೆ ತಿಳಿಸುತ್ತೆ.
—————————ರವಿಕುಮಾರ್ ಯುನೈಟೆಡ್