ಬೇಲೂರು-ಡಾ.ಅಂಬೇಡ್ಕರ್‌ರವರ ಆಶಯದಂತೆ ನಾವೆಲ್ಲರೂ ಬೌದ್ಧ ಧಮ್ಮವನ್ನು ಒಪ್ಪಿಕೊಂಡು ಅವರ ಮಾರ್ಗದಲ್ಲಿ ನಡೆದರೆ ಮಾತ್ರ ನಿಜವಾಗಿಯೂ ಬಾಬಾ ಸಾಹೇಬರ ಅನುಯಾಯಿಗಳು ಎಂದು ಹೇಳಿಕೊಳ್ಳಲು ಅರ್ಹರಾಗುತ್ತೇವೆ ಎಂದು ಭಾರತೀಯ ಬೌದ್ಧ ಮಹಾಸಭಾ ಹಾಸನ ಜಿಲ್ಲಾಧ್ಯಕ್ಷ ಎಚ್.ಟಿ.ಬಸವರಾಜು ಹೇಳಿದರು.
ಭಾರತೀಯ ಬೌದ್ಧ ಮಹಾಸಭಾದಿಂದ ಪಟ್ಟಣದ ವಿದ್ಯಾ ವಿಕಾಸ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಬೇಲೂರು ತಾಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಭಾರತೀಯ ಬೌದ್ಧ ಮಹಾಸಭವು ನಮ್ಮೆಲ್ಲರ ವಿಮೋಚಕರಾದ ಡಾ.ಅಂಬೇಡ್ಕರ್‌ರವರು ಸ್ಥಾಪಿಸಿದ ಧಾರ್ಮಿಕ ಸಂಸ್ಥೆಯಾಗಿದೆ.ಈ ಸಂಸ್ಥೆಯು ಭಾರತದಾದ್ಯಂತ ಕಾರ್ಯನಿ ರ್ವಹಿಸುತ್ತಿದ್ದು, ಸಂಸ್ಥೆಯ ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷರಾದ ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಮೊಮ್ಮಗ ಡಾ.ಯಶ್ವಂತ ರಾವ್ ಅಂಬೇಡ್ಕರ್‌ರವರು ಈಗ ಅಧ್ಯಕ್ಷರಾಗಿದ್ದಾರೆ.
ಸಂಸ್ಥೆ ಅಂಬೇಡ್ಕರ್ ಸಾಹೇಬರೇ ರಚಿಸಿದ ಬೈಲ ಹೊಂದಿದ್ದು ಮೂಲ ಬೈಲದಂತೆಯೇ ಕಾರ್ಯ ಚಟುವಟಿಕೆಗಳು ನಡೆಯುತ್ತಿವೆ ಎಂದರು.
ಭಾರತೀಯ ಬೌದ್ಧ ಮಹಾಸಭಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಮಾರ್ ಗೌರವ್ ಮಾತನಾಡಿ, ಭಾರತದಲ್ಲಿ ಯಾವುದೇ ವ್ಯಕ್ತಿಯನ್ನು ಆತನ ಜಾತಿ, ಧರ್ಮದ ಮೂಲಕ ಗುರುತಿಸುತ್ತಾರೆ. ಜತೆಗೆ ಎಲ್ಲ ಧರ್ಮದವರು ಅವರ ಐಡೆಂಟಿಟಿಯನ್ನು ಹೆಮ್ಮೆಯಿಂದ ಹೇಳಿ ಕೊಳ್ಳುತ್ತಾರೆ. ಆದರೆ ಶ್ರೇಣಿಕೃತ ಜಾತಿ ವ್ಯವಸ್ಥೆಯಲ್ಲಿ ಅಸ್ಪೃಶ್ಯರು ಜಾತಿ ಹೇಳಲು ಹಿಂಜರಿಯುತ್ತಾರೆ. ಆದ್ದರಿಂದ ಡಾ.ಅಂಬೇಡ್ಕರ್ ನೀಡಿರುವ ಬೌದ್ಧ ಧರ್ಮವನ್ನು ಅನುಸರಿಸಿ ನಡೆದರೆ ನಾವೆಲ್ಲಾ ಬೌದ್ಧರೆಂದು ಹೆಮ್ಮೆಯಿಂದ ಹೇಳಿಕೊಳ್ಳಲು ಪ್ರತಿ ಮನೆಯಲ್ಲೂ ಬೌದ್ಧ ಧಮ್ಮವನ್ನು ಅನುಸರಿಸಬೇಕು ಎಂದು ಕರೆ ನೀಡಿದರು.
