ಬೇಲೂರು;-ಹಾಸನ ಜಿಲ್ಲೆ ಸೇರಿದಂತೆ ರಾಜ್ಯದ ವಿವಿದಡೆ ಹೊರ ರಾಷ್ಟ್ರದಿಂದ ಬಂದವರಿಗೆ ನಕಲಿ ಆಧಾರಕಾರ್ಡ್ ನೀಡುವ ಮೂಲಕ ಅವರಿಗೆ ಆಶ್ರಯ ನೀಡುತ್ತಿರುವ ಬಗ್ಗೆ ಹೆಚ್ಚು ವರದಿಗಳಿವೆ.ಈ ಬಗ್ಗೆ ಶೀಘ್ರವೇ ಸಂಬಂಧಪಟ್ಟವರು ಕ್ರಮಕೈಗೊಳ್ಳಬೇಕು.ಇಲ್ಲವಾದರೆ ನಮ್ಮ ಸಂಘಟನೆ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಸಂಬಂಧಪಟ್ಟ ಅಧಿಕಾರಿಗಳ ಕಚೇರಿಗಳ ಮುಂಭಾಗದಲ್ಲಿ ಉಗ್ರ ಹೋರಾಟ ಅನಿವಾರ್ಯವೆಂದು ಕರವೇ ರಾಜ್ಯಾಧ್ಯಕ್ಷ ಪ್ರವೀಣಶೆಟ್ಟಿ ಎಚ್ಚರಿಕೆ ನೀಡಿದರು.
ಬೇಲೂರು ಪಟ್ಟಣಕ್ಕೆ ಆಗಮಿಸಿದ್ದ ಕರವೇ ರಾಜ್ಯಾಧ್ಯಕ್ಷರು ಇಲ್ಲಿನ ಕರವೇ ಸಂಘಟನೆಯಿಂದ ಅಭಿನಂಧನೆ ಸ್ವೀಕರಿಸಿ ಸುದ್ದಿಗಾರರೊಂದಿಗೆ ಮಾತನಾಡಿ,ಹೊರದೇಶದಿಂದ ಬಂದವರಿಂದ ಮುಂದೊಮ್ಮೆ ದೇಶಕ್ಕೆ ಬಹುದೊಡ್ಡ ಅಪಾಯವಿದೆ.ಇತ್ತೀಚೆಗೆ ವಿಶ್ವದಾದ್ಯಂತ ಹಲವು ದೇಶಗಳು ವಲಸಿಗರ ಕಾರಣಕ್ಕೆ ಹೊತ್ತಿ ಉರಿದಿದ್ದನ್ನು ನಾವು ಕಂಡಿದ್ದೇವೆ.ವಲಸಿಗರಿಂದ ಈಗಾಗಲೇ ದೇಶದ ಹಲವು ಕಡೆಗಳಲ್ಲಿ ಅಪಾಯಕಾರಿ ಚಟುವಟಿಕೆಗಳು ನಡೆದುದು ವರದಿಯಾಗಿವೆ.ಆದಷ್ಟು ಶೀಘ್ರ ಆಯಾ ಜಿಲ್ಲಾಡಳಿತಗಳು,ಪೊಲೀಸ್ ಇಲಾಖೆ ಅಂತಹವರನ್ನು ಪತ್ತೆಹಚ್ಚಿ ಕೇಂದ್ರ ಸರಕಾರದ ವಶಕ್ಕೆ ಒಪ್ಪಿಸುವ ಕೆಲಸಕ್ಕೆ ಮುಂದಾಗಬೇಕು ಎಂದರು.
ನಮ್ಮ ಬೇಲೂರು ತಾಲೂಕು ಅಧ್ಯಕ್ಷರಾದ ವಿ.ಎಸ್ ಬೋಜೇಗೌಡರು ಹಾಗು ಸಂಘಟನೆಯ ಪದಾಧಿಕಾರಿಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಭೇಟಿ ಮಾಡಿ ಈ ಸಂಬಂಧ ಮನವಿಯನ್ನು ಸಲ್ಲಿಸಿದ್ದಾರೆ.ಪೊಲೀಸ್ ವರಿಷ್ಠಾಧಿ ಕಾರಿಗಳು ನಮ್ಮ ಮನವಿಯನ್ನು ಲಘುವಾಗಿ ಪರಿಗಣಿಸದೆ ಕ್ರಮಕ್ಕೆ ಮುಂದಾಗಬೇಕು.
