ಕೆ.ಆರ್.ಪೇಟೆ-ಅರಳಕುಪ್ಪೆ ಗ್ರಾಮದಲ್ಲಿ ₹75 ಲಕ್ಷ ರಸ್ತೆ ಅಭಿವೃದ್ಧಿಗೆ ಭೂಮಿಪೂಜೆ-ಶಾಸಕ ಹೆಚ್.ಟಿ.ಮಂಜು ಚಾಲನೆ

ಕೆ.ಆರ್.ಪೇಟೆ: ತಾಲ್ಲೂಕಿನ ಬೂಕನಕೆರೆ ಹೋಬಳಿಯ ಅರಳಕುಪ್ಪೆ ಗ್ರಾಮದಲ್ಲಿ ಸುಮಾರು 75ಲಕ್ಷ ರೂಪಾಯಿಗಳ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಹೆಚ್.ಟಿ.ಮಂಜು ಅವರು ಭೂಮಿ ಪೂಜೆ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು ರಾಜ್ಯ ಸರ್ಕಾರವು ಗ್ಯಾರಂಟಿ ಯೋಜನೆಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಿರುವ ಕಾರಣ, ಮೂಲಭೂತ ಸೌಲಭ್ಯಗಳಿಗೆ ಅಗತ್ಯ ಅನುಧಾನ ನೀಡುತ್ತಿಲ್ಲ. ಆದರೂ ಸಹ ಸಂಬಂಧಪಟ್ಟ ಇಲಾಖೆಗಳ ಸಚಿವರನ್ನು ಬೇಟಿ ಮಾಡಿ ಅಲ್ಪ-ಸ್ವಲ್ಪ ಅನುಧಾನ ತಂದು ತಾಲ್ಲೂಕಿನ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ. ಐದು ವರ್ಷಗಳ ಅವಧಿಯಲ್ಲಿ ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ಕಾಯಾ-ವಾಚಾ ಮನಸ ಕೆಲಸ ಮಾಡುತ್ತೇನೆ. ‌

ಯಾವುದೇ ಕಾರಣಕ್ಕೂ ಅಭಿವೃದ್ಧಿಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ನಮ್ಮ ಅದೃಷ್ಠಕ್ಕೆ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ನಮ್ಮ ಕುಮಾರಣ್ಣ ಅವರು ಗೆದ್ದು ಪ್ರಧಾನಿ ನರೇಂದ್ರಮೋದಿ ಅವರ ಸಂಪುಟದಲ್ಲಿ ಸಚಿವ ಸ್ಥಾನ ಪಡೆದಿದ್ದಾರೆ. ಕುಮಾರಣ್ಣ ಅವರ ಪರಿಶ್ರಮದಿಂದಾಗಿ ತಾಲ್ಲೂಕಿನ ಪ್ರತಿಯೊಂದು ಗ್ರಾಮ ಪಂಚಾಯಿತಿಗೆ ಕೇಂದ್ರ ಸರ್ಕಾರವು ತಲಾ 100 ಪಿ.ಎಂ.ಆವಾಸ್ ಆಶ್ರಯ ಮನೆಗಳು ಮಂಜೂರಾಗಿರುತ್ತವೆ.

