ಬೇಲೂರು-ಹನುಮ ಜಯಂತಿಯಂದು ಮುಸಲ್ಮಾನರು ಸಿಹಿ-ತಂಪುಪಾನೀಯ ಹಂಚುವ ಮೂಲಕ ಹೊಸ ಅಧ್ಯಾಯವನ್ನು ಪ್ರಾರಂಭ ಮಾಡಿದ್ದಾರೆ-ಹನುಮ ಜಯಂತಿ ಸಮಿತಿ ಅಧ್ಯಕ್ಷ ಮೋಹನ್ ಕುಮಾರ್

ಬೇಲೂರು-ಬೇಲೂರು ಸೌಹಾರ್ದತೆಗೆ ಹೆಸರಾಗಿದ್ದು ಹನುಮ ಜಯಂತಿ ಸಂದರ್ಭದಲ್ಲಿ ಮುಸಲ್ಮಾನ ಸಮುದಾಯದ ಮುಖಂಡರು ತಂಪುಪಾನೀಯ ಹಾಗು ಸಿಹಿಯನ್ನು ಹಂಚುವ ಮೂಲಕ ಹೊಸದೊಂದು ಅಧ್ಯಾಯವನ್ನೇ ಪ್ರಾರಂಭ ಮಾಡಿದ್ದಾರೆ.ಈದ್ ಮಿಲಾದ್ ಶೋಭಾಯಾತ್ರೆಯಂದು ನಾವುಗಳು ಹಣ್ಣು-ಹಂಪಲು ವಿತರಿಸುತ್ತೇವೆ.ಇಲ್ಲಿ ನಾವೆಲ್ಲರೂ ಅಣ್ಣತಮ್ಮಂದಿರಂತೆ ವಾಸಿಸುತ್ತಿದ್ದೇವೆ ಎಂದು ಹನುಮ ಜಯಂತಿ ಸಮಿತಿ ಅಧ್ಯಕ್ಷ ಮೋಹನ್ ಕುಮಾರ್ ಹೇಳಿದರು.

ಬೇಲೂರು ಪೊಲೀಸ್ ಠಾಣೆಯ ಆವರಣದಲ್ಲಿ ಡಿ ವೈ ಎಸ್ ಪಿ ಲೋಕೇಶ್ ಅವರ ನೇತೃತ್ವದಲ್ಲಿ ನಡೆದ ಸರ್ವಧರ್ಮೀಯರ ಸಮನ್ವಯ ಶಾಂತಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಇಷ್ಟೆಲ್ಲ ಅನೋನ್ಯತೆ ಇದ್ದರು ಸಣ್ಣಪುಟ್ಟ ಗೊಂದಲಗಳು ಎರಡು ಸಮುದಾಯದ ನಡುವೆ ಕೆಲವೊಮ್ಮೆ ಘಟಿಸಿವೆ.ಅದಕ್ಕೆಲ್ಲ ಕಾರಣವಾಗಿದ್ದು ಹೊರ ಜಿಲ್ಲೆಗಳಿಂದ ಆಗಮಿಸುವ ಕಿಡಿಗೇಡಿಗಳು.ಅವರ ಮಾಹಿತಿಯನ್ನು ಕಲೆಹಾಕಿ ಸಂಭ್ರಮದ ಸನ್ನಿವೇಶಗಳಲ್ಲಿ ಇಲ್ಲಿಗೆ ಬಾರದಂತೆ ತಡೆಯುವ ಕೆಲಸವನ್ನು ಪೊಲೀಸ್ ಇಲಾಖೆ ಹಾಗು ಆಯಾ ಸಂಘಟನೆಯ ಮುಖಂಡರು ಮಾಡಬೇಕು ಎಂದು ಮೋಹನ್ ಕುಮಾರ್ ಮನವಿ ಮಾಡಿಕೊಂಡ\ರು.

ಡಿ ವೈ ಎಸ್ ಪಿ ಲೋಕೇಶ್ ಮಾತನಾಡಿ 16ರ ಸೋಮವಾರದಂದು ಪ್ರವಾದಿ ಮಹಮ್ಮದ್ ಪೈಗಂಬರ್ ರವರ ಜನ್ಮದಿನಾಚರಣೆ ಅಂಗವಾಗಿ ಬೇಲೂರಿನಲ್ಲಿ ನಡೆಯುವ ಶೋಭಾ ಯಾತ್ರೆಯನ್ನ,ಪೊಲೀಸ್ ಇಲಾಖೆಯ ಮಾರ್ಗದರ್ಶನದಲ್ಲಿ,ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟು,ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ,ಯಶಸ್ವಿಯಾಗಿ ಸಮುದಾಯದ ಮುಖಂಡರು ನಡೆಸಿಕೊಡಬೇಕು ಎಂದು ತಿಳಿಸಿದರು.

ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಸೈಯ್ಯದ್ ತೌಫಿಕ್ ಮಾತನಾಡಿ ನಾವೆಲ್ಲರೂ ಅಣ್ಣತಮ್ಮಂದಿರಂತೆ ಕೂಡಿ ಬಾಳುತ್ತಿದ್ದೇವೆ.ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸುಳ್ಳು ಸುದ್ದಿಗಳನ್ನು ನಂಬದೆ ಸತ್ಯಾಸತ್ಯತೆ ಪರಿಶೀಲಿಸಿ ಪ್ರಬುದ್ಧವಾಗಿ ಎರಡು ಸಮುದಾಯದ ಜನರು ನಡೆದುಕೊಳ್ಳಬೇಕಾಗಿದೆ.ಪೊಲೀಸ್ ಇಲಾಖೆ ಸುಳ್ಳು ಸುದ್ದಿ ಹಬ್ಬಿಸುವವರ ಹೆಡೆಮುರಿ ಕಟ್ಟುವ ಕೆಲಸ ಮಾಡಬೇಕು.ಮನುಷ್ಯನ ಉನ್ನತಿಗೆ ಬಳಸಿಕೊಳ್ಳಬೇಕಾದ ಸಾಮಾಜಿಕ ಜಾಲತಾಣಗಳು ಇಂದು ಅವನತಿಗೆ ಕಾರಣವಾಗುತ್ತಿರುವುದು ನಿಜಕ್ಕೂ ದುರದೃಷ್ಟಕರ ಎಂದು ಬೇಸರ ಹೊರ ಹಾಕಿದರು.

ಕಾಂಗ್ರೆಸ್ ಮುಖಂಡ ಯಮಸಂದಿ ಪಾಪಣ್ಣ ಮಾತನಾಡಿ ಚುನಾವಣಾ ಸಮಯದಲ್ಲಿ ಹಾಗು ಇನ್ನಿತರ ಸಮಯದಲ್ಲೂ ಧರ್ಮ-ಧರ್ಮಗಳ ಮದ್ಯೆ ಕಿಡಿ ಹಚ್ಚುವ ಕೆಲಸಗಳನ್ನು ಹಲವು ರಾಜಕೀಯ ನಾಯಕರುಗಳು ಮಾಡುತ್ತಿದ್ದಾರೆ.ಅವರ ಸ್ವಾರ್ಥಕ್ಕೆ ಬಲಿಯಾಗದೆ ನಾವೆಲ್ಲರೂ ಸಹಬಾಳ್ವೆ ನಡೆಸೋಣ ಎಂದು ಕರೆಕೊಟ್ಟರು.

ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ,ಬೇಲೂರು ವಿಶ್ವವಿಖ್ಯಾತ ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿದ್ದು,ಶ್ರೀ ಚನ್ನಕೇಶವ ದೇವಾಲಯದ ಶಿಲ್ಪಕಲೆ ಸವಿಯಲು ದಿನನಿತ್ಯ ಸಾವಿರಾರು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ.ಇಂಥ ಸಂದರ್ಭದಲ್ಲಿ ಸುಗಮ ಸಂಚಾರಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ,ಪೊಲೀಸ್ ಇಲಾಖೆ ಎಚ್ಚರ ವಹಿಸಬೇಕು.ಹೆಚ್ಚಿನ ಸಿಬ್ಬಂದಿ ನಿಯೋಜಿಸಿ ಶ್ರೀ ಚನ್ನಕೇಶವ ದೇವಾಲಯ ಬಳಿ ಪ್ರವಾಸಿಗರಿಗೆ ಆಗುವಂತಹ ತೊಂದರೆ ಸರಿಪಡಿಸಬೇಕು ಎಂದು ಮನವಿ ಮಾಡಿದರು.

ಸರ್ಕಲ್ ಇನ್ಸ್ಪೆಕ್ಟರ್ ಜಯಪ್ರಕಾಶ್ ಮಾತನಾಡಿ,ಬೇಲೂರಿನ ಸೌಹಾರ್ದತೆ ನೋಡಿ ತುಂಬಾ ಸಂತೋಷವಾಗಿದೆ.ಇದನ್ನೇ ಮುಂದುವರೆಸುವ ಕೆಲಸವಾಗಲಿ.ಯಾವುದೇ ದುಷ್ಟ ಶಕ್ತಿಗಳು ಸಾಮರಸ್ಯ ಕೆಡಿಸುವ ಕೆಲಸ ಮಾಡಲು ಮುಂದಾದರೆ ಅಂತಹವರ ಬಗ್ಗೆ ನಮಗೆ ಮಾಹಿತಿ ನೀಡಿ.ಮಾಹಿತಿ ನೀಡುವವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷೆ ಭಾರತಿ ಗೌಡ,ಪುರಸಭಾ ಸದಸ್ಯ ಜಮಾಲುದ್ದೀನ್, ಮಾನವ ಹಕ್ಕು ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ನಿಂಗರಾಜ್,ಉಪನ್ಯಾಸಕ ರಘು,ಪುರಸಭಾ ಸದಸ್ಯ ಪರ್ವೀಜ್, ಫಯಾಜ್,ವಿವಿಧ ಮಸೀದಿಯ ಅಧ್ಯಕ್ಷರು ಕಾರ್ಯದರ್ಶಿಗಳು,ಅಬ್ದುಲ್ ಖಾದರ್,ಸಬ್ ಇನ್ಸ್ಪೆಕ್ಟರ್ ಜಿತೇಂದ್ರ,ಪೊಲೀಸ್ ಇಲಾಖೆಯ ಸಿಬ್ಬಂದಿಗಳಾದ ದೇವರಾಜ್, ಚೇತನ್, ನವೀನ್, ಪ್ರವೀಣ್ ಇನ್ನಿತರರು ಹಾಜರಿದ್ದರು.

———————--ನೂರ್ ಅಹಮ್ಮದ್

Leave a Reply

Your email address will not be published. Required fields are marked *

× How can I help you?