ಮೊದಲ ಹಂತವಾಗಿ ರಾಜ್ಯದಾದ್ಯಂತ ವಲಸಿಗರ ಬಗ್ಗೆ ಜಿಲ್ಲಾಡಳಿತವನ್ನು ಎಚ್ಚರಿಸುವ ಕೆಲಸವನ್ನು ನಮ್ಮ ಸಂಘಟನೆಯ ಪದಾಧಿಕಾರಿಗಳು ಮಾಡುತ್ತಿದ್ದು,ಅಧಿಕಾರಿಗಳ ಸ್ಪಂದನೆಯನ್ನು ನೋಡಿಕೊಂಡು ಮುಂದಿನ ಹೋರಾಟದ ರೂಪುರೇಷು ಗಳನ್ನು ರಚಿಸುವುದಾಗಿ ಪ್ರವೀಣ್ ಶೆಟ್ಟಿ ತಿಳಿಸಿದರು.
ಕನ್ನಡ ಸಾಹಿತ್ಯ ಸಮ್ಮೇಳನಗಳು ಅರ್ಥ ಕಳೆದುಕೊಳ್ಳುತ್ತಿವೆ.
ಕನ್ನಡ ಸಾಹಿತ್ಯ ಸಮ್ಮೇಳನಗಳು ಇತ್ತೀಚಿನ ದಿನದಲ್ಲಿ ಕೇವಲ ಆಡಂಬರದಿಂದ ತನ್ನ ಅರ್ಥಪೂರ್ಣತೆಯನ್ನು ಕಳೆದುಕೊಳ್ಳುತ್ತಿವೆ. ಸಮ್ಮೇಳಾಧ್ಯಕ್ಷರು ವ್ಯಕ್ತಪಡಿಸುವ ನಿರ್ಣಯಗಳಿಗೆ ಸಂಬಂಧ ಪಟ್ಟ ಸರ್ಕಾರ ಕವಡೆಕಾಸಿನ ಕಿಮ್ಮತ್ತು ನೀಡುತ್ತಿಲ್ಲ,ಈ ಕಾರಣಕ್ಕೆ ಸಾಹಿತ್ಯ ಸಮ್ಮೇಳನಗಳ ಹಿರಿಮೆ ಕ್ಷೀಣಿಸುತ್ತಿದೆ ಎಂದು ಪ್ರವೀಣಶೆಟ್ಟಿ ತೀವ್ರ ಬೇಸರ ವ್ಯಕ್ತ ಪಡಿಸಿದರು.
ಕೇಂದ್ರ ಸರ್ಕಾರ ಇತ್ತೀಚಿನ ದಿನದಲ್ಲಿ ಹಿಂದಿ ಹೇರಿಕೆಗೆ ನೀಡುತ್ತಿರುವ ಒತ್ತಡದ ನಡುವೆ ಕನ್ನಡದ ಅಸ್ಮಿತೆಯನ್ನು ಎತ್ತಿಹಿಡಿಯುವ ಕೆಲಸವನ್ನು ಕನ್ನಡಪರ ಸಂಘಟನೆಗಳು ಮಾಡಬೇಕಿದೆ. ಸಮಸ್ತ ಕನ್ನಡಿಗರ ಪ್ರಾಧಿನಿಧಿಕ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ಕನ್ನಡ ಸಾಹಿತ್ಯ ಪರಿಷತ್ತು ಈ ನಿಟ್ಟಿನಲ್ಲಿ ವಿನುತ ಯೋಜನೆಗಳನ್ನು ರೂಪಿಸಬೇಕಿದೆ ಎಂದು ಆಗ್ರಹಿಸಿದರು.
ಕೇವಲ ವರ್ಷಕೊಮ್ಮೆ ಕನ್ನಡ ಸಾಹಿತ್ಯ ಸಮ್ಮೇಳನದ ಹೆಸರಿನಲ್ಲಿ ಆಡಂಬರದ ಕಾರ್ಯಕ್ರಮವನ್ನು ನಡೆಸದೆ ಕಳೆದ ಸಾಲಿನಲ್ಲಿ ಕೈಗೊಳ್ಳಲಾದ ನಿರ್ಣಯಕ್ಕೆ ಸರ್ಕಾರ ಯಾವ ರೀತಿಯಲ್ಲಿ ಸ್ಪಂದನೆ ನೀಡುತ್ತಿದೆ ಎಂಬ ಅನುಪಾತ ವರದಿ ಮೇಲೆ ಸಮ್ಮೇಳನಗಳನ್ನು ನಡೆಸುವ ನಿಟ್ಟಿನಲ್ಲಿ ಸಾಹಿತ್ಯ ಪರಿಷತ್ತು ಮುಂದಾಗಬೇಕಿದ ಎಂದು ಪ್ರವೀಣ್ ಶೆಟ್ಟಿ ಸಲಹೆ ನೀಡಿದರು.
