ಬೇಲೂರು-150 ವರ್ಷಗಳಷ್ಟು ಹಳೆಯ ಯಗಚಿ ಸೇತುವೆಯನ್ನು ಶಾಸಕರಾಗಲಿ ಅಥವಾ ಹೆದ್ದಾರಿ ಪ್ರಾಧಿಕಾರವಾಗಲಿ ತೆರವುಗೊಳಿಸಲು ಮುಂದಾದರೆ ಕರವೇ ವತಿಯಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುವ ಎಚ್ಚರಿಕೆಯನ್ನು ಕರವೇ ತಾಲೂಕು ಅಧ್ಯಕ್ಷರಾದ ಚಂದ್ರಶೇಖರ್ ನೀಡಿದರು.
ಅವರು ಇಂದು ‘ಯಗಚಿ ಸೇತುವೆ ಉಳಿಸಿ’ ಎಂಬ ಘೋಷವಾಕ್ಯದ ಅಡಿ ತಮ್ಮ ಸಂಘಟನೆಯ ವತಿಯಿಂದ ಹಮ್ಮಿಕೊಂಡಿದ್ದ ವಿನೂತನ ಪ್ರತಿಭಟನೆಯ ಸಾರಥ್ಯವಹಿಸಿ ಮಾತನಾಡಿದರು.
ನಾವು ಕಳೆದ ಹತ್ತಾರು ವರ್ಷಗಳಿಂದ ಶತಮಾನದಷ್ಟು ಹಳೆಯ ಯಗಚಿ ಸೇತುವೆಯನ್ನು ಸಂರಕ್ಷಿಸುವಂತೆ ಆಗ್ರಹಿಸಿ ಮನವಿ ಪತ್ರಗಳನ್ನು ನೀಡುವುದು ಹಾಗು ಪ್ರತಿಭಟನೆಗಳನ್ನು ನಡೆಸಿಕೊಂಡು ಬರುತ್ತಿದ್ದೇವೆ.
ಆ ಸಮಯಕ್ಕೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಆಗಮಿಸಿ ಶಿಥಿಲಗೊಳ್ಳುತ್ತಿರುವ ಸೇತುವೆಗೆ ಕಾಯಕಲ್ಪ ನೀಡುವ ಸುಳ್ಳು ಭರವಸೆ ನೀಡಿ ನಮ್ಮನ್ನು ಸಾಗಹಾಕುತ್ತಾರೆ.ಇತ್ತೀಚಿಗೆ ಸೇತುವೆಯ ಮೇಲೆ ಬೆಳೆದಿರುವ ಗಿಡಗಂಟೆಗಳನ್ನು ಬುಡ ಸಮೇತ ಕೀಳದೆ, ಕತ್ತರಿಸಿ,ತಡೆಗೋಡೆಗೆ ಸುಣ್ಣ ಬಳಿದು,ಒಂದಿಂಚು ಟಾರನ್ನು ಹಾಕಿದ್ದರು.
ಕಳಪೆ ಕಾಮಗಾರಿಯ ಕಾರಣಕ್ಕೆ ಸುಣ್ಣ ಮಳೆಗೆ ತೊಳೆದುಹೋಗಿ,ಕತ್ತರಿಸಿದ್ದ ಗಿಡಗಳು ಮರಗಳಾಗಿ ಬೆಳೆದು,ಒಂದಿಂಚು ಟಾರು ಜಲ್ಲಿಯಾಗಿ ಬದಲಾಗಿದೆ.
ಆ ಕಾರಣಕ್ಕೆ ನಾವಿಂದು ಸೇತುವೆಯ ಮೇಲೆಯೇ ಅಡುಗೆ ಮಾಡುವ ಮೂಲಕ ವಿನೂತನ ಪ್ರತಿಭಟನೆಯನ್ನು ಹಮ್ಮಿಕೊಂಡು ಹೆದ್ದಾರಿ ಪ್ರಾಧಿಕಾರದ ಗಮನ ಸೆಳೆಯುವ ಕೆಲಸವನ್ನು ಮಾಡುತ್ತಿದ್ದೇವೆ.
ಈ ಸೇತುವೆ ಇತ್ತೀಚಿನ ದಿನಗಳಲ್ಲಿ ಶಿಥಿಲಗೊಳ್ಳುತ್ತಿದ್ದು ಇದನ್ನು ತೆರವುಗೊಳಿಸುವ ಹುನ್ನಾರ ನಡೆದಿದೆ ಎಂಬ ಮಾಹಿತಿಗಳಿದ್ದು ನಾವದಕ್ಕೆ ಸರ್ವತಾ ಅವಕಾಶ ಮಾಡಿಕೊಡುವುದಿಲ್ಲ.ಈ ಸೇತುವೆಗು ಬೇಲೂರು ಜನರಿಗೂ ಒಂದು ಭಾವನಾತ್ಮಕ ಸಂಬಂಧವಿದೆ.ಮರೆಯಲಾರದ ನೆನಪುಗಳಿವೆ.
