ಬೇಲೂರು-ಶಾಸಕ ಹುಲ್ಲಳ್ಳಿ ಸುರೇಶ್ ರವರಿಗೆ ರೈತರ ಮೇಲೆ ಕಾಳಜಿಯಿಲ್ಲ.ತಾಲೂಕಿನಾದ್ಯಂತ ನಡೆಯುತ್ತಿರುವ ಕಾಡಾನೆಗಳು ಮತ್ತು ಮಾನವನ ನಡುವಿನ ಸಂಘರ್ಷಕ್ಕೆ ಪರಿಹಾರ ನೀಡದೆ ಕೇವಲ ಸುಳ್ಳು ಆಶ್ವಾಸನೆಗಳ ಮೂಲಕ ಕಾಲಹರಣ ಮಾಡುತ್ತಿದ್ದಾರೆಂದು ತಾಲ್ಲೂಕು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷರಾದ ಅದ್ದೂರಿ ಚೇತನ್ ಕುಮಾರ್ ಕಿಡಿಕಾರಿದರು.
ತಾಲೂಕಿನ ತಗರೆ ಗ್ರಾಮದ ಬಳಿ ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ನೀಡುವಂತೆ ಆಗ್ರಹಿಸಿ ಕರ್ನಾಟಕ ರೈತ ಸಂಘ,ತಾಲ್ಲೂಕು ಕಾಫಿ ಬೆಳೆಗಾರರ ಸಂಘ ದ ವತಿಯಿಂದ ಹಮ್ಮಿಕೊಳ್ಳ ಲಾಗಿದ್ದ ರಸ್ತೆತಡೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಾಡಾನೆಗಳ ಹಾವಳಿಯಿಂದ ಕಾಫೀ ಬೆಳೆಗಾರರು ಹಾಗು ರೈತರು ಸಾಕಷ್ಟು ನಷ್ಟಗಳನ್ನು ಪ್ರಾಣಹಾನಿಗಳನ್ನು ಅನುಭವಿಸುತ್ತಿದ್ದರು ಇದಕ್ಕೆ ಪರಿಹಾರ ನೀಡಬೇಕಾದ ಶಾಸಕರು ಮಗುಮ್ಮಾಗಿರುವುದು ನಮಗೆ ಬೇಸರ ತರಿಸಿದೆ.ಅರಣ್ಯ ಇಲಾಖೆ ಇದ್ದರು ಇಲ್ಲದಂತಿದ್ದು ಅಧಿಕಾರಿಗಳು ಆನೆಗಳ ಹಿಂದೆ ಜಾಲೀ ಟ್ರಿಪ್ ನಡೆಸಿಕೊಂಡು ಆನೆಗಳ ಹೆಸರಿನಲ್ಲಿ ಹಣವನ್ನು ಲೂಟಿ ಹೊಡೆಯುತ್ತಾ ಕಾಲಹರಣ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.
ಕಳೆದ ಐದು ತಿಂಗಳಿಂದ ಬೇಲೂರು ತಾಲ್ಲೂಕಿನ ಅರೇಹಳ್ಳಿ ಮತ್ತು ಬಿಕ್ಕೋಡು ಹೋಬಳಿ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ.ಸುಮಾರು 25 ಕ್ಕೂ ಹೆಚ್ಚಿನ ಕಾಡಾನೆಗಳು ಸಾವಿರಾರು ಎಕರೆ ಮುಸುಕಿನ ಜೋಳ,ಅಡಿಕೆ,ತೆಂಗು,ಬಾಳೆ, ಕಾಫಿ, ಮೆಣಸು,ಏಲಕ್ಕಿ ಮತ್ತು ಭತ್ತವನ್ನು ಸಂಪೂರ್ಣ ನಾಶಮಾಡಿವೆ.
ಗ್ರಾಮಗಳಿಗೆ ನುಗ್ಗಿದ ಪುಂಡಾನೆಗಳು ಕೂಲಿಕಾರ್ಮಿಕರ ಮೇಲೆ ಹಲ್ಲೆ ನಡೆಸಿ ಪ್ರಾಣ ಹಾನಿಮಾಡಿವೆ.ಸಮಸ್ಯೆ ಬಗೆಹರಿಸುವುದ ಬಿಟ್ಟು ಇಲ್ಲಿನ ಅರಣ್ಯಾಧಿಕಾರಿಗಳು ಉಡಾಪೆಯಿಂದ ವರ್ತಿಸುತ್ತಾ ಕಾಲಹರಣ ಮಾಡುತ್ತಿದ್ದಾರೆ ಎಂದು ಸರ್ಕಾರ ಮತ್ತು ಅಧಿಕಾರಿಗಳ ವಿರುದ್ಧ ವಾಗ್ದಾಳಿ ನಡೆಸಿದ ಅವರು ಹಾಸನದ ಅರಣ್ಯಾಧಿಕಾರಿಗಳ ಸ್ಥಳಕ್ಕೆ ಬಂದು ಶಾಶ್ವತ ಪರಿಹಾರ ನೀಡುವ ತನಕ ರಸ್ತೆತಡೆ ನಡೆಸಲಾಗುತ್ತದೆ ಎಂದು ಹೇಳಿದರು.
