ಬೇಲೂರು-ತಾಲೂಕಿನ ಕಾಡಾನೆ ಸಮಸ್ಯೆಯ ಬಗ್ಗೆ ಸದನದಲ್ಲಿ ಧ್ವನಿ ಎತ್ತಿದ್ದೇನೆ-ತಾರ್ಕಿಕ ಅಂತ್ಯ ಸಿಗುವವರೆಗೂ ನನ್ನ ಹೋರಾಟ ನಿಲ್ಲದು-ಹೆಚ್.ಕೆ ಸುರೇಶ್ ಭರವಸೆ

ಬೇಲೂರು-ತಾಲೂಕಿನ ಕಾಡಾನೆಗಳ ಹಾವಳಿ,ಬೆಳೆ ನಷ್ಟವಾಗಿ ರೈತರು ಅನುಭವಿಸುತ್ತಿರುವ ಯಾತನೆ ಹಾಗು ಜೀವಗಳ ಹಾನಿಯ ಬಗ್ಗೆ ಸದನದಲ್ಲಿ ಸರಕಾರದ ಗಮನ ಸೆಳೆದಿದ್ದು ಜೊತೆಗೆ ಅರಣ್ಯ ಸಚಿವರನ್ನು ಭೇಟಿ ಮಾಡಿ ಶಾಶ್ವತ ಪರಿಹಾರಕ್ಕಾಗಿ ಮನವಿ ಸಲ್ಲಿಸಿರುವುದಾಗಿ ಶಾಸಕ ಹೆಚ್.ಕೆ ಸುರೇಶ್ ತಿಳಿಸಿದರು.

ಅವರು ತಾಲೂಕಿನ ಬಿಕ್ಕೋಡು ಹೋಬಳಿಯ ಹಿರೆಕೋಲೆ,ತಗರೆ ಇನ್ನಿತರ ಗ್ರಾಮಗಳಲ್ಲಿ ಆನೆಗಳ ದಾಳಿಯಿಂದ ಬೆಳೆ ನಷ್ಟವಾಗಿರುವ ಸ್ಥಳಗಳಿಗೆ ಬೇಟಿ ನೀಡಿ ಅರಣ್ಯ ಇಲಾಖೆ ಅಧಿಕಾರಿಗಳ ಜೊತೆ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿದರು.

ಕಾಡಾನೆಗಳು ಬಿಕ್ಕೋಡು ಭಾಗಗಳಲ್ಲಿ ಕಟಾವಿಗೆ ಬಂದಂತ ಭತ್ತ,ಜೋಳ ಹಾಗೂ ತೆಂಗನ್ನು ಸಂಪೂರ್ಣ ಹಾನಿಮಾಡಿದ್ದು ರೈತರಿಗೆ ನೀವು ನೀಡುವ ಕನಿಷ್ಟ ಪರಿಹಾರ ಬೇಡ.ಆ ಬೆಳೆಗೆ ತಕ್ಕನಾದ ಪರಿಹಾರ ನೀಡುವಂತೆ ಅವರು ಸರಕಾರವನ್ನು ಆಗ್ರಹಿಸಿದರು.

ಲಕ್ಷಾಂತರ ರೂಪಾಯಿಗಳನ್ನು ರೈತ ಬೆಳೆ ಬೆಳೆಯಲು ಖರ್ಚುಮಾಡಿರುತ್ತಾನೆ.ಸರಕಾರ ಕನಿಷ್ಠ ಪ್ರಮಾಣದ ಪರಿಹಾರ ನೀಡಿ ಕೈ ತೊಳೆದುಕೊಳ್ಳುತ್ತೆ.ಸಾಲ-ಸೂಲ ಮಾಡಿ ಬೆಳೆ ಬೆಳೆದ ರೈತ ಏನು ಮಾಡಬೇಕು ಎಂದು ಪ್ರಶ್ನಿಸಿದ ಅವರು ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಲು ಸರಕಾರದ ಇಂತಹ ನೀತಿಗಳೇ ಕಾರಣವಾಗುತ್ತವೆ ಎಂದು ಬೇಸರ ಹೊರಹಾಕಿದರು.

ಪರಿಹಾರಕ್ಕೆ ಸಂಬಂಧ ಪಟ್ಟಂತೆಯೂ ನಾನು ಸದನದಲ್ಲಿ ಹಾಗು ಅರಣ್ಯ ಸಚಿವರ ಜೊತೆ ಚರ್ಚಿಸಿದ್ದು ವೈಜ್ಞಾನಿಕ ಪರಿಹಾರ ನೀಡುವಂತೆ ಆಗ್ರಹಿಸಿರುವುದಾಗಿ ಶಾಸಕರು ತಿಳಿಸಿದರು.

ಸದ್ಯ ಬೆಳೆ ಪರಿಹಾರಕ್ಕಾಗಿ ರೈತರ 852 ಅರ್ಜಿಗಳು ಬಾಕಿ ಉಳಿದಿದ್ದು ಅವುಗಳನ್ನು ವಿಲೇವಾರಿ ಮಾಡಿ ಇನ್ನೊಂದು ವಾರದಲ್ಲಿ ಪರಿಹಾರ ಬಿಡುಗಡೆ ಮಾಡುವಂತೆ ಸ್ಥಳದಲ್ಲಿ ಹಾಜರಿದ್ದ ವಲಯ ಅರಣ್ಯ ಅಧಿಕಾರಿ ಯತೀಶ್ ರವರಿಗೆ ಸೂಚಿಸಿದ ಅವರು,ನಮ್ಮ ಭಾಗಕ್ಕೆ ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳಿಂದ ಆನೆಗಳನ್ನು ಓಡಿಸುತ್ತಿರುವುದರಿಂದ ಇಷ್ಟೊಂದು ತೊಂದರೆಯಾಗುತ್ತಿದೆ.ಇದಕ್ಕೊಂದು ತಾರ್ಕಿಕ ಅಂತ್ಯ ಸಿಗುವವರೆಗೂ ಸರಕಾರದ ಮಟ್ಟದಲ್ಲಿ ಹೋರಾಟ ನಡೆಸುವುದಾಗಿ ಭರವಸೆ ನೀಡಿದರು.

ವಲಯ ಅರಣ್ಯ ಅಧಿಕಾರಿ ಯತೀಶ್ ಮಾತನಾಡಿ,ಆನೆಗಳು ಎರಡು ತಂಡಗಳಾಗಿ ವಿಂಗಡಣೆಯಾಗಿದ್ದು ಈಗಾಗಲೇ ಒಂದು ತಂಡ ಮೂಡಿಗೆರೆ ಮೂಲಕ ಹಾದು ಹೋಗಿದೆ.ಇನ್ನೊಂದು ತಂಡದಲ್ಲಿ 17 ಆನೆಗಳಿದ್ದು ಅವನ್ನು ಸಹ ಇನ್ನೆರಡು ದಿನಗಳಲ್ಲಿ ಹೊರಕಳಿಸಲಾಗುವುದು.ಶಾಸಕರ ಸೂಚನೆಯಂತೆ ಬಾಕಿ ಉಳಿದಿರುವ ಅರ್ಜಿಗಳನ್ನು ವಿಲೇವಾರಿ ಮಾಡಿ ರೈತರ ಖಾತೆಗಳಿಗೆ ಪರಿಹಾರವನ್ನು ಜಮಾ ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಗ್ರಾಮಸ್ಥರು ಹಾಜರಿದ್ದರು.

Leave a Reply

Your email address will not be published. Required fields are marked *

× How can I help you?