ತುಮಕೂರು-ಬೆಲೆ-ಏರಿಕೆ-ಖಂಡಿಸಿ-ರಾಜ್ಯ-ಸರ್ಕಾರದ-ವಿರುದ್ಧ-ಶಾಸಕ-ಜ್ಯೋತಿಗಣೇಶ್-ನೇತೃತ್ವದಲ್ಲಿ-ಬಿಜೆಪಿ-ಪ್ರತಿಭಟನೆ

ತುಮಕೂರು: ಪದಾರ್ಥಗಳ ಬೆಲೆ ಏರಿಕೆವಿರುದ್ಧ ಬಿಜೆಪಿ ನಿರಂತರವಾಗಿ ಹೋರಾಟ ಮಾಡುತ್ತಿದ್ದರೂ ರಾಜ್ಯ ಕಾಂಗ್ರೆಸ್‌ನ ಭಂಡ, ಮೊಂಡು ಸರ್ಕಾರ ಬೆಲೆ ಏರಿಕೆ ಮಾಡುತ್ತಲೇ ಜನರಿಗೆ ಒಂದರ ಮೇಲೊಂದರಂತೆ ಬರೆ ಎಳೆಯುತ್ತಲೇ ಇದೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದರು.

ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಜಿಲ್ಲಾ ಬಿಜೆಪಿಯಿಂದ ಶನಿವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಶಾಸಕರು, ಬೆಲೆ ಏರಿಕೆ ವಿರುದ್ಧ ಬಿಜೆಪಿ ಆಹೋರಾತ್ರಿ ಧರಣಿ ನಡೆಸಿತು.ಅದೇ ದಿನ ರಾತ್ರಿ ಡೀಸೆಲ್ ಬೆಲೆ ಏರಿಸಿದ ಸರ್ಕಾರ ಭಂಡ ಸರ್ಕಾರ ಎಂದು ಟೀಕಿಸಿದರು.

ತನ್ನ ಅನಾಚಾರಗಳಿಗೆ ದುಡ್ಡು ಹೊಂದಿಸಲು ಬೆಲೆ ಏರಿಕೆ ಮಾಡಿ ರಾಜ್ಯದ ಜನರಿಗೆ ಹೊರೆ ಮಾಡುತ್ತಿದೆ. ಅಗತ್ಯ ವಸ್ತುಗಳ ಬೆಲೆ ದುಬಾರಿಯಾಗಿ ಜನಸಾಮಾನ್ಯರ ಬದುಕು ಸಂಕಷ್ಟಕ್ಕೆ ಸಿಲುಕಿದೆ.ಸರ್ಕಾರಜನರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಹಾಲಿನ ಬೆಲೆ, ಡೀಸೆಲ್ ಬೆಲೆ, ಸ್ಟಾಂಪ್‌ಡ್ಯೂಟಿ ಹೆಚ್ಚಳ ಹೀಗೆ ಒಂದಾದ ಮೇಲೆ ಒಂದರಂತೆ ಬೆಲೆ ಹೆಚ್ಚು ಮಾಡಿಜನರನ್ನು ಕಷ್ಟಕ್ಕೀಡುಮಾಡಿದೆ. 2 ಸಾವಿರರೂ.ಗ್ಯಾರಂಟಿ ಹಣ ನೀಡಿ ಅದೇ ಕುಟುಂಬದಿಂದ ಹತ್ತು ಸಾವಿರ ರೂ.ಕಿತ್ತುಕೊಳ್ಳುವ ಸರ್ಕಾರ ಎಂದು ಜಿ.ಬಿ.ಜ್ಯೋತಿಗಣೇಶ್ ಹರಿಹಾಯ್ದರು.


