ಚಿಕ್ಕಮಗಳೂರು, ಮೇ.12:- ನಕಲು ಸಹಿ ಬಳಸಿಕೊಂಡು ದಾಖಲೆ ಸೃಷ್ಟಿಸಿದವರ ವಿರುದ್ಧ ಪ್ರಕರಣ ದಾಖಲಿಸದೇ ನಿರ್ಲಕ್ಷ್ಯ ತೋರಿರುವ ಸಿಡಿಎ ಪೌರಾಯುಕ್ತರನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಜಿಲ್ಲಾ ಭೀಮ್ ಆರ್ಮಿ ಪದಾಧಿಕಾರಿಗಳು ಮಂಗಳವಾರ ಅಪರ ಜಿಲ್ಲಾಧಿಕಾರಿ ನಾರಾಯಣ ಕನಕರಡ್ಡಿ ಅವರಿಗೆ ಮನವಿ ಸಲ್ಲಿಸಿದರು.
ಈ ಕುರಿತು ಮಾತನಾಡಿದ ಭೀಮ್ ಆರ್ಮಿ ಗೌರವಾಧ್ಯಕ್ಷ ಹೊನ್ನೇಶ್ ಸಿಡಿಎಯಲ್ಲಿ ರಾಮನಹಳ್ಳಿ ಗ್ರಾ ಮದ ಪ್ರದೇಶವನ್ನು ವ್ಯಕ್ತಿಯೊರ್ವರು ವಸತಿ ಉದ್ದೇಶಕ್ಕಾಗಿ ಬಳಸಲು ದಲ್ಲಾಳಿಯೋರ್ವನಿಂದ ಏಕ ನಿವೇ ಶನ ರೂಪುರೇಖ ನಕ್ಷೆ ಅನುಮೋದನೆಗೆ ಕೋರಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಲಾಗಿತ್ತು ಎಂದರು.

ದಲ್ಲಾಳಿಗೆ ಸಂಬಂಧಪಟ್ಟ ವ್ಯಕ್ತಿಯಿಂದ ಲಕ್ಷಾಂತರ ಹಣ ಪಡೆದು ಪ್ರಾಧಿಕಾರದ ಆಯುಕ್ತರು ನಕಲಿ ಸಹಿ ಬಳಸಿ, ದಾಖಲೆಯನ್ನು ಮಾಡಿಕೊಟ್ಟಿದ್ದಾರೆ. ದಾಖಲೆಗೆ ಸಂಬಂಧಿಸಿದಂತೆ ಪ್ರಾಧಿಕಾರದಲ್ಲಿ ವಿಚಾರಿಸಿದರೆ ನಕಲಿ ಸಹಿ ಎಂಬುದು ಸ್ಪಷ್ಟವಾಗಿ ತಿಳಿದು ಬಂದಿದೆ ಎಂದರು.
ಆದರೆ ಈವರೆಗೂ ಪೌರಾಯುಕ್ತರು ತಪ್ಪಿತಸ್ಥರ ಯಾವುದೇ ಪ್ರಕರಣ ದಾಖಲಿಸದಿರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಹೀಗಾಗಿ ಶೀಘ್ರವೇ ಆಯುಕ್ತರನ್ನು ಅಮಾನತ್ತುಗೊಳಿಸಿ ಪ್ರಕರಣವನ್ನು ಸೂಕ್ತ ತನಿಖೆ ನಡೆಸುವ ಮೂಲಕ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಭೀಮ್ ಆರ್ಮಿ ತಾಲ್ಲೂಕು ಅಧ್ಯಕ್ಷ ಧರ್ಮೇಶ್, ರೈತ ವಿಭಾಗದ ಜಿಲ್ಲಾಧ್ಯಕ್ಷ ರಾಜು, ಎಸ್ಸಿಎಸ್ಟಿ ದೌರ್ಜನ್ಯ ನಿಯಂತ್ರಣ ಸಮಿತಿ ಸದಸ್ಯ ಹುಣಸೇಮಕ್ಕಿ ಲಕ್ಷ್ಮಣ್, ಮುಖಂಡರುಗಳಾದ ರುದ್ರಚಾರಿ ಮತ್ತಿತರರು ಹಾಜರಿದ್ದರು.
- ಸುರೇಶ್ ಎನ್.