ಬೆಂಗಳೂರು-ಶಾಲಾ,ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯ ಮಟ್ಟದಲ್ಲಿ ದೈಹಿಕ ಶಿಕ್ಷಕರು ಮತ್ತು ಕೋಚ್‌ಗಳನ್ನು ನೇಮಿಸುವ ಕೆಲಸವಾಗಬೇಕು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದರು.
ನಗರದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ಒಲಂಪಿಕ್ಸ್ ಸಂಸ್ಥೆ ವತಿಯಿಂದ ನಡೆದ ಕರ್ನಾಟಕದ 3ನೇ ಆವೃತ್ತಿ “ಮಿನಿ ಒಲಂಪಿಕ್ಸ್” ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಈ ಹಿಂದಿನಂತೆ ವಿಶ್ವವಿದ್ಯಾಲಯ ಹಾಗೂ ಶಾಲೆಗಳಲ್ಲಿ ವ್ಯವಸ್ಥಿತವಾಗಿ ಕ್ರೀಡಾ ಚಟುವಟಿಕೆಗಳು ನಡೆಯುತ್ತಿಲ್ಲ. ದೈಹಿಕ ಶಿಕ್ಷಕರು, ಕೋಚ್‌ಗಳು ಇಲ್ಲದಿರುವುದೇ ಇದಕ್ಕೆ ಕಾರಣ. ಪ್ರತಿಯೊಂದು ಶಾಲೆಗೆ ದೈಹಿಕ ಶಿಕ್ಷಕರನ್ನು ನೇಮಿಸಬೇಕು. ಈ ಬಗ್ಗೆ ಪುನರ್ ವಿಮರ್ಶೆ ಮಾಡಬೇಕು ಎಂದರು.
ಪೋಷಕರಲ್ಲಿ ಕ್ರೀಡೆಯ ಬಗ್ಗೆ ಅಪನಂಬಿಕೆಗಳು ಹೆಚ್ಚಾಗಿದೆ. ಮಕ್ಕಳು ಕ್ರೀಡೆಗಳಲ್ಲಿ ತೊಡಗಿದರೆ ಓದುವುದಿಲ್ಲ. ವಿದ್ಯಾಭ್ಯಾಸದಿಂದ ದೂರ ಉಳಿಯುತ್ತಾರೆ ಎಂಬ ತಪ್ಪು ಕಲ್ಪನೆ ಇದೆ. ದಿನನಿತ್ಯ ಓದಿನ ಜೊತೆಗೆ ಕ್ರೀಡೆಗು ಹೆಚ್ಚಿನ ಪ್ರಾಮುಖ್ಯತೆ ನೀಡಿ, ಬೆಳಗ್ಗೆ ಮತ್ತು ಸಂಜೆ ಒಂದು ತಾಸು ತಯಾರಿ ನಡೆಸಬೇಕು ಎಂದು ಹೇಳಿದರು.
ನಾನು ಫುಟ್ಬಾಲ್ ಆಡುತ್ತಿದ್ದೆ. ಬಿಎಸ್‌ಸಿ ಕೃಷಿ, ಎಂಎಸ್‌ಸಿ ಕೃಷಿ, ಆಸ್ಟ್ರೇಲಿಯಾದಲ್ಲಿ ಪಿಎಚ್‌ಡಿ ಮುಗಿಸಿದ್ದೇನೆ. ಕ್ರೀಡೆಯಿಂದ ನನ್ನ ವಿದ್ಯಾಭ್ಯಾಸಕ್ಕೆ ಯಾವ ತೊಂದರೆಯು ಆಗಲಿಲ್ಲ. ಪೋಷಕರು ತಪ್ಪು ಕಲ್ಪನೆಯಿಂದ ಹೊರಬಂದು, ತಮ್ಮ ಮಕ್ಕಳ ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚು ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ತುಮಕೂರಿನ ಗೊಲ್ಲಹಳ್ಳಿಯಲ್ಲಿ ಹೈಸ್ಕೂಲ್‌ನಲ್ಲಿ ಓದುವ ಸಂದರ್ಭದಲ್ಲಿ ಯಾರು ನಮಗೆ ಕ್ರೀಡೆಗೆ ಪ್ರೋತ್ಸಾಹ ಕೊಡುವ ಸನ್ನಿವೇಶ ಇರಲಿಲ್ಲ. ಫುಡ್ಬಾಲ್, ಅಥ್ಲೆಟಿಕ್ ಸಾಧನೆ ಮಾಡಬೇಕು ಎಂಬ ಉದ್ದೇಶದಿಂದ ನಾವೇ ಆಟಗಳಲ್ಲಿ ತೊಡಗಿಕೊಳ್ಳುತ್ತಿದ್ದೆವು.
