ಬೇಲೂರು-ನಗರದಲ್ಲಿ ಕಳ್ಳರು ಕೈಚಳಕ ತೋರಿದ್ದು,1 .5ಲಕ್ಷಕ್ಕೂ ಅಧಿಕ ಮೌಲ್ಯದ ಸಾಮಗ್ರಿ,ಹಣ ದರೋಡೆ ಮಾಡಿದ್ದಾರೆ.
ಮೂಡಿಗೆರೆ ರಸ್ತೆಯಲ್ಲಿರುವ ಕುವೆಂಪು ನಗರದ ಶ್ರೀ ಸೌಮ್ಯ ಕೇಶವ ಕಲ್ಯಾಣ ಮಂಟಪದ ಎದುರಿನ ಆಶೀರ್ವಾದ ಹಾರ್ಡವೆರ್ ಮತ್ತು ಎಲೆಕ್ಟ್ರಾನಿಕ್ಸ್ ಅಂಗಡಿಯಲ್ಲಿ ಮಂಗಳವಾರ ಮಧ್ಯರಾತ್ರಿ ಸುಮಾರು 1.30 ರ ಸಮಯದಲ್ಲಿ ಹಾರೆಯಿಂದ ಕಬ್ಬಿಣದ ಶಟರ್ ಅನ್ನು ಮೀಟಿ ಒಳನುಗ್ಗಿರುವ ಖದೀಮರು,ಸಿ.ಸಿ ಕ್ಯಾಮರಾ ಒಡೆದು ಹಾಕಿ,ಪ್ರಸಿದ್ಧ ಕಂಪನಿಯ ನೀರಿನ ನಲ್ಲಿಗಳು,ಮೋಟರುಗಳು,ಸೇರಿದಂತೆ 1.50 ಲಕ್ಷಕ್ಕೂ ಆದಿಕ ಬೆಲೆ ಬಾಳುವ ಎಲೆಕ್ಟ್ರಿಕ್ ವಸ್ತುಗಳು ಹಾಗು ಹದಿನೈದು ಸಾವಿರಾರು ರೂಪಾಯಿ ನಗದನ್ನು ದೋಚಿ ಪರಾರಿಯಾಗಿದ್ದಾರೆ.
ಅಂಗಡಿ ಮಾಲೀಕ ಮಧು ಮಾತನಾಡಿ,ಎಂದಿನಂತೆ ನಾನು ಸುಮಾರು 9 ಗಂಟೆಗೆ ಬಾಗಿಲನ್ನು ಹಾಕಿ ಸರಿಯಾಗಿ ಲಾಕ್ ಆಗಿರುವುದನ್ನು ದ್ರಢಪಡಿಸಿಕೊಂಡು ಮನೆಗೆ ತೆರಳಿದ್ದೆ.ಬೆಳಗ್ಗೆ ನನ್ನ ಸ್ನೇಹಿತರ ಕಡೆಯಿಂದ ಬಾಗಿಲನ್ನು ಒಡೆದಿರುವ ಮಾಹಿತಿ ತಿಳಿದ ತಕ್ಷಣ ನಾನು ಸ್ಥಳಕ್ಕೆ ಬಂದು ನೋಡಿ ದಿಗ್ಬ್ರಮೆಗೊಂಡೆ.ಬೇಲೂರು ಪೊಲೀಸ್ ಠಾಣೆಗೆ ಮಾಹಿತಿ ತಿಳಿಸಿದೆ,ಪೊಲೀಸರು ಸಮಯಕ್ಕೆ ಸರಿಯಾಗಿ ಬಂದು ಸ್ಥಳ ಪರಿಶೀಲನೆ ಮಾಡಿ ಮಾಹಿತಿ ಪಡೆದುಕೊಂಡು ಮುಂದಿನ ತನಿಖೆ ಆರಂಭಿಸಿದ್ದಾರೆ.ಕಳ್ಳರನ್ನು ಹಿಡಿದು ನನಗೆ ನ್ಯಾಯ ದೊರಕಿಸಬೇಕೆಂದು ಮನವಿ ಮಾಡಿದ್ದೇನೆ ಎಂದರು.
ಬೇಲೂರಿನಲ್ಲಿ ಸಣ್ಣಪುಟ್ಟ ಕಳ್ಳತನ ಪ್ರಕರಣಗಳು ವರದಿಯಾಗುತ್ತಿದ್ದವಾದರೂ ಮುಖ್ಯ ರಸ್ತೆಯಲ್ಲಿನ ಅಂಗಡಿಯನ್ನೇ ದೋಚಿರುವುದು ಇದೆ ಮೊದಲ ಪ್ರಕರಣ ಎನ್ನಬಹುದು.
ದುಷ್ಟ ಶಕ್ತಿಗಳಿಗೆ ಪೋಲೀಸರ ಮೇಲೆ ಭಯ ಇಲ್ಲದಾಗಿರುವುದು,ಗಸ್ತು ಪೋಲೀಸರ ನಿರ್ಲಕ್ಷವೂ ಸೇರಿದಂತೆ ಈ ಘಟನೆಗೆ ಹಲವು ಕಾರಣಗಳನ್ನು ಸಾರ್ವಜನಿಕರ ವಲಯದಲ್ಲಿ ಪಟ್ಟಿ ಮಾಡಲಾಗುತ್ತಿದೆ.
ಪುಡಿ ರೌಡಿಗಳ ಆರ್ಭಟ,ಮೀಟರ್ ಬಡ್ಡಿ ,ರಿಯಲ್ ಎಸ್ಟೇಟ್ ಮಾಫಿಯಾದಿಂದ ಸಾರ್ವಜನಿಕರು ರೋಸಿ ಹೋಗಿದ್ದು ಅದರ ಜೊತೆಗೆ ಈ ಕಳ್ಳತನ ನಡೆದಿರುವುದು ನಗರವಾಸಿಗಳ ನಿದ್ರೆ ಕೆಡುವಂತೆ ಮಾಡಿದೆ.
ಇನ್ನಾದರೂ ಖಾಕಿ ಎಲ್ಲ ಹಂತದಲ್ಲಿಯೂ ತನ್ನ ಖದರ್ ಅನ್ನು ತೋರಿಸಲು ಮುಂದಾಗುತ್ತದೆಯೇ? ಕಾದು ನೋಡಬೇಕಾಗಿದೆ.