
ನಾವು ಒಬ್ಬರಿಂದ ಕೆಡುಕಾದಾಗ ಸಾಕಷ್ಟು ಜನರ ಬಳಿ ಹೇಳಿಕೊಂಡು ಅವರನ್ನು ದೂಷಿಸಲು ಆಸಕ್ತಿ ತೋರಿಸುವಷ್ಟು, ಒಳಿತಾದಾಗ ಅದನ್ನು ಹಂಚಿಕೊಳ್ಳುವಲ್ಲಿ ತೋರಿಸುವುದಿಲ್ಲ. ಇಲ್ಲಿ ನನಗಾಗಿದ್ದು ನಿರಾಸಕ್ತಿಯಲ್ಲಾ, ಬದಲಾಗಿ ಸೋಮಾರಿತನ. ಈ ಘಟನೆ ಸದಾ ನನ್ನ ಮನಸ್ಸಿನಂಗಳದಲ್ಲಿ ನಲಿದಾಡುತ್ತ, ಆ ವ್ಯಕ್ತಿಯ ಬಗ್ಗೆ ಹೆಮ್ಮೆ, ಕೃತಜ್ಞತಾ ಭಾವ ಮೂಡುವಂತೆ ಮಾಡುತ್ತದೆ. ಹೊರ ನೋಟಕ್ಕೆ ವಜ್ರದಂತೆ ಕಾಣಿಸುವ ಇವರ ಮನಸ್ಸಿನಲ್ಲಿ ಹೆಸರಿಗೆ ತಕ್ಕಂತೆ ಮಮತಾಮಯಿ ಮಾತೃ ಹೃದಯ ಇದೆ ಎಂಬುದು ಅರಿವಾದದ್ದು ಆ ದಿನವೇ.
ಲೋಕಸಭೆ ಚುನಾವಣೆ ನಡೆದ ದಿನ. ಭೌಗೋಳಿಕವಾಗಿ ಅರಸೀಕೆರೆಗೆ, ಚುನಾವಣೆಗೆ ಬೇಲೂರು ತಾಲೂಕಿಗೆ ಸೇರುವ ಗೊಲ್ಲರಹಳ್ಳಿಯಿಂದ ಚುನಾವಣಾ ಕರ್ತವ್ಯ ಮುಗಿಸಿ ಆ ಮಾರ್ಗದಲ್ಲಿ ಬರುವ ಎಲ್ಲಾ ಬೂತ್ ಗಳ ಸಿಬ್ಬಂದಿಯನ್ನು ಕರೆದುಕೊಂಡು ಬಸ್ಸು ಬೇಲೂರಿನ ವೈಡಿಡಿ ಕಾಲೇಜಿಗೆ ಬಂದು ಸೇರುವಷ್ಟರಲ್ಲಿ ಅದಾಗಲೇ ಹೆಚ್ಚು ಕಡಿಮೆ 7.30 ರಿಂದ8 ಗಂಟೆ ಆಗಿತ್ತು. ಚುನಾವಣಾ ಸಾಮಗ್ರಿಗಳನ್ನು ಅಧಿಕಾರಿಗಳಿಗೆ ಒಪ್ಪಿಸಿ, ಊಟ ಮುಗಿಸುವಷ್ಟರಲ್ಲಿ ಗಡಿಯಾರ 9ರ ಮುಳ್ಳನ್ನು ದಾಟಿತ್ತು. ಹಾಸನದ ಸ್ನೇಹಿತರೊಬ್ಬರು ನಾವು ಕಾರಿನಲ್ಲಿ ಹೋಗುತ್ತಿದ್ದೇವೆ ಬನ್ನಿ ಮೇಡಂ ಎಂದರು. ಅವರು ರಿಂಗ್ ರೋಡ್ ನಲ್ಲಿಯೇ ಹೋಗುವುದರಿಂದ ಅಲ್ಲಿಂದ ತಣ್ಣೀರುಹಳ್ಳಕ್ಕೆ ಹೋಗಲು ಸಮಸ್ಯೆಯಾಗುತ್ತದೆ, ಮತ್ತೆ ನಿಮಗೆ ತೊಂದರೆ ಕೊಡಬೇಕು, ನಾವು ಹಾಸನಕ್ಕೆ ಬರುವ ಬಸ್ಸಿನಲ್ಲಿ ಬರುತ್ತೇವೆ ಎಂದು ಹೇಳಿ ಅವರನ್ನು ಬೀಳ್ಕೊಟ್ಟೆವು.
