ಇದು ಹವಾಮಾನ ಏರುಪೇರಿಗೆ ಹೆಸರಾದ ವರ್ಷ. ಬೇಸಿಗೆಯಲ್ಲಿ ಸುಡುವ ಉಷ್ಣಾಂಶವಿದ್ದರೆ ಮಳೆಗಾಲದಲ್ಲಿ ಅತಿವೃಷ್ಟಿ.ಧಾರಾಕಾರ ಮಳೆಯಿಂದಾಗಿ ಇತ್ತೀಚಿಗೆ ಸಂಭವಿಸಿದ ಒಂದಷ್ಟು ಭೂಕುಸಿತಗಳು ಜನಜೀವನದಲ್ಲಿ ತಲ್ಲಣವನ್ನು ಸೃಷ್ಟಿಸಿದ್ದು ಸುಳ್ಳಲ್ಲ. ಕನ್ನಡ ನಾಡಿನ ಶೀರೂರು ದುರಂತದಲ್ಲಿ ನಾಪತ್ತೆಯಾದ ಒಂದಿಷ್ಟು ವಾಹನ, ವ್ಯಕ್ತಿಗಳು ಇನ್ನೂ ಪತ್ತೆಯಾಗದೆ ರಕ್ಷಣಾಪಡೆಗಳು ಕೈಚೆಲ್ಲಿರುವುದು ಮಾಸುವ ಮೊದಲೇ ದೇವರ ಬೀಡು ವಯನಾಡು ಭೀಕರ ದುರಂತಕ್ಕೆ ತತ್ತರಿಸುವಂತಾಯಿತು.
ಹಾಗಾದರೆ ಈ ಭೂಕುಸಿತ ಎಂದರೇನು ಅದಕ್ಕೆ ಕಾರಣಗಳೇನು, ಅದರಿಂದಾದ ಪರಿಣಾಮಗಳೇನು ಎಂದು ನೋಡುವ..
ಭೂಕುಸಿತಗಳಿಗೆ ಮಿಲಿಯಾಂತರ ವರ್ಷಗಳ ಇತಿಹಾಸವಿದೆ. ಭೂಮಿ ಇರುವವರೆಗೂ ಭೂಕುಸಿತಗಳು ಸಂಭವಿಸುತ್ತಲೇ ಇರುತ್ತವೆ. ಇದಕ್ಕೆ ಮುಖ್ಯ ಕಾರಣ ಗುರುತ್ವಾಕರ್ಷಣೆ. ಭೂಮಿ ತನ್ನ ಮೇಲಿನ ಪ್ರತಿಯೊಂದು ವಸ್ತುವನ್ನೂ ತನ್ನ ಕೇಂದ್ರದತ್ತ ಸೆಳೆಯುತ್ತಲೇ ಇರುತ್ತದೆ. ಕಡಿದಾದ ಗುಡ್ಡಗಳ ತುದಿಯ ಕಲ್ಲು ಮಣ್ಣುಗಳನ್ನೂ ಕೂಡಾ ಭೂಮಿ ತನ್ನ ಕೇಂದ್ರದತ್ತ ಸೆಳೆಯತ್ತದೆ. ಈ ಪರಿಣಾಮವಾಗಿ ಕತ್ತರಿಸಿದಂತಾದ ಗುಡ್ಡ, ಕಲ್ಲುಗಳು ಇಳಿಜಾರಿನಲ್ಲಿ
ಉರುಳುತ್ತದೆ. ಭೂಕುಸಿತವೆಂದರೆ ಭೂಮಿಯ ಭಾಗವೊಂದು ಸ್ಥಿರದಿಂದ ಅಸ್ಥಿರವಾಗಿ ಬದಲಾಗುವ ಪ್ರಕ್ರಿಯೆ.
