ಚಡಚಣ-ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಬುಧವಾರ ಕಿಡ್ನಿ ಡಯಾಲಿಸಿಸ್ ಕೇಂದ್ರವನ್ನು ಶಾಸಕ ವಿಠಲ ಕಟಕಧೋಂಡ ಉದ್ಘಾಟಿಸಿದರು.
ನಂತರ ಮಾತನಾಡಿ ಮುಂಬರುವ ದಿನಗಳಲ್ಲಿ ಚಡಚಣ ಸಮುದಾಯ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಲಾಗುವುದು.ಎಲ್ಲ ರೀತಿಯ ಚಿಕಿತ್ಸೆ ದೊರೆಯುಂತೆ ಕ್ರಮ ಕೈಗೊಳ್ಳುತ್ತೇನೆ. ಆಶಾ ಕಾರ್ಯಕರ್ತೆಯರು, ವೈದ್ಯರು ರೋಗಿಗಳ ಸೇವೆ ಅಂದುಕೊಳ್ಳದೆ ದೇವರ ಸೇವೆ ಎಂದು ಭಾವಿಸಿ ಅವರಿಗೆ ಚಿಕಿತ್ಸೆ ಕೊಡಬೇಕು. ರೋಗಿಗಳೊಂದಿಗೆ ಆತ್ಮೀಯರಾಗಿರಬೇಕು. ಚಡಚಣ ಪಟ್ಟಣಕ್ಕೆ ಮಿನಿ ವಿಧಾನಸೌಧಕ್ಕಾಗಿ ಈಗಾಗಲೇ 8.5 ಕೋಟಿ ಹಣ ಮಂಜೂರು ಆಗಿದೆ. ಚಡಚಣ ಏತ ನೀರಾವರಿ ಯೋಜನೆಯಿಂದ ಅಂದಾಜು 1722 ಹೆಕ್ಟೇರ್ ಭೂಮಿ ನೀರಾವರಿಗೆ ಒಳಪಡಲಿದೆ ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವೈದ್ಯಾಧಿಕಾರಿ ಸಂಪತಕುಮಾರ ಗುಣಾರಿ ಮಾತನಾಡಿ, ಚಡಚಣ ಸಮುದಾಯ ಆರೋಗ್ಯ ಕೇಂದ್ರದಲ್ಲಿನ ಡಯಾಲಿಸಿಸ್ ಪ್ರಯೋಜನ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಅಪ್ಪಾಸಾಹೇಬ ಇನಾಮದಾರ, ಡಾ.ಜೆ.ಐ.ಕಟವಟೆ, ತಾಲೂಕು ವೈದ್ಯಾಧಿಕಾರಿ ಡಾ.ಅರ್ಚನಾ ಕುಲಕರ್ಣಿ, ಡಾ.ಲಕ್ಷ್ಮೀಕಾಂತ ಮೊರೆ, ಬಿ.ಎ.ಮೇತ್ರಿ, ಎಂ.ಬಿ.ತೇಲಿ, ಪ್ರಕಾಶ ಅಂಬಿಗರ ಇತರರಿದ್ದರು.