ಬೇಲೂರು-ಸಣ್ಣದಾಗಿ ಪ್ರಾರಂಭವಾದ ಹನುಮ ಜಯಂತಿ ಕಾರ್ಯಕ್ರಮ ಇಂದು ತಾಲೂಕು ಮಟ್ಟದ ಕಾರ್ಯಕ್ರಮವಾಗಿ ವಿಸ್ತಾರವನ್ನು ಪಡೆದುಕೊಂಡಿದೆ.ಈ ಬಾರಿ ಕಳೆದ ವರ್ಷಗಳಿಗಿಂತಲೂ ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಿ ಕಾರ್ಯಕ್ರಮದ ಜವಾಬ್ದಾರಿಗಳನ್ನು ಯುವಕರಿಗೆ ನೀಡಲಾಗಿದೆ ಎಂದು ಶ್ರೀ ವೀರಾಂಜನೇಯ ಟ್ರಸ್ಟ್ ಅಧ್ಯಕ್ಷ ಮೋಹನ್ ಕುಮಾರ್ ತಿಳಿಸಿದರು.
ವರ್ಷದಿಂದ ವರ್ಷಕ್ಕೆ ಮೆರಗನ್ನು ಹೆಚ್ಚಿಸಿಕೊಂಡು ತಾಲೂಕು ಹಬ್ಬವಾಗಿ ಮಾರ್ಪಾಟಾಗಿರುವ ಹನುಮ ಜಯಂತಿಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ಬಾರಿಯ ಹನುಮ ಜಯಂತಿಯನ್ನು ಹಬ್ಬದ ರೀತಿಯಲ್ಲಿ ಆಚರಿಸಲು ತೀರ್ಮಾನಿಸಲಾಗಿದೆ. ಪಟ್ಟಣದ ವೀರಾಂಜನೇಯ ದೇವಾಲಯದಲ್ಲಿ ಪ್ರಾರಂಭವಾದ ಹನುಮ ಜಯಂತಿ ತನ್ನ ಯಶಸ್ವಿ ಹನ್ನೊಂದು ವರ್ಷಗಳನ್ನು ಪೂರೈಸಿದ್ದು 12 ನೇ ವರ್ಷದ ಆಚರಣೆಯನ್ನು ಈ ಬಾರಿ ನಡೆಸಲಾಗುತ್ತಿದೆ.ಈ ಕಾರ್ಯಕ್ರಮಕ್ಕೆ ಪ್ರತಿಯೊಬ್ಬರ ಸಹಕಾರವು ಅಗತ್ಯವಿದ್ದು ತಮ್ಮ ಮನೆಯ ಕಾರ್ಯಕ್ರಮದಂತೆ ತಾಲೂಕಿನ ಎಲ್ಲ ಹನುಮಭಕ್ತರು ಪಾಲ್ಗೊಳಬೇಕೆಂದು ಅವರು ಕರೆ ನೀಡಿದರು.
ವಿಶ್ವ ಹಿಂದೂ ಪರಿಷತ್ ನ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಸಕಲೇಶಪುರ ರಘುಜೀ ಮಾತನಾಡಿ,ಹನುಮ ಜಯಂತಿ ಎಂದರೆ ಹಿಂದೂಗಳ ಪವಿತ್ರ ಹಬ್ಬ.ದೇಶದಲ್ಲಿ ಮಾತ್ರವಲ್ಲದೆ ಹೊರದೇಶದಲ್ಲಿ ಹನುಮ ಜಯಂತಿಯನ್ನು ವಿಶೇಷವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ತಾಲೂಕಿನ ಪ್ರತಿಯೊಬ್ಬ ಹಿಂದೂ ಬಾಂಧವರು ನಮ್ಮ ಜಯಂತಿ ಎಂದು ಭಾವಿಸಿ ಕೈಜೋಡಿಸುವುದರ ಜೊತೆಗೆ ಮಾತ ಭಗೀನಿಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಇದು ಒಂದು ಜಾತಿ ಒಂದು ಧರ್ಮದ ಹಬ್ಬವಲ್ಲ.ಇದು ತಾಲೂಕಿನ ಹಬ್ಬ.2 ಲಕ್ಷಕ್ಕೂ ಹೆಚ್ಚು ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು.ನಮ್ಮ ಸನಾತನ ಸಂಸ್ಕೃತಿಯನ್ನು ಯುವ ಜನಾಂಗಕ್ಕೆ ತಲುಪಿಸಲು ಸಹಕರಿಸಬೇಕು ಎಂದು ತಿಳಿಸಿದರು.