ಇದನ್ನು ಒಂದಷ್ಟು ಹಣ ವ್ಯಯಿಸಿ ಸರಿಪಡಿಸಿದರೆ ಲಘುವಾಹನಗಳ ಅಥವಾ ಪಾದಚಾರಿಗಳ ಓಡಾಟಕ್ಕಾದರೂ ಉಪಯೋಗವಾಗಲಿದೆ ಎಂದರು.
ಶಾಸಕರು ಈ ಸೇತುವೆಯನ್ನು ಉಳಿಸಲು ಶ್ರಮವಹಿಸಬೇಕು.ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರ ಕಾಯಕಲ್ಪಕ್ಕೆ ಮುಂದಾಗುವಂತೆ ಕರವೇ ಚಂದ್ರಶೇಖರ್ ಆಗ್ರಹಿಸಿದರು.
ಪ್ರತಿಭಟನೆ ವೇಳೆ ಕರವೇ ಪದಾಧಿಕಾರಿಗಳಾದ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್,ಜಿಲ್ಲಾ ಉಪಾಧ್ಯಕ್ಷ ಸೀತಾರಾಂ, ಉಪಾಧ್ಯಕ್ಷ ಹನೀಫ್. ಗೌರವಾಧ್ಯಕ್ಷ ತಾರಾನಾಥ, ಕುಮಾರ್, ನಗರಾಧ್ಯಕ್ಷ ಮೋಹನಗೌಡ, ಮಹಿಳಾ ಘಟಕ ಅಧ್ಯಕ್ಷೆ ವಿಶಾಲಾಕ್ಷಿ, ಗಂಗರಾಜು, ಬಳ್ಳೂರು ಮದನ್, ಪ್ರಸನ್ನ, ಮಹೇಶ್, ಸೋಮಶೇಖರ ಇನ್ನೂ ಮುಂತಾದವರು ಹಾಜರಿದ್ದರು.
ಒಂದು ಮಾತು-
ಚಂದ್ರಶೇಖರ್ ಕಳೆದ ಹತ್ತಾರು ವರ್ಷಗಳಿಂದ ಕರವೇ ಅಧ್ಯಕ್ಷರಾಗಿ ತಾಲೂಕು ಆಡಳಿತ ಹಾಗು ಸಾರ್ವಜನಿಕರ ಸಂಪರ್ಕ ಸೇತುವಾಗಿ ಕೆಲಸಮಾಡಿಕೊಂಡು ಬರುತ್ತಿದ್ದಾರೆ.
ನೆಲ-ಜಲ-ಭಾಷಾ ಹೋರಾಟಗಳ ಜೊತೆಗೆ ಬೇಲೂರಿನ ಸಮಸ್ಯೆಗಳ ಬಗ್ಗೆಯೂ ಧ್ವನಿ ಎತ್ತುತ್ತ,ಆ ಕಾರಣಕ್ಕೆ ದುಷ್ಟ,ದುರುಳರ ಕೆಂಗಣ್ಣಿಗೂ ಗುರಿಯಾಗಿದ್ದಾರೆ ಎಂದರೆ ತಪ್ಪಾಗಲಾರದು.
ಯಗಚಿ ಸೇತುವೆ ಅಧಿಕಾರಿ ವರ್ಗಕ್ಕೆ,ರಾಜಕಾರಣಿಗಳಿಗೆ ಕೇವಲ ಸೇತುವೆಯಾಗಿ ಕಂಡರೆ ಅದು ಚಂದ್ರಶೇಖರ್ ರವರಿಗೆ ಭಾವನಾತ್ಮಕ ಆಸ್ತಿಯಾಗಿ ಕಾಣಿಸುತ್ತೆ.ಅವರು ಹೇಳುವ ಹಾಗೆ ಯಗಚಿ ಸೇತುವೆ ನೂರಾರು ವರ್ಷಗಳ ಕೋಟ್ಯಾಂತರ ಜನರ ನೆನಪುಗಳ ಆಗರವಾಗಿದೆ.ಅದನ್ನು ಉಳಿಸಿ ಸಂರಕ್ಷಿಸುವ ಕೆಲಸವನ್ನು ಅಧಿಕಾರಿ ವರ್ಗ ಹಾಗು ರಾಜಕಾರಣಿಗಳು ಮಾಡಲೇಬೇಕಿದೆ.