ಚನ್ನಪಟ್ಟಣ-ತಾಲೂಕಿನ ಪ್ರಸಿದ್ಧ ಪ್ರವಾಸಿ ಕೇಂದ್ರವಾದ ಗೌಡಗೆರೆ ಗ್ರಾಮದ ಶ್ರೀ ಚಾಮುಂಡೇಶ್ವರಿ ಬಸವಪ್ಪನವರ ಪುಣ್ಯಕ್ಷೇತ್ರದಲ್ಲಿ ಡಿ.1 ರ ಭಾನುವಾರದಂದು ಕ್ಷೇತ್ರದಲ್ಲಿರುವ ಪವಾಡ ಬಸಪ್ಪನವರ ಹುಟ್ಟುಹಬ್ಬ ಹಾಗೂ ಕಾರ್ತಿಕ ಮಾಸದ ಅಂಗವಾಗಿ ಲಕ್ಷ ದೀಪೋತ್ಸವ ಕಾರ್ಯಕ್ರಮ ನೆರವೇರಲಿದೆ ಎಂದು ಧರ್ಮದರ್ಶಿಗಳಾದ ಡಾ. ಮಲ್ಲೇಶ್ ಗುರೂಜೀ ತಿಳಿಸಿದರು.
ದೇವಾಲಯದಲ್ಲಿ ದೀಪೋತ್ಸವ ಕಾರ್ಯಕ್ರಮದ ಪ್ರಚಾರ ಸಾಮಗ್ರಿಗಳನ್ನು ಬಿಡುಗಡೆ ಗೊಳಿಸಿ ಅವರು ಮಾತನಾಡಿದರು.
ಪ್ರತಿವರ್ಷವೂ ಈ ಕಾರ್ಯಕ್ರಮವನ್ನು ಕ್ಷೇತ್ರದಲ್ಲಿ ನಡೆಸಿಕೊಂಡು ಬರಲಾಗುತ್ತಿದ್ದು,ಡಿ.1ರ ಭಾನುವಾರ, ಬೆಳಿಗ್ಗೆ 11ಗಂಟೆಗೆ ಬಸವಪ್ಪನವರ ಹುಟ್ಟುಹಬ್ಬದ ಆಚರಣೆಯನ್ನು ಹಮ್ಮಿಕೊಳ್ಳಲಾಗಿದೆ.ಅಂದು ಸಂಜೆ 6 ಗಂಟೆಗೆ ನಡೆಯಲಿರುವ ಲಕ್ಷ ದೀಪೋತ್ಸವಕ್ಕೆ ಹಲವಾರು ಗಣ್ಯರು ಚಾಲನೆ ನೀಡಲಿದ್ದಾರೆ.
ಕ್ಷೇತ್ರದಲ್ಲಿ ಲಕ್ಷ ದೀಪೋತ್ಸವ ಕಾರ್ಯಕ್ರಮಕ್ಕೆ ಈಗಾಗಲೇ ಸಕಲ ಸಿದ್ದತೆ ಕೈಗೊಳ್ಳಲಾಗಿದ್ದು, ಈ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಭಾಗದ ಸಾವಿರಾರು ಭಕ್ತಾಧಿಗಳು ಭಾಗವಹಿಸಲಿದ್ದಾರೆ. ದೀಪೋತ್ಸವ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಕ್ಷೇತ್ರಕ್ಕೆ ಸಾವಿರಾರು ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ಭಕ್ತಾಧಿಗಳ ಮೂಲಭೂತ ಸೌಕರ್ಯಕ್ಕೆ ಕ್ಷೇತ್ರದ ಆಡಳಿತ ಮಂಡಳಿ ವತಿಯಿಂದ ಕ್ರಮ ಕೈಗೊಳ್ಳಲಾಗಿದೆ.ಭಕ್ತಾದಿಗಳು ಪವಿತ್ರ ಲಕ್ಷ ದೀಪೋತ್ಸವ ಕಾರ್ಯಕ್ರಮಕ್ಕೆ ಸಾಕ್ಷಿಯಾಗುವಂತೆ ಗುರೂಜಿ ಮನವಿ ಮಾಡಿಕೊಂಡರು.
ಈ ಬಾರಿ ಕೇರಳದಿಂದ ದೀಪಗಳನ್ನು ತರಿಸಲಾಗುತ್ತಿದ್ದು,ಭಕ್ತರಿಗೆ ದೀಪ ಹಚ್ಚಲು ಅವಕಾಶ ನೀಡಲಾಗಿದ್ದು, ಇಡೀ ಕ್ಷೇತ್ರ ದೀಪದಿಂದಲೇ ಕಂಗೊಳಿಸಲು ರೂಪುರೇಷೆ ಸಿದ್ದಪಡಿಸಲಾಗಿದೆ. ಭಕ್ತಾಧಿಗಳಿಂದಲೇ ದೀಪೋತ್ಸವಕ್ಕೆ ಚಾಲನೆ ಕೊಡಿಸಲು ತೀರ್ಮಾನಿಸಲಾಗಿದೆ.
ದೀಪೋತ್ಸವ ಹಿನ್ನೆಲೆಯಲ್ಲಿ ಈ ಬಾರಿ ವಿಶೇಷವಾದ ಸಿಡಿಮದ್ದು ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಒಂದು ಗಂಟೆಗಳ ಕಾಲ ನಿರಂತರವಾಗಿ ಸಿಡಿಮದ್ದು ಸಿಡಿಸುವ ಕಾರ್ಯಕ್ರಮ ನಡೆಯಲಿದೆ. ಅಕಾಶದಲ್ಲಿ ವಿವಿಧ ಬಣ್ಣ ಹಾಗೂ ಆಕೃತಿಗಳ ಚಿತ್ತಾರ ಮೂಡಿಸುವ ಉದ್ದೇಶ ಹೊಂದಲಾಗಿದೆ ಎಂದರು.
ಈ ಕಾರ್ಯಕ್ರಮಕ್ಕೆ ರಾಜ್ಯವಷ್ಟೇ ಅಲ್ಲದೇ ಹೊರರಾಜ್ಯ ಹಾಗೂ ವಿದೇಶಿಗರು ಸಹ ಆಗಮಿಸುವ ನಿರೀಕ್ಷೆಯಿದ್ದು, ಭಕ್ತಾಧಿಗಳಿಗೆ ಊಟ, ನೀರು ಹಾಗೂ ವಸತಿ ಸವಲತ್ತು ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ.ಕಾರ್ಯಕ್ರಮದ ಪ್ರಯುಕ್ತ ನವದುರ್ಗಿಯರ ಮಂಟಪ ಲೋಕಾಪರ್ಣೆ ನಡೆಯಲಿದೆ ಎಂದು ಗುರೂಜಿ ಮಾಹಿತಿ ಕೊಟ್ಟರು.
- ————ಮಧುಕುಮಾರ್