ಬೇಲೂರು-‘ಭೀಮ್ ಆರ್ಮಿ’ಸಂಘಟನೆ ಕೇವಲ’ಬೀದಿ ಹೋರಾಟ’ಕ್ಕೆ ಸೀಮಿತವಾಗದೆ ಸಮುದಾಯದ ಮೇಲೆ ಶೋಷಣೆಯಾಗುವುದನ್ನು ತಡೆಗಟ್ಟುವ ಕೆಲಸ ಮಾಡಲಿದೆ

ಬೇಲೂರು-ಭಾರತದಲ್ಲಿ ದಲಿತರು ಮುಖ್ಯಮಂತ್ರಿ ಆಗುವುದೇ ಕಷ್ಟವಾಗಿದ್ದ ಸಂದರ್ಭದಲ್ಲಿ ಒಬ್ಬ ದಲಿತ ಮಹಿಳೆಯನ್ನು ಮುಖ್ಯಮಂತ್ರಿ ಮಾಡಿದ ಶ್ರೇಯಸ್ಸು ಕಾನ್ಷಿರಾಮ್ ರವರಿಗೆ ಸಲ್ಲುತ್ತದೆ ಎಂದು ಭೀಮ್ ಆರ್ಮಿ ತಾಲ್ಲೂಕು ಸಂಚಾಲಕರಾದ ಅಮಿತ್ ಶರಣ್ ತಿಳಿಸಿದರು.

ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ‘ಭೀಮ್ ಆರ್ಮಿ’ ತಾಲ್ಲೂಕು ಘಟಕದ ವತಿಯಿಂದ ನಡೆದ ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಮಾಯಾವತಿಯವರು ಒಟ್ಟು ಮೂರು ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಇತಿಹಾಸ ಸೃಷ್ಟಿ ಮಾಡಿದ್ದಾರೆ.ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಕಾನ್ಷಿರಾಮ್ ಅವರನ್ನು ಸ್ಫೂರ್ತಿಯನ್ನಾಗಿಟ್ಟುಕೊಂಡು ‘ಭೀಮ್ ಆರ್ಮಿ’ಎಂಬ ಸಂಘಟನೆ ಮೂಲಕ ಜನರನ್ನು ಸಂಘಟಿಸಿ ಚುನಾವಣೆ ಮೂಲಕ ಪಾರ್ಲಿಮೆಂಟ್ ಒಳಗೆ ಗರ್ಜಿಸುತ್ತಿರುವ ನಮ್ಮ ನಾಯಕರಾದ ಚಂದ್ರಶೇಖರ್ ಆಜಾದ್ ರಾವಣ್ ರವರು ನಮಗೆಲ್ಲ ಮಾದರಿಯಾಗಿದ್ದಾರೆ.

ಕಾನ್ಷಿರಾಮ್ ಸಾಹೇಬರೇ ಚಂದ್ರಶೇಖರ್ ಆಜಾದ್ ರಾವಣ್ ರವರ ರೂಪದಲ್ಲಿ ಮತ್ತೆ ಹುಟ್ಟಿ ಬಂದಿದ್ದಾರೇನೋ ಎಂದೆನಿಸುತ್ತದೆ.ಬಾಬಾ ಸಾಹೇಬರ ವಿಮೋಚನಾ ರಥವನ್ನು ಮುಂದಕ್ಕೆ ಎಳೆದುಕೊಂಡು ಸಾಗಬೇಕಿರುವ ಕರ್ತವ್ಯ ಯುವಕರಾದ ನಮ್ಮ ಮೇಲಿದೆ.ಈ ನಿಟ್ಟಿನಲ್ಲಿ ಭೀಮ್ ಆರ್ಮಿ,ಬೇಲೂರು ತಂಡವು ಬುದ್ಧ ಬಸವ ಅಂಬೇಡ್ಕರ್ ಕಾನ್ಷಿರಾಮ್ ವಿಚಾರಧಾರೆಗಳೊಂದಿಗೆ ಚಂದ್ರಶೇಖರ್ ಆಜಾದ್ ರಾವಣ್ ರವರ ಸ್ಪೂರ್ತಿಯೊಂದಿಗೆ ಮುನ್ನುಗ್ಗಿ ತಾಲೂಕಿನ ದಲಿತರ ಸರ್ವತೋಮುಖ ಏಳಿಗೆಗೆ ಶ್ರಮಿಸಲಿದೆ ಎಂದರು.

ತಾಲೂಕು ಅಧ್ಯಕ್ಷರಾದ ಕೀರ್ತಿ ಬಿ.ಎ ಮಾತನಾಡಿ,ಇಲ್ಲಿಯವರೆಗಿನ ಬಹುಜನ ಚಳುವಳಿ ಹಾಗೂ ಕರ್ನಾಟಕದ ದಲಿತ ಚಳುವಳಿಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿವೆ.