ಈ ನಿಟ್ಟಿನಲ್ಲಿ ಬುದ್ಧ ಧಮ್ಮವನ್ನು ಮನೆ ಮನೆಗೂ ತಲುಪಿಸಲು ನಾವೆಲ್ಲರೂ ಒಂದಾಗಿ ಕೆಲಸ ಮಾಡಬೇಕು. ಬೇರೆ ಬೇರೆ ಬುದ್ಧ ವಿಹಾರಗಳಲ್ಲಿ ಸಂಘ ಸಂಸ್ಥೆಗಳಲ್ಲಿ ಕೆಲಸ ಮಾಡುತಿದ್ದರೂ, ಮಾತೃ ಸಂಸ್ಥೆಯಾಗಿ ನಾವೆಲ್ಲರೂ ಭಾರತೀಯ ಬೌದ್ಧ ಮಹಾಸಭಾದಡಿ ಕೆಲಸ ಮಾಡೋಣ ಎಂದರು.
ಬೌದ್ಧ ಮಹಾಸಭಾ ಹಿರಿಯ ಮುಖಂಡ ವೀರಭದ್ರಯ್ಯ ಮಾತನಾಡಿ, ಪ್ರತಿಯೊಂದು ಗ್ರಾಮಕ್ಕೂ ಒಬ್ಬ ದಮ್ಮಚಾರಿ, ಉಪಾಸಕ ಮತ್ತು ಬುದ್ಧ ವಿಹಾರ ವಿರಬೇಕೆಂಬ ನಿಟ್ಟಿನಲ್ಲಿ ಎಲ್ಲರೂ ಬೌದ್ಧ ಮಹಾಸಭಾ ಮೂಲಕ ಬುದ್ಧ ಧಮ್ಮವನ್ನು ಮನೆ ಮನೆಗೂ ತಲುಪಿಸುವ ಕೆಲಸ ಮಾಡೋಣ ಎಂದು ಮನವಿ ಮಾಡಿಕೊಂಡರು.
ಬೇಲೂರು ತಾಲೂಕಿನ ಭಾರತೀಯ ಬೌದ್ಧ ಮಹಾಸಭಾದ ನೂತನ ತಾಲೂಕು ಅಧ್ಯಕ್ಷರಾಗಿ ಡಾ.ಎಂ.ಎಂ.ರಮೇಶ್, ಉಪಾಧ್ಯಕ್ಷರುಗಳಾಗಿ, ಬಿ.ಎಲ್.ಲಕ್ಷ್ಮಣ್, ಬಾಬು ಶಂಭುಗನಹಳ್ಳಿ, ಮಂಜುನಾಥ್ ಸಾಣೇನಹಳ್ಳಿ, ಪ್ರಧಾನ ಕಾರ್ಯದರ್ಶಿಯಾಗಿ ಚಂದ್ರಶೇಖರ್ ಗೋವಿನಹಳ್ಳಿ, ಖಜಾಂಚಿಯಾಗಿ ಪ್ರವೀಣ್ ಬೌದ್ಧ್ ಬಳದಕಲ್ಲು ಇವರನ್ನು ಸರ್ವ ಸದಸ್ಯರ ಒಪ್ಪಿಗೆ ಮೇರೆಗೆ ಆಯ್ಕೆ ಮಾಡಲಾಯಿತು.
ಗಾಂಧಾರ ಬುದ್ಧ ವಿಹಾರದ ಪ್ರಧಾನ ಕಾರ್ಯದರ್ಶಿ ವಕೀಲ ರಾಜು, ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾ ಉಪಾಧ್ಯಕ್ಷರಾದ ಆನಂದ್, ಗಂಗಾಧರ್ ಸೂರಾಪುರ, ಮುಖಂಡರಾದ ವಿರೂಪಾಕ್ಷ ರಾವಣ್, ಮಂಜುನಾಥ್ ಮೊಗಸಾವರ, ಕುಮಾರ್ ಮಾಳೆಗೆರೆ, ಹರೀಶ್ ಮೇಕೆದಾಟು, ದೇವರಾಜು, ರಂಜನ್ ಪ್ರಬುದ್, ಜಗಧೀಶ್, ಲಕ್ಷ್ಮೀನಾರಾಯಣ ಸೇರಿದಂತೆ ಇತರರಿದ್ದರು.