ಬೈಪಾಸ್ ಹಾಗೂ ರಿಂಗ್ ರೋಡ್ ನಲ್ಲಿ ಹೋಗುತ್ತವೆ ಎಂಬ ಆಲೋಚನೆಯಿಂದ, ಚನ್ನರಾಯಪಟ್ಟಣ ಹಾಗೂ ಹೊಳೆನರಸೀಪುರಕ್ಕೆ ಹೋಗುವ ಸಾಕಷ್ಟು ಬಸ್ಸುಗಳು ಹೊರಟರೂ ನಾವು ಆ ಬಸ್ಸುಗಳನ್ನು ಹತ್ತಲಿಲ್ಲ.ಸರಿ ಹಾಸನದ ಬಸ್ಸಿಗೇ ಹೋಗುವುದೆಂದು ನಿರ್ಧರಿಸಿ, ಅಂತೂ ಕೊನೆಗೆ ಹಾಸನದ ಬಸ್ಸನ್ನೇರಿದೆವು. ಅದು ಹೊರಟಿದ್ದು 10:30 ಗಂಟೆಗೆ. 9 ರಿಂದ 10:30 ವರೆಗೆ ಕಾದು, ಹಾಸನದ ಬಸ್ಸೇ ಬೇಕೆಂದು ಹತ್ತಿದ ನಮಗೆ ಅಲ್ಲೊಂದು ಶಾಕ್ ಕಾದಿತ್ತು.ನಾವೇರಿದ ಬಸ್ಸಿನ ಡ್ರೈವರ್ ನಾನು ತಣ್ಣೀರು ಹಳ್ಳ, ವಿಜಯನಗರದ ಕಡೆ ಹೋಗುವುದಿಲ್ಲ ನನಗೆ ಆ ರೂಟ್ ಹೇಳಿಲ್ಲ ಎಂದು ಹೇಳಿ ರಿಂಗ್ ರೋಡ್ ಬಳಿಯೇ ಬಸ್ಸು ನಿಲ್ಲಿಸಿದ. ನಾನು ನಿಧಾನವಾಗಿ ನಮ್ಮ ಜೊತೆ ಇದ್ದ ನಮ್ಮ ಶಾಲೆಯ ಹಿಂದಿ ಮೇಡಂ ಗೆ ನಾವು ಇಲ್ಲಿ ಇಳಿಯಲ್ಲಾ ಅಂತ ಹೇಳಿ ಮೇಡಂ ಎಂದೆ. ಅವರು ಹಾಗೇ ಕೂಗಿ ಹೇಳಿದರು. ಆದರೆ ಅವನು(ಡ್ರೈವರ್) ಮೇಡಂ ಮಾತಿಗೆ ಉಪ್ಪು, ಸೊಪ್ಪು ಏನೂ ಹಾಕಿದಂತೆ ಕಾಣಲಿಲ್ಲ.ನೀವು ಇಳಿಯದಿದ್ದರೆ ನಾನು ಕಲಾ ಕಾಲೇಜಿಗೆ ಕರ್ಕೊಂಡ್ ಹೋಗಿ ನಿಲ್ಲಿಸುವುದಾಗಿ ಹೇಳಿದ. ರಿಂಗ್ ರೋಡ್ ಕಡೆಯಿಂದ ಕಲಾ ಕಾಲೇಜಿಗೆ ಹೋದರೂ ತಣ್ಣೀರು ಹಳ್ಳದ ಮಾರ್ಗದಲ್ಲಿ ಹೋದರೂ ಯಾವುದೇ ವ್ಯತ್ಯಾಸವಿಲ್ಲ, ಎರಡೂ ಒಂದೇ ದೂರ ಎಂದು ನಾನು ಡ್ರೈವರ್ ಗೆ ಮನದಟ್ಟು ಮಾಡಲು ಪ್ರಯತ್ನಿಸಿದೆ.