ಇತಿಹಾಸ ಪೂರ್ವದ ಭೂ ಕುಸಿತಗಳು :
- ನಾರ್ವೆಯ ಪಶ್ಚಿಮ ಕರಾವಳಿಯಲ್ಲಿ ಸುಮಾರು 8,000 ವರ್ಷಗಳ ಹಿಂದೆ ನಡೆದಿದೆ ಎಂದು ಭಾವಿಸಲಾದ “ಸ್ಟೋರ್ಗಾ ಸ್ಲೈಡ್” ಡಾಗರ್ಲ್ಯಾಂಡ್ ಮತ್ತು ಉತ್ತರ ಸಮುದ್ರಕ್ಕೆ ಸಂಪರ್ಕ ಹೊಂದಿದ ಇತರ ಪ್ರದೇಶಗಳಲ್ಲಿ ಬೃಹತ್ಸುನಾಮಿಗಳನ್ನೇ ಉಂಟುಮಾಡಿತು. ಇದು ಭೂಮಿಯ ಇತಿಹಾಸದಲ್ಲಿ ಬೃಹತ್ ಕುಸಿತ ಎಂದು ಭಾವಿಸಲಾಗಿದೆ.
- ಭೂಕುಸಿತದಿಂದಾಗಿ ಅಮೇರಿಕಾದ 2,476 ಮೀಟರ್ ಎತ್ತರದ ಹಾರ್ಟ್ ಮೌಂಟೇನ್ ಶಿಖರವು ಅದು ಪ್ರಸ್ತುತ ಇರುವ ಸ್ಥಳಕ್ಕೆ ಸ್ಥಳಾಂತರಿಸಲ್ಪಿಟ್ಟಿತು ಎಂದು ಪುರಾತತ್ವ ತಜ್ಞರು ಕಂಡು ಕಂಡುಹಿಡಿದಿದ್ದಾರೆ, ಇದೂ ಕೂಡಾ ಇತ್ತೀಚಿಗಿನವರೆಗೆ ಪತ್ತೆಯಾದ ಅತಿ ದೊಡ್ಡ ಭೂಖಂಡದ ಕುಸಿತವಾಗಿದೆ.
- ಕ್ರಿ.ಪೂ 200ರ ಸುಮಾರಿಗೆ ಸಂಭವಿಸಿದ ಭೂಕುಸಿತವು ನ್ಯೂಜಿಲೆಂಡ್ನ ಉತ್ತರ ದ್ವೀಪದಲ್ಲಿ ವೈಕರೆಮೊವಾನಾ ಸರೋವರವನ್ನು ರೂಪಿಸಿತು , ಅಲ್ಲಿ ನ್ಗಾಮೊಕೊ ಪರ್ವತ ಶ್ರೇಣಿಯ ದೊಡ್ಡ ತುಂಡೊಂದು ಜಾರುತ್ತಾ ಬಂದು;ವೈಕರೆಟಾಹೆಕೆ ನದಿಗೆ ಅಡ್ಡಲಾಗಿ 256 ಮೀಟರ್ ಆಳದ ನೈಸರ್ಗಿಕ ಜಲಾಶಯವನ್ನೇ ರೂಪಿಸಿತು.
.
ಭಾರತದ ಐತಿಹಾಸಿಕ ಭೂ ಕುಸಿತಗಳು - ಅಸ್ಸಾಂ ರಾಜ್ಯದ ಗುವಾಹಟಿಯಲ್ಲಿ 1948 ಸೆಪ್ಟೆಂಬರ್ನಲ್ಲಿ ಭಾರೀ ಮಳೆಯಿಂದಾಗಿ ಸಂಭವಿಸಿದ ಭೂಕುಸಿತದಿಂದಾಗಿ ಇಡೀ ಗ್ರಾಮವೇ ಹೂತು ಹೋಗಿ 500ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು.
- ಪಶ್ಚಿಮ ಬಂಗಾಳದ ಡಾರ್ಜೆಲಿಂಗ್ನಲ್ಲಿ 1968 ಅಕ್ಟೋಬರ್ 4 ರಂದು, ಪ್ರವಾಹದಿಂದಾಗಿ ಉಂಟಾದ ಭೂಕುಸಿತವು 60 ಕಿಮೀ ಉದ್ದದ ರಾಷ್ಟ್ರೀಯ ಹೆದ್ದಾರಿಯನ್ನು 91 ಭಾಗಗಳಾಗಿ ಕತ್ತರಿಸಿತು. ಈ ದುರಂತದಲ್ಲಿ ಅಪಾರ ಆಸ್ತಿಪಾಸ್ತಿ ಹಾನಿಯಾಗಿ 1,000 ಕ್ಕೂ ಹೆಚ್ಚು ಜನ ಮೃತರಾದರು.