ಬೇಲೂರು ಶಾಸಕರು ವಾರದಲ್ಲಿ ಕಾಡಾನೆ ಸ್ಥಳಾಂತರ ಬಗ್ಗೆ ಭರವಸೆ ನೀಡಿ ಈಗ ಸದ್ದಿಲ್ಲದಂತಾಗಿದ್ದರೆ,ಮಾಜಿ ಸಚಿವ ಬಿ.ಶಿವರಾಂ ಪಾದಯಾತ್ರೆ ನಡೆಸುವುದಾಗಿ ಹೇಳಿ ಕಾಣೆಯಾಗಿದ್ದಾರೆ.
ನಮ್ಮ ಸಂಕಷ್ಟವನ್ನು ಯಾರ ಬಳಿ ಹೇಳುವುದು.ಒಂದೋ ಕಾಡಾನೆಗಳ ಸ್ಥಳಾಂತರಿಸಲಿ ಸಾಧ್ಯವಾಗದೆ ಹೋದಲ್ಲಿ ಮಲೆನಾಡಿಗರನ್ನೇ ಸೂಕ್ತ ಪರಿಹಾರದೊಂದಿಗೆ ಸ್ಥಳಾಂತರಿಸಲು ಸರಕಾರ ಮುಂದಾಗಲಿ ಎಂದು ಅದ್ದೊರಿ ಚೇತನ್ ಮನವಿ ಮಾಡಿಕೊಂಡರು.
ರೈತ ಸಂಘದ ಭೋಗ ಮಲ್ಲೇಶ್ ಮಾತನಾಡಿ, ಇಂದು ಸಾಂಕೇತಿಕವಾಗಿ ಈ ರಸ್ತೆ ತಡೆ ನಡೆಸಿದ್ದು ಈಗಲಾದರೂ ಎಚ್ಚೆತ್ತುಕೊಂಡು ಕಾಡಾನೆಗಳ ಸ್ಥಳಾಂತರಕ್ಕೆ ಸಂಬಂಧಿಸಿದವರು ಮುಂದಾಗದೆ ಹೋದಲ್ಲಿ ಮುಂದಿನ ದಿನಗಳಲ್ಲಿ ಪರಿಹಾರ ದೊರೆಯುವವರೆಗೂ ಅನಿರ್ದಿಷ್ಟಾವಧಿ ಹೋರಾಟ ನಡೆಸುವ ಎಚ್ಚರಿಕೆಯನ್ನು ನೀಡಿದರು.
ಯಾರ ಮಾತಿಗೂ ಬಗ್ಗದೆ ಎರಡು ಸಂಘಗಳ ಪದಾಧಿಕಾರಿಗಳು ರೈತರ ಜೊತೆಗೂಡಿ ನಡೆಸಿದ ಎರಡು ಗಂಟೆಗಳ ಕಾಲದ ರಸ್ತೆ ತಡೆಯಿಂದ ಕಿಲೋಮೀಟರ್ಗಟ್ಟಲೆ ವಾಹನಗಳು ನಿಂತಿದ್ದವು.
ಈ ಸಂದರ್ಭದಲ್ಲಿ ರೈತ ಸಂಘ ಮತ್ತು ಕಾಫಿ ಬೆಳೆಗಾರರ ಸಂಘದ ಮುಖಂಡರಾದ ತೀರ್ಥಮಲ್ಲೇಶ,ಸಂಜು ಕೌರಿ, ಕುಮಾರಣ್ಣ, ಧರ್ಮಪಾಲ್, ಧರ್ಮೇಗೌಡ, ರಮೇಶ್, ಶಿವಣ್ಣ ಮೊಗಸವಾರ, ಪೈಂಟರ್ ರವಿ, ಪುಪ್ಪೇಗೌಡ, ಬಸವರಾಜು, ಮಲ್ಲಿಕಾರ್ಜುನ, ಚಂದ್ರಶೇಖರ, ಶಿವೇಗೌಡ ಗೋವಿಂದಶೆಟ್ಟಿ, ಶಂಭುಲಿಂಗೇಗೌಡ ಇನ್ನೂ ಮುಂತಾದವರು ಹಾಜರಿದ್ದರು.
——————-—ಲೋಹಿತ್