ಚನ್ನಪಟ್ಟಣ:ಚನ್ನಪಟ್ಟಣಕ್ಕೂ ನಿಖಿಲ್ ಗೆ ಎದುರಾದ ಹಿಂದಿನ ಸೋಲಿಗೂ ಯಾವುದೇ ಸಂಬಂಧ ಇಲ್ಲ, ಎರಡು ಬಾರಿ ಚನ್ನಪಟ್ಟಣದಿಂದ ಗೆದ್ದ ಕುಮಾರಸ್ವಾಮಿ ಕ್ಷೇತ್ರದ ಜನರ ಕೈಗೂ ಸಿಗಲಿಲ್ಲ, ಗೆಲ್ಲಿಸಿದ ಜನರ ಸಮಸ್ಯೆಗೂ ಸ್ಪಂದಿಸಿಲ್ಲ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಜರಿದರು.
ಚನ್ನಪಟ್ಟಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಮನಗರ ಜಿಲ್ಲೆ ಕುಮಾರಸ್ವಾಮಿಗೆ ಇಲ್ಲಿಯವರೆಗೂ ಗೆಲುವು ಕೊಟ್ಟಿದೆ, ಆದರೆ ಕುಮಾರಸ್ವಾಮಿ ರಾಮನಗರ ಜಿಲ್ಲೆಗೆ ಯಾವ ಕೊಡುಗೆಯನ್ನು ಕೊಟ್ಟಿಲ್ಲ ಎಂದರು.
500 ಕೋಟಿ ರೂ ಅಭಿವೃದ್ಧಿಗೆ ಘೋಷಣೆ
ಯೋಗೇಶ್ವರ್ ಸ್ಥಳೀಯರು, ಕೈಗೆ ಸಿಗುವ ವ್ಯಕ್ತಿ, ತಾಲೂಕಿಗೆ ನೀರಾವರಿ ತಂದವರು, ಉಪಮುಖ್ಯಮಂತ್ರಿ ನೀರಾವರಿ ಸಚಿವರಾಗಿರುವ ಡಿ.ಕೆ. ಶಿವಕುಮಾರ್ ಹಾಗೂ ಡಿ.ಕೆ.ಸುರೇಶ್ ರಾಮನಗರ ಜಿಲ್ಲೆಗೆ ಅಭಿವೃದ್ಧಿ ಕೊಟ್ಟವರು, ಉಪಮುಖ್ಯಮಂತ್ರಿಗಳು ಈಗಾಗಲೇ ಚನ್ನಪಟ್ಟಣ ಅಭಿವೃದ್ಧಿಗೆ 500 ಕೋಟಿ ರೂ ಘೋಷಣೆ ಮಾಡಿದ್ದಾರೆ.ಚನ್ನಪಟ್ಟಣದ ಅಭಿವೃದ್ದಿಗೆ ಜನ ಮತ ಹಾಕುವಂತೆ ಮನವಿ ಮಾಡಿದರು.
ಕುಮಾರಸ್ವಾಮಿಗೆ ರಾಮನಗರ, ಚನ್ನಪಟ್ಟಣ ಬಗ್ಗೆ ಪ್ರೀತಿ ಇದ್ದರೆ ಅಭಿವೃದ್ಧಿ ಕಾರಣಕ್ಕಾಗಿಯಾದರು ಕ್ಷೇತ್ರದ ಬಿಡಬೇಕು. ನಿಮ್ಮ ಅನುಕೂಲಕ್ಕೆ ಲೋಕಸಭಾ ಸದಸ್ಯರಾದಿರಿ, ನಿಮ್ಮ ತೆವಲಿಗೆ ಬದಲಾದರೆ ನಾವು ನಿಮ್ಮ ಹಿಂದೆ ಬರಬೇಕೆ ಎಂದು ಚನ್ನಪಟ್ಟಣ ಜನತೆ ಕೇಳುತಿದ್ದಾರೆ ಎಂದು ಚಿವುಟಿದರು.
ಕುಟುಂಬವೆಲ್ಲಾ ರಾಜಕೀಯದಲ್ಲಿದೆ, ಕುಮಾರಸ್ವಾಮಿ ಹೇಗೆ ಒಬ್ಬೊಂಟಿ
ದೇವೇಗೌಡರು ಹಾಸನದಲ್ಲಿ ಹುಟ್ಟಿದ್ದರೂ ರಾಮನಗರ ಜಿಲ್ಲೆ ಅವರ ಕುಟುಂಬಕ್ಕೆ ಕಾಮಧೇನಾಗಿದೆ.ಕುಮಾರಸ್ವಾಮಿ, ರೇವಣ್ಣ ಸೇರಿದಂತೆ ಅವರ ಕುಟುಂಬವೆಲ್ಲಾ ರಾಜಕೀಯದಲ್ಲಿದೆ. ಹಾಗಾಗಿ ಈ ಚುನಾವಣೆಯಲ್ಲಿ ಕುಮಾರಸ್ವಾಮಿ ಒಬ್ಬೊಂಟಿ ಹೇಗಾಗುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಮರು ಪ್ರಶ್ನೆ ಹಾಕಿದರು.
