ಬೇಲೂರು-ತಾಲೂಕು ಆಡಳಿತದಿಂದ ನೀಡುವ ಪ್ರಶಸ್ತಿಗಳು ಅರ್ಹರಿ ಗಷ್ಟೇ ಸಿಗಲಿವೆ-ಲಾಭಿಗೆ ಅವಕಾಶವಿಲ್ಲ-ಶಾಸಕ ಹೆಚ್.ಕೆ ಸುರೇಶ್ ಸ್ಪಷ್ಟನೆ

ಬೇಲೂರು-ತಾಲೂಕು ಆಡಳಿತ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನೀಡುವಂತಹ ಪ್ರಶಸ್ತಿಗಳನ್ನು ಅರ್ಹತೆ ಹೊಂದಿದವರಿಗೆ ಮಾತ್ರ ಪಾರದರ್ಶಕತೆಯಿಂದ ಆಯ್ಕೆ ಮಾಡಿ ನೀಡಲಾಗುತ್ತದೆ ಎಂದು ಶಾಸಕ ಹೆಚ್. ಕೆ ಸುರೇಶ್ ಸ್ಪಷ್ಟಪಡಿಸಿದರು.

ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ನಡೆಯುವ ವೀರ ವನಿತೆ ಒನಕೆ ಓಬವ್ವ ದಾಸ ಶ್ರೇಷ್ಠರಾದ ಕನಕದಾಸರ ಜಯಂತಿಯ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಪರಿಶಿಷ್ಟ ಜಾತಿ ಜನಾಂಗ ಇರುವ ಹಿನ್ನೆಲೆಯಲ್ಲಿ ವೀರ ವನಿತೆ ಒನಕೆ ಓಬವ್ವ ನವರ ಜಯಂತಿಯನ್ನು ಅರ್ಥಪೂರ್ಣವಾಗಿ ನಡೆಸಲು ಸಮುದಾಯದ ಮುಖಂಡರೊಂದಿಗೆ ತಾಲೂಕು ಆಡಳಿತ ಸಜ್ಜುಗೊಳ್ಳಬೇಕಿದೆ ಎಂದು ಸೂಚನೆ ನೀಡಿದರು.

ಅಂದು ನಡೆಯುವ ಕಾರ್ಯಕ್ರಮದಲ್ಲಿ ವೀರ ಒನಿತೆ ಒನಕೆ ಓಬವ್ವನವರ ವಿಚಾರಧಾರೆಗಳನ್ನು ನಾಡಿಗೆ ತಿಳಿಸುವ ಮಹತ್ವಪೂರ್ಣದ ಕೆಲಸದ ಜೊತೆಯಲ್ಲಿ ಐದು ಜನ ಸಮಾಜದಲ್ಲಿ ಸೇವೆ ಸಲ್ಲಿಸಿದ ಗಣ್ಯರಿಗೆ ಸನ್ಮಾನವನ್ನು ನಡೆಸಲಾಗುತ್ತದೆ ಎಂದು ತಿಳಿಸಿದರು.

ವಿಶೇಷವಾಗಿ ದಾಸ ಶ್ರೇಷ್ಠರಲ್ಲಿ ಪ್ರಮುಖರಾದ ಕನಕದಾಸರು ನಾಡಿಗೆ ನೀಡಿದಂತಹ ಕೊಡುಗೆ ಅಪಾರವಾಗಿದೆ. ಅವರು ವಿಶ್ವವಿಖ್ಯಾತ ಬೇಲೂರಿನಲ್ಲಿ ಕೆಲ ದಿನಗಳ ಕಾಲ ಇದ್ದು ಚನ್ನಕೇಶವನ ಬಗ್ಗೆ ಕೀರ್ತನೆಗಳನ್ನು ರಚಿಸಿದ ಹಿನ್ನೆಲೆಯಲ್ಲಿ ಸಮುದಾಯದ ಬೇಡಿಕೆಯಂತೆ ಬೇಲೂರಿನ ಪ್ರಮುಖ ರಸ್ತೆಗೆ ಇಲ್ಲವೇ ವೃತ್ತಕ್ಕೆ ಕನಕದಾಸರ ವೃತ್ತ ಹೆಸರನ್ನು ನಾಮಕರಣ ಮಾಡುವ ಜೊತೆಗೆ ಪ್ರತಿಮೆಯನ್ನು ಸ್ಥಾಪಿಸಲಾಗುತ್ತದೆ ಎಂದು ಭರವಸೆ ನೀಡಿದರು.

