ಬೇಲೂರು-ಬಿದಿರಿನಿಂದ ತಯಾರಿಸುವ ವಸ್ತುಗಳಿಗೆ ಮಾರುಕಟ್ಟೆ ಕುಸಿತವಾಗುತ್ತಿದ್ದು ಇದನ್ನೇ ನಂಬಿ ಜೀವನ ಸಾಗಿಸುತ್ತಿರುವ ಸಮುದಾಯ ಸಂಕಷ್ಟಕ್ಕೆ ಸಿಲುಕಿದೆ-ಮುತ್ತುವೇಲು

ಬೇಲೂರು-ಬಿದಿರಿನಿಂದ ತಯಾರಿಸುವ ವಸ್ತುಗಳಿಗೆ ಮಾರುಕಟ್ಟೆ ಕುಸಿತವಾಗುತ್ತಿದ್ದು ಇದನ್ನೇ ನಂಬಿ ಜೀವನ ಸಾಗಿಸುತ್ತಿರುವ ಸಮುದಾಯ ಸಂಕಷ್ಟಕ್ಕೆ ಸಿಲುಕಿದೆ.ಆಧುನಿಕ ವಿಧಾನದಲ್ಲಿ,ಆಧುನಿಕ ಶೈಲಿಯ ಬಿದಿರಿನ ಉತ್ಪನ್ನಗಳನ್ನು ಉತ್ಪಾದಿಸುವತ್ತ ತಯಾರಕರು ಗಮನ ಹರಿಸಬೇಕು.ಇದಕ್ಕೆ ಬೇಕಾದ ಅಗತ್ಯ ನೆರವನ್ನು ಸರಕಾರ ನೀಡಿ ಅತೀ ಪುರಾತನ ಕಲೆಗಳಲ್ಲಿ ಒಂದಾದ ಬಿದಿರು ಉತ್ಪನ್ನಗಳ ತಯಾರಿಕೆಯನ್ನು ಪೋಷಿಸುವ ಕೆಲಸವಾಗಬೇಕು ಎಂದು ಬಿದಿರು ಕೆಲಸಗಾರರ ಸಂಘದ ಅಧ್ಯಕ್ಷ ಮುತ್ತುವೇಲು ಮನವಿ ಮಾಡಿಕೊಂಡರು.

ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಬಿದಿರು ಕೆಲಸಗಾರರ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.

ನಾವುಗಳು ಸಾಂಪ್ರದಾಯಿಕ ಪರಿಕರವನ್ನು ಸಿದ್ಧಪಡಿಸುವಲ್ಲಿ ಕೌಶಲ ಹೊಂದಿದ್ದೇವೆ.ಆದರೆ, ಇತ್ತೀಚಿನ ದಿನಗಳಲ್ಲಿ ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಬಿದಿರು ಪರಿಕರಗಳನ್ನು ಮಾರುಕಟ್ಟೆಗೆ ಒದಗಿಸಬೇಕಾಗಿದೆ.ಈ ಹಂತದಲ್ಲಿ ಸ್ವಲ್ಪ ಸಮಸ್ಯೆ ಎದುರಾಗುತ್ತಿದೆ.ಪ್ಲಾಸ್ಟಿಕ್ ವಸ್ತುಗಳ ಹಾವಳಿಯ ನಡುವೆಯೂ ಈ ಸಮುದಾಯ ಅಸ್ತಿತ್ವ ಉಳಿಸಿಕೊಂಡು ಸ್ಪರ್ಧೆ ನೀಡುತ್ತಿರುವುದು ವಿಶೇಷ.ಈ ವೃತ್ತಿಗೆ ಬರುವ ಯುವಕರಿಗೆ ಮತ್ತಷ್ಟು ಕೌಶಲ ತರಬೇತಿ ನೀಡಬೇಕಾಗಿದೆ.ಇದರಿಂದ ಸಾಂಪ್ರದಾಯಕ ಮತ್ತು ಆಧುನಿಕ ಬಿದಿರು ಸಾಮಗ್ರಿ ತಯಾರಿಸಿ ಗ್ರಾಹಕರ ಬೇಡಿಕೆಗೆ ಸ್ಪಂದಿಸಲು ಸಾಧ್ಯವಾಗಲಿದೆ ಎಂದರು.