ಅಂದಿನ ದಿನ ಎಲ್ಲಾ ವರ್ತಕರು ಉತ್ಸವ ಹೋಗುವ ಸಂದರ್ಭದಲ್ಲಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಹನುಮನೆಡೆಗಿನ ತಮ್ಮ ಭಕ್ತಿಯನ್ನು ಪ್ರದರ್ಶಿಸಬೇಕು ಎಂದು ರಘು ಜಿ ಮನವಿ ಮಾಡಿದರು.
ಉತ್ಸವ ಸಮಿತಿಯ ಸದಸ್ಯ ನಾಗೇನಹಳ್ಳಿ ಸಂತೋಷ್ ಮಾತನಾಡಿ,ಇದೇ ಡಿಸೆಂಬರ್ 21 ರಂದು ನಡೆಯುವ ಅದ್ದೂರಿ ಹನುಮ ಜಯಂತಿ ಸಂಬಂಧ ತಾಲೂಕಿನ ಹನುಮ ಭಕ್ತರ ಪೂರ್ವ ಭಾವಿ ಸಭೆ ಕರೆದು ಒಂದೇ ಕಡೆ ಹನುಮ ಜಯಂತಿಯನ್ನು ಆಚರಿಸಲು ನಿರ್ಧರಿಸಲಾಗಿದೆ.
ಉತ್ಸವ ಸಮಿತಿಯ ಸಂಚಾಲಕರನ್ನಾಗಿ ಸಂತೋಷ್ ಬೋರೇಗೌಡ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಿದ್ದು,ಅವರ ಜೊತೆಯಲ್ಲಿ ತಾಲೂಕಿನ ಎಲ್ಲಾ ಭಾಗಗಳಲ್ಲಿ ಸಮಿತಿಯ ಉಪಸಂಚಾಲಕರನ್ನಾಗಿ ಹಲವರನ್ನು ನೇಮಕ ಮಾಡಲಾಗಿದೆ.ಜಯಂತಿಯನ್ನು ಹಿರಿಯರ ಮಾರ್ಗದರ್ಶನದಲ್ಲಿ ಕಿರಿಯರು ಮುಂದುವರೆಸಿಕೊಂಡು ಹೋಗಲಿದ್ದಾರೆ ಎಂದರು.
ಮೆರವಣಿಗೆ ಸಮಿತಿ,ಪ್ರಚಾರ ಸಮಿತಿ ಸೇರಿದಂತೆ ಎಲ್ಲಾ ಸಮಿತಿಗಳನ್ನು ಅಯ್ಕೆ ಮಾಡಿಕೊಂಡು ಕಾರ್ಯಕ್ರಮದ ಸಂದರ್ಭ ಯಾವುದೇ ರೀತಿಯ ಲೋಪದೋಷವಾಗದಂತೆ ಮುಂಜಾಗ್ರತ ಕ್ರಮ ಕೈಗೊಳ್ಳಲಾಗಿದೆ.ಪ್ರತಿ ಗ್ರಾಮಗಳಿಗೆ ತೆರಳಿ ಉತ್ಸವದಲ್ಲಿ ಭಾಗವಹಿಸಲು ಕರಪತ್ರ ಹಂಚುವುದರ ಜೊತೆಗೆ ಹಸಿರು ತೋರಣ ಹಾಗೂ ಕೇಸರಿ ಭಾಗವಾಧ್ವಜಗಳೊಂದಿಗೆ ಪಟ್ಟಣ ಸೇರಿದಂತೆ ಗ್ರಾಮಗಳನ್ನು ಸಿಂಗರಿಸಲು ತೀರ್ಮಾನಿಸಲಾಗಿದ್ದು,ಸಾರ್ವಜನಿಕರು ಸಹಕರಿಸುವಂತೆ ಕೋರಿಕೊಂಡರು.
ನಗರದ ಮಂಜುನಾಥ ಕಲ್ಯಾಣ ಮಂಟಪದಲ್ಲಿ ನಡೆದ ಸಭೆಯಲ್ಲಿ ಟ್ರಸ್ಟ್ ನ ಸದಸ್ಯರುಗಳಾದ ನಿರ್ವಾಣಶೆಟ್ಟಿ,ಮಂಜೇಗೌಡ,ಬಾಬಣ್ಣ,ಕರವೇ ಅಧ್ಯಕ್ಷ ಚಂದ್ರಶೇಖರ್, ರಂಗನಾಥ್, ಮಂಜುನಾಥ್,ಅನಂತ ರಾಜ್ ಅರಸ್,ಕರವೇ ತಾರನಾಥ್,ಉತ್ಸವ ಸಮಿತಿ ತಾಲೂಕು ಸಂಚಾಲಕ ಸಂತೋಷ್,ಇತರರು ಹಾಜರಿದ್ದರು.