ಬೇಲೂರು ತಹಸೀಲ್ದಾರ್ ಎಂ ಮಮತಾ ಮಾತನಾಡಿ ತಾಲೂಕು ಆಡಳಿತದಿಂದ ಇದೇ ತಿಂಗಳ 11ರಂದು ನಡೆಯುವ ವೀರ ವನಿತೆ ಒನಕೆ ಓಬವ್ವನ ಜಯಂತಿಯನ್ನು ಆಯಾ ಸಮುದಾಯದ ಮುಖಂಡರ ಸಹಭಾಗಿತ್ವದಲ್ಲಿ ಅರ್ಥಪೂರ್ಣವಾಗಿ ನಡೆಸಲು ತಾಲೂಕು ಆಡಳಿತ ಸನ್ನದ್ಧವಾಗಿದೆ. ಈ ಬಗ್ಗೆ ಸಲಹೆ ಸೂಚನೆಗಳನ್ನು ಸಮುದಾಯದ ಮುಖಂಡರವರು ನೀಡಬಹುದು ಎಂದು ತಿಳಿಸಿದರು.

ಅಲ್ಲದೆ ಇದೇ ತಿಂಗಳು 18ರಂದು ನಡೆಯುವ ದಾಸ ಶ್ರೇಷ್ಠ ಕನಕದಾಸರ ಜಯಂತಿಯ ವಿಷಯವಾಗಿ ಚರ್ಚಿಸಲು ಈಗಾಗಲೇ ಸಮುದಾಯದ ಮುಖಂಡರನ್ನು ಆಹ್ವಾನಿಸಿದ್ದು ಅವರು ಅದ್ದೂರಿಯಾಗಿ ಕಾರ್ಯಕ್ರಮ ನಡೆಸುವುದಾದರೆ ತಾಲೂಕು ಆಡಳಿತ ಕೂಡ ಸಹಕಾರವನ್ನು ನೀಡಲಿದೆ.ಇಲ್ಲವೇ ತಾಲೂಕು ಕಚೇರಿಯಲ್ಲಿ ನಡೆಸುವದಾದರೆ ತಾವೆಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಸಂಪನ್ನ ಗೊಳಿಸಬೇಕು ಎಂದು ಮನವಿ ಮಾಡಿದರು.

 ಈ ಸಂದರ್ಭದಲ್ಲಿ ತಾಲೂಕು ಕುರುಬ ಸಮಾಜದ ಅಧ್ಯಕ್ಷ ಹೇಮಾವತಿ ಮಂಜುನಾಥ್ ಬೇಲೂರು ಪುರಸಭಾ ಮಾಜಿ ಸದಸ್ಯ ಬಿಎಲ್ ಧರ್ಮೇಗೌಡ, ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಪವರ್ತಯ್ಯ ಮತ್ತು ಚಿಕ್ಕಬ್ಯಾಡಿಗೆರೆ ಮಂಜುನಾಥ, ಮುಖಂಡರಾದ ತೆಂಡೇಕೆರೆ ರಮೇಶ್, ದೇವಿಹಳ್ಳಿ ಮಲ್ಲಿಕಾರ್ಜುನ, ಕೆಡಿಪಿ ಸದಸ್ಯೆ ಸೌಮ್ಯ ಆನಂದ್ ಮತ್ತು ಜಿ.ಕೆ ಕುಮಾರ್ ಹಾಜರಿದ್ದರು.

Leave a Reply

Your email address will not be published. Required fields are marked *

× How can I help you?