ಬೇಲೂರು-ಪುರಸಭೆಯ ಮೇಲೆ’ಎಸ್.ಐ.ಟಿ-ಸಿ.ಓ.ಡಿ’ ಬಾಂಬ್ ಹಾಕಿದ ಬಿ.ಶಿವರಾಂ!-ಠುಸ್ ಆಗಲಿದೆಯೇ? ಸಿಡಿಯಲಿದೆಯೇ? ಸಾರ್ವಜನಿಕ ವಲಯದಲ್ಲಿ ಬಾರಿ ಕುತೂಹಲ..!!

ಬೇಲೂರು-ಪುರಸಭಾಧ್ಯಕ್ಷರಾಗಿ ಉತ್ತಮ ಕೆಲಸ ಮಾಡುತ್ತಿದ್ದೀರಿ ಪುರಸಭೆಯ ಅವಧಿ ಮುಗಿಯುವವರೆಗೂ ನೀವೇ ಅಧ್ಯಕ್ಷರಾಗಿ ಮುಂದುವರೆಯಿರಿ ನಮ್ಮ ಬೆಂಬಲ ನಿಮಗಿದೆ.ಶಾಸಕ ಹೆಚ್.ಕೆ ಸುರೇಶ್ ಹೀಗೊಂದು ಅಭಯ ನೀಡುತ್ತಿದ್ದಂತೆ ಸಭೆಯಲ್ಲಿ ಅಳುತ್ತ ಕುಳಿತಿದ್ದ ಬೇಲೂರು ಪುರಸಭಾ ಅಧ್ಯಕ್ಷ ಅಶೋಕ್ ಮುಖದಲ್ಲಿ ನಗು ಮೂಡಿತ್ತು.

ಈ ಘಟನೆಗೆ ಸಾಕ್ಷಿಯಾಗಿದ್ದು ಡಾ,ಬಿ.ಆರ್ ಅಂಬೇಡ್ಕರ್ ರವರ 134 ನೇ ಜಯಂತಿಯ ಕಾರ್ಯಕ್ರಮ.ಸ್ವಪಕ್ಷದವರೇ ತನ್ನ ವಿರುದ್ಧ ಪಿತೂರಿ ಮಾಡುತ್ತಿದ್ದಾರೆ ಎಂದು ಬಹಳ ದಿನಗಳಿಂದ ಸಾರ್ವಜನಿಕವಾಗಿ ಅವಲತ್ತುಕೊಳ್ಳುತ್ತಿದ್ದ ಅಶೋಕ್ ಅಂದು ತುಂಬಿದ ಸಭೆಯಲ್ಲಿ ಕಣ್ಣೀರಾಗಿದ್ದರು.

ಬಾಬಾಸಾಹೇಬರ ಮೂರ್ತಿಗೆ ಪ್ರಥಮ ಪ್ರಜೆಯಾಗಿ ನಾನು ಹಾರ ಹಾಕುವುದನ್ನು ತನ್ನದೇ ಪಕ್ಷದ ಪುರಸಭಾ ಸದಸ್ಯರು ಹಾಗು ಮುಖಂಡರು ತಪ್ಪಿಸಿದರು ಎಂದು ತುಂಬಿದ ಸಭೆಯಲ್ಲಿ ಗಳಗಳನೆ ಕಣ್ಣೀರು ಹಾಕಿದ ಅಶೋಕ್ ನಾನು ಅಂಬೇಡ್ಕರ್ ಜಯಂತಿಯ ನಂತರ ಮತ್ತೊಬ್ಬರಿಗೆ ಅಧಿಕಾರ ಹಸ್ತಾಂತರಿಸುವ ಒಪ್ಪಂದವಿತ್ತು.ಆದರೆ ಅದಕ್ಕೂ ಮುಂದೆಯೇ ನನ್ನ ರಾಜೀನಾಮೆಗೆ ಒತ್ತಾಯಿಸಲಾಯಿತು.

