ಬೇಲೂರು-ಪೂರ್ಣಪ್ರಜ್ಞಾ ವಿದ್ಯಾಸಂಸ್ಥೆಯಲ್ಲಿ ನಡೆದ ಮಕ್ಕಳ ಸಂತೆ-ಉತ್ಸಾಹದಿಂದ ಪಾಲ್ಗೊಂಡ ಪುಟಾಣಿಗಳು

ಬೇಲೂರು-ಪ್ರಾಥಮಿಕ ಹಂತದಲ್ಲಿ ವಿದ್ಯಾರ್ಥಿಗಳ ಜಾಣ್ಮೆಯನ್ನು ಗುರುತಿಸಲು ಮಕ್ಕಳ ಸಂತೆ ತುಂಬಾ ಸಹಕಾರಿಯಾಗಲಿದೆ ಎಂದು ಪೂರ್ಣಪ್ರಜ್ಞ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಪ್ರಶಾಂತ್ ಹೇಳಿದರು.

ಪಟ್ಟಣದ ಪೂರ್ಣಪ್ರಜ್ಞಾ ವಿದ್ಯಾಸಂಸ್ಥೆಯ ಶಾಲಾ ಆವರಣದಲ್ಲಿ ಆಯೋಜಿಸಲಾಗಿದ್ದ ಮಕ್ಕಳ ಸಂತೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿ ಎರಡು ವರ್ಷಕ್ಕೊಮ್ಮೆ ನಮ್ಮ ಶಾಲೆಯಲ್ಲಿ ಮಕ್ಕಳ ಸಂತೆ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದೇವೆ. ಮಕ್ಕಳು ತುಂಬ ಉತ್ಸಾಹದಿಂದ ಮನೆಯಿಂದಲೇ ತಿಂಡಿ ತಿನಿಸುಗಳನ್ನು ಮಾಡಿಕೊಂಡು ಬಂದು ಮಾರಾಟ ಮಾಡುತ್ತಿದ್ದಾರೆ. ಆಹಾರ ಹೇಗೆ ತಯಾರು ಮಾಡಬೇಕು, ಅದಲ್ಲಿರುವ ಪೌಷ್ಟಿಕಾಂಶಗಳ ಬಗ್ಗೆ ತಿಳಿವಳಿಕೆ, ಶುಚಿ-ರುಚಿಯ ಬಗ್ಗೆ ತಿಳಿಸುವುದು ಕಾರ್ಯಕ್ರಮದ ಉದ್ದೇಶ ಎಂದರು.

ಮಕ್ಕಳಿಗೆ ಪಠ್ಯ ಚಟುವಟಿಕೆಗಳ ಜೊತೆಗೆ ಸಹಪಠ್ಯ ಚಟುವಟಿಕೆಗಳನ್ನು ನಡೆಸುವುದರಿಂದ ಅವರ ಬೌದ್ಧಿಕ ಜ್ಞಾನ ವಿಕಾಸ ಮತ್ತು ವ್ಯಕ್ತಿತ್ವ ರೂಪುಗೊಳ್ಳುವುದಕ್ಕೆ ಸಹಕಾರಿಯಾಗುತ್ತದೆ. ಅಂದರೆ ಮಕ್ಕಳಲ್ಲಿ ಲೆಕ್ಕಾಚಾರ ಪ್ರವೃತ್ತಿ ಹಾಗೂ ಗ್ರಾಹಕರೊಂದಿಗೆ ವರ್ತಿಸುವ ವ್ಯವಹಾರ ಜ್ಞಾನ ಹೆಚ್ಚುತ್ತದೆ ಎಂದು ತಿಳಿಸಿದರು.

ನಂತರ ಮಾತನಾಡಿದ ವಿದ್ಯಾ ಸಂಸ್ಥೆಯ ಸಹ ಕಾರ್ಯದರ್ಶಿ ಅನಂತ ಸ್ವಾಮಿ,ಗ್ರಾಮೀಣ ಪ್ರದೇಶದ ಮಕ್ಕಳು ಹೆಚ್ಚಿನ ವ್ಯವಹಾರದ ಜ್ಞಾನವನ್ನು ಹೊಂದಿರುತ್ತಾರೆ.ಪಟ್ಟಣದ ವಿದ್ಯಾರ್ಥಿಗಳಿಗೆ ಆ ವ್ಯವಹಾರಿಕ ಜ್ಞಾನ ಇರುವುದಿಲ್ಲ.ಆದ್ದರಿಂದ ಪ್ರತಿ 2 ವರ್ಷಗಳಿಗೊಮ್ಮೆ ಇಂತಹ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಕೇವಲ ಪಠ್ಯಕ್ಕೆ ಮಾತ್ರ ಸೀಮಿತವಾದರೆ ಸಾಲದು ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತೊಡಗಿದಾಗ ವ್ಯವಹಾರಿಕ ಜ್ಞಾನ ಹೆಚ್ಚಾಗುತ್ತದೆ.ಹಾಗೂ ಸಾಂಸ್ಕೃತಿಕ ಚಟುವಟಿಕೆ ಜೊತೆಯಲ್ಲಿ ಸಾರ್ವಜನಿಕರ ಜೊತೆ ಬೆರೆತು ಕಲಿಯಲು ಸಹಕಾರಿಯಾಗುತ್ತದೆ ಎಂದರು.

ಶಿಕ್ಷಕಿ ವೀಣಾಶಾರದ ಮಾತನಾಡಿ,ವಿದ್ಯಾರ್ಥಿಗಳು ಬಹಳ ಉತ್ಸಾಹದಿಂದ ವಿವಿಧ ರೀತಿಯ ತಿಂಡಿ ತಿನಿಸುಗಳು, ತರಕಾರಿಗಳು ಹಾಗೂ ಇತರ ಪದಾರ್ಥಗಳನ್ನು ಮಾರಾಟ ಮಾಡುವ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದಾರೆ.ನಾವು ಶಿಕ್ಷಕರೆನ್ನದೆ ಗ್ರಾಹಕರಾಗಿ ಪಾಲ್ಗೊಂಡು ಮಕ್ಕಳ ಉತ್ಸಾಹ ಇನ್ನೂ ಹೆಚ್ಚಾಗುವಂತೆ ಮಾಡಿದ್ದೇವೆ ಎಂದರು.

Leave a Reply

Your email address will not be published. Required fields are marked *

× How can I help you?