ಯೋಗೇಶ್ವರ್ ಬಿಜೆಪಿ ಬಿಡಲು ಹೆಚ್.ಡಿ.ಕುಮಾರಸ್ವಾಮಿ ಕಾರಣ, ಚನ್ನಪಟ್ಟಣ ಅಭಿವೃದ್ಧಿಗೆ ಶ್ರಮಿಸಿದವರಿಗೆ ಕಾಂಗ್ರೆಸ್ ಅವಕಾಶ ನೀಡಿದೆ. ರಾಜಕೀಯದಲ್ಲಿ ಪಕ್ಷ ಬದಲಾವಣೆ ಸಹಜ ಪ್ರಕ್ರಿಯೆ, ಇದಕ್ಕೆ ಯೋಗೇಶ್ವರ್ ದೂರುವುದರಲ್ಲಿ ಅರ್ಥವಿಲ್ಲ, ಭವಿಷ್ಯದಲ್ಲೂ ಯೋಗೇಶ್ವರ್ ಕಾಂಗ್ರೆಸ್ ನಲ್ಲೆ ಉಳಿಯಿತ್ತಾರೆ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರ ನೀಡಿದರು.
ಚನ್ನಪಟ್ಟಣ ಗ್ರಾಮೀಣ ಪ್ರದೇಶ, ಇಲ್ಲಿ ನೀರಾವರಿ ಅವಲಂಬಿತ ರೈತರು, ದಲಿತರು, ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಬಗ್ಗೆ ಒಲವಿದೆ.ಈ ಭಾಗದ ಜನರಿಗೆ ಹಲವು ಯೋಜನೆ ನೀಡಿ, ಅನುಕೂಲ ಮಾಡಿಕೊಟ್ಟಿರುವುದು ಕಾಂಗ್ರೆಸ್ ಎಂಬುದು ಜನರಿಗೆ ತಿಳಿದಿದೆ. ಹೀಗಾಗಿ ಬಿಜೆಪಿ ಜೊತೆಗೆ ಜೆಡಿಎಸ್ ಮೈತ್ರಿಯು ಚುನಾವಣೆಯನ್ನು ಕಾಂಗ್ರೆಸ್ ಗೆ ಪೂರಕವಾಗಿಸಿದೆ ಎಂದು ಉತ್ತರಿಸಿದರು.
ನಿಖಿಲ್ ನನ್ನ ಮಗನಿದ್ದಂತೆ, ಅವರಿಗೆ ವಿರುದ್ಧವಾಗಿ ಮಾತನಾಡುವ ಅಗತ್ಯವಿಲ್ಲ.ದೇವೇಗೌಡರು ಹಿರಿಯ ರಾಜಕಾರಣಿಗಳು ಅವರಿಗೆ ಯಾರ ಬಗ್ಗೆಯಾದರೂ ಮಾತನಾಡುವ ಹಿರಿತನವಿದೆ. ಚುನಾವಣಾ ಭರದಲ್ಲಿ ಹೇಳಿಕೆ ಹೆಚ್ಚಾದರೆ ಅವರಿಗೆ ಋಣಾತ್ಮಕ ಬಿಂಬ ಬೀರಲಿದೆ ಎಂದರು.
ನಿಖಿಲ್ ಸೋಲು ಚನ್ನಪಟ್ಟಣದಲ್ಲಲ್ಲ, ಇಲ್ಲಿ ಎರಡು ಬಾರಿ ಸೋಲುಂಡು ಅನ್ಯಾಯ ಆಗಿರೋದು ಯೋಗೇಶ್ವರ್ ಗೆ, 4 ಬಾರಿ ಆಯ್ಕೆಯಾಗಿ ಮಂತ್ರಿಯಾಗಿ, ವಿಧಾನ ಪರಿಷತ್ ಸದಸ್ಯರಾಗಿ ಚನ್ನಪಟ್ಟಣ ಅಭಿವೃದ್ಧಿ ಮಾಡಿದ್ದಾರೆ. ಯೋಗೇಶ್ವರ್ ಕನಿಷ್ಠ 25 ಸಾವಿರ ಮತಗಳ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಚುನಾವಣೆಯಲ್ಲಿ ನಿಖಿಲ್ ರನ್ನು ಗಣನೆಗೆ ತೆಗೆದುಕೊಂಡಿಲ್ಲ, ಕುಮಾರಸ್ವಾಮಿ ಮಾಡಿದ ಅನ್ಯಾಯ ಬಗ್ಗೆ ಜನರಿಗೆ ಅರಿವಿಗಿದೆ.ಅವರು ಸಿಎಂ ಆಗಿದ್ದಾಗಲೂ ರಾಮನಗರ ಜಿಲ್ಲಾ ಪಂಚಾಯತ್ ಕೆಡಿಪಿ ಸಭೆಗೆ ಹಾಜರಾಗಿಲ್ಲ, ಸಮಸ್ಯೆ ಅರಿತು ಪರಿಹರಿಸುವ ಪ್ರಯತ್ನವನ್ನು ಮಾಡಿಲ್ಲ ಎಂದು ದೂರಿದರು.
ಕೇಂದ್ರದಲ್ಲಿ ಮಂತ್ರಿಯಾಗಲು ಮತ ನೀಡಿದರು ಕ್ಷೇತ್ರ ಬಿಟ್ಟು ಹೋದರು ಎಂದು ಚನ್ನಪಟ್ಟಣ ಜನರಿಗೆ ಬೇಸರವಿದೆ, ಅಭಿವೃದ್ಧಿಗಾಗಿ ಬದಲಾವಣೆ ಮಾಡುವ ಶಕ್ತಿ ಜನರಿಗಿದೆ, ಪ್ರತಿ ಹಂತಾದಲ್ಲೂ ಜನ ಒಳ್ಳೆಯದು ಕೆಟ್ಟದು ಗಣನೆಗೆ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.
ಈ ವೇಳೆ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಇದ್ದರು.
————-ರವಿ ಬಿ ಹೆಚ್