ಯಾವುದೇ ಮಾತು ಅವನ ಕಿವಿಗೆ ತಾಕಿದಂತೆ ಕಾಣಲಿಲ್ಲ. ನಮ್ಮ ಶಾಲೆಯ ಹಿಂದಿ ಮೇಡಂ, ಸೈನ್ಸ್ ಮೇಡಂ ಹಾಗೂ ಮತ್ತೊಂದಿಬ್ಬರು ವಿಜಯನಗರದಲ್ಲಿಳಿಯುವ ಶಿಕ್ಷಕಿಯರಿದ್ದರು.ನನ್ನ ಅಸಹಾಯಕತೆ, ಆಕ್ರೋಶವಾಗಿ ಬದಲಾಗಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. 11:30 ರ ಸರಿ ರಾತ್ರಿಯಲ್ಲಿ, ಹೆಚ್ಚು ಜನಸಂಚಾರವೇನೂ ಇಲ್ಲದ ಈ ಹೊಸ ರಿಂಗ್ ರಸ್ತೆಯ ವೃತ್ತದಲ್ಲಿ ಮಹಿಳಾ ಶಿಕ್ಷಕಿಯರನ್ನೇ ಇಳಿಸಿ ಹೋದರೆ ನಾವೇನು ಮಾಡುವುದು ಎಂದು ಅಂಗಲಾಚಿದೆ. ಆದರೂ ಡ್ರೈವರ್ ಜೊತೆಗೆ ಬಸ್ಸಿನಲ್ಲಿದ್ದ ಯಾವುದೇ ವ್ಯಕ್ತಿಗಳ ಮನಸ್ಸು ಕರಗಲಿಲ್ಲ.ಬಸ್ಸಿನ ತುಂಬಾ ಜನರಿದ್ದರೂ (ಹೆಚ್ಚಿನ ಪಾಲು ಶಿಕ್ಷಕರು) ಒಬ್ಬರೂ ಕೂಡಾ ನಮ್ಮ ಬಗ್ಗೆ ಚಿಂತಿಸಲಿಲ್ಲಾ, ನಮ್ಮ ಪರವಾಗಿ ದನಿಗೂಡಿಸಲಿಲ್ಲಾ.
ನನ್ನ ಆಕ್ರೋಶ, ಡ್ರೈವರ್ ಕಡೆಯಿಂದ ಬಸ್ಸಿನಲ್ಲಿದ್ದ ಜನರ ಕಡೆ ತಿರುಗಿತು. ಇಲ್ಲಿರುವವರ್ಯಾರಿಗೂ ಅಕ್ಕ-ತಂಗಿಯರಿಲ್ವಾ, ಒಬ್ಬರಾದರೂ ಡ್ರೈವರ್ ಗೆ ಬುದ್ಧಿ ಹೇಳ್ತಿಲ್ವಲ್ಲಾ.. ನಿಮ್ಮ ಮನೆಯ ಹೆಣ್ಣು ಮಕ್ಕಳನ್ನೂ ಹೀಗೇ ನಡುರಾತ್ರಿಯಲ್ಲಿ ನಿರ್ಜನ ಪ್ರದೇಶದಲ್ಲಿ ಇಳಿಸಿ ಹೋಗ್ತೀರಾ ಎಂದು ಕೂಗಾಡಿದೆ.ನರಿಯ ಕೂಗು ಗಿರಿ ಮುಟ್ಟೀತೇ?! ಇಲ್ಲಾ.., ಡ್ರೈವರ್ ಬಸ್ ಸ್ಟಾರ್ಟ್ ಮಾಡಿಯೇ ಬಿಟ್ಟ. ಕಲಾ ಕಾಲೇಜಿಗೆ ಹೋದರೆ ಅಲ್ಲಿಂದ ಬರುವುದು ಇನ್ನೂ ಕಷ್ಟವಾಗುತ್ತೆ ಮೇಡಂ, ಬನ್ನಿ ಇಳಿಯಣ ಎಂದು ನಮ್ಮ ವಿಜ್ಞಾನ ಶಿಕ್ಷಕಿ ಅಂಜು ಮೇಡಂ ಒತ್ತಾಯಿಸಿದರು. ಮನೆಯವರು ಚುನಾವಣಾ ಕರ್ತವ್ಯಕ್ಕೆ ಹೋಗಿದ್ದು, ಇನ್ನೂ ಮನೆಗೆ ಬಂದಿರಲಿಲ್ಲ. ಏನು ಮಾಡುವುದೆಂಬ ದೊಡ್ಡ ಪ್ರಶ್ನಾರ್ಥಕ ಚಿಹ್ನೆಯೊಂದಿಗೆ ಬಸ್ಸಿನಿಂದ ಇಳಿಯಲು ತಯಾರಾದೆ. ನನ್ನ ಅರಚಾಟವನ್ನು ಬಿಟ್ಟಗಣ್ಣಿನಿಂದ ನೋಡುತ್ತಿದ್ದ ವಿಜಯನಗರದ ಶಿಕ್ಷಕಿಯರಿಬ್ಬರು ಹಾಗೂ ನಮ್ಮ ಶಾಲೆಯ ಶಿಕ್ಷಕಿಯರಿಬ್ಬರು ಅನಿವಾರ್ಯ ಹಾಗೂ ಅಸಹಾಯಕತೆಯಿಂದ ನನ್ನನ್ನು ಹಿಂಬಾಲಿಸಿದರು.

