ಹಳೇಬೀಡು-‘ಬಿಗ್ ಬಾಸ್’ನಂತಹ ಕಾರ್ಯಕ್ರಮಗಳ ಮೂಲಕ ಸಮಾಜದಲ್ಲಿ ಸಾಮರಸ್ಯ ಕೆಡಿಸುವ ಕೆಲಸವನ್ನು ಮಾಡಲಾಗುತ್ತಿದೆ-ಶ್ರೀ ಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಬೇಸರ

ಹಳೇಬೀಡು:-ಖಾಸಗಿ ವಾಹಿನಿಯೊಂದು ಬಿಗ್ ಬಾಸ್ ಎಂಬ ಕಾರ್ಯಕ್ರಮವನ್ನು ಪ್ರಸಾರ ಮಾಡಿಕೊಂಡು ಬರುತ್ತಿದೆ.ಆ ಕಾರ್ಯಕ್ರಮದಿಂದ ಸಮಾಜದಲ್ಲಿ ಸಾಮರಸ್ಯ ಹಾಳಾ ಗುತ್ತಿದೆ.ರಾಜ್ಯದ ಜನರು ಅಂತಹ ಕಾರ್ಯಕ್ರಮಗಳ ವೀಕ್ಷಣೆಯಿಂದ ದೂರ ಉಳಿಯಬೇಕೆಂದು ಪುಷ್ಪಗಿರಿ ಮಹಾಸಂಸ್ಥಾನದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ಸೊಪ್ಪನಹಳ್ಳಿ ಗ್ರಾಮದ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಮಹಿಳಾ‌ ಸ್ವಸಹಾಯ ಸಂಘಕ್ಕೆ ಅರ್ಥಿಕ ‌ನೆರವು ವಿತರಣೆ ಮಾಡಿ ಅವರು ಮಾತನಾಡಿದರು.

ಪ್ರಸಕ್ತ ದಿನಮಾನದಲ್ಲಿ ದೃಶ್ಯ ಮಾಧ್ಯಮ ಮತ್ತು ಸಾಮಾಜಿಕ‌ ಜಾಲತಾಣದ ಪ್ರಭಾವದಿಂದ ಗ್ರಾಮೀಣ ಜನರಲ್ಲಿ ಸಂಸ್ಕಾರ ಕೊರತೆ ಕಾಡುತ್ತಿದೆ.ಜೊತೆಗೆ ಅರ್ಥವಿಲ್ಲದ ಬಿಗ್ ಬಾಸ್ ನಂತಹ ಕಾರ್ಯಕ್ರಮಗಳ ನೋಡುತ್ತಾ ಜನ ಮಾನಸಿಕವಾಗಿ ಹಾಳಾಗುತ್ತಿದ್ದಾರೆ.ಖಾಸಗಿ ವಾಹಿನಿಗಳು ಅಂತಹ ಕಾರ್ಯಕ್ರಮಗಳ ನಿರ್ಮಾಣದಿಂದ ದೂರ ಸರಿಯಬೇಕು.ಸಮಾಜಕ್ಕೆ ಸಂದೇಶ ನೀಡುವಂತಹ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಸಮಾಜದ ಉನ್ನತಿಗೆ ಸುದ್ದಿ ಮತ್ತು ಮನೋರಂಜನಾ ವಾಹಿನಿಗಳು ಮುಂದಾಗಬೇಕು ಎಂದು ಅವರು ಕರೆ ನೀಡಿದರು.

