ಬೇಲೂರು-ಸ್ಮಶಾನಕ್ಕೆ ಬೇಲಿ ಹಾಕುವವರ ಯಾವುದರಲ್ಲಿ ಹೊಡೆಯಬೇಕು ಹೇಳಿ..? ಸಂಜೀವಂತಹ ಬಡಪಾಯಿಗಳು ಸತ್ತರೆ ಹೂಳು ಜಾಗವಿಲ್ಲ..!

ಬೇಲೂರು-ಯಾವ ಜಮೀನಿಗಾದರು ಬೇಲಿ ಹಾಕಿಕೊಂಡು ತಮ್ಮದು ಅನ್ನಲಿ ಆದರೆ ಹೆಣ ಹೂಣಲು ಮೀಸಲಿಟ್ಟ ಸ್ಮಶಾನಕ್ಕೂ ಬೇಲಿ ಹಾಕಿಕೊಂಡು ತಮ್ಮದು ಎನ್ನುತ್ತಾರಲ್ಲ ಅವರಿಗೆ ಯಾವುದರಲ್ಲಿ ಹೊಡೆಯಬೇಕು ಹೇಳಿ?

ತಾಲೂಕಿನ ಬಹುತೇಕ ಹಳ್ಳಿಗಳಲ್ಲಿ ಸ್ಮಶಾನಕ್ಕಾಗಿ ಮೀಸಲಿಟ್ಟ ಜಮೀನುಗಳನ್ನು ಹೀನಾತಿ ಹೀನ ಮನುಷ್ಯರು ಒತ್ತುವರಿ ಮಾಡಿಕೊಂಡಿದ್ದಾರೆ.ಮಲೆನಾಡು ಭಾಗಗಳಲ್ಲಂತೂ ಹತ್ತಾರು ಎಕರೆ,ನೂರಾರು ಎಕರೆ ಜಮೀನುಗಳಿರುವ ಭೂಮಾಲೀಕರೇ ಈ ಹೇಯ ಕೃತ್ಯವನ್ನು ನಡೆಸಿದ್ದಾರೆ.

ಈ ಸ್ಮಶಾನ ಇಲ್ಲದ ಸಮಸ್ಯೆಗೆ ಈಡಾಗುವುದು ಕಡುಬಡವ ಮಾತ್ರ.ಬದುಕಿದಾಗಲಂತೂ ಉಡಲು ಬಟ್ಟೆ,ಉತ್ತಲು ಭೂಮಿ ಇಲ್ಲದೆ ಕಂಡವರ ಮನೆಯಲ್ಲಿಯೇ ಜೀವನ ಸವೆಸಿ ಸತ್ತ ಮೇಲು ಆತನ/ಆಕೆಯ ಹೆಣ ಹೂಳಲು ಅಂಗೈ ಅಗಲ ಜಾಗಕ್ಕಾಗಿ ಸರ್ಕಸ್ ಮಾಡಬೇಕಾದ ದುರ್ವ್ಯವಸ್ಥೆಯಿದೆ.

ನಾನು ಪತ್ರಕರ್ತನಾಗಿ ವೃತ್ತಿ ಜೀವನ ಪ್ರಾರಂಭ ಮಾಡಿದಾಗಿನಿಂದ ಇಂತಹ ನೂರಾರು ವರದಿಗಳ ಮಾಡಿದ್ದೇನೆ.

ಇಂದು ಸಹ ಬಿಕ್ಕೋಡು ಹೋಬಳಿ ಲಕ್ಕುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದರ್ಬಾರ್ ಪೇಟೆ ಗ್ರಾಮದಿಂದ ಅಂತಹದ್ದೇ ಹೆಣ ಹೂಳಲು ಪರದಾಡಿದ ಸುದ್ದಿಯೊಂದು ಬಂದಿದೆ.

ಹಿಡಿ ಭೂಮಿ ಇಲ್ಲದ ಕೂಲಿ ಕಾರ್ಮಿಕ ಸಂಜೀವ ಮೃತಪಟ್ಟಿದ್ದರು.ಅವರ ದೇಹವನ್ನು ಎಲ್ಲಿ ದಫನ್ ಮಾಡುವುದು?ಸ್ಮಶಾನದಲ್ಲಿ ತಾನೇ ?

ಆದರೆ ಸ್ಮಶಾನವೆಲ್ಲಿದೆ?

