
ಬೇಲೂರು-ರಸ್ತೆ ಸುರಕ್ಷತೆಯ ಬಗ್ಗೆ ಅರಿವಿದ್ದರೂ ಸಣ್ಣ ಪುಟ್ಟ ತಪ್ಪುಗಳಿಂದಾಗಿ ಜೀವ ಹಾನಿಯಾಗುತ್ತಿದೆ.ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಕೆ,ಹೆಲ್ಮೆಟ್ ಧರಿಸದೇ ಇರುವುದು ಹಾಗು ಅತೀವೇಗದ ಚಾಲನೆಗಳು ಅದಕ್ಕೆ ಪ್ರಮುಖ ಕಾರಣಗಳಾಗಿದ್ದು ಸವಾರರು ಈ ಎಲ್ಲ ಅಂಶಗಳ ಬಗ್ಗೆ ಗಮನ ಹರಿಸುವುದರಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳುವುದರ ಜೊತೆಗೆ ಪರರ ಜೀವಗಳನ್ನು ಉಳಿಸಬಹುದು ಎಂದು ಪಿ.ಎಸ್.ಐ ಎಸ್.ಜಿ ಪಾಟೀಲ್ ತಿಳಿಸಿದರು.
ಬಾರತ್ ಸ್ಕೌಟ್ಸ್ ಅ್ಯಂಡ್ ಗೈಡ್ಸ್ ಹಾಗೂ ಮೌಂಟ್ ಕಾರ್ಮೆಲ್ ಶಾಲೆಯ ಸಹಯೋಗದೊಂದಿಗೆ ನಡೆದ 2024-25 ನೇ ಸಾಲಿನ ರಸ್ತೆ ಸುರಕ್ಷಾ ಜಾಥಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಇಂದಿನ ದಿನಗಳಲ್ಲಿ ಅಪ್ರಾಪ್ತರಿಂದ ರಸ್ತೆ ಅವಘಡಗಳು ಸಂಭವಿಸುತ್ತಿದ್ದು ಪೋಷಕರು ಅವರಿಗೆ ವಾಹನಗಳನ್ನು ನೀಡಬಾರದು.18 ವರ್ಷ ತುಂಬಿದ ಸಾರಿಗೆ ಇಲಾಖೆಯಿಂದ ಲೈಸೆನ್ಸ್ ಪಡೆದ ನಂತರ ವಾಹನ ಚಾಲನೆಗೆ ಅವಕಾಶ ಮಾಡಿಕೊಡಬೇಕು.ದ್ವಿಚಕ್ರ ವಾಹನ ಚಲಾಯಿಸುವಾಗ ಹೆಲ್ಮೆಟ್ ಅನ್ನು ಹಾಗು ನಾಲ್ಕು ಚಕ್ರಗಳ ವಾಹನ ಚಲನ ಸಮಯದಲ್ಲಿ ಕಡ್ಡಾಯವಾಗಿ ಸೀಟ್ ಬೆಲ್ಟ್ ಹಾಕುವಂತೆ ತಮ್ಮ ಮಕ್ಕಳಲ್ಲಿ ಜಾಗ್ರತೆ ಮೂಡಿಸಬೇಕು ಎಂದು ಅವರು ಕರೆ ನೀಡಿದರು.
ಪೊಲೀಸ್ ಇಲಾಖೆಯಿಂದ ಪ್ರತಿವರ್ಷವೂ ರಸ್ತೆ ಸುರಕ್ಷತೆಯ ಬಗ್ಗೆ ಜಾತಾ ಗಳನ್ನು ನಡೆಸಿ ಸಾರ್ವಜನಿಕರಲ್ಲಿ ರಸ್ತೆ ಅಪಘಾತಗಳು ಹಾಗು ಪಾಲಿಸಬೇಕಾದ ನಿಯಮಗಳ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಮಾಡಲಾಗುತ್ತಿದೆ.ನಿಯಮ ಮೀರುವವರ ವಿರುದ್ಧ ಕ್ರಮಗಳನ್ನು ಕೈಗೊಳ್ಳುತ್ತಿದ್ದರು ಅವಘಡಗಳನ್ನು ಸಂಪೂರ್ಣವಾಗಿ ತಪ್ಪಿಸಲು ಸಾಧ್ಯವಾಗುತ್ತಿಲ್ಲ.ಶಾಲೆಗಳು ಮಕ್ಕಳಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ನಿರಂತರ ಅರಿವು ಮೂಡಿಸುವ ಕೆಲಸಗಳನ್ನು ಮಾಡಬೇಕು.ಆಗ ಅವರು ತಮ್ಮ ಹಿರಿಯರಿಗೂ ಸುರಕ್ಷತೆಯ ಪಾಠ ಹೇಳುವುದರ ಜೊತೆಗೆ ತಾವು ಸಹ ಅವನ್ನು ಅಳವಡಿಸಿಕೊಂಡು ಅಪಾಯದಿಂದ ಪಾರಾಗುತ್ತಾರೆಂದು ಪಿ.ಎಸ್.ಐ ಎಸ್.ಜಿ ಪಾಟೀಲ್ ಹೇಳಿದರು.

