ದಶಕದ ಹಿಂದೆ ಬೇಲೂರಿನ ಗಲ್ಲಿ-ಗಲ್ಲಿಗಳಲ್ಲೂ ಅಧಿಕೃತ ಫೈನಾನ್ಸುಗಳು ಬಾಗಿಲು ತೆಗೆದಿದ್ದವು.ಐವತ್ತು-ಲಕ್ಷ ರೂಪಾಯಿಗಳ ಷೇರು ಹಾಕಿಕೊಂಡು ಒಂದಷ್ಟು ಜನ ಸೇರಿ ಒಂದು ಫೈನಾನ್ಸು ತೆರೆಯುತ್ತಿದ್ದರು.
ಊರು ತುಂಬಾ ದುಡ್ಡು ಕೊಡುವ ಅಂಗಡಿಗಳು ತೆರೆದರು ಸಾಲ ಪಡೆಯೋದು ಯಾರು..?
ಫೈನಾನ್ಸುಗಳ ಮಾಲೀಕರೇ ಪಾನಿಪುರಿ,ಹೂ,ಹಣ್ಣು,ರಸ್ತೆಬದಿಯಲ್ಲಿ ಬೇರೆ-ಬೇರೆ ವ್ಯಾಪಾರ ಮಾಡುವವರ ಹಿಂದೆ ಬಿದ್ದು ಸಾಲ ಕೊಡತೊಡಗಿದರು.
ಅಲ್ಲಿಯವರೆಗೂ ಇದ್ದಷ್ಟರಲ್ಲೇ ಕಾಲು ಚಾಚಿ-ಗಂಜಿ ಕುಡಿದು ಹೆಂಡತಿ ಮಕ್ಕಳೊಂದಿಗೆ ನೆಮ್ಮದಿಯಾಗಿದ್ದ ಬಡಪಾಯಿ ವ್ಯಾಪಾರಿಗಳಿಗೆ ಕೈತುಂಬಾ ಸಾಲ ದೊರೆಯತೊಡಗಿತು.
ಸಾವಿರ,ಹತ್ತು ಸಾವಿರ ಸಾಲಕ್ಕೂ ಹೆದರುತ್ತಿದ್ದ ಜನರೆಲ್ಲಾ ಲಕ್ಷಗಳಲ್ಲಿ ಫoಡು ಎತ್ತತೊಡಗಿದ್ದರು.
ಸುಲಭಕ್ಕೆ ಹಣ ಸಿಕ್ಕಮೇಲೆ ಏನು ಮಾಡಬೇಕು.ಅಂಗಡಿಗಳ ಬಾಗಿಲು ಹಾಕೋದು ನೆಂಟರ ಮನೆಗೆ ಸುತ್ತೋದು,ಇಲ್ಲ ಮನೆಗೆ ಟಿವಿ ಫ್ರಿಜ್ಜು,ಬೀರು ಇತ್ಯಾದಿಗಳ ತರೋದು,ಸೈಕಲ್ಲುಗಳಲ್ಲಿ ತಿರುಗುತ್ತಿದ್ದವರೆಲ್ಲ ಬೈಕು ಕಾರುಗಳಿಗೆ ಉನ್ನತಿ ಹೊಂದಿದರು.
ಜೊತೆಗೆ ಆಗ ಪ್ಲೇ ವಿನ್,ಒಂದಂಕಿ ಲಾಟರಿಯ ಹಾವಳಿಯೂ ಜೋರಾಗಿತ್ತು.ಇಲ್ಲಿ ಸಾಲ ಮಾಡಿ ಆ ದುಡ್ಡನ್ನ ಅಲ್ಲಿ ಡಬಲ್ ಮಾಡೋಕೆ ಹೋಗೋದು.
ಸಾಲ ತೆಗೆದುಕೊಂಡಿದ್ದರಿಂದ ವ್ಯಾಪಾರಕ್ಕೇನಾದರೂ ಅನುಕೂಲವಾಯ್ತಾ? ಇಲ್ಲ ಅದು ಆರಕ್ಕೆ ಏರಿರಲಿಲ್ಲ,ಆದರೆ ವ್ಯವಹಾರದ ಸರಿಯಾದ ನಿರ್ವಹಣೆ ಇಲ್ಲದೆ ಮೂರಕ್ಕಂತೂ ಇಳಿದುಬಿಟ್ಟಿತ್ತು.
