ಬೇಲೂರು-ಜಾನಪದ ಕಲೆಯು ಮಾನವೀಯ ಮೌಲ್ಯ,ನಂಬಿಕೆ ಮತ್ತು ಸೃಜನಶೀಲತೆ ಹೊಂದಿದೆ-ರಾಜೇಗೌಡ

ಬೇಲೂರು:-ಜಾನಪದ ಕಲೆಯು ಸಮುದಾಯದ ಆತ್ಮವನ್ನು ಪ್ರತಿನಿಧಿಸುತ್ತದೆ,ಅದರ ಮೌಲ್ಯಗಳು,ನಂಬಿಕೆಗಳು ಮತ್ತು ಇತಿಹಾಸವನ್ನು ಒಳಗೊಂಡಿರುತ್ತದೆ.ಇದು ಮಾನವೀಯತೆಯ ಸೃಜನಶೀಲತೆ,ಸ್ಥಿತಿಸ್ಥಾಪಕತ್ವ ಮತ್ತು ಸಾಂಸ್ಕೃತಿಕ ವೈವಿಧ್ಯತೆಗೆ ರೋಮಾಂಚಕ ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಬೇಲೂರು ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಗೌಡ ಹೇಳಿದರು.

ಪಟ್ಟಣದ ಬಿಕ್ಕೋಡು ರಸ್ತೆಯ ಬಾಲಕಿಯರ ಪ್ರೌಢ ಶಾಲೆಯ ಸಭಾಂಗಣದಲ್ಲಿ ತಾಲ್ಲೂಕು ಜಾನಪದ ಸಾಹಿತ್ಯ ಪರಿಷತ್ತು ಇವರ ವತಿಯಿಂದ ವಿಶ್ವ ಜಾನಪದ ದಿನದ ಅಂಗವಾಗಿ ವಿವಿಧ ಶಾಲೆ ವಿದ್ಯಾರ್ಥಿಗಳಿಗೆ ಏರ್ಪಡಿಸದಲಾಗಿದ್ದ  ಜಾನಪದ ಗೀತೆ ಗಾಯನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು,ಜನಪದರು ಜೀವಪರವಾಗಿದ್ದರು,ಅವರು ಎಂದಿಗೂ ಸಮಾಜದಲ್ಲಿ ಮನುಷ್ಯ ಮನುಷ್ಯನ ನಡುವೆ ಹೊಡೆದಾಡುವ ಸನ್ನಿವೇಶವನ್ನು ಸೃಷ್ಟಿಸಲಿಲ್ಲ.ಆದರೆ ಈಚಿನ ವರ್ಷಗಳಲ್ಲಿ ಯುದ್ಧೋತ್ಸಾಹ ಹೆಚ್ಚಾಗಿ, ಮಾನವೀಯತೆ ಕಾಣೆಯಾಗಿ,ತಾರತಮ್ಯ ಭಾವನೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಜಾನಪದ ಸಾಹಿತ್ಯ ಪ್ರತಿ ಸಾಹಿತ್ಯದ ಅಡಿಪಾಯವಾದ ಹಿನ್ನೆಲೆಯಲ್ಲಿ ಅದನ್ನು ಉಳಿಸಿ ಬೆಳೆಸುವ ಕೆಲಸವನ್ನು ‌ಮಾಡಬೇಕಿದೆ.ವಿಶೇಷವಾಗಿ ಜಾನಪದ ಸಾಹಿತ್ಯದ ಪರಿಚಯವನ್ನು ಯುವ ಪೀಳಿಗೆಗೆ ನೀಡುವ ಕೆಲಸವನ್ನು ಕರ್ನಾಟಕ ಜಾನಪದ ಸಾಹಿತ್ಯ ಪರಿಷತ್ತು ವೈವಿಧ್ಯಮಯ ಕಾರ್ಯಕ್ರಮ ನಡೆಸುತ್ತಿರುವುದು ನಿಜಕ್ಕೂ ಅಗಮ್ಯವಾಗಿದೆ ಎಂದರು.

