ಬೇಲೂರು-ಇತಿಹಾಸ ಪುಟಗಳಲ್ಲಿ ಆಸ್ತಿ, ಅಧಿಕಾರ, ಹೆಣ್ಣು, ಸಂಪತ್ತಿಗಾಗಿ ಸಾವಿರಾರು ಯುದ್ಧ ನಡೆದಿವೆ. ಆದರೆ ಶಿಕ್ಷಣ, ಆತ್ಮ ಗೌರವ, ಸ್ವಾಭಿಮಾನಕ್ಕಾಗಿ ನಡೆದ ವಿಶ್ವದ ಏಕೈಕ ಯುದ್ಧವೆಂದರೆ ಅದು ಭೀಮಾ ಕೋರೆಂಗಾವ್ ಯುದ್ಧ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ)ವಿಭಾಗಿಯ ಮುಖoಡ ಲಕ್ಷ್ಮಣ್ ಹೇಳಿದರು.
ಭೀಮಾ ಕೋರೇಗಾಂವ್ ವಿಜಯೋತ್ಸವದ ಅಂಗವಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ)ತಾಲೂಕು ಪದಾಧಿಕಾರಿಗಳು ಬುಧವಾರ ಬೆಳಗ್ಗೆ ಅಂಬೇಡ್ಕರ್ ನಗರದಲ್ಲಿರುವ ಡಾ.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಸಲ್ಲಿಸಿ,ನಂತರ ಯುದ್ಧದಲ್ಲಿ ಮಡಿದ ವೀರ ಯೋಧರಿಗೆ ಗೌರವ ಸಲ್ಲಿಸಿ ವಿಜಯೋತ್ಸವ ಆಚರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, 1818 ಜನವರಿ 1 ಭೀಮಾ ಕೋರೆಗಾವ್‌ನಲ್ಲಿ ಮಹರ್ ವೀರ ಯೋಧರು ಶೋಷಿತರ ವಿಮೋಚನೆಗಾಗಿ ತಮ್ಮ ಪ್ರಾಣವನ್ನು ಬಲಿದಾನ ಮಾಡಿ ಅಸ್ಪೃಶ್ಯ ಸಮುದಾಯಗಳಿಗೆ ಹಕ್ಕುಗಳನ್ನು ದೊರಕಿಸಿಕೊಟ್ಟ ಚಾರಿತ್ರಿಕ ದಿನವಾಗಿದೆ.
ಪೂನಾದಲ್ಲಿ 200 ಕ್ಕೂ ಹೆಚು ವರ್ಷಗಳ ಹಿಂದೆ ಅಸ್ಪೃಶ್ಯರ ಬದುಕು ಹೀನಾಯ ಸ್ಥಿತಿಯಲ್ಲಿತ್ತು. ಮೇಲ್ಜಾತಿಯವರ ಮೇಲೆ ತಮ್ಮ ನೆರಳು ಬೀಳದಂತೆ ಅಸ್ಪೃಶ್ಯ ಸಮಾಜದವರು ಮದ್ಯಾಹ್ನ 12 ಗಂಟೆಯಲ್ಲಿ ಸೊಂಟಕ್ಕೆ ಪೊರಕೆ,ಕೊರಳಿಗೆ ಮಡಕೆ ಕಟ್ಟಿಕೊಂಡು ಓಡಾಡುವಂತೆ ಪೇಶ್ವೆಗಳ ಆಡಳಿತದಲ್ಲಿ ಶಾಸನ ವಿಧಿಸಲಾಗಿತ್ತು. ಈ ಕರಾಳ ಶಾಸನದಿಂದ ಬಿಡುಗಡೆಗೊಳ್ಳಲು 500ಮಹರ್ ಯೋಧರು ಬ್ರಿಟಿಷ್ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡು ಜನವರಿ 1-1818 ರಂದು ಪೇಶ್ವೆ ಬಾಜಿರಾಯನ 28,000 ಸೈನಿಕರ ವಿರುದ್ದ ಮಹಾರಾಷ್ಟ್ರದ ಬೀಮಾನದಿ ತೀರದ ಕೋರೆಗಾಂವ್‌ನಲ್ಲಿ ದಂಡ ನಾಯಕ ಸಿದ್ದನಾಕನ ನೇತೃತ್ವದಲ್ಲಿ ಹೋರಾಡಿ ಗೆಲುವು ಸಾಧಿಸಿರುವುದು ಅಸ್ಪೃಶ್ಯರ ಮೊಟ್ಟ ಮೊದಲ ಸ್ವಾತಂತ್ರ‍್ಯ ಸಂಗ್ರಾಮವೆಂದು ಹೆಸರಾಗಿದೆ.