ಅವರ ಹೋರಾಟದ ಫಲವಾಗಿ ನಾವಿಂದು ನಮಗೆ ಬೇಕಾದ ರೀತಿಯಲ್ಲಿ ಉತ್ತಮವಾದ ಜೀವನವನ್ನು ಸಾಗಿಸಲು ಸಾಧ್ಯವಾಗಿದೆ.ದಲಿತ ಸಮುದಾಯವನ್ನು ಗುಲಾಮಗಿರಿಯ ಸಂಕೋಲೆಯಿಂದ ಮುಕ್ತಗೊಳಿಸಲು ನಮ್ಮ ಹಿರಿಯರು ಮಾಡಿದ ಹೋರಾಟಗಳು ದಲಿತ ಇತಿಹಾಸದ ಪುಟಗಳಲ್ಲಿ ದಾಖಲಾಗಿವೆ.ಅದರಂತೆ ನಾವುಗಳು ಕೂಡ ದಲಿತರ ಮೂಲ ಸಮಸ್ಯೆಗಳಾದ ಜಾತಿ ವ್ಯವಸ್ಥೆ,ಶೋಷಣೆ ,ಶಿಕ್ಷಣದಿಂದ ವಂಚಿತರಾಗಿರುವುದು,ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವುದು ಇವುಗಳ ನಿವಾರಣೆಗಾಗಿ ಹೋರಾಟ ನಡೆಸುವ ಅಗತ್ಯವಿದೆ ಎಂದು ಹೇಳಿದರು.

ನಮ್ಮ ಸಂಘಟನೆ ಕೇವಲ ಬೀದಿ ಹೋರಾಟಕ್ಕೆ ಸೀಮಿತವಾಗದೆ ಸಮುದಾಯದ ಮೇಲೆ ಶೋಷಣೆಯಾಗುವುದನ್ನು ತಡೆಗಟ್ಟುವ ಕೆಲಸ ಮಾಡಬೇಕಿದೆ.ತಾಲೂಕಿನಲ್ಲಿ ದಲಿತರು ಸಮಗ್ರ ಅಭಿವೃದ್ಧಿ ಹೊಂದುವ ನಿಟ್ಟಿನಲ್ಲಿ ಸಹಕರಿಸಲು ಭೀಮ್ ಆರ್ಮಿ ತಂಡವು ಶಕ್ತಿಮೀರಿ ಪ್ರಯತ್ನ ಮಾಡಲಿದೆ ಎಂದು ಹೇಳಿದರು.

ಇದಕ್ಕಾಗಿ ತಾಲೂಕಿನ ದಲಿತರು,ಭೀಮ ಅನುಯಾಯಿಗಳು,ಸಮಸ್ತ ಸಮಾನಮನಸ್ಕರು ನಮ್ಮ ಜೊತೆಗೆ ಕೈಜೋಡಿಸಬೇಕು ಎಂದು ಕೀರ್ತಿ ಬಿ.ಎ ಮನವಿ ಮಾಡಿಕೊಂಡರು.

ಕಾರ್ಯಕ್ರಮದ ಮೊದಲಿಗೆ ಬುದ್ಧ ಬಸವ ಅಂಬೇಡ್ಕರ್ ಹಾಗು ಕಾನ್ಷಿರಾಮ್ ಅವರ ಭಾವಚಿತ್ರಗಳಿಗೆ ಪುಷ್ವ ನಮನ ಸಲ್ಲಿಸಿ,ಬುದ್ಧ ವಂದನೆ ಹಾಗೂ ಸಂವಿದಾನ ಪೀಠಿಕೆ ಓದಲಾಯಿತು.

ಈ ಸಭೆಯಲ್ಲಿ ಸಂಘಟನೆಯ ಮುಂದಿನ ರೂಪು ರೇಷೆಗಳು,ಹೊಸ ಸದಸ್ಯರ ಸೇರ್ಪಡೆ, ದಲಿತ ಸಮುದಾಯಕ್ಕೆ ಸರ್ಕಾರಿ ಸೌಲಭ್ಯಗಳನ್ನು ನೇರವಾಗಿ ತಲುಪಿಸುವುದು,ಶಿಕ್ಷಣ ವಂಚಿತರಿಗೆ ಶಿಕ್ಷಣ ಕೊಡಿಸುವುದು,ನೌಕರರ ಸಂಸ್ಥೆಗಳಿಗೆ ಬೆಂಬಲವಾಗಿ ನಿಲ್ಲುವುದು, ಹೀಗೆ ಹಲವಾರು ವಿಷಯಗಳ ಮೇಲೆ ವಿಸ್ತೃತ ಚರ್ಚೆ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಸುನೀಲ್ ಆರ್. ಪಿ,ಅರೇಹಳ್ಳಿ ಹೋಬಳಿ ಅಧ್ಯಕ್ಷರಾದ ಗಿರೀಶ್ , ಹಳೆ ಗೆಂಡೆಹಳ್ಳಿ ಗ್ರಾಮ ಘಟಕ ಅಧ್ಯಕ್ಷರಾದ ರಮೇಶ್,ಸಂಘಟಕರಾದ ದಿಲೀಪ್ ಅಸುರ , ಕೊನರ್ಲು ಹರೀಶ್ ,ಪ್ರದೀಪ್ ಮೋನಿ, ಘಟ್ಟದಳ್ಳಿ ಪ್ರಕಾಶ್,ಲೋಕೇಶ್,ಜಿಮ್ ತೀರ್ಥಕುಮಾರ್ , ಪರಮೇಶ್,ಚಂದ್ರಶೇಕರ್,ದೇವರಾಜು,ರಾಕೇಶ್,ದಿರಾನ್,ಜಗದೀಶ್,ದರ್ಶನ್,ನಾಗರಾಜು ಇನ್ನಿತರರು ಹಾಜರಿದ್ದರು.

Leave a Reply

Your email address will not be published. Required fields are marked *

× How can I help you?