ಶಾಸಕ ಬಿ.ಸುರೇಶ್‌ಗೌಡರು ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯರ ಸರ್ಕಾರ ಗಾಲಿ ಕುರ್ಚಿಯಲ್ಲಿ ತಳ್ಳಿಕೊಂಡು ಹೋಗುವಂತಹ ಪರಿಸ್ಥಿತಿ ತಲುಪಿದೆ. ಹೆಚ್ಚು ಬಾರಿ ಬಜೆಟ್ ಮಂಡನೆ, ಹೆಚ್ಚು ಅವಧಿಯ ಮುಖ್ಯಮಂತ್ರಿ ಎಂಬ ದಾಖಲೆ ಮಾಡಲು ಹೊರಟಿರುವ ಸಿದ್ದರಾಮಯ್ಯ ಈ ರಾಜ್ಯ ಕಂಡ ಅತ್ಯಂತ ಭ್ರಷ್ಟ, ದುರ್ಬಲ ಮುಖ್ಯಮಂತ್ರಿ ಎಂದು ಟೀಕಿಸಿದರು.

ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಎರಡು ಬಾರಿ ಹಾಲು, ಕರೆಂಟು, ಡೀಸೆಲ್, ಮದ್ಯದ ಬೆಲೆಯನ್ನು ಏರಿಸಿದ್ದಾರೆ. ಹಾಲು, ನೀರಿನಿಂದ ಹಿಡಿದು ಕಸದವರೆಗೂ ತೆರಿಗೆ ವಿಧಿಸಿದೆ. ಗಾಳಿ ಒಂದನ್ನು ಬಿಟ್ಟು ಎಲ್ಲದಕ್ಕೂ ತೆರಿಗೆ ಹಾಕಿದೆ. ಈ ಕೆಟ್ಟ ಸರ್ಕಾರ ತೊಲಗಬೇಕೆಂದು ಜನ ಬಯಸುತ್ತಿದ್ದಾರೆ ಎಂದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ ಮಾತನಾಡಿ, ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಪದಾರ್ಥಗಳ ಬೆಲೆ ನಿರಂತರವಾಗಿ ಏರುತ್ತಲೇ ಇದೆ.ಹಾಲಿನ ದರವನ್ನು ಮೂರು ಬಾರಿ ಏರಿಸಲಾಗಿದೆ. ಸರ್ಕಾರದಜನವಿರೋಧಿ ನೀತಿ ವಿರುದ್ಧ ಬಿಜೆಪಿ ನಿರಂತರವಾಗಿ ಹೋರಾಟ ಮಾಡಿಕೊಂಡು ಬರುತ್ತಿದೆ.ಕಿವಿ, ಕಣ್ಣುಇಲ್ಲದರೀತಿ ಸರ್ಕಾರ ವರ್ತಿಸುತ್ತಿದೆಎಂದಅವರು, ಸರ್ಕಾರಕೂಡಲೇ ಏರಿಸಿರುವ ಬೆಲೆ ಇಳಿಸಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಹೆಚ್.ಎ.ಆಂಜನಪ್ಪ, ಕೆ.ವೇದಮೂರ್ತಿ, ಸುಮಿತ್ರಮ್ಮ, ನವಚೇತನ್, ಹೆಚ್.ಎನ್.ಚಂದ್ರಶೇಖರ್, ಅಂಜನಮೂರ್ತಿ, ಸಿದ್ಧಗಂಗಯ್ಯ, ಸಿ.ಎನ್.ರಮೇಶ್, ಮಲ್ಲಿಕಾರ್ಜುನ್, ಮಂಜುನಾಥ್, ಪುಟ್ಟರಾಜು, ಬನಶಂಕರಿಬಾಬು, ಮರಿತಿಮ್ಮಯ್ಯ, ಕೊಪ್ಪಲ್ ನಾಗರಾಜು, ಮೊದಲಾದವರು ಭಾಗವಹಿಸಿದ್ದರು.

– ಕೆ.ಬಿ.ಚಂದ್ರಚೂಡ

Leave a Reply

Your email address will not be published. Required fields are marked *

× How can I help you?