34 ಗ್ರಾಮ ಪಂಚಾಯಿತಿಗಳಿಂದ ಒಟ್ಟು 3500ಕ್ಕೂ ಹೆಚ್ಚು ಪಿ.ಎಂ.ಆವಾಸ್ ಮನೆಗಳು ಮಂಜೂರಾಗಿವೆ. ಈ ಹಿಂದೆ ಒಂದು ಗ್ರಾಮ ಪಂಚಾಯಿತಿಗೆ ಕೇವಲ 10ರಿಂದ 20 ಪಿ.ಎಂ.ಆವಾಸ್ ಆಶ್ರಯ ಮನೆಗಳು ಮಾತ್ರ ಮಂಜೂರಾಗುತ್ತಿದ್ದವು. ಆದರೆ ರಾಜ್ಯ ಸರ್ಕಾರವು ಬಸವ, ಅಂಬೇಡ್ಕರ್, ಇಂದಿರಾ ಆಶ್ರಯ ಯೋಜನೆ ಅಡಿಯಲ್ಲಿ ಕಳೆದ 2ವರ್ಷಗಳಿಂದಲೂ ನನ್ನ ವಿಧಾನಸಭಾ ಕ್ಷೇತ್ರಕ್ಕೆ ಒಂದೇ ಒಂದು ಮನೆಯನ್ನು ಮಂಜೂರು ಮಾಡಿರುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ನಿವೇಶನ ನೀಡಲು ಕ್ರಮ: ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಡವರಿಗೆ ನಿವೇಶನ ಒದಗಿಸಿಕೊಡಲು ಸರ್ಕಾರಿ ಜಾಗವನ್ನು ಗುರುತಿಸಲಾಗಿದ್ದು, ಸದರಿ ಜಾಗವನ್ನು ಬಡವರಿಗೆ ನಿವೇಶನನ್ನು ಹಂಚಿಕೆ ಮಾಡಲು ಸಂಬಂಧಪಟ್ಟ ಗ್ರಾಮ ಲೆಕ್ಕಾಧಿಕಾರಿಗಳು, ರಾಜಸ್ವ ನಿರೀಕ್ಷಕರು, ಗ್ರಾಮ ಪಂಚಾಯಿತಿಗಳು ಸೂಕ್ತ ಕ್ರಮ ವಹಿಸಬೇಕು. ನನ್ನ ಅಧಿಕಾರದ ಅವಧಿಯಲ್ಲಿ ಕನಿಷ್ಠ 5ಸಾವಿರ ಮಂದಿ ಬಡವರಿಗೆ ನಿವೇಶನ ಹಂಚಿಕೆ ಮಾಡಲು ಕ್ರಮ ವಹಿಸುತ್ತೇನೆ ಇದಕ್ಕೆ ಅಧಿಕಾರಿಗಳು ಸಹಕಾರ ನೀಡಬೇಕು. ಈಗಾಗಲೇ ಗುರುತಿಸಿರುವ ನಿವೇಶನದ ಸ್ಥಳದ ಸಮಸ್ಯೆಗಳು ಏನಾದರೂ ಇದ್ದರೆ ಅದನ್ನು ಬಗೆಹರಿಸುವ ಮೂಲಕ ನಿವೇಶನ ಹಂಚಿಕೆಗೆ ಸಹಕಾರ ನೀಡಬೇಕು ಎಂದು ಶಾಸಕರು ಸಲಹೆ ನೀಡಿದರು.

ಅರಳಕುಪ್ಪೆ ಗ್ರಾಮದ ಸಮಗ್ರ ಅಭಿವೃದ್ದಿ ಸೂಕ್ತ ಅನುಧಾನ ತಂದು ಕೊಡುವ ಜವಾಬ್ದಾರಿ ನನ್ನ ಮೇಲಿದೆ. ಈ ದಿನ ನನ್ನನ್ನು ಮನೆ ಮಗನಂತೆ ಸ್ವಾಗತಿಸಿ, ಅದ್ದೂರಿ ಸನ್ಮಾನ ಮಾಡಿ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದ್ದೀರಿ. ವಿಠಲಾಪುರ ಗ್ರಾಮ ಪಂಚಾಯಿತಿ ವತಿಯಿಂದ ನರೇಗಾ ಯೋಜನೆ ಅಥವಾ 15ನೇ ಹಣಕಾಸು ಯೋಜನೆ ಅಡಿಯಲ್ಲಿ ಅನುಧಾನ ಕೊಡಿಸಿ, ಗ್ರಾಮದ ಮುಖ್ಯ ರಸ್ತೆ, ಚರಂಡಿ ವ್ಯವಸ್ಥೆ ಅಭಿವೃದ್ಧಿಗೆ ಪಿಡಿಓ ಅವರಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು. ಗ್ರಾಮದಲ್ಲಿ ಅಕ್ರಮ-ಸಕ್ರಮ ಯೋಜನೆ ಅಡಿಯಲ್ಲಿ ಸಾಗುವಳಿ ಮಾಡುತ್ತಿರುವ ಎಲ್ಲರಿಗೂ ಭೂಮಿಯನ್ನು ಮಂಜೂರು ಮಾಡಿಸಿಕೊಟ್ಟು, ದುರಸ್ತು ಮಾಡಿಕೊಡಲು ಅಗತ್ಯ ಕ್ರಮ ವಹಿಸುತ್ತೇನೆ ಈ ಮೂಲಕ ಗ್ರಾಮದ ಸಮಗ್ರ ಅಭಿವೃದ್ಧಿಗೆ ಎಲ್ಲಾ ಇಲಾಖೆಗಳ ಮೂಲಕ ಅನುಧಾನ ಕೊಡಿಸುವ ಭರವಸೆಯನ್ನು ಶಾಸಕ ಹೆಚ್.ಟಿ.ಮಂಜು ಅವರು ನೀಡಿದರು.