ಕೆಡಿಪಿ ಸದಸ್ಯೆ ಸೌಮ್ಯ ಅನಂದ ಮಾತನಾಡಿ,ಜನಪದ ಕಲೆ ಯಾವ ಕಾಲಘಟ್ಟದಲ್ಲಿಯೂ ನಾಶವಾಗದೆ ಮುಂದುವರೆಯುತ್ತಿದ್ದು, ಅದರ ಸಂರಕ್ಷಣೆಗೆ ನಾವೆಲ್ಲರೂ ಬದ್ಧರಾಗಬೇಕು. ದೇಶದಲ್ಲಿ ಬೇರೆ ಕಲಾವಿದರಿಗೆ ಸಿಕ್ಕಿರುವ ಗೌರವ ಹಾಗೂ ಮನ್ನಣೆಗಳು ಜನಪದ ಕಲಾವಿದರಿಗೆ ದೊರಕುತ್ತಿಲ್ಲ. ಇದಕ್ಕೆ ಹಲವು ಲೋಪಗಳಿದ್ದರೂ, ಅದೆಲ್ಲವನ್ನು ಬದಿಗೊತ್ತಿ ಕಲೆಯನ್ನು ಜೀವನವನ್ನಾಗಿ ಮುಂದುವರೆಸುತ್ತಿರುವ ಕಲಾವಿದರಿಗೆ ಎಂದಿಗೂ ಗೌರವ ಸಿಕ್ಕೇ ಸಿಗುತ್ತದೆ,ದೇಶದಲ್ಲಿ ದಾಖಲೆಯಾಗದ ಸಾವಿರಾರು ಕಲೆಗಳು ನಮ್ಮಿಂದ ದೂರವಿದ್ದು, ಕೆಲವೊಬ್ಬರಿಂದ ಪೋಷಿಸಲ್ಪಟ್ಟು ಮೂಲ ರೂಪವನ್ನು ಹಾಗೆಯೇ ಉಳಿಸಿಕೊಂಡಿವೆ. ಜನಪದ ಕಲಾವಿದರ ಜೀವನಮಟ್ಟ ಸುಧಾರಣೆಯಾಗುವಂತೆ ಸಮಾಜ ಮತ್ತು ಸರ್ಕಾರ ಶ್ರಮಿಸಬೇಕು. ಕಲಾವಿದರ ಉಳಿಸುವ ಕೆಲಸ ನಡೆಯಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸರ್ಕಾರಿ ಬಾಲಕಿಯರ ಪ್ರೌಢ ಶಾಲಾ‌ ಮುಖ್ಯಶಿಕ್ಷಕ ಚಂದ್ರಶೇಖರ, ಸಮಾಜ ಸೇವಕ ಚಿದನ್, ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹೆಬ್ಬಾಳು ಹಾಲಪ್ಪ, ತಾಲ್ಲೂಕು ವೀರಶೈವ ಸಮಾಜದ ನಿರ್ದೇಶಕ ಮದನ್ ಬಳ್ಳೂರು, ಜಾನಪದ ಸಾಹಿತ್ಯ ಪರಿಷತ್ತು ಪ್ರಧಾನ ಕಾರ್ಯದರ್ಶಿ ಧನಂಜಯ, ಸಹ ಕಾರ್ಯದರ್ಶಿ ಶೇಷಪ್ಪ, ಸಹ ಶಿಕ್ಷಕಿ ಚಂದ್ರಕಲಾ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಶಿವಮರಿಯಪ್ಪ, ತಾಲ್ಲೂಕು ಅಂಗವಿಕಲರ ಸಂಘದ ಅದ್ಯಕ್ಷ ಪುರುಷೋತ್ತಮ, ಸಾಹಿತಿ ಇಂದಿರಮ್ಮ ಸೇರಿದಂತೆ ಇನ್ನೂ ಮುಂತಾದವರು ಹಾಜರಿದ್ದರು.

………………..ದಿನೇಶ್ ಬೆಳ್ಳಾವರ

:- ಜನಪದ ಕಲಾವಿದರನ್ನು ಈಗಲೂ ಅಸಡ್ಡೆ, ತುಚ್ಛ ದೃಷ್ಟಿಯಿಂದ ನೋಡುತ್ತಿರುವುದು ಕ್ರೌರ್ಯದ ಸಂಕೇತವಾಗಿದೆ. ಕಲಾವಿದರ ಸಮಸ್ಯೆಗಳನ್ನು ಬಗೆಹರಿಸುವುದು ಕಷ್ಟದ ಕೆಲಸವೇನಲ್ಲ, ಅಧಿಕಾರಿಗಳು ಇಚ್ಛಾಶಕ್ತಿಯಿಂದ ಕೆಲಸ ನಿರ್ವಹಿಸಿದರೆ ಇರುವ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗುತ್ತದೆ ಈ ನಿಟ್ಟಿನಲ್ಲಿ ಸಂಬಂಧಿಸಿದವರು ಗಮನ ನೀಡಬೇಕು. 

——————ವೈ.ಎಸ್.ಸಿದ್ದೇಗೌಡ. ಅಧ್ಯಕ್ಷರು ತಾಲ್ಲೂಕು ಜಾನಪದ ಸಾಹಿತ್ಯ ಪರಿಷತ್ತು ಬೇಲೂರು.

Leave a Reply

Your email address will not be published. Required fields are marked *

× How can I help you?