2020 ರಲ್ಲಿ ನಾವು ಪೀಠ ಸ್ವೀಕರಿಸಿದ ‌ಹತ್ತು ವರ್ಷದ ಸವಿನೆನಪಿಗಾಗಿ ನಾವುಗಳು ಸಮಾಜಕ್ಕೆ ಅಮೂಲ್ಯ ಕೊಡುಗೆ ‌ನೀಡುವ ಕಾರಣದಿಂದ ಶ್ರೀ ಕ್ಷೇತ್ರ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯನ್ನು ಸ್ಥಾಪನೆ ಮಾಡಲಾಗಿದೆ.ಸದ್ಯ ರಾಜ್ಯದ ನಾನಾ ಜಿಲ್ಲೆಗಳಲ್ಲಿ ಸಾವಿರಾರು ಮಹಿಳಾ ಸಂಘಗಳು ಬಲವರ್ಧನೆಯಾಗಿದೆ.ಸಂಘದ ಚಟುವಟಿಕೆಗಳು ಕೇವಲ ಹಣಕಾಸಿಗೆ ಸೀಮಿತವಾಗಿಲ್ಲ,ಕೌಶಲ್ಯಾಭಿವೃದ್ದಿ ಮತ್ತು ಸ್ವ ಉದ್ಯೋಗ ಪರಿಕಲ್ಪನೆ ಅಡಿಯಲ್ಲಿ ತರಬೇತಿ ಕಾರ್ಯಾಗಾರ ‌ಮತ್ತು ಸಮಾವೇಶ ನಡೆಸಲಾಗಿದೆ. ಒಟ್ಟಾರೆ ಮಹಿಳಾ ಸಬಲೀಕರಣಕ್ಕೆ ಎಂದೇ ಸ್ಥಾಪಿಸಿದ ಪುಷ್ಪಗಿರಿ ಸಂಘ ಇತ್ತೀಚಿನ ದಿನದಂದು ಜನಮೆಚ್ಚುಗೆ ಪಡೆದು ಮುನ್ನುಗ್ಗುತ್ತಿದೆ ಎಂದರು.

ಪ್ರತಿ ಕುಟುಂಬದ ಸಾಧನೆಗೆ ಸ್ತ್ರೀ ಸಹಕಾರ ಅತ್ಯಗತ್ಯವಾಗಿದೆ.ನಾವುಗಳು ಪೀಠಕ್ಕೆ ಬಂದ ದಿನದಿಂದ ಸಮಾಜಕ್ಕೆ ಕೊಡುಗೆ ನೀಡಲು ಹತ್ತಾರು ಯೋಜನೆಗಳನ್ನ ರೂಪಿಸಲಾಗಿದೆ. ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಒಂದು ಜಾತಿ, ಧರ್ಮಕ್ಕೆ ಸೀಮಿತವಾಗದೆ ಕೆಲಸ ಮಾಡುತ್ತಿದೆ ಎಂದರು.

ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಸನ ಜಿಲ್ಲಾ ಯೋಜನಾಧಿಕಾರಿ ವಿನುತ ಧನಂಜಯ ಮಾತನಾಡಿ, ರಾಜ್ಯದಲ್ಲಿಯೇ ಮಠ ಪರಂಪರೆಯಲ್ಲಿ ಮೊದಲ ಭಾರಿಗೆ ಮಹಿಳಾ ಸಬಲೀಕರಣಕ್ಕೆ ಎಂದೇ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸ್ಥಾಪನೆ ಮಾಡಿದ ಕೀರ್ತಿ ಪುಷ್ಪಗಿರಿ ಪರಮಪೂಜ್ಯರಿಗೆ ಸಲ್ಲುತ್ತದೆ.ಪೂಜ್ಯರ ಆಶೋತ್ತರಗಳಂತೆ ಸಂಸ್ಥೆಗೆ ಮಹಿಳೆಯರು ಬೆಂಬಲ‌ ನೀಡುತ್ತಿದ್ದಾರೆ. ಅರ್ಥಿಕ ನೆರವು ಪಡೆದವರು ಸಕಾಲಕ್ಕೆ ಮರುಪಾವತಿ ಮಾಡಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ರುದ್ರೇಶಣ್ಣ, ಕುಮಾರಸ್ವಾಮಿ, ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹೆಬ್ಬಾಳು ಹಾಲಪ್ಪ,ಪುಷ್ಪಗಿರಿ ‌ಕಲಾ ತಂಡದ ಚಂದನ ಕುಮಾರ್, ಮಲ್ಲಿಕಾರ್ಜುನ, ಮಠದ ಆಡಳಿತ ಸಿಬ್ಬಂದಿಗಳಾದ ಮನೋಜ್, ಜಯಣ್ಣ, ಮಲ್ಲಿಕಾರ್ಜುನ, ಪ್ರತಿನಿಧಿಗಳಾದ ನೀಲಾವತಿ, ಶೋಭ ಸೇರಿದಂತೆ ಇನ್ನೂ ಮುಂತಾದವರು ಹಾಜರಿದ್ದರು.

—————–ಯುನೈಟೆಡ್ ರವಿಕುಮಾರ್

Leave a Reply

Your email address will not be published. Required fields are marked *

× How can I help you?