ಇಳಿದು ನೋಡಿದರೆ ಒಂದು ಆಟೋ ಕೂಡಾ ಇರಲಿಲ್ಲ. ಒಂದು ಜನವೂ ಇಲ್ಲ. ಧೈರ್ಯಕ್ಕಾಗಿ, ಜೊತೆಯಾಗಬಹುದೆಂದು ಹುಡುಕಿದರೆ ಒಂದು ನಾಯಿಯೂ ಆ ಸರ್ಕಲ್ ನಲ್ಲಿ ಇರಲಿಲ್ಲ. ಸಿಟ್ಟು, ಅಸಹಾಯಕತೆಯಿಂದ ಕಣ್ಣಿನಲ್ಲಿ ನೀರು ಜಿನುಗಲು ಶುರುವಾಗಿತ್ತು. ಭಯದಿಂದ ಮಾತ್ರ ಅಲ್ಲಾ,.. ಅನಿವಾರ್ಯವಾದಾಗ ಐದು ಜನ ಶಿಕ್ಷಕಿಯರನ್ನು ಒಟ್ಟುಗೂಡಿಸಿಕೊಂಡು ಧೈರ್ಯವಾಗಿ ನಡೆದುಕೊಂಡೇ ಮನೆ ತಲುಪಬಲ್ಲೆನೆಂಬ ಆತ್ಮವಿಶ್ವಾಸ ಬೆಟ್ಟದಷ್ಟಿದ್ದರೂ, ಬಸ್ಸಿನಲ್ಲಿದ್ದ ಜನರ ಹಾಗೂ ಡ್ರೈವರ್ ನ ಮನಸ್ಥಿತಿಯನ್ನು ನೋಡಿದ ನನ್ನ ಕಣ್ಣುಗಳು ನನಗೇ ಅರಿವಿಲ್ಲದಂತೆ ತೇವವಾಗಿದ್ದವು.
ಏನು ಮಾಡುವುದೆಂದು ಯೋಚಿಸುತ್ತಿದ್ದ ನನಗೆ, ಥಟ್ಟನೆ ನೆನಪಾಗಿದ್ದು ನಮ್ಮ ತಹಶೀಲ್ದಾರ್ ಮಮತ ಮೇಡಂ. ಶಿಕ್ಷಕರ ದಿನಾಚರಣೆಯಲ್ಲಿ ನಿರೂಪಣೆಯ ಜವಾಬ್ದಾರಿ ಹೊತ್ತಿದ್ದ ನನಗೆ ಅತ್ಯುತ್ತಮ ಮಾರ್ಗದರ್ಶಕರಾಗಿ ಹಾಗೂ ಅಷ್ಟೇ ಖಡಕ್ಕಾಗಿ ಎಚ್ಚರಿಕೆಯನ್ನು ನೀಡುವವರಾಗಿಯೂ ಇದ್ದ ನಮ್ಮ ತಹಶೀಲ್ದಾರ್ ಮಮತಾ ಮೇಡಂ, ಏನಾದರೂ ಸಲಹೆ ಬೇಕಾದರೆ ಪಡೆದುಕೊಳ್ಳಬೇಕೆಂದು ತಮ್ಮ ಸಂಪರ್ಕ ಸಂಖ್ಯೆ ನೀಡಿದ್ದರು. ಅದು ಈ ರೀತಿ ಉಪಯೋಗಕ್ಕೆ ಬರುವುದೆಂದು ನಾನು ಕನಸಿನಲ್ಲಿಯೂ ಊಹಿಸಿರಲಿಲ್ಲ. ನಮ್ಮನ್ನು ಆ ನಿರ್ಜನ ಪ್ರದೇಶದಲ್ಲಿ ಇಳಿಸಿದ ಬಸ್ಸು ಸ್ವಲ್ಪ ದೂರ ಹೋಗಿ ನಂತರ ನಿಂತಿತು. ಬಸ್ಸು ನಿಂತ ಕಾರಣ ಮಾತ್ರ ನನಗೆ ಇನ್ನೂ ತಿಳಿದಿಲ್ಲ. ಆದರೆ ನಾನು ಊಹಿಸಿದ್ದು, ಬಸ್ಸಿನಲ್ಲಿದ್ದ ಕೆಲವರಿಗಾದರೂ ನಮ್ಮನ್ನು ಆ ರೀತಿ ಇಳಿಸಿ ಹೋಗುತ್ತಿರುವುದರ ತಪ್ಪಿನ ಅರಿವಾಗಿ, ಡ್ರೈವರ್ ಗೆ ತಿಳಿಹೇಳಲು ಪ್ರಯತ್ನಿಸಿರಬಹುದು. ಅದಕ್ಕೆ ಒಪ್ಪದ ಡ್ರೈವರ್ ಹಾಗೂ ಜನರ ನಡುವೆ ವಾದ ವಿವಾದ ನಡೆದು ಬಸ್ಸು ಅಲ್ಲೇ ನಿಂತಿರಬಹುದು.