ವಿವಿಧ ರೀತಿಯಲ್ಲಿ ನನ್ನ ಜನಪರ ಕಾರ್ಯಕ್ರಮಗಳಿಗೆ ಅಡ್ಡಿಪಡಿಸಲಾಯ್ತು ಎಂದು ಬೇಸರದಿಂದ ನುಡಿದ ಮರುಗಳಿಗೆಯಲ್ಲಿಯೇ ಶಾಸಕರು ಬಹಿರಂಗವಾಗಿ ಅಭಯ ನೀಡಿದ್ದು ವಿವಿಧ ರೀತಿಯ ಚರ್ಚೆಗಳನ್ನು ಹುಟ್ಟುಹಾಕಿದೆ.

ಬೀದಿಗಿಳಿದ ಬಿ.ಶಿವರಾಂ …!!

ಈ ಸುದ್ದಿ ಕಿವಿಗೆ ಬೀಳುತ್ತಿದ್ದಂತೆಯೇ ಹಿಂದಿನಿಂದಲೂ ಪುರಸಭಾ ಅಧ್ಯಕ್ಷ ಅಶೋಕ್ ವಿರುದ್ಧ ವಿವಿಧ ಕಾರಣಗಳಿಂದ ಅಸಮಾಧಾನಗೊಂಡಿದ್ದ ಪರಾಜಿತ ಅಭ್ಯರ್ಥಿ ಬಿ.ಶಿವರಾಂ ಬಹಿರಂಗವಾಗಿಯೇ ಅಶೋಕ್ ಆಡಳಿತವನ್ನು ವಿರೋಧಿಸಿದ್ದಾರೆ.ಬೀದಿಗೆ ಇಳಿದಿದ್ದಾರೆ.

ಚುನಾವಣೆಯಲ್ಲಿ ಸೋತರು ಸಹ ರಾಜ್ಯದಲ್ಲಿ ತನ್ನದೇ ಸರಕಾರ ಅಧಿಕಾರದಲ್ಲಿ ಇರುವ ಕಾರಣದಿಂದ ಹಾಲಿ ಶಾಸಕರ ರೀತಿಯಲ್ಲಿಯೇ ತಾಲೂಕು ಹಾಗು ಜಿಲ್ಲೆಯಾದ್ಯಂತ ಚಟುವಟಿಕೆಯಿಂದಿರುವ ಬಿ.ಶಿವರಾಂ ಬೇಲೂರು ಆಡಳಿತದ ಮೇಲೆ ಬಿಗಿ ಹಿಡಿತವನ್ನು ಹೊಂದಿದ್ದಾರೆ.

ಅಶೋಕ್ ಪುರಸಭಾ ಅಧ್ಯಕ್ಷರಾಗಿ ನೇಮಕಗೊಂಡ ದಿನದಿಂದ ಅಲ್ಲಿಯೂ ಹಿಡಿತ ಸಾದಿಸಲು ಹೋದರಾದರು ಅದಕ್ಕೆ ಅಧ್ಯಕ್ಷರು ಅವಕಾಶ ಮಾಡಿಕೊಡಲಿಲ್ಲ.

