ಬೇಲೂರು;-ತಾಲೂಕಿನ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಮಲತಾಯಿ ದೋರಣೆ ತೋರುತ್ತಿದ್ದಾರೆ.ಸೌಜನ್ಯಕ್ಕಾದರೂ ಬೇಲೂರಿಗೆ ಭೇಟಿ ನೀಡುವ ಔದಾರ್ಯ ತೋರುತ್ತಿಲ್ಲ ಎಂದು ಕನ್ನಡ ಪರ ಸಂಘಟನೆಯ ಪದಾಧಿಕಾರಿಗಳು ಗರಂ ಆಗಿದ್ದಾರೆ.
ಯಗಚಿ ಜಲಾಶಯದ ಬಳಿ ಪತ್ರಕರ್ತರೊಂದಿಗೆ ಕರ್ನಾಟಕ ರಕ್ಷಣಾ ವೇದಿಕೆ(ನಾರಾಯಣಗೌಡ ಬಣ) ತಾಲ್ಲೂಕು ಅಧ್ಯಕ್ಷ ಚಂದ್ರಶೇಖರ್ ಹಾಗು ಕರ್ನಾಟಕ ರಕ್ಷಣಾ ವೇದಿಕೆ[ಪ್ರವೀಣಶೆಟ್ಟಿ ಬಣ] ತಾಲ್ಲೂಕು ಅಧ್ಯಕ್ಷ ವಿ.ಎಸ್.ಬೋಜೇಗೌಡ ಮಾತನಾಡಿದರು.
ವಿಶ್ವ ಪಾರಂಪರಿಕಪಟ್ಟಿಗೆ ಸೇರ್ಪಡೆಯಾಗುವ ಮೂಲಕ ಜಾಗತಿಕ ಮನ್ನಣೆ ಪಡೆದ ಬೇಲೂರಿನ ಮೇಲೆ ಸರ್ಕಾರ ಹಾಗೂ ಸಂಬಂಧ ಪಟ್ಟ ಅಧಿಕಾರಿಗಳು ತೀವ್ರ ನಿರ್ಲಕ್ಷ್ಯ ದೋರಣೆ ತೋರು ತ್ತಿದ್ದಾರೆ.ಈ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಯಗಚಿ ಡ್ಯಾಮ್ ಮೂರು ಬಾರಿ ಭರ್ತಿಯಾದರು ಸಹ ಬಾಗಿನ ಅರ್ಪಿಸಲು ಉಸ್ತುವಾರಿ ಸಚಿವರಿಗೆ ಅರಿವಿಲ್ಲ.ಹೊಯ್ಸಳ ಮತ್ತು ಹಲ್ಮಿಡಿ ಉತ್ಸವಗಳ ನಡೆಸುವ ಬಗ್ಗೆ ಚಕಾರ ಎತ್ತುತ್ತಿಲ್ಲ.
ಉಸ್ತುವಾರಿ ಸಚಿವರಾದ ಕೆ ರಾಜಣ್ಣನವರು ಹಾಸನಾಂಬ ದೇವಾಲಯದ ಬಗ್ಗೆ ತೋರಿಸಿರುವ ಕಾಳಜಿಯಲ್ಲಿ ಎಳ್ಳಷ್ಟನ್ನಾದರೂ ಬೇಲೂರಿನ ಬಗ್ಗೆ ತೋರಿಸಬಹುದಿತ್ತು ಎಂದು ಬೇಸರ ಹೊರಹಾಕಿದರು.
ಹಲವಾರು ತಾಲೂಕಿಗಳಿಗೆ ನೀರು ಕೊಡುವ ಯಗಚಿ ಡ್ಯಾಮ್ ನಿಂದ ಬೇಲೂರು ನಗರ ಮತ್ತು ತಾಲೂಕಿನ ಜನರಿಗೆ ಒಂದಷ್ಟು ಅನುಕೂಲಗಳಾಗಿಲ್ಲ.2004 ರಲ್ಲಿ ಡ್ಯಾಮ್ ನಿರ್ಮಾಣ ವಾದಾಗಲೇ ಇಲ್ಲಿನ ರಾಜಕಾರಣಿಗಳು ತಾಲೂಕಿನ ಹಕ್ಕಿನ ಪಾಲನ್ನು ಕೇಳಬಹುದಿತ್ತು. ದೂರದೃಷ್ಟಿ ಇಲ್ಲದ ಅವರಿಂದ ಬೇಲೂರಿನ ಪರಿಸ್ಥಿತಿ ಕಡಲೆಯಿದ್ದರೂ ಹಲ್ಲಿಲ್ಲ ಎಂಬಂತಾಗಿದೆ ಎಂದು ದುಃಖ ವ್ಯಕ್ತಪಡಿಸಿದರು.
ಸ್ವಾತಂತ್ರ್ಯ ಬಂದಾಗಿನಿಂದಲೂ ಇಲ್ಲಿ ಶಾಸಕರಾಗಿ ಆಯ್ಕೆಯಾದವರು ಬೇಲೂರನ್ನು ಹಾಗೆ-ಹೀಗೆ ಅಭಿವೃದ್ಧಿ ಮಾಡುತ್ತೇವೆಂದು ನಾಗರೀಕರ ಮೂಗಿಗೆ ತುಪ್ಪವನ್ನೇ ಒರೆಸುತ್ತಾ ಬಂದಿ ದ್ದಾರೆ.ಹಿಂದಿನ ಶಾಸಕ ಕೆ ಎಸ್ ಲಿಂಗೇಶ್ ಒಂದು ಹೆಜ್ಜೆ ಮುಂದೆ ಹೋಗಿ ಕೆ.ಆರ್.ಎಸ್ ಮಾದರಿಯಲ್ಲಿ ಹೈಟೆಕ್ ಉದ್ಯಾನವನ ನಿರ್ಮಿಸುವ ಭರವಸೆ ನೀಡಿದ್ದರು.ಅವರಿಗೆ ಕನಿಷ್ಠ ಪಕ್ಷ ಪ್ರವಾಸಿಗರಿಗೋಸ್ಕರ ಒಂದು ಶೌಚಾಲಯವನ್ನು ನಿರ್ಮಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.
ಆದಷ್ಟು ಶೀಘ್ರ ಉಸ್ತುವಾರಿ ಸಚಿವರಾದ ಕೆ ರಾಜಣ್ಣನವರು ತಾಲೂಕಿಗೆ ಭೇಟಿ ನೀಡಿ ಜನರ ಕಷ್ಟಗಳನ್ನು ಆಲಿಸಲು ಮುಂದಾಗಬೇಕು.ಹೊಯ್ಸಳ ಮತ್ತು ಹಲ್ಮಿಡಿ ಉತ್ಸವಗಳ ಆಚರಿಸಲು ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಕನ್ನಡ ಪರ ಸಂಘಟನೆಗಳ ವತಿಯಿಂದ ಧರಣಿ ಸತ್ಯಾಗ್ರಹ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಎರಡು ಸಂಘಟನೆಯ ಅಧ್ಯಕ್ಷರುಗಳು ಗಂಭೀರ ಎಚ್ಚರಿಕೆಯನ್ನು ನೀಡಿದರು.