- ಉತ್ತರ ಪ್ರದೇಶದ ಮಾಪ್ಲಾ ಗ್ರಾಮದಲ್ಲಿ ಆಗಸ್ಟ್ 1998ರಲ್ಲಿ ಸಂಭವಿಸಿದ ಸತತ ಏಳು ದಿನಗಳ ಸರಣಿ ಭೂಕುಸಿತದಲ್ಲಿ ಇಡೀ ಗ್ರಾಮವು ನಾಶವಾಗಿ 380 ಕ್ಕೂ ಹೆಚ್ಚು ಜನ ಸಾವನ್ನಪ್ಪಿದರು.
- ಉತ್ತರಾಖಂಡದ ಕೇದಾರನಾಥದಲ್ಲಿ 2013ರಲ್ಲಿ ಸಂಭವಿಸಿದ ಭೀಕರ ಪ್ರವಾಹ ಮತ್ತು ಭೂಕುಸಿತದಿಂದಾಗಿ ಹಳ್ಳಿಗಳು ಕೊಚ್ಚಿ ಹೋಗಿ 5,700 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದರು.
- ಮಾಲಿನ್ ಗ್ರಾಮ, ಮಹಾರಾಷ್ಟ್ರದ ಮಾಲಿನ್ ಗ್ರಾಮದಲ್ಲಿ 2014 ಜುಲೈ 30 ರಂದು ಭಾರೀ ಮಳೆಯಿಂದಾಗಿ ಸಂಭವಿಸಿದ ಭೂಕುಸಿತದಲ್ಲಿ ಸುಮಾರು 151 ಜನರ ಸಾವಿಗೀಡಾಗಿ 100ಕ್ಕೂ ಅಧಿಕ ಮಂದಿ ಕಾಣೆಯಾಗಿದ್ದಾರೆ.
.
ಭೂ ಕುಸಿತಕ್ಕೆ ಕಾರಣಗಳು ಹಲವಾರು. ಅವುಗಳಲ್ಲಿ ಪ್ರಮುಖವಾದುವು…
ನೈಸರ್ಗಿಕ ಕಾರಣಗಳು : ಇದರಲ್ಲಿ ಪ್ರಮುಖವಾದುದು ನೀರು. ಬೇಸಿಗೆಯಲ್ಲಿ ಗುರುತ್ವದ ಸೆಳೆತವಿದ್ದರೂ ಬೆಟ್ಟಗುಡ್ಡಗಳೊಳಗಿನ ವಸ್ತುಗಳು ಒಂದಕ್ಕೊಂದು ಭದ್ರವಾಗಿ ಬಂಧಿಯಾಗಿರುವುದರಿಂದ ಗುಡ್ಡ ಕುಸಿತ ಸಂಭವಿಸಿದರೂ ದೊಡ್ಡದಾದ ಹಾನಿಯೇನೂ ಸಂಭವಿಸಲಾರದು. ಮಳೆಗಾಲದಲ್ಲಿ ತನ್ನೊಳಗಿನ ಕಣಗಳ ನಡುವಣ ಬಂಧ ಸಡಿಲವಾಗಿರುವುದರಿಂದ ಮಣ್ಣು ತನ್ನ ಶಕ್ತಿಯನ್ನು ಕಳೆದುಕೊಂಡಿರುತ್ತದೆ.. ಈ ಸಂದರ್ಭದಲ್ಲೇ ಹೆಚ್ಚಿನ ಗುಡ್ಡ ಕುಸಿತಗಳು ಸಂಭವಿಸೋದು. ಅಪರೂಪಕ್ಕೆ ಕೆಲ ಭೂಕಂಪನಗಳೂ ಕೂಡಾ ಗುಡ್ಡ ಕುಸಿತಕ್ಕೆ ಕಾರಣವಾಗುತ್ತವೆ.