ತಾಲ್ಲೂಕು, ಜಿಲ್ಲಾ, ರಾಜ್ಯಮಟ್ಟದ ದಸರಾ ಕ್ರೀಡಾ ಕೂಟಗಳಲ್ಲಿ ಭಾಗವಹಿಸಿದ್ದೆ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆದ ಅಂತರ ವಿಶ್ವವಿದ್ಯಾಲಯ ಕ್ರೀಡಾಕೂಟದಲ್ಲಿ 10.9 ಸೆಕೆಂಡ್‌ನಲ್ಲಿ 100 ಮೀಟರ್ ಓಡಿದ್ದೇನೆ. ನಮಗೆ ಆಗ ಒಳ್ಳೆ ಸ್ಟೇಡಿಯಂ, ಸಿಂಥೆಟಿಕ್ ಟ್ರ್ಯಾಕ್ ಇರಲಿಲ್ಲ. ಈಗ ರಾಜ್ಯ ಸರ್ಕಾರವು 13 ಜಿಲ್ಲೆಗಳಲ್ಲಿ ಸಿಂಥೆಟಿಕ್ ಟ್ರ್ಯಾಕ್ ಕ್ರೀಡಾಂಗಣಗಳನ್ನು ನಿರ್ಮಿಸಿದೆ. ನಿಮಗೆ ಅವಕಾಶಗಳ ಜೊತೆಗೆ ಎಲ್ಲ ಸವಲತ್ತುಗಳು ಸಿಗುತ್ತಿದ್ದು, ಸದುಪಯೋಗಪಡಿಸಿಕೊಳ್ಳಬೇಕು ಎಂದು ಕ್ರೀಡಾಳುಗಳಿಗೆ ಸಲಹೆ ನೀಡಿದರು.
ಮುಂದಿನ ವರ್ಷ ಮಿನಿ ಒಲಂಪಿಕ್ ಕ್ರೀಡಾಕೂಟವನ್ನು ತುಮಕೂರು ಜಿಲ್ಲೆಯಲ್ಲಿ ನಡೆಸಲು ಅವಕಾಶ ನೀಡುವಂತೆ ಕೇಳಿದ್ದೇನೆ. ರಾಜ್ಯದಿಂದ ಬಂದ ಮಕ್ಕಳಿಂದ ನಮ್ಮ ಜಿಲ್ಲೆಯ ಮಕ್ಕಳಿಗು ಉತ್ತೇಜನ ಸಿಗಲಿದೆ. ಪ್ರತಿಭಾವಂತರ ಮಕ್ಕಳಿಗೆ ಸಹಕಾರ ನೀಡಿದರೆ ಸಾಧನೆ ಮಾಡುತ್ತಾರೆ ಎಂದರು.
ಕೆಒಎ ಅಧ್ಯಕ್ಷ ಡಾ. ಕೆ.ಗೋವಿಂದರಾಜು ಅವರು ಕ್ರೀಡೆಯ ಬಗ್ಗೆ ಚಿಂತನೆ ಮಾಡಿ, ತನ್ನದೆ ಆದ ರೀತಿಯಲ್ಲಿ ಕೊಡುಗೆ ಕೊಟ್ಟಿದ್ದಾರೆ. ಕರ್ನಾಟಕ ಒಲಂಪಿಕ್ಸ್ ಸಂಸ್ಥೆಗೆ ಸ್ವಂತ ಕಟ್ಟಡ, ಕಟ್ಟಡದೊಳಗೆ ಸ್ಪೋರ್ಟ್ಸ್ ಗ್ಯಾಲರಿ ಮಾಡಿಸಿದ್ದಾರೆ. ಒಲಂಪಿಕ್ಸ್ ಸಂಸ್ಥೆಗೆ ಅವರು ಮಾಡಿದ ಕೆಲಸ ಶಾಶ್ವತವಾಗಿ ಉಳಿಯುತ್ತದೆ. ಮಿನಿ ಒಲಂಪಿಕ್ಸ್ ಎನ್ನುವ ಚಿಂತನೆ ರಾಜ್ಯದಲ್ಲಿ ತಂದು ಶಾಲಾಮಕ್ಕಳ ಪ್ರತಿಭೆ ಗುರುತಿಸಿ ಅವಕಾಶ ಕಲ್ಪಿಸಿದ್ದಾರೆ ಎಂದು ಅಭಿನಂದನೆ ತಿಳಿಸಿದರು.
ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ.ಸುಧಾಕರ್, ಶಿಕ್ಷಣ ಸಚಿವ ಮಧು ಬಂಗಾರಪ್ಪ, ಕರ್ನಾಟಕ ಒಲಂಪಿಕ್ ಸಂಸ್ಥೆ ಅಧ್ಯಕ್ಷ ಡಾ. ಕೆ.ಗೋವಿಂದರಾಜು, ಒಲಂಪಿಕ್ಸ್ ಅಸೋಸಿಯೇಷನ್ ಕಾರ್ಯದರ್ಶಿ ಟಿ.ಅನಂತರಾಜು ಅವರು ಉಪಸ್ಥಿತರಿದ್ದರು.
——————–ನರಸಿಂಹಯ್ಯ ಕೋಳಾಲ