ಈ ಇತಿಹಾಸ ಯಾರಿಗೂ ಕಾಣದಂತೆ ಭಾರತದ ಇತಿಹಾಸಕಾರರು ಮುಚ್ಚಿಟ್ಟಿದ್ದನ್ನು, ಡಾ.ಅಂಬೇಡ್ಕರ್‌ರವರು ಹೊರ ತೆಗೆದು ಅಸ್ಪೃಶ್ಯರಿಗೆ ಸ್ಪೂರ್ತಿ ತುಂಬಿ ಇತಿಹಾಸ ಮರೆತವರು ಇತಿಹಾಸ ಸೃಷ್ಠಿಸಲಾರರು ಎಂಬ ಸಂದೇಶದನ್ನು ದೇಶದ ಜನತೆಗೆ ತಿಳಿಸಿ ಪ್ರತಿವರ್ಷ 1ನೇ ತಾರೀಖಿನಂದು ಪ್ರಪಂಚದ ಯಾವ ಮೂಲೆಯಲ್ಲಿದ್ದರೂ ಕೋರೇಗಾಂವ್‌ಗೆ ತೆರಳಿ ವೀರ ಯೋಧರ ಸ್ಮಾರಕಕ್ಕೆ ಗೌರವ ಸಲ್ಲಿಸುತಿದ್ದರು. ಈ ಹಿನ್ನೆಲೆಯಲ್ಲಿ ನಮ್ಮ ಸಂಘಟನೆಯಿoದ ಪ್ರತಿವರ್ಷದಂತೆ ಡಾ.ಅಂಬೇಡ್ಕರ್ ಪ್ರತಿಮೆಗೆ ಪುಷ್ಪಹಾರದ ಮೂಲಕ ಗೌರವ ಸಲ್ಲಿಸಿ ಕೋರೇಗಾಂವ್ ವಿಜಯೋತ್ಸವ ಆಚರಿಸುತಿದ್ದೇವೆ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಜಿ.ಟಿ.ಇಂದಿರಾ ಧರ್ಮಪ್ಪ ಮಾತನಾಡಿ, ಕೋರೇಗಾಂವ್ ವೀರ ಯೋಧರ ಶ್ರಮದಿಂದ ತಳ ಸಮುದಾಯಗಳು ಇಂದು ನೆಮ್ಮದಿಯ ಜೀವನ ನಡೆಸುವಂತಾಗಿದೆ. ಆ ಮಹಾನ್ ವೀರ ಯೋಧರನ್ನು ಗೌರವಿಸುವ ಅಂಗವಾಗಿ ತಾಲೂಕಿನಲ್ಲಿ ಎಲ್ಲ ದಲಿತಪರ ಸಂಘಟನೆಗಳು ಮತ್ತು ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ)ಯ ಪದಾಧಿಕಾರಿಗಳು ಅಂಬೇಡ್ಕರ್‌ರವರ ಪ್ರತಿಮೆಗೆ ಪುಷ್ಪಹಾರ ಸಲ್ಲಿಸುವ ಮೂಲಕ ಗೌರವ ಸಲ್ಲಿಸಿ ವಿಜಯೋತ್ಸವ ಆಚರಿಸುತಿದ್ದೇವೆ ಎಂದರು.
ದಸಂಸ(ಅಂಬೇಡ್ಕರ್ ವಾದ)ಜಿಲ್ಲಾ ಸಂಘಟನಾ ಸಂಚಾಲಕ ಹೊಯ್ಸಳ, ಸಮಿತಿ ಸದಸ್ಯೆ ಮೀನಾಕ್ಷಿ, ತಾಲೂಕು ಸಂಘಟನಾ ಸಂಚಾಲಕರಾದ ಭದ್ರಯ್ಯ, ವಸಂತ ಕುಮಾರ್, ನಾಗರಾಜು, ಮುಖಂಡರಾದ ನಾಗರಾಜು, ದೇವರಾಜು, ಆಟೋ ಲಕ್ಷ್ಮಣ್, ಜಗಧೀಶ್, ಚಂದ್ರಪ್ಪ, ಅಶೋಕ್, ಓಂಕಾರ್, ಹರೀಶ್, ಜಗಧೀಶ್, ಚಂದ್ರಶೇಖರ್ ಸೇರಿದಂತೆ ಇತರರಿದ್ದರು.