ಮಾನವ ನಿರ್ಮಿತ ಕಾರಣಗಳು : 21ನೆಯ ಶತಮಾನದ ಆಧುನಿಕ ಅಭಿವೃದ್ದಿ ಕಾರ್ಯಗಳು ಮುಖ್ಯವಾಗಿ ಇವತ್ತಿನ ಭೂ ಕುಸಿತಕ್ಕೆ ಕಾರಣವಾಗಿವೆ. ಭೂ ತಜ್ಞರ ಸಲಹೆ ಪಡೆಯದೆ ರಸ್ತೆ ನಿರ್ಮಿಸಲು ಅವೈಜ್ಞಾನಿಕವಾಗಿ ಇಳಿಜಾರು ಕತ್ತರಿಸುವುದು,ಭೂಮಿಯನ್ನು ಸೂಕ್ತವಾಗಿ ಅಧ್ಯಯನ ಮಾಡದೇ ನಗರ ವಿಸ್ತರಣೆ ಮಾಡುವುದು , ಬ್ಲಾಸ್ಟಿಂಗ್ ಮತ್ತು ಗಣಿಗಾರಿಕೆ ,
ಮೇಲ್ಪದರದ ಸಡಿಲ ಮಣ್ಣನ್ನು(colluvium) ತಳಭಾಗಕ್ಕೆ ಬಂಧಿಸುವ ಸಾಮರ್ಥ್ಯವಿರುವ ಬೃಹತ್ ಮರಗಳು ಮತ್ತು ಹುಲ್ಲುಗಾವಲನ್ನು ನಾಶಪಡಿಸುವುದು ಇದರಲ್ಲಿ ಸೇರಿದೆ…
ಶೀರೂರು ದುರಂತ : ಈ ವರ್ಷ ಕರ್ನಾಟಕದಲ್ಲಿ ನಡೆದ ಭೀಕರ ದುರಂತವಿದು. ಸುಮಾರು ಹದಿನೈದು ಮಂದಿ ಜಲಸಮಾಧಿಯಾದರೆಂದು ಅಂಕಿ ಅಂಶಗಳು ಹೇಳುತ್ತದೆ. ಈ ದುರಂತ ಮಾನವನ ನಿರ್ಲಕ್ಷ್ಯದಿಂದ ನಡೆದಂತೆ ಗೋಚರಿಸುವುದು. ಮೊದಲನೆಯದಾಗಿ ನದಿ ದಡದ ಗುಡ್ಡವನ್ನು ಲಂಬವಾಗಿ ಕಡಿದು ರಸ್ತೆ ನಿರ್ಮಿಸುವುದು ಅಪಾಯಕಾರಿ.ಇಂತಹ ಅಪಾಯಕಾರಿ ಜಾಗಗಳಲ್ಲಿ ರಸ್ತೆ ನಿರ್ಮಿಸುವಾಗ ಈ ಗುಡ್ಡದ ಮಣ್ಣು ಕುಸಿದು ಜಾರುವಾಗ ಎಷ್ಟು ಪ್ರತಿರೋಧ
ಗುಡ್ಡದ ಒಳಗಿನಿಂದ ಸಿಗುತ್ತದೆ ಎಂಬುದನ್ನು ಕಂಡುಹಿಡಿಯಲು ಒಂದು ಮೀಟರ್ ಆಳದ ಮಣ್ಣನ್ನು ತೆಗೆದುಕೊಂಡು ಹೋಗಿ Unconfined compression test ಅಂತ ಒಂದು ಟೆಸ್ಟ್ ಮಾಡಬೇಕಾಗುತ್ತದೆ. ಇದು ಸದ್ಯಕ್ಕೆ ಇರುವ ಅತ್ಯಂತ ಕಡಿಮೆ ವೆಚ್ಚದ ಸುಲಭದ ಟೆಸ್ಟ್. ಇಲ್ಲಿ ಒಂದು ಗುಡ್ಡ ತನ್ನದೇ ಭಾಗ ಗುರುತ್ವದಿಂದಾಗಿ ಕತ್ತರಿಸಿಹೋದಾಗ
ತಾನು ಒಡ್ಡುವ ಪ್ರತಿರೋಧ(shear resistance) ತಿಳಿಯುತ್ತದೆ. ಈ ಟೆಸ್ಟ್ನ ಆಧಾರದ ಮೇಲೆ ಗುಡ್ಡದ ಬದಿಯನ್ನು ಎಷ್ಟು ಇಳಿಜಾರು (ಸ್ಲೋಪ್) ಮಾಡಿದರೆ ಸುರಕ್ಷಿತ ಅಂತ ನಿರ್ಧರಿಸಬಹುದು. ಇಷ್ಟಾದ ನಂತರವೂ ಗುಡ್ಡದ
ಬುಡದ ಮಣ್ಣು ಕುಸಿಯುವುದನ್ನು ಸೂಕ್ತ ತಡೆಗೋಡೆ (RCC Retaining wall)ಯನ್ನು ನಿರ್ಮಿಸಬೇಕು.ಶೀರೂರು ಗುಡ್ಡ ಕುಸಿತದ ಸ್ಥಳದಲ್ಲಿ ಇಂತಹ ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಂತೆ ಕಾಣುತ್ತಿಲ್ಲ.