ಪುರಸಭೆಯ ಕಚೇರಿಯ ಮುಂದೆ ಬಹಳಷ್ಟು ಪಾನಿಪೂರಿ,ಚಾಟ್ಸ್ ಮಾರುವ ಅಂಗಡಿಗಳಿದ್ದವು.ಸಂಜೆಯಾಯಿತೆಂದರೆ ಹಣ ಸಂಗ್ರಹಿಸುವ ಹುಡುಗರು ಅಲ್ಲಿಗೆ ಬಂದು ಕಂಪೌಂಡಿನ ಮೇಲೆ ಸಾಲಾಗಿ ಕುಳಿತಿರುತ್ತಿದ್ದರು.
ಒಬ್ಬೊಬ್ಬ ಅಂಗಡಿಯವನು ಸಿಕ್ಕಿತೆಂದು ಐದಾರು ಫೈನಾನ್ಸುಗಳಲ್ಲಿ ಸಾಲ ತೆಗೆದಿರುತ್ತಿದ್ದ.ವ್ಯಾಪಾರದಿಂದ 50 ರೂಪಾಯಿ ಹಣ ಬಂದಾಗ ಒಬ್ಬನಿಗೆ,100 ರೂಪಾಯಿ ಬಂದಾಗ ಮತ್ತೊಬ್ಬನಿಗೆ ಹೀಗೆ ಸರದಿ ಪ್ರಕಾರ ಸಾಲ ಕಟ್ಟಿ ಮನೆಗೆ ಹೋಗುವಾಗ ಬರಿ ಕೈಯ್ಯಲ್ಲೇ ಹೋಗುತ್ತಿದ್ದುದು.
ಕೊನೆ-ಕೊನೆಗೆ ದುಡ್ಡೆಲ್ಲ ಹೀಗೆ ಕರಗಿ ಬಂಡವಾಳಕ್ಕೂ ಹಣವಿಲ್ಲದೆ ಒಬ್ಬೊಬ್ಬರಾಗಿ ಊರು ಬಿಡತೊಡಗಿದರು.ಅವರ ಹಿಂದೆಯೇ ಫೈನಾನ್ಸುಗಳ ಮಾಲೀಕರು ನಷ್ಟ ಮಾಡಿಕೊಂಡು ಊರು ಸೇರಿದರು ಒಂದಷ್ಟು ಜನ ಊರನ್ನು ಬಿಟ್ಟರು.
ಎರಡು ಜನರಿಗೂ ಮೋಸವಾಯಿತು.
ಇರಲಿ ಇದೊಂದು ಸ್ಟೋರಿ ನೋಡಿ ….
ಇವತ್ತು ಸಾಮಾಜಿಕ ಕಾರ್ಯಕರ್ತ ನೂರ್ ಅಹಮ್ಮದ್, ಕೆ .ಆರ್.ಎಸ್ ಪಕ್ಷದ ರಿಯಾಜ್ ಅಹ್ಮದ್,ಭೀಮ್ ಆರ್ಮಿ ತಾಲೂಕು ಅಧ್ಯಕ್ಷ ಕೀರ್ತಿ,ಸಾಮಾಜಿಕ ಹೋರಾಟಗಾರ ಶಶಿಧರ್ ಮೌರ್ಯ,ಭೂಮೇಶ್ ಬಿಕ್ಕೋಡು,ದೀರಾನ್ ರಾಯಪುರ ಇವರೆಲ್ಲರೂ ಬೇಲೂರಿನಲ್ಲಿ ವ್ಯಾಪಕ ಮೀಟರ್ ಬಡ್ಡಿ ದಂಧೆ ನಡೆಯುತ್ತಿದೆ,ಒಂದಷ್ಟು ಜನ ಊರು ಬಿಟ್ಟರೆ ಮತ್ತೊಂದಷ್ಟು ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಹೇಗಾದರೂ ಮಾಡಿ ಇದೊಂದು ಅಕ್ರಮವನ್ನು ಮಟ್ಟಹಾಕಿ ಎಂದು ಬೇಲೂರು ಪೋಲೀಸರ ಮೊರೆ ಹೋಗಿದ್ದಾರೆ ಅಂದರೆ ಮನವಿ ಪತ್ರ ನೀಡಿ ಒತ್ತಾಯಿಸಿದ್ದಾರೆ.