ಗ್ರಾಮದ ಸೋಮಶೇಖರ್ ಹಾಗೂ ಗಂಗೇಗೌಡ ಎಂಬ ಪಾಖಂಡಿಗಳಿಬ್ಬರು ಸರ್ವೇ ನಂಬರ್ 4ರಲ್ಲಿ ಸ್ಮಶಾನಕ್ಕಾಗಿ ಗುರುತಿಸಿ ಖಾತೆಯು ಆಗಿರುವ 20 ಗುಂಟೆ ಜಮೀನಿಗೆ ಬೇಲಿ ಹಾಕಿ ಕುಳಿತಿದ್ದಾರೆ.

ಅಷ್ಟೇ ಅಲ್ಲದೆ ಇನ್ನೂ ಮುಂದುವರೆದು ಆ ಜಾಗ ತಮಗೆ ಸೇರಬೇಕೆಂದು ಮಾನ್ಯ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ.

ಊರಿನವರು ಈ ಸಮಸ್ಯೆಯನ್ನು ಕಂದಾಯ ಅಧಿಕಾರಿಗಳ ಹಾಗು ಪೋಲೀಸರ ಗಮನಕ್ಕೆ ತಂದರು ಅವರು ಬಂದರು ಬೇರೆ ಸರಕಾರಿ ಜಾಗದಲ್ಲಿ ಸಂಜೀವನೆಂಬ ಬಡಪಾಯಿಯ ಹೂಳಿಸಿ ಹೋದರು.!

ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ತೀರ್ಪನ್ನು ನೋಡಿಕೊಂಡು ಮುಂದುವರೆಯುವುದಾಗಿ ಉಪ ತಹಶೀಲ್ದಾರ್ ಪ್ರದೀಪ್ ಹೇಳಿದರು.

ಒಬ್ಬ ಪ್ರಜ್ಞಾವಂತ ಪತ್ರಕರ್ತನಾಗಿ ಸ್ಮಶಾನ ನುಂಗಿರುವ ಶನಿಗಳಿಗೆ ಹೇಳೋದಿಷ್ಟೇ,ನೀವು ಮೇಲೆ ಹೋದಾಗ ದೇವರೆಂಬುವವನಿಗೆ ಅವನು ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಡಬೇಕು.ಇಲ್ಲಂತೂ ಮರ್ಯಾದೆ ಇಲ್ಲದೆ ಹಿಡಿ ಭೂಮಿಗಾಗಿ ಚಿ ಥೂ ಎನ್ನಿಸಿಕೊಂಡಿದ್ದೀರಿ ಕನಿಷ್ಠ ಪಕ್ಷ ಅಲ್ಲಿಯಾದರೂ ಒಳ್ಳೆಯ ಹೆಸರು ತೆಗೆದುಕೊಳ್ಳಿ.ಸ್ವರ್ಗಕ್ಕಾದರೂ ಹೋಗುವ ಅವಕಾಶ ದೊರೆತೀತು.

ಇವತ್ತೇ ಸ್ಮಶಾನಕ್ಕೆ ಹಾಕಿರುವ ಬೇಲಿ ತೆಗೆಯಿರಿ ಶುಭವಾಗಲಿ …

ಈ ಸಂದರ್ಭದಲ್ಲಿ ಅರೇಹಳ್ಳಿ ಪಿ ಎಸ್ಐ ಶೋಭಾ, ಎಂ ಬಿ ರಾಜಸ್ವ ನಿರೀಕ್ಷಕ, ಪ್ರಕಾಶ್, ತಾಲೂಕು ಮೋಜುಣಿಧಾರ ರಾಮಕೃಷ್ಣ,ಗ್ರಾಮ ಲೆಕ್ಕಾಧಿಕಾರಿ ಜ್ಯೋತಿಗೌಡ, ಮಾಜಿ ಗ್ರಾ ಪಂ ಅಧ್ಯಕ್ಷ ತಮ್ಮೇಗೌಡ,. ವಿರೂಪಾಕ್ಷ, ಮಂಜುನಾಥ್ ಗೌಡ ಗ್ರಾಮಸ್ಥರಾದ ಕುಮಾರ್, ಸುರೇಶ್, ಸುಂದರ್, ಆಶೋಕ್, ತಮ್ಮಯ್ಯ,ಇತರರು ಹಾಜರಿದ್ದರು.

ಇಷ್ಟೇ ಮಾಡಲಾಗುವುದು ಎಂದು ಮನೆಗೆ ಹೋದರು.

——————–-ರವಿಕುಮಾರ್

Leave a Reply

Your email address will not be published. Required fields are marked *

× How can I help you?