ಬೇಲೂರು-ಕೋಟೆ ಶೃಂಗೇರಿ ಶಾರದಾ ಪೀಠ ಶಾಖಾಮಠದಲ್ಲಿ ತುಳಸಿ ಪೂಜೆಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಬೇಲೂರು-ಹಿಂದೂ ಧರ್ಮದಲ್ಲಿ,ಅನೇಕ ಸಸ್ಯಗಳು ಮತ್ತು ಮರಗಳಿಗೆ ಪವಿತ್ರ ಸ್ಥಾನ ನೀಡಿ ದೇವತೆಗಳಾಗಿ ಪೂಜಿಸಲಾಗುತ್ತಿದ್ದು ತುಳಸಿ ಹಾಗೂ ನೆಲ್ಲಿ ಗಿಡಗಳಿಗೆ ಹೆಚ್ಚು ಪ್ರಾಧಾನ್ಯತೆ ನೀಡಲಾಗುತ್ತಿದೆ ಎಂದು ವೇದಬ್ರಹ್ಮ ಕೆಆರ್ ಮಂಜುನಾಥ್ ಹೇಳಿದರು.

ಪಟ್ಟಣದ ಕೋಟೆ ಶೃಂಗೇರಿ ಶಾರದಾ ಪೀಠ ಶಾಖಾಮಠದಲ್ಲಿ ಸಾಮೂಹಿಕ ತುಳಸಿ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿ,ತುಳಸಿ ಗಿಡವನ್ನು ಲಕ್ಷ್ಮಿ ಸ್ವರೂಪಿ ಎಂದು,ನೆಲ್ಲಿ ಗಿಡವನ್ನು ಧಾತ್ರಿ ಎಂದು ಪೂಜಿಸುವುದು ಸಂಪ್ರದಾಯವಾಗಿದೆ.ನಮ್ಮ ಧಾರ್ಮಿಕ ಆಚರಣೆಯಲ್ಲಿ ಗಿಡಗಳ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಲಾಗಿದೆ.ಗಿಡ ಮರವನ್ನು ಉಳಿಸಿ ಬೆಳೆಸುವಲ್ಲಿ ಧಾರ್ಮಿಕ ಮನೋಭಾವ ಬೆರೆತಿದೆ.ಇತ್ತೀಚಿನ ದಿನಗಳಲ್ಲಿ ನೆಲ್ಲಿ ಗಿಡವನ್ನು ಮರೆತುಬಿಟ್ಟಿದ್ದೇವೆ.ಭೂಮಿಯಲ್ಲಿ ಮೊದಲು ಹುಟ್ಟಿದ್ದೆ ನೆಲ್ಲಿ ಗಿಡ ಎಂಬ ಪ್ರತೀತಿ ಇದೆ ಎಂದರು.

ಶ್ರೀ ಕೃಷ್ಣ ಪರಮಾತ್ಮನಿಗೆ ಪ್ರಿಯವಾದ ಸಸ್ಯಗಳಲ್ಲೊಂದು ತುಳಸಿ.ಇದನ್ನು ಪವಿತ್ರ ತುಳಸಿ ಎಂದೂ ಕರೆಯುತ್ತಾರೆ.ತುಳಸಿಯನ್ನು ಶುದ್ಧತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ.ಇದು ಅತ್ಯುತ್ತಮ ಔಷಧೀಯ ಗುಣಗಳನ್ನು ಹೊಂದಿದೆ ಮತ್ತು ಹೆಚ್ಚಿನ ಹಿಂದೂ ಮನೆಗಳಲ್ಲಿ ಕಂಡುಬರುತ್ತದೆ.ಹಿಂದೂ ಸಂಸ್ಕೃತಿಯಲ್ಲಿ ತುಳಸಿ ಪೂಜೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.

ಹಿಂದೂಗಳ ಮನೆಯಲ್ಲಿ ಸಾಮಾನ್ಯವಾಗಿ ತುಳಸಿ ಗಿಡವಿರುವುದು ವಾಡಿಕೆಯಾಗಿದ್ದು, ತುಳಸಿ ಗಿಡ ಐಶ್ವರ್ಯವನ್ನೂ, ಸಂತಸವನ್ನೂ ತರುತ್ತದೆ.ಅಕಾಲಿಕ ಮರಣ ತಡೆಯುತ್ತದೆ ಎನ್ನುವ ನಂಬಿಕೆಯಿದೆ.ಆಯುರ್ವೇದದಲ್ಲಿ ಪ್ರಮುಖ ಔಷಧ ಸಸ್ಯವೂ ಆಗಿರುವುದು ತುಳಸಿಯ ಮಹತ್ವವನ್ನು ತಿಳಿಸಲಾಗಿದೆ.ತುಳಸಿ ಗಿಡದೊಂದಿಗೆ ಬೆಟ್ಟದ ನಲ್ಲಿಕಾಯಿಯ ರೆಂಬೆಯನ್ನು ಇಟ್ಟು , ಕೃಷ್ಣನ ಮೂರ್ತಿ ಅಥವಾ ಫೋಟೋ ಪೂಜಿಸಿ ಮುತೈದೆಯರಿಗೆ ಅರಿಶಿಣ ಕುಂಕುಮ ನೀಡುವುದು ಈ ಆಚರಣೆಯ ವೈಶಿಷ್ಟ್ಯವಾಗಿದೆ.ಇದೆ ಸಂದರ್ಭದಲ್ಲಿ ಶ್ರೀ ರಾಮ ಮಂದಿರ ಪ್ರತಿಷ್ಠಾಪನೆಯಾಗಿ ಎರಡು ವರ್ಷವಾಗಿದ್ದು ರಾಮನ ಮೂರ್ತಿಯನ್ನು ಇಟ್ಟು ಪೂಜೆ ಮಾಡಲಾಗಿದೆ ಎಂದು ಹೇಳಿದರು.

ಶೃಂಗೇರಿ ಶಾಖಾಮಠದ ಕಾರ್ಯದರ್ಶಿ ಆರ್ ಸುಬ್ರಹ್ಮಣ್ಯ, ಗಾಯತ್ರಿ ಭಜನಾ ಮಂಡಳಿಯ ಸದಸ್ಯರು ಹಾಗೂ ವಿಪ್ರ ಸಮುದಾಯದವರು ಪೂಜೆಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

× How can I help you?