ಈ ಸಂದರ್ಭದಲ್ಲಿ ರಾಜ್ಯ ಯುವ ಜೆಡಿಎಸ್ ಪ್ರಧಾನ ಕಾರ್ಯದರ್ಶಿಗಳು ಹಾಗೂ ಗಂಜಿಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕ್ ಅಧ್ಯಕ್ಷ ಕೆ.ಬಿ.ನಾಗೇಶ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಹೆಳವೇಗೌಡ(ಹುಲ್ಲೇಗೌಡ), ಚಿಕ್ಕಗಾಡಿಗನಹಳ್ಳಿ ಸೋಮಶೇಖರ್, ಬಳ್ಳೇಕೆರೆ ಗ್ರಾ.ಪಂ.ಮಾಜಿ ಉಪಾಧ್ಯಕ್ಷ ನಾಟನಹಳ್ಳಿ ಬೋರ್‌ವೆಲ್ ಮಹೇಶ್, ವಿಠಲಾಪುರ ಗ್ರಾಮ ಪಂಚಾಯಿತಿ ಪಿಡಿಓ ರವಿಕುಮಾರ್, ಬೂಕನಕೆರೆ ಹೋಬಳಿ ರಾಜಸ್ವ ನಿರೀಕ್ಷಕ ಚಂದ್ರಕಲಾಪ್ರಕಾಶ್, ಎಸಿಡಿಪಿಓ ಪದ್ಮ, ಗ್ರಾಮ ಪಂಚಾಯಿತಿ ಸದಸ್ಯರಾದ ಚಂದ್ರೋಜಿರಾವ್, ಚಿಕ್ಕಗಾಡಿಗನಹಳ್ಳಿ ಪರಮೇಶ್, ಗಣೇಶ್, ಹೊಡಕೆಶೆಟ್ಟಿಹಳ್ಳಿ ಲೋಕೇಶ್, ಆನಂದ್, ಸಂದೇಶ್, ಅರಳಕುಪ್ಪೆ ಡೇರಿ ಅಧ್ಯಕ್ಷ ಎ.ಪಿ.ಉಮೇಶ್, ಮುಖಂಡರಾದ ನಿಂಗೇಗೌಡ, ಚಂದ್ರಶೇಖರ್, ಮಾಸ್ಟರ್ ವೆಂಕಟರಾಮೇಗೌಡ, ಜಯರಾಮೇಗೌಡ, ಯುವ ಮುಖಂಡರಾದ ಹರೀಶ್, ಯೋಗೇಶ್, ರಾಜೇಶ್, ಕೃಷ್ಣ, ಮೋಹನ್, ಅರುಣ್, ಕಿರಣ್, ದಿನೇಶ್, ರೂಪೇಶ್, ಶಾಸಕರ ಆಪ್ತ ಸಹಾಯಕ ಪ್ರತಾಪ್ ಸೇರಿದಂತೆ ನೂರಾರು ಮುಖಂಡರು ಉಪಸ್ಥಿತರಿದ್ದರು.

– ಶ್ರೀನಿವಾಸ್‌ ಆರ್.

Leave a Reply

Your email address will not be published. Required fields are marked *

× How can I help you?