ಮಮತಾ ಮೇಡಂ ಗೆ ಫೋನ್ ಮಾಡೋಣ ಎನಿಸಿದ್ದು ಎಷ್ಟು ಸತ್ಯವೋ, ಅಷ್ಟೇ ಸತ್ಯವಾಗಿ ಎನಿಸಿದ್ದು ಅವರು ಖಂಡಿತವಾಗಿ ಫೋನ್ ರಿಸೀವ್ ಮಾಡಲ್ಲ ಅಂತ. ಚುನಾವಣಾ ಕರ್ತವ್ಯದಲ್ಲಿ ಅಷ್ಟೊಂದು ಬಿಜಿಯಾಗಿರುವ ಅವರನ್ನು ಫೋನ್ ಮಾಡಿ ನಾನು ತೊಂದರೆ ಕೊಡುವುದೇ …??!!ಇದು ಸರಿಯಾ …??!ಯಾವುದು ಸರಿ..? ಎರಡು ದಿನಗಳಿಂದ ಸರಿಯಾಗಿ ಊಟ, ತಿಂಡಿ, ನಿದ್ರೆ ಏನನ್ನೂ ಮಾಡದೆ ಚುನಾವಣಾ ಕರ್ತವ್ಯ ಮುಗಿಸಿ ಬಂದ ನಮ್ಮನ್ನು ಈ ನಡುರಾತ್ರಿಯಲ್ಲಿ, ನಿರ್ಜನ ಪ್ರದೇಶದಲ್ಲಿ, ಬಿಟ್ಟು ತೆರಳಲು ತಯಾರಾಗಿರುವ ಆ ಡ್ರೈವರ್ ಮಾಡುತ್ತಿರುವುದು ಸರಿಯೇ??!! ಇದೆಲ್ಲವನ್ನೂ ಮೂಕಪ್ರೇಕ್ಷಕರಂತೆ ನೋಡುತ್ತ ತಮಗೇನೂ ಸಂಬಂಧವಿಲ್ಲವೆಂಬಂತೆ ನಡೆದುಕೊಳ್ಳುತ್ತಿರುವ, ಬಸ್ಸಿನಲ್ಲಿ ಕುಳಿತಿರುವ ವಿದ್ಯಾವಂತ ನಾಗರಿಕರು ಮಾಡುತ್ತಿರುವುದು ಸರಿಯೇ..?! ಯೋಚಿಸಿ ತಲೆ ಧೀಂ ಎನ್ನತೊಡಗಿತು. ಮನಸು ಗೊಂದಲದ ಗೂಡಾಗಿತ್ತು.