ಕಾಲಿಗೆ ಚಕ್ರ ಕಟ್ಟಿಕೊಂಡು ಪುರಸಭಾ ವ್ಯಾಪ್ತಿಯಲ್ಲಿ ಆಡಳಿತ ನಡೆಸತೊಡಗಿದ ಅಶೋಕ್ ತನ್ನದೇ ಏಕಚಕ್ರಾದಿಪತ್ಯ ಸಾಧಿಸಹೊರಟರು ಎನ್ನುವ ಆರೋಪಗಳಿದ್ದು ಸ್ವಪಕ್ಷದ ಸದಸ್ಯರುಗಳಿಗೂ ಹಾಗು ಮುಖಂಡರುಗಳಿಗೂ ಕವಡೆ ಕಾಸಿನ ಕಿಮ್ಮತ್ತು ನೀಡಲಿಲ್ಲ.ಈ ಕಾರಣಕ್ಕಾಗಿಯೇ ಅಶೋಕ್ ವಿರುದ್ಧ ಪಕ್ಷದೊಳಗೆ ಅಸಮಾಧಾನ ಭುಗಿಲೆದ್ದು ಅವಧಿಪೂರ್ವ ರಾಜೀನಾಮೆಯನ್ನು ಕೇಳಲಾಯ್ತು.ಅವರು ಅದಕ್ಕೊಪ್ಪದೆ ಹೋದಾಗ ಹಿಂಬಾಗಿಲಿನ ಪಿತೂರಿ ನಡೆಸಿ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಪ್ರಯತ್ನಿಸಲಾಯಿತು ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿವೆ.

ಆಗ ರೊಚ್ಚಿಗೆದ್ದ ಅಶೋಕ್ ರಂಗೋಲಿಯ ಕೆಳಗೆ ನುಗ್ಗಿ ಅಧಿಕಾರ ಉಳಿಸಿಕೊಳ್ಳುವ ಮಾಸ್ಟರ್ ಪ್ಲಾನ್ ಮಾಡಿದರು.

ಬಿಜೆಪಿ-ಜೆಡಿಎಸ್ ಹಾಗು ಕಾಂಗ್ರೆಸ್ ಸದಸ್ಯರೇ ಅಶೋಕ್ ಜೊತೆಗೆ…

ಎರಡನೇ ಬಾರಿ ಅಧ್ಯಕ್ಷ ಗಾದಿಗಾಗಿ ಕೋಟು ಹೊಲೆಸಿಕೊಂಡು ಸಿದ್ದವಾಗಿ ಕುಳಿತಿದ್ದ ಪುರಸಭಾ ಸದಸ್ಯರೊಬ್ಬರು ಅಶೋಕ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿ ಕೆಳಗಿಳಿಸಲು ಮುಂದಾದರು.

ಆಗ ಬಹಿರಂಗವಾದದ್ದೇ ಅಶೋಕ್ ತನ್ನ ಸ್ಥಾನವನ್ನು ಉಳಿಸಿಕೊಳ್ಳಲು ಶಾಸಕರ ಜೊತೆಗೆ ಒಳಒಪ್ಪಂದ ಮಾಡಿಕೊಂಡಿರುವ ಹಾಗು ಜೆಡಿಎಸ್,ಕಾಂಗ್ರೆಸ್ ನ ಒಂದಷ್ಟು ಸದಸ್ಯರುಗಳೇ ಅಶೋಕ್ ಪರವಾಗಿ ಬಲವಾಗಿ ನಿಂತಿದ್ದಾರೆಂಬ ಸತ್ಯ.

ಆದರೂ ಸುಮ್ಮನಾಗದ ಆ ಸದಸ್ಯ ಹಣಬಲದ ಮೂಲಕ ಬಿಜೆಪಿ,ಜೆಡಿಎಸ್ ಹಾಗು ಅಶೋಕ್ ಬೆಂಬಲಕ್ಕೆ ನಿಂತಿರುವ ತನ್ನದೇ ಪಕ್ಷದ ಸದಸ್ಯರುಗಳನ್ನು ಒಲಿಸಿಕೊಳ್ಳುವ ಪ್ರಯತ್ನವನ್ನು ಮುಂದುವರೆಸಿದರು.ಆದರೆ ಅಶೋಕ್ ಹಾಕಿದ್ದ ಗಾಳಕ್ಕೆ ಆ ಸದಸ್ಯರುಗಳೆಲ್ಲ ಹೇಗೆ ಬಿದ್ದಿದ್ದರು ಎಂದರೆ ಅಧ್ಯಕ್ಷ ಆಕಾಂಕ್ಷಿಯ ಮುಖಕ್ಕೆ ಮಂಗಳಾರತಿ ಮಾಡಿ ಕಳುಹಿಸಿಬಿಟ್ಟರು.

ಮಳಿಗೆಗಳಲ್ಲಿನ ಬಹುಕೋಟಿ ಹಗರಣ..?

ಈಗ್ಗೆ ಕೆಲವು ತಿಂಗಳ ಹಿಂದೆ ನಡೆದ ಪುರಸಭಾ ಮಳಿಗೆಗಳ ಹರಾಜು ಪ್ರಕ್ರಿಯೆ ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು.ಸಾವಿರಾರು ರೂಪಾಯಿಗಳಿಗೆ ಕಳೆದ ಬಾರಿ ಹರಾಜಾಗಿದ್ದ 60 ಕ್ಕೂ ಹೆಚ್ಚು ಮಳಿಗೆಗಳು ಪುರಸಭೆಯ ಹೊಸ ನಿಯಮವೊಂದರ ಕಾರಣದಿಂದ ಬೆರಳೆಣಿಕೆ ಹಣಕ್ಕೆ ಉಳ್ಳವರ ಪಾಲಾಗಿದ್ದವು.

ಬೇಲೂರು ಇತಿಹಾಸದಲ್ಲಿಯೇ ಇಂತಹದ್ದೊಂದು ಬಹುಕೋಟಿ ಹಗರಣ ನಡೆದಿಲ್ಲ.ಹಿಂದುಳಿದ ಪಟ್ಟಿಯಲ್ಲಿರುವ ಬೇಲೂರು ಪುರಸಭೆಯ ಬಹುಮುಖ್ಯ ಆದಾಯದ ಮೂಲಕ್ಕೆ ಕೊಡಲಿಪೆಟ್ಟು ಹಾಕಲಾಗಿದೆ.ಈ ಹಗರಣದಲ್ಲಿ ಶಾಸಕ ಹೆಚ್.ಕೆ ಸುರೇಶ್,ಪುರಸಭಾ ಅಧ್ಯಕ್ಷ ಅಶೋಕ್,ಮುಖ್ಯಾಧಿಕಾರಿ ಸಂಜಯ್ ನೇರವಾಗಿ ಪಾಲ್ಗೊಂಡಿದ್ದು ಈ ಹರಾಜನ್ನು ರದ್ದುಪಡಿಸಬೇಕು ಎಂದು ಸಾರ್ವಜನಿಕರು ಹಾಗು ಸಂಘ ಸಂಸ್ಥೆಗಳು ಧ್ವನಿ ಎತ್ತಿದವು.

ಜೆಡಿಎಸ್ ಮುಖಂಡ ಸತೀಶ್,ಸಾಮಾಜಿಕ ಹೋರಾಟಗಾರ ವೆಂಕಟೇಶ್ ಮುಂತಾದವರು ಪತ್ರ ಹೋರಾಟ ನಡೆಸಿ ಹರಾಜು ಪ್ರಕ್ರಿಯೆಗೆ ತಡೆ ಸಿಗುವಂತೆ ಮಾಡಿದ್ದರು.

ಆದರೆ ಮಳಿಗೆ ಪಡೆದಿದ್ದವರು ಮಾನ್ಯ ನ್ಯಾಯಾಲಯದ ಮೆಟ್ಟಿಲು ಏರಿದ್ದರಿಂದ ಹಾವು ಸಾಯಲಿಲ್ಲ ಕೋಲು ಮುರಿಯಲಿಲ್ಲ ಎಂಬ ಸ್ಥಿತಿ ಸಧ್ಯವಿದೆ.

ಎಸ್.ಐ.ಟಿ-ಸಿ.ಓ.ಡಿ ಬಾಂಬ್ ..!!

