ಚನ್ನಪಟ್ಟಣ;ಗೌಡಗೆರೆ ಶ್ರೀ ಕ್ಷೇತ್ರದಲ್ಲಿ ಅದ್ದೂರಿ ಲಕ್ಷ ದೀಪೋತ್ಸವ-ಕೇರಳ ಶೈಲಿಯ ದೀಪಗಳ ಬಳಕೆ-ಬಾಣಬಿರುಸಿನ‌ ಚಿತ್ತಾರ-ಹರಿದು ಬಂದ ಭಕ್ತಗಣ

ಚನ್ನಪಟ್ಟಣ;ಚನ್ನಪಟ್ಟಣ ತಾಲೂಕಿನ ಗೌಡಗೆರೆ ಗ್ರಾಮದ ಪ್ರಸಿದ್ಧ ಶ್ರೀ ಚಾಮುಂಡೇಶ್ವರಿ ಬಸವಪ್ಪನ ಪುಣ್ಯಕ್ಷೇತ್ರದಲ್ಲಿ ಭಾನುವಾರ ಲಕ್ಷ ದೀಪೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.

ಕ್ಷೇತ್ರದ ಪವಾಡ ಬಸಪ್ಪನವರ ಹುಟ್ಟುಹಬ್ಬ ಹಾಗೂ ಕಾರ್ತಿಕ ಮಾಸದ ಅಮಾವಾಸ್ಯೆ ಪ್ರಯುಕ್ತ ನಡೆದ ಲಕ್ಷ ದೀಪೋತ್ಸವ ಕಾರ್ಯಕ್ರಮಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತ ಗಣ ಹರಿದುಬಂದಿತ್ತು.

ಲಕ್ಷದೀಪೋತ್ಸವ ಕಾರ್ಯಕ್ರಮದ ಪ್ರಯುಕ್ತ ಭಾನುವಾರ ಮುಂಜಾನೆಯಿಂದಲೇ ಚಾಮುಂಡೇಶ್ವರಿ ತಾಯಿಗೆ ಅಭಿಷೇಕ,ವಿಶೇಷ ಅಲಂಕಾರ,ತಾಯಿಯ ಮೆರವಣಿಗೆ,ಪವಾಡ ಬಸವಪ್ಪನ ಗದ್ದುಗೆಗೆ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಮಧ್ಯಾಹ್ನ ಕ್ಷೇತ್ರದ ಪವಾಡ ಬಸವಪ್ಪನವರ ಹುಟ್ಟುಹಬ್ಬವನ್ನು ಆಚರಿಸಲಾಯಿತು.ಭಕ್ತಾಧಿಗಳು ಬಸವಪ್ಪನ‌ ಮುಂಭಾಗ ಕೇಕ್ ಕತ್ತರಿಸಿ ಸಂಭ್ರಮಪಟ್ಟರು.ತದನಂತರ,ಬಸವಪ್ಪನಿಗೆ ಹೂವಿನ ಅಭಿಷೇಕ‌ ಮಾಡಿ ಶುಭಾಶಯ ಕೋರಿದರು.

ಜಿಟಿ-ಜಿಟಿ ಮಳೆಯ ನಡುವೆಯೂ ದೇಗುಲ ಆವರಣದಲ್ಲಿ ಇಟ್ಟಿದ್ದ ದೀಪಗಳಿಗೆ ಎಣ್ಣೆ ಬತ್ತಿ ಹಾಕಿ ದೀಪ ಹಚ್ಚುವ ಮೂಲಕ ಭಕ್ತಾಧಿಗಳು ತಾಯಿಯ ಕೃಪೆಗೆ ಪಾತ್ರರಾದರು.ಸಾವಿರಾರು ಭಕ್ತಾಧಿಗಳು ದೀಪೋತ್ಸವ ಕಾರ್ಯಕ್ರಮಕ್ಕೆ ಸಾಕ್ಷಿಭೂತರಾದರು.ಪ್ರತಿವರ್ಷವೂ ಶ್ರೀ ಕ್ಷೇತ್ರದಲ್ಲಿ ಬಹಳ ವಿಶಿಷ್ಟವಾಗಿ ದೀಪೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡು ಬರಲಾಗುತ್ತಿದ್ದು. ಈ ಬಾರಿ ಕೇರಳದಿಂದ ವಿಶೇಷ ದೀಪಗಳನ್ನು ತರಿಸಲಾಗಿತ್ತು.ದೇವರನಾಡು ಕೇರಳ ಶೈಲಿಯ ದೀಪಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು.

ಆಕಾಶದಲ್ಲಿ ಮದ್ದಿನ‌ ಚಿತ್ತಾರ!