ನಮ್ಮ ಬಿದಿರು ಕೆಲಸಗಾರರ ಸಹಕಾರ ಸಂಘ ಪ್ರಾರಂಭವಾಗಿ ಸುಮಾರು 52 ವರ್ಷಗಳು ಆಗಿದ್ದು ಈ ಹಿಂದೆ 100ಜನ ಸದಸ್ಯರು ಇದ್ದು ಈಗ 200 ಜನ ಸದಸ್ಯರಾಗಿದ್ದಾರೆ.ವಾರ್ಷಿಕ ವ್ಯವಹಾರ 35 ಲಕ್ಷವಿದ್ದು ಈ ವರ್ಷದಲ್ಲಿ 1.50 ಲಕ್ಷ ಲಾಭವಾಗಿದೆ.ಸುಮಾರು 15 ಜನ ಅಧ್ಯಕ್ಷರನ್ನು ಕಂಡಿದ್ದ ಈ ಸಂಘಕ್ಕೆ ಸರ್ಕಾರದಿಂದ ಹಲವಾರು ಸವಲತ್ತುಗಳನ್ನು ನೀಡಿದ್ದು ಸಮುದಾಯ ಭವನ ನಿರ್ಮಾಣಕ್ಕೆ ಎಲ್ಲಾ ಸಂಸದರು ಶಾಸಕರು ಜಿಲ್ಲಾಧಿಕಾರಿಗಳು,ಬೇಲೂರು ಪುರಸಭೆ ಪುರಸಭೆಯ ಸದಸ್ಯರು ಕೂಡ ನಮಗೆ ಸಹಾಯ ಮಾಡಿದ್ದಾರೆ ಎಂದು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಬಿದಿರಿಗೆ ಪರ್ಯಾಯವಾಗಿ ಪ್ಲಾಸ್ಟಿಕ್ ಹೆಚ್ಚು ಬಳಕೆಯಾಗುತ್ತಿರುವುದರಿಂದ ಬಿದಿರಿನಿಂದ ತಯಾರಿಸುತ್ತಿರುವ ವಸ್ತುಗಳಿಗೆ ಮಾರುಕಟ್ಟೆ ಸಿಗದಂತಾಗಿದೆ.ಆ ಕಸುಬನ್ನು ನಂಬಿಕೊಂಡು ಬಂದಿರುವವರು ಇತ್ತ ವೃತ್ತಿಯನ್ನು ಬಿಡಲೂ ಆಗದೆ,ಅತ್ತ ಬೇರೆ ಕಸಬನ್ನೂ ಮಾಡಲಾಗದೆ ಸಂದಿಗ್ಧ ಪರಿಸ್ಥಿತಿಯಲ್ಲಿದ್ದಾರೆ.ಈಗ ಬಿದಿರನ್ನು ನಂಬಿ ಬದುಕುತ್ತಿರುವ ಮೇದರರ ಬದುಕು ಮಾತ್ರ ದುಸ್ತರವಾಗುತ್ತಿದೆ.ತಮ್ಮ ದಿನನಿತ್ಯದ ಕಾಯಕವಾದ ಹಾಗೂ ಕುಲ ವೃತ್ತಿಯಾದ ಬಿದಿರಿನಿಂದ ನಾನಾ ವಸ್ತುಗಳನ್ನು ತಯಾರಿಸುವಲ್ಲಿ ನಿರತರಾಗಿದ್ದು,ಅದಕ್ಕೆ ಆರ್ಥಿಕವಾಗಿ ಬ್ಯಾಂಕಿನ ಸಹಕಾರ ಸಿಕ್ಕರೂ ಮಾರುಕಟ್ಟೆ ದಿನೇ ದಿನೆ ಕ್ಷೀಣಿಸುತ್ತಿದೆ.ಬಿದಿರಿನ ನಾನಾ ವಸ್ತುಗಳನ್ನು ತಯಾರಿಸುವವರು ಸ್ವಸಹಾಯ ಗುಂಪುಗಳನ್ನು ರಚಿಸಿಕೊಂಡು ಬ್ಯಾಂಕಿನಿಂದ ಸಾಲ ಪಡೆದು,ಬಿದಿರು ಸಿಗುವ ರಾಜ್ಯಗಳಿಗೆ ಹೋಗಿ ಬಿದಿರಿನ ಬೊಂಬುಗಳನ್ನು ಖರೀದಿಸುವ ಮೂಲಕ ತಮ್ಮ ಆರ್ಥಿಕಾಭಿವೃದ್ಧಿಯನ್ನು ಹೆಚ್ಚಿಸಿಕೊಂಡಿದ್ದರು.ತಾವು ತಯಾರಿಸಿದ ಬಿದಿರಿನ ವಸ್ತುಗಳನ್ನು ಕೆಲವು ಸದಸ್ಯರಿಗೆ ರಿಯಾಯಿತಿ ದರದಲ್ಲಿ ನೀಡಿ ಸಂತೆ,ಜಾತ್ರೆಗಳಲ್ಲಿ ಮಾರಾಟಕ್ಕೆ ಕಳುಹಿಸುವ ವ್ಯವಸ್ಥೆ ಕಲ್ಪಿಸಿಕೊಂಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಕಾರ್ಯದರ್ಶಿ ಮಹೇಶ್,ನಿರ್ದೇಶಕರುಗಳಾದ ಯಶೋಧರ, ಉಮೇಶ್, ಶಿವಕುಮಾರ್ ,ಸುಂದರರಾಜು,ಸಂತೋಷ್ ಹಾಗು ಸಂಘದ ಸದಸ್ಯರುಗಳು ಹಾಜರಿದ್ದರು.ನಿರೂಪಣೆ ಕೇಬಲ್ ವಿಜಯಕುಮಾರ್ ಮಾಡಿದರೆ,ಪ್ರಾರ್ಥನೆ‌ಯನ್ನು ಸರಸ್ವತಿ,ಪುಷ್ಪ ನಡೆಸಿಕೊಟ್ಟರು.

—————————–-ರವಿಕುಮಾರ್

Leave a Reply

Your email address will not be published. Required fields are marked *

× How can I help you?