ಆದರೂ ನ್ಯಾಯಕ್ಕಾಗುತ್ತಿರುವ ಸೋಲನ್ನು ಒಪ್ಪಿಕೊಳ್ಳಲು ನಾನು ಅಷ್ಟು ಬೇಗ ಸಿದ್ಧಳಿರಲಿಲ್ಲ.ಆದದ್ದಾಗಲಿ ಎಂದು ನಮ್ಮ ತಹಶೀಲ್ದಾರ್ ಮಮತಾ ಮೇಡಂ ಗೆ ಫೋನಾಯಿಸಿದೆ. ಬಿಡುವಿರದ ಕರ್ತವ್ಯದಲ್ಲಿ ತೊಡಗಿದ್ದರೂ, ಬಹಳಷ್ಟು ದಿನಗಳಿಂದ ಚುನಾವಣಾ ಕರ್ತವ್ಯದಲ್ಲಿ ನಿರತರಾಗಿ ಬಸವಳಿದಿದ್ದರೂ, ನನ್ನ ಕರೆಯ ಎರಡೇ ರಿಂಗಣಗಳಿಗೆ ಆ ಕಡೆಯಿಂದ ‘ಹೆಲೋ’ ಎಂಬ ಉತ್ತರ ಬಂದೇಬಿಡ್ತು.ನನ್ನ ಸಂಕಟವನ್ನು ಹೇಳಲೋ, ಬೇಡವೋ ಎಂಬ ಆತಂಕ. ಅದಕ್ಕೆ ಅವರ ಪ್ರತಿಕ್ರಿಯೆ ಹೇಗಿರುವುದೋ ಎಂಬ ಭಯ. ಕರೆ ಮಾಡಿಯಾಗಿದೆ, ಹೇಳದೆ ವಿಧಿ ಇಲ್ಲ ಎಂದು, ಆದದ್ದೆಲ್ಲವನ್ನು ಒಂದೇ ಸಮನೆ ಉಸುರಿದೆ. “ಡ್ರೈವರ್ ಗೇನಾಗಿದ್ಯಂತೆ, ಯಾಕ್ ಹಾಗ್ಮಾಡ್ತಿದಾರೆ….?! ಎಲ್ಲಿ, ಅವರಿಗೆ ಫೋನ್ ಕೊಡಿ” ಎಂದು ಕೋಪದಿಂದ ಹೇಳಿದಾಗ ಅಂತೂ ‘ಮನುಷ್ಯತ್ವ’ ಜೀವಂತವಾಗಿದೆ ಎನಿಸಿತು. ಓಡಿ ಹೋಗಿ ಡ್ರೈವರ್ಗೆ ಫೋನ್ ಕೊಟ್ಟೆ. ಯಾರು? ಏನು? ಎಂಬ ದಾರ್ಷ್ಟ್ಯದ ಪ್ರಶ್ನೆ ಡ್ರೈವರ್ ನಿಂದ ಬಂತು.’ತಹಶೀಲ್ದಾರ್ ಮೇಡಂ’, ‘ನಿಮ್ಜೊತೆ ಮಾತಾಡ್ಬೇಕಂತೆ’ ಎಂದೆ.’ಯಾರ್ಹೇಳಿದ್ರೂ ಅಷ್ಟೇ’, ಎಂದು ಗತ್ತಿನಿಂದಲೇ ಫೋನ್ ಪಡೆದ ಡ್ರೈವರ್ ಮುಖ, ಮೇಡಂ ಜೊತೆ ಮಾತನಾಡಿದ ನಂತರ ‘ಇಂಗು ತಿಂದ ಮಂಗನಂತೆ’ ಪೆಚ್ಚಾಯಿತು. ಫೋನನ್ನು ನನಗೆ ನೀಡುತ್ತಾ, ‘ಮೇಡಂ ಲೈನಲ್ಲಿ ಇದಾರೆ’ ಎಂದ. ‘ಹೇಳಿ ಮೇಡಂ’ ಎಂದೆ. “ಎಲ್ಲರೂ ಬಸ್ಸನ್ನು ಹತ್ತಿ,ಎಲ್ಲೂ ಮಧ್ಯೆ ಇಳಿಯಬೇಡಿ, ಯಾರು ಎಲ್ಲಿ ಇಳಿಯಬೇಕೋ, ಅಲ್ಲೇ ಇಳೀರಿ. ಡ್ರೈವರ್ ಮತ್ತೇನಾದರೂ ಗಾಂಚಾಳಿ ಮಾಡಿದ್ರೆ ನಂಗ್ಹೇಳಿ”, ಅಂದ್ರು.