ದೀಪೋತ್ಸವ ಹಿನ್ನೆಲೆಯಲ್ಲಿ ಈ ಬಾರಿ ವಿಶೇಷವಾದ ಸಿಡಿಮದ್ದು ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.ಒಂದು ಗಂಟೆಗಳ ಕಾಲ ನಿರಂತರವಾಗಿ ಸಿಡಿಮದ್ದು ಸಿಡಿಸಿ ಅಕಾಶದಲ್ಲಿ ವಿವಿಧ ಬಣ್ಣ ಹಾಗೂ ಆಕೃತಿಗಳ ಚಿತ್ತಾರ ಮೂಡಿಸಲಾಯಿತು.ಈ ಕಾರ್ಯಕ್ರಮಕ್ಕೆ ರಾಜ್ಯವಷ್ಟೇ ಅಲ್ಲದೇ ಹೊರರಾಜ್ಯ ಹಾಗೂ ವಿದೇಶಿಗರು ಸಹ ಆಗಮಿಸಿದ್ದು ವಿಶೇಷವಾಗಿತ್ತು. ಭಕ್ತಾಧಿಗಳಿಗೆ ಊಟ,ನೀರು ಹಾಗೂ ವಸತಿ ಸವಲತ್ತು ಕಲ್ಪಿಸಲಾಗಿತ್ತು.

ಹರಿದು ಬಂದ ಭಕ್ತಸಾಗರ!

ಕ್ಷೇತ್ರದಲ್ಲಿ ಪ್ರತಿವರ್ಷವೂ ಕಾರ್ತಿಕ ಮಾಸದಲ್ಲಿ ದೀಪೋತ್ಸವ ಕಾರ್ಯಕ್ರಮವನ್ನು ನಡೆಸಿಕೊಂಡು ಬರಲಾಗುತ್ತಿದ್ದು, ಈ ಬಾರಿಯ ಲಕ್ಷ ದೀಪೋತ್ಸವಕ್ಕೆ ತಾಲೂಕು, ಜಿಲ್ಲೆಯಷ್ಟೇ ಅಲ್ಲದೇ ರಾಜ್ಯದ ನಾನಾ ಭಾಗಗಳ ಭಕ್ತಾಧಿಗಳು ಆಗಮಿಸಿ ದೀಪೋತ್ಸವವನ್ನು ಕಣ್ತುಂಬಿಕೊಂಡರು.ಜಿಲ್ಲೆಯ ವಿವಿಧ ನ್ಯಾಯಾಲಯಗಳ ನ್ಯಾಯಾಧೀಶರು,ಹಿರಿ ಹಾಗೂ ಕಿರುತೆರೆ ಕಲಾವಿದರು ಸೇರಿದಂತೆ ವಿವಿಧ ಸಂಘಸಂಸ್ಥೆಗಳ ಮುಖಂಡರು ಹಾಗೂ ರಾಜಕೀಯ ಧುರೀಣರು ದೀಪೋತ್ಸವಕ್ಕೆ ಸಾಕ್ಷಿಯಾದರು.

ಜಗಮಗಿಸಿದ ಶ್ರೀ ಕ್ಷೇತ್ರ!

ಕ್ಷೇತ್ರದಲ್ಲಿ ನಡೆದ ದೀಪೋತ್ಸವ ಕಾರ್ಯಕ್ರಮಕ್ಕೆ ಕ್ಷೇತ್ರದ ಧರ್ಮದರ್ಶಿ ಡಾ.ಮಲ್ಲೇಶ್ ಗುರೂಜೀ ನೇತೃತ್ವದಲ್ಲಿ ಸಕಲ ಸಿದ್ದತೆ ಮಾಡಿಕೊಳ್ಳಲಾಗಿತ್ತು. ಮುಂಜಾನೆಯಿಂದ ರಾತ್ರಿವರೆಗೂ ನಿರಂತರ ಅನ್ನದಾಸೋಹ ಹಮ್ಮಿಕೊಳ್ಳಲಾಗಿತ್ತು.  ದೀಪೋತ್ಸವ ಪ್ರಯುಕ್ತ ಶ್ರೀ ಕ್ಷೇತ್ರ ವಿದ್ಯುತ್ ದೀಪಗಳಿಂದ ಜಗಮಗಿಸಿತ್ತು. ದೀಪೋತ್ಸವ ಆರಂಭಗೊಳ್ಳುತ್ತಿದಂತೆ, ತಾಯಿಯ ಪಂಚಲೋಹ ವಿಗ್ರಹದ ಹಿಂಭಾಗದಲ್ಲಿ ಸಿಡಿದ ಬಾಣ ಬಿರುಸುಗಳು ಕಾರ್ಯಕ್ರಮದ ಕಳೆ ಹೆಚ್ಚಿಸಿದವು. ಎಂ.ಕೆ.ದೊಡ್ಡಿ ಪೊಲೀಸರಿಂದ ಬಿಗಿಬಂದೋಬಸ್ತ್ ಏರ್ಪಡಿಸಲಾಗಿತ್ತು.

—–ಮಧುಕುಮಾರ್

Leave a Reply

Your email address will not be published. Required fields are marked *

× How can I help you?