ಸ್ಕೌಟ್ ಅ್ಯಂಡ್ ಗೈಡ್ಸ್ ಪ್ರಧಾನ ಕಾರ್ಯದರ್ಶಿ ಪರಮೇಶ್ವರಪ್ಪ ಮಾತನಾಡಿ, ಪ್ರತಿವರ್ಷದಂತೆ ಈ ವರ್ಷವೂ ಸಹ ಪೊಲೀಸ್ ಇಲಾಖೆ ಹಾಗೂ ಮೌಂಟ್ ಕಾರ್ಮೆಲ್ ಶಾಲೆಯ ಸಹಯೋಗದೊಂದಿಗೆ ರಸ್ತೆ ಸುರಕ್ಷಾ ಜಾಥದ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತಿದೆ.ಪ್ರತಿನಿತ್ಯ ಮಾದ್ಯಮಗಳಲ್ಲಿ ಅಪಘಾತಗಳಿಂದ ಸಂಭವಿಸುವ ನೂರಾರು ಸಾವು ನೋವುಗಳ ಬಗ್ಗೆ ನೋಡುತ್ತಿದ್ದು ಎಷ್ಟೇ ಜಾಗೃತರಾದರೂ ಅವಘಡಗಳನ್ನು ತಡೆಗಟ್ಟಲು ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಲಕ್ಷಾಂತರ ಹಣ ಕೊಟ್ಟು ದ್ವಿ ಚಕ್ರ ವಾಹನವನ್ನು ಖರೀದಿಸುತ್ತೇವೆ.ತಮ್ಮ ಜೀವನಕ್ಕೆ ಅಮೂಲ್ಯವಾದ ಹೆಲ್ಮೆಟ್ ಬಳಸಲು ಹಿಂದೆ ಮುಂದೆ ನೋಡುತ್ತೇವೆ.ಪ್ರತಿಯೊಬ್ಬರು ಸೀಟ್ ಬೆಲ್ಟ್ ಹಾಗು ಹೆಲ್ಮೆಟ್ ಧರಿಸಿ ವಾಹನ ಚಲಾಯಿಸುವಂತೆ ಮನವಿ ಮಾಡಿದರಲ್ಲದೆ ಸಾರ್ವಜನಿಕರಲ್ಲಿ ಸಂಚಾರ ನಿಯಮದ ಬಗ್ಗೆ ಕರಪತ್ರ ನೀಡುವ ಮೂಲಕ ಅರಿವು ಮೂಡಿಸಿದರು.
ಪುಟ್ಟ ಮಕ್ಕಳು ಪಟ್ಟಣದ ರಸ್ತೆಗಳಲ್ಲಿ ಸಂಚರಿಸಿ ದೊಡ್ಡವರಲ್ಲಿ ರಸ್ತೆ ಸುರಕ್ಷತೆಯ ಅರಿವು ಮೂಡಿಸಿದರು.
ಈ ಸಂದರ್ಭದಲ್ಲಿ ಎ.ಎಸ್.ಐ ಚಂದ್ರಶೇಖರ್,ದೇವರಾಜು,ಶಿಕ್ಷಕರಾದ ಸಂದೀಪ್,ಕಾಂತಮಣಿ,ದ್ರಾಕ್ಷಾಯಿಣಿ.ಮಾನಸ ಹಾಜರಿದ್ದರು.