ಚಿಕ್ಕಮಗಳೂರು-ಶಾಲೆಗೆ ಶಿಕ್ಷಕರನ್ನು ನೇಮಕ ಮಾಡುವಂತೆ ಆಗ್ರಹಿಸಿ ಪೋಷಕರು ಹಾಗು ವಿದ್ಯಾರ್ಥಿಗಳು ಆಹೋರಾತ್ರಿ ಧರಣಿಗೆ ಮುಂದಾದ ಘಟನೆಯೊಂದು ಚಿಕ್ಕಮಗಳೂರಿನಿಂದ ವರದಿಯಾಗಿದೆ.
ಮೇಲು ಹುಳುವತ್ತಿ,ಕಸ್ಕೆ ಪ್ರಾರ್ಥಮಿಕ ಪಾಠಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಿಕ್ಷಕರೊಬ್ಬರು ವರ್ಗಾವಣೆಯಾಗಿ ಹೋಗಿದ್ದು ಅವರ ಜಾಗಕ್ಕೆ ಬೇರೊಬ್ಬ ಶಿಕ್ಷಕರನ್ನು ನಿಯುಕ್ತಿ ಗೊಳಿಸಲಾಗಿತ್ತು.ಆ ಶಿಕ್ಷಕರು ಸಹ ಏಳೆಂಟು ದಿನಗಳ ಕಾಲ ಶಾಲೆಗೆ ಬಾರದೆ ಹೋಗಿದ್ದರಿಂದ ಮಕ್ಕಳು ಹಾಗು ಪೋಷಕರು ಕಂಗಾಲಾಗಿ ಹೋಗಿದ್ದರು.ಒಂದೆಡೆ ಮಕ್ಕಳಿಗೆ ಪಾಠವು ಇಲ್ಲ ಜೊತೆಗೆ ಬಿಸಿ ಊಟವು ಇಲ್ಲದೆ ಅವ್ಯವಸ್ಥೆಯಾಗಿತ್ತು.
ಇದನ್ನು ಮನಗಂಡ ಕಸ್ಕೆ ಗ್ರಾಮಪಂಚಾಯತಿ ಅಧ್ಯಕ್ಷರಾದ ಜಾನಕಿರಾಮ್ ಮಕ್ಕಳು ಹಾಗು ಪೋಷಕರೊಂದಿಗೆ ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಅಹವಾಲು ಸಲ್ಲಿಸಲು ಬಂದಿದ್ದರು.ಆದರೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕಚೇರಿಯಲ್ಲಿ ಇರದ ಕಾರಣ ಅವರನ್ನು ಕಂಡು ಮನವಿ ಸಲ್ಲಿಸಿಯೇ ಹೋಗಲು ನಿರ್ಧರಿಸಿ ಕಚೇರಿಯ ಸಮಯ ಮುಗಿಯುವವರೆಗೂ ಕಾಯ್ದರು ಅವರ ಸುಳಿವೇ ಇರಲಿಲ್ಲ.
ಈ ಘಟನೆಯ ಮಾಹಿತಿ ಪಡೆದ ಸಮಾಜ ಸೇವಕರಾದ ಕೋಟೆ ಸೋಮಣ್ಣ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಬಂದು ಪೋಷಕರು ಹಾಗು ಮಕ್ಕಳಿಂದ ಅಹವಾಲು ಕೇಳಿ ಆಹೋರಾತ್ರಿ ಧರಣಿ ನಡೆಸಲು ಮುಂದಾದರು.
ಕಚೇರಿ ಬಿಟ್ಟು ಕದಲದೆ ಅಹೋರಾತ್ರಿ ಪ್ರತಿಭಟನೆಗೆ ಪೋಷಕರು ಹಾಗು ಮಕ್ಕಳು ಮುಂದಾದ ಮಾಹಿತಿ ದೊರೆಯುತ್ತಿದಂತೆ ರಾತ್ರಿ ಸುಮಾರು 8ಗಂಟೆಯ ಸಮಯಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕಚೇರಿಗೆ ಆಗಮಿಸಿದರು.
ಪ್ರತಿಭಟನಾನಿರತರು ಹಾಗು ಅಧಿಕಾರಿಯ ಮದ್ಯೆ ಸಣ್ಣ ವ್ಯಾಗ್ಯುದ್ಧ ನಡೆದರೂ ಕೊನೆಗೆ ಶೀಘ್ರ ಸಮಸ್ಯೆ ಬಗೆಹರಿಸುವ ಲಿಖಿತ ಭರವಸೆಯನ್ನು ಪೋಷಕರಿಗೆ ಅವರು ನೀಡಿದ ನಂತರ ಧರಣಿಯನ್ನು ಹಿಂಪಡೆಯಲಾಯಿತು.ಕ್ಷೇತ್ರ ಶಿಕ್ಷಣಾಧಿಕಾರಿಗಳೇ ಪೋಷಕರು ಹಾಗು ಮಕ್ಕಳಿಗೆ ರಾತ್ರಿ ತಂಗುವ ವ್ಯವಸ್ಥೆ ಮಾಡಿಕೊಟ್ಟರು.
ಈ ಸಂದರ್ಭದಲ್ಲಿ ಸಮಾನ ಮನಸ್ಕರ ಬಳಗದ ಶ್ರೀಧರ್ ಡಿ ಪಾಪಣ್ಣ,ಸಿ.ಹೆಚ್.ಶ್ರೀನಿವಾಸ್,ಕೇಶವೇಗೌಡರು,ಇನ್ನು ಮುಂತಾದವರು ಭಾಗವಹಿಸಿದ್ದರು.
——————-ಮಧುಕುಮಾರ್