ಪೊಲೀಸ್ ಅಧಿಕಾರಿಗಳಾದ ಸರ್ಕಲ್ ಇನ್ಸ್ಪೆಕ್ಟರ್ ಜಯಪ್ರಕಾಶ್ ಮತ್ತು ಎಸ್ ಐ ಜಿತೇಂದ್ರ ರವರುಗಳು ತನಿಖೆ ನಡೆಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ನೂರ್ ಅಹಮ್ಮದ್ ಪತ್ರಿಕೆಗೆ ತಿಳಿಸಿದ್ದಾರೆ.
ನಮಗೂ ಆ ನಂಬಿಕೆಯಿದೆ.ಖಾಕಿ ಮನಸ್ಸು ಮಾಡಿದರೆ ಚಿಟಿಕೆ ಹೊಡೆಯುವುದರಲ್ಲಿ ಮೀಟರ್ ಬಡ್ಡಿ ದಂಧೆ ಕೋರರ ಹುಟ್ಟಡಗಿಸಿಬಿಡುತ್ತೆ.ಹಾಗಾಗಲಿ ಎಂಬುದು ನಮ್ಮ ಆಶಯ.
ನೂರ್ ಅಹಮ್ಮದ್ ಹೇಳ್ತಾರೆ,ಸರ್ ಇತ್ತೀಚಿಗೆ ಜೆಪಿ ನಗರದ ಹುಡುಗನೊಬ್ಬ ಆತ್ಮಹತ್ಯೆಗೆ ಪ್ರಯತ್ನಿಸಿ ಆಸ್ಪತ್ರೆ ಸೇರಿದ್ದಾನೆ.ನಾನು ಸಹಜವಾಗಿ ವಿಚಾರಿಸಿದಾಗ ಆತ ಮೀಟರ್ ಬಡ್ಡಿಗೆ ವ್ಯಕ್ತಿಯೊಬ್ಬನಿಂದ ಹಣ ಪಡೆದಿದ್ದು ಬಡ್ಡಿ ಕಟ್ಟಿ-ಕಟ್ಟಿ ಸೋತು ಕೊನೆಗೆ ವಿಷ ಕುಡಿಯುವ ಹಂತಕ್ಕೆ ಹೋಗಿದ್ದಾನೆ.
ಜೆ.ಪಿ ನಗರದ ಹಾಗು ಬೇಲೂರಿನ ಬಹಳಷ್ಟು ಜನ ಮೀಟರ್ ಬಡ್ಡಿ ಕ್ರಿಮಿಗಳ ಕೈಗೆ ಸಿಕ್ಕಿ ನಲುಗಿ ಹೋಗುತ್ತಿದ್ದಾರೆ.
ಒಂದಷ್ಟು ಜನ ಊರು ಬಿಟ್ಟಿದ್ದಾರೆ ಇನೊಂದಷ್ಟು ಜನ ನಿಷ್ಪಾಪಿಗಳು ಹೀಗೆ ಪ್ರಾಣಕಳೆದುಕೊಳ್ಳುವ ಸ್ಥಿತಿಗೆ ತಲುಪಿದ್ದಾರೆ ಎಂದು ಬೇಸರ ತೋಡಿಕೊಂಡರು.
ಬೇಲೂರಿನ ಖಡಕ್ ಪೊಲೀಸರು ಶೀಘ್ರ ತನಿಖೆ ನಡೆಸಿ ಇನ್ನಷ್ಟು ಜೀವಗಳು ಮೀಟರ್ ಬಡ್ಡಿ ಭೂತಕ್ಕೆ ಬಲಿಯಾಗುವ ಮುನ್ನ ಕ್ರಮಕ್ಕೆ ಮುಂದಾಗಲಿ.
——————–ರವಿಕುಮಾರ್