ಮಂಡ್ಯದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾದ ಸರ್ವಾಧ್ಯಕ್ಷರು ಮಂಡಿಸಿದ ನಿರ್ಣಯಗಳನ್ನು ಕನಿಷ್ಟ ಜಾರಿ ತರುವ ಬಗ್ಗೆ ಅಲೋಚಿಸಿದರೆ ಮಾತ್ರ ಇಂತಹ ಕಾರ್ಯಕ್ರಮಗಳಿಗೆ ಮನ್ನಣೆ ಸಿಗುತ್ತದೆ. ಈ ಬಗ್ಗೆ ಕಸಾಪ ಅಧ್ಯಕ್ಷರು ಸಮಗ್ರ ಅಲೋಚನೆ ಮಾಡಬೇಕು ಎಂದು ಕಿವಿ ಮಾತು ಹೇಳಿದರು.
ಕನ್ನಡಪರ ಸಂಘಟನೆಗಳು ನಾಡು,ನುಡಿ,ಜಲದ ಜೊತೆಗೆ ರೈತಾಪಿ ವರ್ಗಗಳ ಸಮಸ್ಯೆಗಳಿಗೆ ಹೋರಾಟ ನಡೆಸುವ ಅನಿವಾರ್ಯತೆ ಇರುವ ಕಾರಣದಿಂದ ಮಲೆನಾಡು ಭಾಗದಲ್ಲಿ ಹೆಚ್ಚುತ್ತಿರುವ ಕಾಡಾನೆಗಳ ಸಮಸ್ಯೆಯಿಂದ ತತ್ತರಿಸಿದ ಕೃಷಿಕರ ಬೆಂಬಲಕ್ಕೆ ನಿಲ್ಲುವ ಪ್ರಾಮಾಣಿಕ ಕೆಲಸಕ್ಕೆ ಮುಂದಾಗಬೇಕಿದೆ.ಈಗಾಗಲೇ ಕಾಡಾನೆ ಸಮಸ್ಯೆ ಬಗ್ಗೆ ಸಕಲೇಶಪುರದಿಂದ ಹಾಸನದ ತನಕ ಪಾದಯಾತ್ರೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.ಶೀಘ್ರವೇ ಮುಖ್ಯಮಂತ್ರಿಗಳ ಗಮನ ಸೆಳೆಯಲು ಹೋರಾಟ ರೂಪಿಸಲು ಕರವೇ ಮುಂದಾಗಿದೆ. ಅರಣ್ಯ ಮಂತ್ರಿಗಳು ತಮ್ಮ ಜಾಣ ಮೌನದಿಂದ ಹೊರಬಂದು ರೈತಪರವಾಗಿ ಕೆಲಸ ಮಾಡಿ ಇಲ್ಲವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕರವೇ(ಪ್ರವೀಣಶೆಟ್ಟಿ ಬಣ) ತಾಲ್ಲೂಕು ಅಧ್ಯಕ್ಷ ವಿ.ಎಸ್.ಬೋಜೇಗೌಡ,ಕಾರ್ಯದರ್ಶಿ ಜಯಪ್ರಕಾಶ್, ಗೌರವಾಧ್ಯಕ್ಷ ಗಿರೀಶ್, ಯುವ ಘಟಕದ ಅಧ್ಯಕ್ಷ ಸತೀಶ್, ಉಪಾಧ್ಯಕ್ಷ ಮಂಜು ಆಚಾರ್, ಸತೀಶ್,ಸಾಂಸ್ಕೃತಿಕ ಘಟಕದ ಅಧಕ್ಷ ಗಣೇಶ್,ಕಾರ್ಯದರ್ಶಿ ಕಾರ್ತಿಕ್, ಪತ್ರಕರ್ತ ವಿಜಯಕುಮಾರ್ ಸೇರಿದಂತೆ ಇನ್ನು ಮುಂತಾದವರು ಹಾಜರಿದ್ದರು.
ಧಕ್ಷತೆಯಿಂದ ಸಂಘಟನೆ ಕಟ್ಟುತ್ತಿರುವ ವಿ.ಎಸ್ ಬೋಜೇಗೌಡ ..
ಬೇಲೂರು ತಾಲೂಕು ಅಧ್ಯಕ್ಷ ವಿ.ಎಸ್ ಬೋಜೇಗೌಡರ ಬಗ್ಗೆ ಅತೀವ ಮೆಚ್ಚುಗೆಯನ್ನು ವ್ಯಕ್ತಪಡಿಸಿದ ಪ್ರವೀಣ್ ಶೆಟ್ಟಿ ಅತ್ಯಂತ ಪ್ರಾಮಾಣಿಕತೆ ಹಾಗು ಧಕ್ಷತೆಯಿಂದ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ.
ಸಂಘಟನೆಯ ಪದಾಧಿಕಾರಿಗಳು ಸಹ ಅವರಿಗೆ ಬೆನ್ನುಲುಬಾಗಿ ನಿಂತು ಭಾಷೆ-ನೆಲ-ಜಲ ವಿಚಾರಗಳಲ್ಲಿ ಸಕ್ರೀಯ ಹೋರಾಟಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.