ಶಾಸಕರಿಂದ ಬಹಿರಂಗವಾಗಿ ಅಶೋಕ್ ಗೆ ಬೆಂಬಲ ವ್ಯಕ್ತವಾಗುತ್ತಿದ್ದಂತೆ ಬಿ.ಶಿವರಾಂ,ಕಾಂಗ್ರೆಸ್ ಸದಸ್ಯರು ಹಾಗು ಮುಖಂಡರುಗಳು ಬೀದಿಗೆ ಇಳಿದಿದ್ದಾರೆ.

ಹನುಮಂತನಗರದಲ್ಲಿ ನಡೆದಿರುವ ಘಟನೆಯೊಂದರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಇಲ್ಲಿಯವರೆಗೂ ಪುರಸಭೆ ಮಳಿಗೆ ವಿಷಯದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಬಹುಕೋಟಿ ಹಗರಣದ ಬಗ್ಗೆ ಬಾಯಿ ಬಿಡದಿದ್ದ ಬಿ.ಶಿವರಾಂ ಆ ಬಗ್ಗೆ ಎಸ್.ಐ.ಟಿ ಅಥವಾ ಸಿ.ಓ.ಡಿ ತನಿಖೆ ನಡೆಸುವಂತೆ ಸರಕಾರವನ್ನು ಆಗ್ರಹಿಸಿದ್ದಾರೆ.

ಈ ಹೇಳಿಕೆಯನ್ನು ಕಾರ್ಯರೂಪಕ್ಕೆ ತರಲು ಬಿ.ಶಿವರಾಂ ಸರಕಾರದ ಮಟ್ಟದಲ್ಲಿ ಕೆಲಸ ಮಾಡುತ್ತಾರೆಯೇ?ಅಥವಾ ಅಶೋಕ್ ರನ್ನು ಬೆದರಿಸಿ ಅಧಿಕಾರದಿಂದ ಇಳಿಸಲು ಆಡಿದ್ದಾರೆಯೇ? ಎಂಬ ಕುತೂಹಲದ ಮಾತುಗಳು ಸಾರ್ವಜನಿಕ ವಲಯದಲ್ಲಿ ಎದ್ದಿವೆ.

ಏಕೆಂದರೆ ಬಿ.ಶಿವರಾಂ ಮನಸ್ಸು ಮಾಡಿದ್ದರೆ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಬಗ್ಗೆ ಈ ಹಿಂದೆಯೇ ಯಾವ ರೂಪದ ತನಿಖೆಯಾದರು ನಡೆಯುವಂತೆ ಮಾಡುವುದು ದೊಡ್ಡ ವಿಷಯವೇ ಆಗಿರಲಿಲ್ಲ.

ಸದ್ಯ ಅಂತಹದ್ದೊಂದು ಹೇಳಿಕೆ ನೀಡುವ ಮೂಲಕ ಬಿ.ಶಿವರಾಂ ಮೌನದ ಬಗ್ಗೆ ಮೂಗು ಮುರಿದಿದ್ದವರ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿದ್ದಾರೆ.

ಬೇಲೂರು ತಾಲೂಕಿನ ಸಮಗ್ರ ಅಭಿವೃದ್ಧಿಯ ಬಗ್ಗೆ ಮಾತನಾಡುವ ಬಿ.ಶಿವರಾಂ ತಮ್ಮ ಮಾತನ್ನು ತಪ್ಪಿದರೆ ಮುಂದಿನ ಚುನಾವಣೆಯಲ್ಲಿ ಅದರ ಅಡ್ಡ ಪರಿಣಾಮ ಎದುರಿಸಬೇಕಿದೆ ಎಂಬುದ ಮರೆಯಬಾರದು.

—————--ನೂರ್ ಅಹಮ್ಮದ್/ಪ್ರಕಾಶ್ ಕೆ.ಕೋಟಿಗನಹಳ್ಳಿ

Leave a Reply

Your email address will not be published. Required fields are marked *

× How can I help you?