ವಯನಾಡು ದುರಂತ : ಕೇರಳ ರಾಜ್ಯ ಹೆಚ್ಚಾಗಿ ಬೆಟ್ಟ ಗುಡ್ಡಗಳಿಂದ ಆವೃತವಾದ ರಾಜ್ಯ ಮತ್ತು ಮಳೆಯ ಪ್ರಮಾಣವೂ ಹೆಚ್ಚು. ಅಲ್ಲಿ ನಡೆದ ವಯನಾಡು ದುರಂತ ಪ್ರಾಕೃತಿಕವಾದುದು. ಮಡಿದವರ ಸಂಖ್ಯೆ ಮುನ್ನೂರಕ್ಕೇರಿದೆ. ಒಂದು ಪಕ್ಷ ಅಲ್ಲಿ ಜನಜೀವನ ಇಲ್ಲದಿದ್ದರೂ ಇಂತಹ ಒಂದು ಭೂ ಕುಸಿತ ಸಂಭವಿಸುತ್ತಿತ್ತು , ಸಬ್ಮರಿನ್( ಕನ್ನಡದಲ್ಲಿ
ಜಲಾಂತರ್ಗಾಮಿ ಎನ್ನಬಹುದು) ಎನ್ನುವ ವಿಧದ ಭೂಕುಸಿತ ಇದಕ್ಕೆ ಕಾರಣ ಎಂದು ಭೂ ತಜ್ಞರು ಅಭಿಪ್ರಾಯಪಡುತ್ತಾರೆ.
ಸಿಂಪಲಾಗಿ ಹೇಳಬೇಕೆಂದರೆ ಕಣಿವೆಯಂತಹ ಪ್ರದೇಶಗಳಲ್ಲಿ ನೂರಾರು ವರ್ಷಗಳಿಂದ ನೀರು ಹರಿಯುತ್ತಾ ಮಣ್ಣಿನ ನುಣುಪಾದ ಕಣಗಳು ಅಥವಾ ಕೆಸರು(Sediments) ಶೇಖರಣೆಯಾಗಿರುತ್ತದೆ.. ಕ್ರಮೇಣ ಈ ಕೆಸರು ಗಟ್ಟಿಯಾಗಿ ಆ ವಾತಾವರಣದ ಭಾಗವಾಗಿಯೇ ಹೋಗುತ್ತದೆ.
ಕಣಿವೆಯ ಪಕ್ಕದಲ್ಲೇ ಎತ್ತರದ ಜಾಗವಿದ್ದು ಆ ಪ್ರದೇಶಕ್ಕೆ ಹೆಚ್ಚು ಮಳೆಯಾದಾಗ ಎತ್ತರದ ಭಾಗದಿಂದ ನೀರು ನಿಧಾನವಾಗಿ ಕೆಸರಿನ ಆಳಕ್ಕೆ ಇಳಿಯುತ್ತಿದ್ದಂತೆ ಅದು ಯಾವುದೇ
ಪ್ರತಿರೋಧ(shear resistance) ತೋರದೆ ಜಾರಲಾರಂಬಿಸುತ್ತದೆ. ಅಲ್ಲಿರುವ ಎಲ್ಲಾ ವಸ್ತುಗಳು ಕೆಸರಿನೊಂದಿಗೆ ಜಾರುತ್ತಾ ಸಾಗಿ ನಿರ್ನಾಮವಾಗುವುವು. ಇಂತಹ ಜಾಗದಲ್ಲಿ ಜನವಸತಿ ನಿರ್ಮಿಸುವಾಗ ಎಚ್ಚರವಾಗಿರುವುದು ಅಗತ್ಯ.
ರಾಜೇಶ್ ಕುಮಾರ್ ಕಲ್ಯಾ
3-37 ಕಲ್ಯಾ ಅಂಚೆ ಮತ್ತು ಗ್ರಾಮ – 574110
+91 8197550664