ಮೇಡಂ ಜೊತೆ ಮಾತನಾಡುತ್ತಲೇ ಎಲ್ಲರೂ ಬಸ್ಸನ್ನೇರಿದೆವು. ಬಸ್ಸನ್ನು ಡೈರಿ ಸರ್ಕಲ್ ಕಡೆಗೆ ತಿರುಗಿಸಿದ್ದ ಡ್ರೈವರ್ ತಣ್ಣೀರು ಹಳ್ಳದ ಕಡೆಗೆ ತಿರುಗಿಸಿದ. “ಮೇಡಂ, ಬಸ್ಸನ್ನ ನಮ್ಮ ಕಡೇನೆ ತಿರುಗಿಸಿದ್ರು. ಬಿಡಿ ಮೇಡಂ,ತಣ್ಣೀರುಹಳ್ಳದಲ್ಲಿ ಇಳ್ಕೋತೀವಿ. ನಿಮ್ಮಿಂದ ತುಂಬಾ ಅನುಕೂಲ ಆಯ್ತು, ಥ್ಯಾಂಕ್ಯೂ ಮೇಡಮ್” ಎಂದು ಹೇಳಿ ಫೋನ್ ಕಟ್ ಮಾಡಲು ನೋಡಿದೆ.ಅವರ ನಿಜವಾದ ಕಾಳಜಿ, ತಾಯಿ ಹೃದಯ ಅರ್ಥವಾಗಿದ್ದು ಆಗಲೇ. “ನೀವು ಮನೆ ತಲುಪುವವರೆಗೆ ಫೋನ್ ಕಟ್ ಮಾಡ್ಬೇಡಿ. ಲೈನಲ್ಲೇ ಇರಿ, ಎಲ್ಲಿದ್ದೀರಾ ಅಂತ ಹೇಳ್ತಾ ಇರಿ.” ಎಂದು ಫೋನ್ ಕಟ್ ಮಾಡಲು ಬಿಡಲಿಲ್ಲ. ನಿಮಿಷಕೊಮ್ಮೆ ‘ಹೋದ್ರ ಅಮ್ಮ’ ಅಂತ ವಿಚಾರಿಸ್ತಾ ಇದ್ರು. ‘ಹೂಂ ಮೇಡಂ,ಹೋಗ್ತಿದೀವಿ’ ಎಂದು ಹೇಳುವಾಗಲೇ ಮನಸು ಆ ದಕ್ಷ ಅಧಿಕಾರಿಗೆ ಸಾವಿರ ಬಾರಿ ನಮಿಸಿತ್ತು. ಅಷ್ಟೊತ್ತಿಗಾಗಲೇ ಮನೆಯವರಿಗೆ ಫೋನ್ ಮಾಡಿ ನಡೆದ ಸಂಗತಿಯನ್ನು ಸೂಕ್ಷ್ಮವಾಗಿ ಅರುಹಿದ್ದೆ. ಒಂದು ಕಡೆ ಮನೆಯವರು ಫೋನ್ ಮಾಡಿ ಏನಾಯಿತೆಂದು ವಿಚಾರಿಸುವ ಧಾವಂತದಲ್ಲಿದ್ದರೆ, ಮತ್ತೊಂದು ಕಡೆ ಬೆಳಗಿನಿಂದ ಕರ್ತವ್ಯ ನಿರ್ವಹಿಸಿದ್ದ ಚರವಾಣಿ ಕೂಡಾ ತನ್ನ ಶಕ್ತಿ ಕಳೆದುಕೊಂಡು ಇನ್ನೇನು ಮಲಗುವೆನೆಂಬ ಮುನ್ಸೂಚನೆಯನ್ನು ಆಗಾಗ ನೀಡುತ್ತಿತ್ತು.ಎಲ್ಲಾದರೂ, ಮೇಡಂ ಜೊತೆ ಲೈನಲ್ಲಿರುವಾಗಲೇ ಸಂಪೂರ್ಣವಾಗಿ ಮಲಗಿಬಿಟ್ಟರೆ, ಅಷ್ಟು ಹೇಳಿದರೂ, ನಾನು ಫೋನ್ ಕಟ್ ಮಾಡಿದೆನೆಂದು ತಪ್ಪು ತಿಳಿದುಕೊಂಡರೆ, ಎಂಬ ಆತಂಕ. ಅಂತೂ 8 – 10 ನಿಮಿಷಗಳ ನಂತರ ಕರೆ ಕಡಿತವಾಯಿತು. ಇಡೀ ತಾಲೂಕಿನ ಚುನಾವಣೆಯ ಹೊಣೆ ಹೊತ್ತಿರುವ ಅವರಿಗೆ ಮತ್ಯಾವ ತುರ್ತು ಕರೆ ಬಂತೋ…? ಕರೆ ತುಂಡಾಗಿತ್ತು. ಅದಾಗಿ ಸ್ವಲ್ಪ ಹೊತ್ತಿಗೆ ನನ್ನ ಜಂಗಮವಾಣಿಯು ಸಂಪೂರ್ಣ ವಿಶ್ರಾಂತಿಗೆ ಜಾರಿತ್ತು. ಮನೆಗೆ ಬಂದು ಅದಕ್ಕೆ ಸ್ವಲ್ಪ ಶಕ್ತಿ ತುಂಬಿಸಿ, ಮೇಡಂ ಗೆ ಫೋನಾಯಿಸಿ ಯಾವುದೇ ತೊಂದರೆಯಿಲ್ಲದೆ, ನಿರಾತಂಕವಾಗಿ ಮನೆಗೆ ಬಂದು ಸೇರಿರುವುದಾಗಿ, ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಿದೆ. ‘ಸಂತೋಷ ಅಮ್ಮ’ ಎಂದು ಹೇಳಿ ಕರೆ ತುಂಡರಿಸಿದರು. ನಾನು ಮಮತಾಮಯಿಗೆ ಮತ್ತೊಮ್ಮೆ ಮನದಲ್ಲೇ ವಂದಿಸಿದೆ. ‘ಅಮ್ಮ’ ಎನ್ನುವ ಅವರಲ್ಲಿದ್ದ ಮಾತೃ ಹೃದಯದ ಸಾಕ್ಷಾತ್ ದರ್ಶನ ಅಂದು ನನಗಾಗಿತ್ತು .ಕರ್ತವ್ಯವೆಂದು ಬಂದಾಗ ವಜ್ರದಷ್ಟೇ ಕಠಿಣವೆಂದು ಹೆಸರಾಗಿದ್ದ ಮೇಡಂ, ಕರ್ತವ್ಯ ಪಾಲನೆಯನ್ನು ತುಂಬಾ ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರು. ನಮ್ಮಿಂದಲೂ ಅದನ್ನೇ ನಿರೀಕ್ಷಿಸುತ್ತಿದ್ದರು.

ಕರ್ತವ್ಯ ದಕ್ಷತೆ, ನ್ಯಾಯಕ್ಕಾಗಿ ನಿಷ್ಠುರತೆ, ಅಸಹಾಯಕರಿಗೆ ಮಿಡಿಯುವ ಹೃದಯ ಇವು ಮಮತಾ ಮೇಡಂ ಗೆ ಇರುವ ಪರ್ಯಾಯ ಪದಗಳು. ಇಂತಹವರನ್ನು ತಹಶೀಲ್ದಾರರಾಗಿ ಪಡೆದಿರುವ ನಮ್ಮ ಬೇಲೂರಿನ ಜನತೆ ನಿಜಕ್ಕೂ ಪುಣ್ಯವಂತರು. ಈ ಘಟನೆ ನೆನಪಾದಾಗಲೆಲ್ಲಾ ಮನಸ್ಸು ತುಂಬಿ ಬರುತ್ತದೆ. ಇಂಥ ಅಧಿಕಾರಿಗಳು ಇರುವುದರಿಂದಲೇ ನ್ಯಾಯ, ಧರ್ಮ, ಸತ್ಯ, ಮಾನವೀಯತೆ ಎಂಬ ಪದಗಳು ಇನ್ನೂ ಜೀವಂತವಾಗಿ ಉಳಿದಿವೆ ಎನಿಸುತ್ತದೆ.ಈ ಘಟನೆಯನ್ನು ಅಕ್ಷರ ರೂಪಕ್ಕಿಳಿಸಿ, ಮತ್ತಷ್ಟು ಜನರಿಗೆ ಮಮತಾಮಯಿಯ ದರ್ಶನ ಮಾಡಿಸಬೇಕೆಂಬುದೇ ಈ ಲೇಖನದ ಆಶಯ.ಎಲ್ಲಾ ಅಧಿಕಾರಿಗಳು ತಮ್ಮ ಕರ್ತವ್ಯದಲ್ಲಿ ಮಾನವೀಯತೆ ಮೆರೆದರೆ ಎಷ್ಟು ಚೆನ್ನ ಅಲ್ಲವೇ…?!!!

ಲೀಲಾವತಿ.ಕೆ.ಎನ್
ಶಿಕ್ಷಕಿ,
ಸರ್ಕಾರಿ ಪ್ರೌಢಶಾಲೆ
ಹೆಚ್. ಮಲ್ಲಾಪುರ
really its good